ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪತ್ನಿ, ವಿಶ್ವಸಂಸ್ಥೆಯ ಮಾಜಿ ಸಹಾಯಕ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಮುರ್ಡೇಶ್ವರ ಪುರಿ ವಿರುದ್ಧದ ಮಾನಹಾನಿಕರ ಟ್ವೀಟ್‌ಗಳನ್ನು ತಕ್ಷಣ ಅಳಿಸಿಹಾಕುವಂತೆ ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ.
ಜೊತೆಗೆ ಇನ್ನು ಮುಂದೆ ಲಕ್ಷ್ಮೀ ಮುರ್ಡೇಶ್ವರ ಪುರಿ ಮತ್ತು ಅವರ ಪತಿ ಹರ್ದೀಪ್ ಸಿಂಗ್ ಪುರಿ ವಿರುದ್ಧ ಮಾನಹಾನಿ, ಹಗರಣ ಅಥವಾ ತಪ್ಪಾಗಿರುವ ಯಾವುದೇ ಟ್ವೀಟ್‌ಗಳನ್ನು ಮಾಡದಂತೆ ಸಾಕೇತ್ಗೆ ಹೈಕೋರ್ಟ್ ನಿರ್ಬಂಧ ಹೇರಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಿ.ಹರಿಶಂಕರ್, ಆದೇಶ ನೀಡಿ 24 ಗಂಟೆಗಳ ಒಳಗೆ ಡಿಲೀಟ್ ಮಾಡದೆ ಇದ್ದರೇ, ಟ್ವಿಟ್ಟರ್ ತಾನೇ ಟ್ವೀಟ್‌ಗಳನ್ನು ಡಿಲೀಟ್ ಮಾಡುತ್ತದೆ ಎಂದು ಆರ್‌ಟಿಐ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಗೋಖಲೆಗೆ ತಿಳಿಸಿದೆ.
ಇದನ್ನೂ ಓದಿ: ರಾಜಕೀಯಕ್ಕೆ ಬರುವುದಿಲ್ಲ ಎಂದ ಸೂಪರ್ ಸ್ಟಾರ್ ರಜನಿಕಾಂತ್!: ಆರ್‌ಎಂಎಂ ವಿಸರ್ಜನೆ
ಸಾಕೇತ್ ಗೋಖಲೆ ಅವರು ಜೂನ್ 13 ಮತ್ತು 26 ರಂದು ತಮ್ಮ ಟ್ವೀಟ್‌ಗಳಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಲಕ್ಷ್ಮೀ ಪುರಿ ಆದಾಯಕ್ಕೂ ಮೀರಿ ಕೆಲವು ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಲಕ್ಷ್ಮೀ ಪುರಿ ದೆಹಲಿ ಹೈಕೋರ್ಟ್ನಲ್ಲಿ 5 ಕೋಟಿ ರೂ.ನ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜೊತೆಗೆ ಟ್ವೀಟ್‌ಗಳನ್ನು ಅಳಿಸುವಂತೆ ಆದೇಶ ನೀಡಲು ನ್ಯಾಯಾಲಯಕ್ಕೆ ಕೋರಿದ್ದರು.
ಲಕ್ಷ್ಮೀ ಪುರಿ, ಕರಣ್‌ಜವಾಲಾ ಮತ್ತು ಕಂಪನಿಯ ಮೂಲಕ ಸಲ್ಲಿಸಿದ ತನ್ನ ಮೊಕದ್ದಮೆಯಲ್ಲಿ, ಗೋಖಲೆ ಅವರು ತನ್ನ ಮತ್ತು ತನ್ನ ಕುಟುಂಬದ ವಿರುದ್ಧ ಸುಳ್ಳು, ತಪ್ಪಾದ, ಅಪಪ್ರಚಾರ ಮತ್ತು ಮಾನಹಾನಿಕರ ಹೇಳಿಕೆಗಳನ್ನು ಮತ್ತು ಆರೋಪಗಳನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ಮೊಕದ್ದಮೆ ಆಧರಿಸಿ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ಇದನ್ನೂ ಓದಿ: ಫಾದರ್ ಸ್ಟಾನ್ ಸ್ವಾಮಿಯವರನ್ನು ಕೊಲ್ಲಲಾಗಿದೆ: ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪ


