Homeಕರ್ನಾಟಕಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನು ಯಾವ ಸಂಸದರೂ ಮಾಡಲಿಲ್ಲ..

- Advertisement -
- Advertisement -

ಅಡಿಕೆ ಮಾರುಕಟ್ಟೆ ಹೇಗೆ ಅಸ್ಥಿರವೋ ಹಾಗೇ ಅಡಿಕೆ ತೋಟಿಗರ ಬದುಕೂ ಅನಿಶ್ಚಿತವೇ! ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಇವತ್ತಿಗೂ ‘ಅಡಿಕೆ ನೀತಿ’ ಒಂದನ್ನು ರೂಪಿಸಲಾಗಿಲ್ಲ. ಹಾಲಿ ಸರ್ಕಾರಿ ಧೋರಣೆಯಿಂದ ಅಡಿಕೆ ಬೆಳೆಗಾರರಿಗಿಂತ ದಲ್ಲಾಳಿಗಳಿಗೆ ಮತ್ತು ಕಳ್ಳ ಸಾಗಾಣಿಕೆದಾರರಿಗೇ ಅನುಕೂಲ ಹೆಚ್ಚಾಗಿದೆ. ಅಡಿಕೆ ವಹಿವಾಟಿನಲ್ಲಾಗುವ ಪ್ರತಿ ಏರಿಳಿತ ಅಡಿಕೆ ಕೃಷಿಯನ್ನೇ ಅವಲಂಭಿಸಿರುವ ರಾಜ್ಯದ ಏಳೆಂಟು ಜಿಲ್ಲೆಯ ತೋಟಿಗರನ್ನು ಕಂಗೆಡಿಸುತ್ತಿರುತ್ತದೆ. ಜತೆಗೆ ಕೊಳೆರೋಗ, ಕೇಂದ್ರದ ಅಡಿಕೆ ನಿಷೇಧದ ಗುಮ್ಮ, ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಕೇಂದ್ರ ಆರೋಗ್ಯ ಸಚಿವಾಲಯ ತಿಳುವಳಿಕೆ, ಕಾಡು ಪ್ರಾಣಿಗಳ ಹಾವಳಿ ಬಹುಸಂಖ್ಯಾತ ಸಣ್ಣ ಹಿಡುವಳಿದಾರರ ನಿದ್ದೆಗೆಡಿಸುತ್ತಲೇ ಇದೆ.

ಶ್ರೀಲಂಕಾ, ಮ್ಯಾನ್ಮಾರ್, ಮಲೇಶ್ಯಾ ದೇಶಗಳು ಮತ್ತು ದೇಶದ ಕೇರಳ, ಗೋವಾ, ಆಸ್ಸಾಮ್ ಮುಂತಾದೆಡೆ ನೈಸರ್ಗಿಕವಾಗಿ ಕಾಡು ಉತ್ಪನ್ನದಂತೆ ಅಡಿಕೆಯನ್ನು ಪಡೆಯಲಾಗುತ್ತಿದೆ; ಕರ್ನಾಟಕದಲ್ಲಿ ಮಾತ್ರ ಕ್ರಮಬದ್ಧ ಬೇಸಾಯದಿಂದ ಅಡಿಕೆ ಬೆಳೆಯಲಾಗುತ್ತದೆ. ಭಾರತದ ಒಟ್ಟೂ 4ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳಿವೆ. ಇದರಲ್ಲಿ 2ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಪ್ರತಿ ವರ್ಷ ಉತ್ಪಾದೆಯಾಗುವ 8ಲಕ್ಷ ಟನ್ ಅಡಿಕೆಯಲ್ಲಿ ಶೇಕಡಾ 60ರಷ್ಟು ಕರ್ನಾಟಕದ್ದು. ರಾಜ್ಯದ ಅಡಿಕೆ ಉತ್ಕೃಷ್ಟ ಗುಣಮಟ್ಟದ್ದು. ಕರ್ನಾಟಕದ ಒಟ್ಟು ಮುಕ್ಕಾಲು ಪಾಲು ಉತ್ತರಕನ್ನಡ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತದೆ.

ಅಡಿಕೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ ಹಾಗೂ ತುಮಕೂರು ಜಿಲ್ಲೆಯ ತೋಟಿಗರ ಜೀವನಾಧಾರ ವಾಣಿಜ್ಯ ಬೆಳೆ. ಮಲೆನಾಡಿನ ತೋಟಿಗರಂತೂ ಬದುಕು ಕಟ್ಟಕೊಂಡಿರುವುದೇ ಅಡಿಕೆ ವಹಿವಾಟಿನ ಮೇಲೆ. ಮಲೆನಾಡಿನ ಕೆಂಪಡಿಕೆಗೆ ವಿದೇಶಗಳಲ್ಲೂ ದೊಡ್ಡ ಬೇಡಿಕೆಯಿದೆ. ಇಲ್ಲಿಯ ಸರಕು ಮಾದರಿಯ ಅಡಿಕೆಯನ್ನು ದಕ್ಷಿಣ ಭಾರತೀಯರು ವೀಳ್ಯದೆಲೆಯೊಂದಿಗೆ ಮೆಲ್ಲುತ್ತಾರೆ. ರಾಶಿ ಅಡಿಕೆ, ಬೆಟೆ ಅಡಿಕೆ ಪಾನ್‍ಮಸಲಾಕ್ಕೆ ಉಪಯೋಗಿಸಲಾಗುತ್ತದೆ. ಪಾನ್‍ಮಸಾಲಾ ಕಂಪನಿಗಳು ಮತ್ತು ಸಿಹಿ ಅಡಿಕೆ ಪೊಟ್ಟಣ ತಯಾರಿಕಾ ಘಟಕಗಳಲ್ಲಿ ಹೆಚ್ಚಾಗಿರುವುದು ಉತ್ತರ ಭಾರತದಲ್ಲಿ. ಈ ಗುಟ್ಕ ಕಂಪನಿಗಳಿಗೆ ಅಡಿಕೆ ಒದಗಿಸುವ ಮಧ್ಯವರ್ತಿಗಳ ಅನಾಹುತಕಾರಿ ಮಾಫಿಯಾ ತೋಟಿಗರಿಗೆ ನಾಜೂಕಾಗಿ ವಂಚಿಸುತ್ತಿದೆ.

ಅಧಿಕೃತ ಸಹಕಾರ ಸಂಘಗಳು ಮತ್ತು ಎಪಿಎಂಸಿ ಮೂಲಕ ಶೇಕಡಾ 60ರಷ್ಟು ಅಡಿಕೆ ವಹಿವಾಟಾಗುತ್ತಿದೆಯಷ್ಟೇ. ಶೇ.40ರಷ್ಟು ಅಡಿಕೆಯನ್ನು ಮಧ್ಯವರ್ತಿಗಳು ರೈತರ ಮನೆ ಬಾಗಿಲಲ್ಲೇ ಖರೀದಿಸಿ ಗುಟ್ಕ ಕಂಪನಿಗಳಿಗೆ ಮಾರುತ್ತಾರೆ. ಕಮಿಷನ್, ತೆರಿಗೆ ಉಳಿಸುವ ಆಸೆಗೆ ಬೆಳೆಗಾರರು ದಲ್ಲಾಳಿಗಳಿಗೆ ಬಲಿ ಬೀಳುತ್ತಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ ಸರ್ಕಾರಕ್ಕೆ ಕನಿಷ್ಠವೆಂದರೂ 100 ಕೊಟಿ ತೆರಿಗೆ ವಂಚನೆಯಾಗುತ್ತಿದೆ! ಈ ಅಡಿಕೆ ಮಾಫಿಯಾ ವಿದೇಶದಿಂದಲೂ ಅಗ್ಗದಲ್ಲಿ ಕಳಪೆ ಅಡಿಕೆ ತರಿಸಿಕೊಳ್ಳುತ್ತದೆ. ಕಳ್ಳಸಾಗಾಣಿಕೆಯು ಮಾಡಿಸಿಕೊಳ್ಳುತ್ತದೆ. ಸ್ಥಳೀಯ ಅಡಿಕೆ ಜತೆ ಈ ಕಳಪೆ ಅಡಿಕೆ ಬೆರೆಸಿ ಕಲಬೆರೆಕೆ ದಂಧೆ ನಡೆಸುತ್ತದೆ. ಇದಕ್ಕೆ ಕಡಿವಾಣ ಹಾಕಲೆಂದೇ ಯುಪಿಎ ಸರ್ಕಾರ ಆಮದು ಅಡಿಕೆ ಮೇಲೆ ಶೇ 110ರಷ್ಟು ತೆರಿಗೆ ವಿಧಿಸಿತ್ತು. ಈ ದಂಧೆ ದುಬಾರಿಯಾಗಿದ್ದರಿಂದ ಮಾಫಿಯಾ ವಿದೇಶದಿಂದ ಅಡಿಕೆ ತರಿಸುವುದು ನಿಲ್ಲಿಸಿತ್ತು. ಕಳ್ಳಸಾಗಾಣಿಕೆಗೂ ಕಡಿವಾಣ ಬಿದ್ದಿತ್ತು.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿನ ಸರ್ಕಾರದ ಬಿಗಿ ಕಡಿಮೆಯಾಗಿ ಮತ್ತೆ ಮಾಫಿಯಾ ಚಿಗುರಿಕೊಂಡಿದೆ! ಹೀಗಾಗಿ 2014ರ ನಂತರ ಅಡಿಕೆ ಬೆಳೆಗಾರರಿಗೆ ಹೇಳಿಕೊಳ್ಳುವಂಥ ಅನುಕೂಲವೇನೂ ಆಗಿಲ್ಲ. ಚಾಲಿಯಂಥ ಅಡಿಕೆ ಧಾರಣೆ ಕ್ವಿಂಟಾಲಿಗೆ 30 ಸಾವಿರದ ಆಸುಪಾಸಿನಲ್ಲಿ ಸುತ್ತಾಡಿದರೆ ರೈತರಿಗೆ ತೀರ ಲಾಭವೇನೂ ಇಲ್ಲದಿದ್ದರೂ ಸಮಚಿತ್ತದ ಬದುಕಿಗೊಂದು ದಾರಿಯಾಗುತ್ತದೆ. ಈ ಬಾರಿ ಧಾರಣೆ ಈ ರೇಂಜಿನಲ್ಲೇ ಇದೆ. ಕಳೆದ ವರ್ಷ ಬಿದ್ದ ವಿಪರೀತ ಮಳೆಯಿಂದ ಬಂದ ಕೊಳೆರೋಗ, ಹವಾಮಾನ ವೈಪರೀತ್ಯದಿಂದ ಅಡಿಕೆಗೆ ಬೆಲೆ ಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಆದರೆ ಇದೇ ಬೆಲೆ ಮುಂದೆಯೂ ಸಿಗುತ್ತದೆಂದು ಹೇಳಲಾಗದು. ಇತ್ತೀಚಿನ ವರ್ಷಗಳಲ್ಲಂತೂ ಅಡಿಕೆ ಇದ್ದಕ್ಕಿದ್ದಂತೆ ವಿವಾದಕ್ಕೆ ಸಿಲುಕಿ ಮಾರುಕಟ್ಟೆ ಮೇಲೆ ಪರಿಣಾಮವಾಗುವ ಆತಂಕ ಆರಂಭವಾಗುತ್ತಿದೆ. ಈ ಗೊಂದಲಕ್ಕೆ ಅಡಿಕೆ ಬೆಳೆಗಾರ ಸಹಜವಾಗೇ ಬೆಚ್ಚೆಳುತ್ತಿದ್ದಾನೆ.

ಆದರೆ ಅಡಿಕೆ ಬಗ್ಗೆ ವಿವಾದ ಎದ್ದಾಗೆಲ್ಲ ಧಾರಣೆ ಮೇಲೆ ಕೆಟ್ಟ ಪರಿಣಾಮವೇನೂ ಆಗಿದಿಲ್ಲ. ಈ ಗಲಾಟಿಯ ಲಾಭ ದಲ್ಲಾಳಿಗಳು, ಮಧ್ಯವರ್ತಿಗಳು ಎತ್ತಿದ್ದಾರೆ. ಇದರಲ್ಲಿ ರಾಜಕಾರಣೀಗಳೇನೂ ಕಮ್ಮಿಯಿಲ್ಲ. ಅಡಿಕೆ ಬೆಳೆಗಾರರಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು 2011ರಲ್ಲಿ. ಆಗ ಅಧಿಕಾರದಲ್ಲಿದ್ದ ಯುಪಿಎ-2 ಸರ್ಕಾರ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಅಂಶಗಳಿದೆಯೆಮದು ಸುಪ್ರೀಮ್ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿತ್ತು. ಇದನ್ನು ಬಿಜೆಪಿಗರು ರಾಜಕೀಯಕ್ಕೆ ಬಳಸಿಕೊಂಡರು; ಕಾಂಗ್ರೆಸ್ ಅಡಿಕೆ ಬೆಳೆಗಾರರ ವೈರಿಯೆಂಬಂತೆ ಬಿಂಬಿಸಿದರು. ಅಡಿಕೆ ನಿಷೇಧಕ್ಕೆ ಕಾಂಗ್ರೆಸ್ ಹವಣಿಸುತ್ತಿದೆಯೆಂದು ಹುಯಿಲೆಬ್ಬಿಸಿದರು.

ಅಡಿಕೆ ಬೆಳೆಗಾರರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವಂತೆ ಮಾಡಲಾಯಿತು. ಕಾಂಗ್ರೆಸ್ ಅಡಿಕೆ ನಿಷೇದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರೂ ಬಿಜೆಪಿ ಅಪಪ್ರಚಾರದ ಎದುರು ಬೆಳೆಗಾರರನ್ನು ಅದು ಇಂಪ್ರೆಸ್ ಮಾಡಲಾಗಲಿಲ್ಲ! ಇದು ಅಡಿಕೆ ತೋಟ ಪಟ್ಟಿಯಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಿತು. ಶಿವಮೊಗ್ಗೆಯ ರಾಘವೇಂದ್ರ, ಉಡುಪಿ-ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ, ಉತ್ತರ ಕನ್ನಡದ ಅನಂತ ಹೆಗಡೆ, ಮಂಗಳೂರಿನ ನಳಿನ್ ಕಟೀಲ್, ದಾವಣಗೆರೆಯ ಸಿದ್ದೇಶ್ವರ್ ಅಡಿಕೆ ಬೆಳೆಗಾರರ ಬಚಾಯಿಸುವ ಭೋಂಗು ಬಿಟ್ಟೇ ಸಂಸದರಾಗಿ ಆಯ್ಕೆಯಾದರು. ತೋಟಿಗರ ಯಮಾರಿಸಿ ದಂಡಿಯಾಗಿ ಓಟು ಪಡೆದು ಗೆದ್ದವರಿಗೆ ಆನಂತರ ತಾವು ಕೊಟ್ಟ ಭರವಸೆಯೇ ಮರೆತುಹೋಗಿತ್ತು.

ತೋಟಿಗರಿಗೆ ಆಗುತ್ತಿರುವ ಅನ್ಯಾಯ-ಆತಂಕದ ಬಗ್ಗೆ ಅಡಿಕೆ ಬೆಳೆ ಏರಿಯಾದ ಒಬ್ಬೇ ಒಬ್ಬ ಸಂಸದ ಮಾತಾಡಲಿಲ್ಲ. ತಾವು ಕೊಂಡಾಡುವ ಮೋದಿ ಸರ್ಕಾರವಿದ್ದರೂ ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಕಾನೂನಿಗೆ ತಿದ್ದುಪಡಿ ತಂದು ಅಡಿಕೆಯನ್ನು ತಂಬಾಕು ಪಟ್ಟಿಯಿಂದ ಹೊರತರುವ ವೀರಾವೇಷದ ಮಾತಾಡಿದ್ದ ಈ ಪಂಚ ಪ್ರಚಂಡರು ಕೃತಘ್ನರಾಗಿ ಹೋದರು. ಈ ವಂಚಕ ಸಂಸದರ ಉದಾಸೀನದ ಒಟ್ಟೂ ಪರಿಣಾಮ ಎಂಬಂತೆ 2017ರ ಡಿಸೆಂಬರ್‍ನಲ್ಲಿ ಅಂದಿನ ಆರೋಗ್ಯ ಇಲಾಖೆಯ ರಾಜ್ಯ ಮಂತ್ರಿ ಅನುಪ್ರಿಯಾ ಪಟೇಲ್ ಯುಪಿಎ ಸರ್ಕಾರದ ಅನಿಸಿಕೆಯನ್ನೇ ಬಿತ್ತರಿಸಿದ್ದರು. ಆಕೆ ಅಡಿಕೆಯಿಂದ ಬಾಯಿ ಕ್ಯಾನ್ಸರ್ ಬರುತ್ತದೆಂದು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು.

ಇಷ್ಟಾದರೂ ಅನಂತ್, ಶೋಭಾ, ಕಟೀಲ್, ಸಿದ್ದೇಶ್ವರ್, ರಾಘವೇಂದ್ರ ತಲೆಕೆಡಿಸಿಕೊಳ್ಳಲಿಲ್ಲ. ತೋಟಿಗರ ನೋವು ಅವರಿಗೆ ಅರ್ಥವಾಗಲಿಲ್ಲ. 2019ರಲ್ಲಿ ಮತ್ತೆ ಈ ಐವರು ಸಂಸದರಾಗಿ ಆಯ್ಕೆಯೂ ಆದರು. ಈ ಬಾರಿಯಾದರೂ ತಮ್ಮ ಸಮಸ್ಯೆಗೆ ಸ್ಪಂದಿಸಬಹುದೆಂದು ಭಾವಿಸಿದ್ದ ತೋಟಿಗರಿಗೆ ಮತ್ತದೇ ಆಘಾತ ಕಾದಿತ್ತು! 12-7-2019 ರಂದು ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವಿನಿಕುಮಾರ್ ಚೌಬೆ “ಅಡಿಕೆ ದೇಹದ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಯಿ, ಅನ್ನನಾಳ, ಗಂಟಲು ಮತ್ತಿತರ ಅಂಗಗಳಿಗೆ ಕ್ಯಾನ್ಸರ್ ಬರುವಂತೆ ಮಾಡುತ್ತದೆಂದು ಕೆಲವು ಅಧ್ಯಯನದಿಂದ ತಿಳಿದು ಬಂದಿದೆಯೆಂದು” ಹೇಳಿದರು. ಮಂತ್ರಿಗಳ ಈ ಮಾತಿಂದ ತೋಟಿಗ ಸಮುದಾಯದಲ್ಲಿ ಆತಂಕ-ಆಕ್ರೋಶ ಮೂಡಿತು.

ಇದರಿಂದ ಕಕ್ಕಾಬಿಕ್ಕಿಯಾದ ಕಟೀಲು, ಶೋಭಾ, ಸಿದ್ದೇಶ್ವರ್ ಅವರುಗಳಿಗೆ ಗಡಿಬಿಡಿಯಲ್ಲಿ ಕೇಂದ್ರ ಆರೋಗ್ಯ ಮಂತ್ರಿಯನ್ನು ಭೇಟಿಯಾದ ಪೋಟೋ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಾಗಿ ಬಂತು. ಅಡಿಕೆ ಬೆಳೆಗಾರರ ಹಿತರಕ್ಷಿಸುವುದಾಗಿ ಹೇಳಿಕೆಯನ್ನೂ ಕೊಟ್ಟರು. ಆದರೆ ಇವತ್ತಿಗೂ ಅಡಿಕೆ ತೋಟಗಳಿಗೆ ಕೇಂದ್ರ ಸರ್ಕಾರ ಬಿಟ್ಟ ಕ್ಯಾನ್ಸರ್ ಗುಮ್ಮ ಮಾತ್ರ ಅಲ್ಲೇ ಕುಂತಿದೆ. ತೋಟಿಗರು ಅಂಜುತ್ತಲೇ ಬದುಕುತ್ತಿದ್ದಾರೆ. ಸಿಗರೇಟ್ ಲಾಬಿ ಮತ್ತು ಗುಟ್ಕ ಲಾಬಿ ನಡುವೆ ವ್ಯವಹಾರಿಕ ಸಂಘರ್ಷ ಮೊದಲಿನಿಂದಲೂ ನಡೆಯುತ್ತಿದೆ. ಕೇಂದ್ರದ ಆಹಾರ ಸುರಕ್ಷೆ ಮತ್ತು ಗುಣಮಟ್ಟಗಳ ನಿಯಾಮಾವಳಿಯಂತೆ ತಂಬಾಕಿನೊಂದಿಗೆ ಅಡಿಕೆ ಉತ್ಪನ್ನಗಳನ್ನೂ ಸೇರಿಸಿರುವುದೇ ಸಮಸ್ಯೆಯ ಮೂಲ.

ಸ್ವಲ್ಪ ತಿಂದರೆ ಅಡಿಕೆಯಲ್ಲಿ ಔಷಧಿ ಗುಣವಿದೆ. ಅತಿಯಾದರೆ ಹಾನಿಯೇ ಎಂದು ಸಂಶೋಧಕರು ಹೇಳುತ್ತಾರೆ. ಅಡಿಕೆ ವಹಿವಾಟು ನಡೆಸುವ ಸಹಕಾರ ಸಂಸ್ಥೆಗಳು ಕಾಸರಗೋಡಿನ ಸಿಪಿಸಿಆರ್‌ಐ ಮೂಲಕ ಅಡಿಕೆಯ ಗುಣಾವಗುಣದ ಬಗ್ಗೆ ಸಂಶೋಧನೆ ನಡೆಯುವಂತೆ ನೋಡಿಕೊಂಡಿದ್ದವು. ಈ ವರದಿ ಆಡಿಕೆ ಕ್ಯಾನ್ಸರ್‍ಕಾರಕವಲ್ಲ; ಆರೋಗ್ಯ ವರ್ಧಕ ಎಂದು ಹೇಳಿದೆ. ಹಿಂದೆ ಕೆಲವು ಕಂಪನಿಗಳು ಅಡಿಕೆಯನ್ನು ಚಾಕೊಲೆಟ್ ತಯಾರಿಕೆಗೆ ಬಳಸಿದ್ದವು. ಈ ಪ್ರಯೋಗ ಯಶಸ್ವಿಯಾಗಲಿಲ್ಲ. ವೈನ್ ತಯಾರಿಕೆ ಪ್ರಯತ್ನ ನಡೆದರೂ ದುಬಾರಿ ಎಂದಾಯಿತು. ಚಹಾ, ಬಣ್ಣ ಮತ್ತಿತರ ಉದ್ದೇಶಕ್ಕೆ ಅಡಿಕೆ ಬಳಸುವ ಸಂಶೋಧನೆಗಳು ನಡೆಯುತ್ತಿವೆ.

ಅಡಿಕೆ ನಿಷೇಧದ ಸಮಸ್ಯೆ ಇರುವುದು ತೋಟಪಟ್ಟಿಯ ಸಂಸದರ ಇಚ್ಛಾಶಕ್ತಿಯ ಕೊರತೆಯಲ್ಲಿ. ಸಂಸತ್ತಿನಲ್ಲಿ ಚರ್ಚೆ, ಕಾನೂನಿನಲ್ಲಿ ತಿದ್ದುಪಡಿ ಮೂಲಕ ಮಾತ್ರ ಅಡಿಕೆ ಮಾನಕ್ಕೆ ಬಂದಿರುವ ಕಳಂಕ ತೆಗೆಯಬಹುದು. ಆದರೆ ಅದು ಆಗುತ್ತಿಲ್ಲ.


ಇದನ್ನೂ ಓದಿ: ಅಡಿಕೆ ಬೆಳೆಗಾರರನ್ನು ರಕ್ಷಿಸುವರೆ ಈ ಆರು ಜನ ಮಾನಗೇಡಿ ಸಂಸದರು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇಂಪ್ರೆಸ್ >ತಟ್ಟು
    ರಕ್ಷಿಸು(ಸಂಸ್ಕ್ರುತ)>ಕಾಪಾಡು(ಕನ್ನಡ)
    ಸ್ವಲ್ಪ(ಸಂಸ್ಕ್ರುತ)>ತುಸು(ಕ)

LEAVE A REPLY

Please enter your comment!
Please enter your name here

- Advertisment -

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...