ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಮಧ್ಯೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ. “ಕರ್ನಾಟಕದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮ ಕೆಲಸ ಮಾಡಿದ್ದಾರೆ ಮತ್ತು ರಾಜ್ಯದಲ್ಲಿ ಯಾವುದೆ ರಾಜಕೀಯ ಬಿಕ್ಕಟ್ಟು ಇಲ್ಲ” ಎಂದು ಅವರು ಭಾನುವಾರ ತಿಳಿಸಿದ್ದಾರೆ.
ಗೋವಾದ ಪಣಜಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘‘ಯಡಿಯೂರಪ್ಪ ಅವರು ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರು ಕರ್ನಾಟಕವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರು ತಮ್ಮದೇ ಆದ ರೀತಿಯಲ್ಲಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
It is your thinking, we don't think this way: BJP President JP Nadda on being asked whether there is a political crisis in Karnataka
— ANI (@ANI) July 25, 2021
ಇದನ್ನೂ ಓದಿ: ಸಿಎಂ ಯಡಿಯೂರಪ್ಪಗೆ ಬೆಂಬಲ: ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಮಠಾಧೀಶರ ಸಮಾವೇಶ
ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಹಾಗೆಂದು ನಿಮಗೆ ಅನಿಸುತ್ತಿದೆ. ಆದರೆ ನಮಗೆ ಹಾಗೆ ಅನಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.
ಇಂದು ಸಂಜೆ ವೇಳೆಗೆ ಸಿಎಂ ಬದಲಾವಣೆಯ ಕುರಿತ ಸಂದೇಶ ಪಕ್ಷದ ಹೈಕಮಾಂಡ್‌ನಿಂದ ಬರಲಿದೆ ಎಂದು ಯಡಿಯೂರಪ್ಪ ಭಾನುವಾರ ಬೆಳಿಗ್ಗೆ ಬೆಳಗಾವಿಯಲ್ಲಿ ಹೇಳಿದ್ದರು. ಅವರು, “ಸಂಜೆಯ ಹೊತ್ತಿಗೆ ಹೈಕಮಾಂಡ್‌ನಿಂದ ಸಂದೇಶ ಬರಲಿದೆ. ಮಾಧ್ಯಮಗಳು ಸಹ ಇದರ ಬಗ್ಗೆ ತಿಳಿದುಕೊಳ್ಳುವಿರಿ” ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದರು. ಇದಾದ ಕೆಲ ಗಂಟೆಗಳಲ್ಲಿಯೇ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರತಿಕ್ರಿಯಿಸಿದ್ದು, ಭಾರಿ ಮಹತ್ವ ಪಡೆದುಕೊಂಡಿದೆ.
ಯಡಿಯೂರಪ್ಪ ಅವರ ಸರ್ಕಾರವು ಅಧಿಕಾರಕ್ಕೆ ಬಂದು ಇನ್ನೆರೆಡು ದಿನಗಳಲ್ಲಿ ಎರಡು ವರ್ಷಗಳಾಗಿದೆ. ಹಿಂದಿನಿಂದಲೂ ಅವರ ನಾಯಕತ್ವದ ಬಗ್ಗೆ ಬಿಜೆಪಿಯೊಳಗೆ ಅಸಮಾಧಾನಗಳು ಇದ್ದವು. ಇದನ್ನು ಪಕ್ಷದ ನಾಯಕರೆ ಬಹಿರಂಗವಾಗಿ ಹೇಳಿದ್ದರು. ಈ ಹಿಂದೆ ಕೂಡಾ ರಾಜ್ಯದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕದಲ್ಲಿ ಸರಣಿ ಸಭೆಗಳನ್ನು ನಡೆಸಿ, ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳಿದ್ದರು. ಆದರೆ ಅದರ ನಂತರ ಕೂಡಾ ಪಕ್ಷದೊಳಗಿನ ಕಚ್ಚಾಟಗಳು ನಿಂತಿರಲಿಲ್ಲ.
ಇದನ್ನೂ ಓದಿ: ಸಿಎಂ ಬದಲಾವಣೆ ಕುರಿತ ಸಂದೇಶ ಇಂದು ಸಂಜೆಗೆ: ಯಡಿಯೂರಪ್ಪ
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿ ಸರಣಿ ಸಭೆಯನ್ನು ನಡೆಸಿದ್ದರು. ಆದರೆ ಸಭೆಯ ನಂತರ ಅವರು ಅನಾರೋಗ್ಯದ ಕಾರಣ ನೀಡಿ ರಾಜೀನಾಮೆಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದಾಗ್ಯೂ, ಅಲ್ಲಿ ಅವರು ರಾಜೀನಾಮೆಯ ಸುದ್ದಿಯನ್ನು ಅಲ್ಲಗೆಳೆದಿದ್ದರು. ಆದರೆ ಗುರವಾರದಂದು ಮತ್ತೇ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ್ದ ಯಡಿಯೂರಪ್ಪ, ಹೈಕಮಾಂಡ್‌ನಿಂದ ಸಂದೇಶವನ್ನು ನಿರೀಕ್ಷಿಸುತ್ತಿದ್ದೇನೆ ಮತ್ತು ಅದಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದರು.
ಈ ಮಧ್ಯೆ ಸೋಮವಾರದಂದು ತಮ್ಮ ಸರ್ಕಾರದ ಎರಡು ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಯನ್ನು ಯಡಿಯೂರಪ್ಪ ನಡೆಸಲಿದ್ದಾರೆ. ಈ ಬಗ್ಗೆ ವಿಧಾನ ಸೌಧದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು, ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿಮಾಡುವ ಕಿರುಪುಸ್ತಕವೊಂದನ್ನು ಬಿಡುಗಡೆ ಮಾಡಲಾಗುತ್ತದೆ.
ನಾಯಕತ್ವದ ಬದಲಾವಣೆಯ ಬಗ್ಗೆ ಕೇಂದ್ರ ನಾಯಕರು ಉತ್ಸುಕರಾಗಿದ್ದರೂ, ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನು ಅವರು ಇನ್ನೂ ನಿರ್ಧರಿಸಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಅಲ್ಲದೆ ಪ್ರವಾಹದಿಂದ ಸಾವಿರಾರು ಜನರು ಕಷ್ಟ ಪಡುತ್ತಿರುವಾಗ ಮುಖ್ಯಮಂತ್ರಿ ಬದಲಾವಣೆಯು ಪಕ್ಷಕ್ಕೆ ಅಪಾಯ ತಂದೊಡ್ಡಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಇದನ್ನೂ ಓದಿ: ವರಿಷ್ಠರ ಸೂಚನೆಯಂತೆ ನಡೆಯುವೆ: ರಾಜೀನಾಮೆ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ
ವಿಡಿಯೊ ನೋಡಿ: ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದ ಕೇಂದ್ರ ಸರ್ಕಾರ.. ಹಾಗಾದರೆ ಇವು ಏನು??


