30 ಲಕ್ಷ ಜನ ಆಫ್ಘನ್ ನಿರಾಶ್ರಿತರು ಪಾಕ್ ಗಡಿಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಅವರನ್ನು ಬಗ್ಗು ಬಡಿಯಲು ಸಾಧ್ಯವೇ? ಅಷ್ಟಕ್ಕೂ ತಾಲಿಬಾನಿಗಳು ಸಾಮಾನ್ಯ ನಾಗರಿಕರು, ಮಿಲಿಟರಿ ಪಡೆಯಲ್ಲ ಎಂದು ಪಾಕ್ ಪಿಎಂ ಇಮ್ರಾನ್ ಖಾನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಪಿಬಿಎಸ್ ನ್ಯೂಸ್‌ಹವರ್ ಎಂಬ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, “ಪಾಕಿಸ್ತಾನವು 30 ಜನ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಅವರಲ್ಲಿ ಬಹುತೇಕರು ತಾಲಿಬಾನ್ ಜನಾಂಗೀಯ ಗುಂಪಿಗೆ ಸೇರಿದ ಪಶ್ತೂನ್ ಜನಾಂಗವಾಗಿದೆ” ಎಂದು ಅವರು ಒತ್ತಿ ಹೇಳಿದ್ದಾರೆ.
ತಾಲಿಬಾನಿಗಳಿಗೆ ಪಾಕಿಸ್ತಾನ ಸುರಕ್ಷಿತ ಸ್ವರ್ಗವಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಖಾನ್ “ತಾಲಿಬಾನಿಗಳು ಸಾಮಾನ್ಯ ನಾಗರಿಕರು, ಮಿಲಿಟರಿ ಪಡೆಯಲ್ಲ. ಅಂತವರು ಈ ನಿರಾಶ್ರಿತರ ಕ್ಯಾಂಪ್‌ನಲ್ಲಿದ್ದರೆ ಅವರನ್ನು ಬಗ್ಗು ಬಡಿಯಬೇಕೆಂದು ಹೇಗೆ ಹೇಳುತ್ತೀರಿ” ಎಂದು ಖಾನ್ ಪ್ರಶ್ನಿಸಿದ್ದಾರೆ.
ಪಾಕಿಸ್ತಾನವು ತಾಲಿಬಾನಿಗಳಿಗೆ ಆಫ್ಘಾನಿಸ್ತಾನದ ವಿರುದ್ಧ ಹೋರಾಡಲು ಸೈನಿಕವಾಗಿ ಮತ್ತು ಆರ್ಥಿಕವಾಗಿ ಸಹಾಯ ಮಾಡುತ್ತಿದೆ ಎಂಬ ಆರೋಪ ಬಹಳ ಹಿಂದಿನಿಂದಲೂ ಇದೆ ಎಂಬುದಕ್ಕೆ ಉತ್ತರಿಸಿದ ಅವರು, “ಇದೆಲ್ಲವು ಸುಳ್ಳು, ಅತ್ಯಂತ ಅಸಮಂಜಸ” ಎಂದಿದ್ದಾರೆ.
ಅಮೆರಿಕವು ಆಫ್ಘನ್‌ನಲ್ಲಿ ನಡೆಸಿದ ಯುದ್ದದಲ್ಲಿ ಸಾವಿರಾರು ಪಾಕಿಸ್ತಾನಿಯವರು ಪ್ರಾಣ ತೆತ್ತಿದ್ದಾರೆ. ಅಮೆರಿಕದ ಮೇಲಿನ ದಾಳಿಗೂ ಪಾಕಿಸ್ತಾನಕ್ಕೂ ಏನು ಸಂಬಂಧವಿಲ್ಲದಿದ್ದರೂ ನಮ್ಮವರು ಪ್ರಾಣ ತೆತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಜುಲೈ ಒಂದರಂದು ಇನ್ನು ಮುಂದೆ ಪಾಕ್ ಅಮೆರಿಕ ಪರ ಯಾವುದೇ ಯುದ್ದಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಘೋಷಿಸಿದ್ದರು.
ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ಸಿದ್ದಪಡಿಸಿದ ವರದಿಯ ಪ್ರಕಾರ ತೇಹ್ರಿಕ್ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಎಂಬ 6000 ಜನರುಳ್ಳ ಭಯೋತ್ಪಾದನಾ ಗುಂಪು ಪಾಕ್ ಗಡಿಯಲ್ಲಿದೆ ಎನ್ನಲಾಗಿದೆ. ಇದು ಆಫ್ಘನ್ ತಾಲಿಬಾನ್ ಗುಂಪನ್ನು ಬೆಂಬಲಿಸುತ್ತಾ ಪಾಕಿಸ್ತಾನಿ ವಿರೋಧಿ ಉದ್ದೇಶವನ್ನು ಹೊಂದಿದೆ ಮತ್ತು ಆಫ್ಘನ್ ಸೈನ್ಯದ ವಿರುದ್ಧ ಹೋರಾಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಅಮೆರಿಕ ಪರ ಯುದ್ಧದಲ್ಲಿ ಪಾಕ್ ಭಾಗವಹಿಸುವುದಿಲ್ಲ: ಇಮ್ರಾನ್ ಖಾನ್


