HomeUncategorizedಯಡಿಯೂರಪ್ಪ ಪದಚ್ಯುತಿ; ದುಃಖಕ್ಕೂ ಸಂಭ್ರಮಕ್ಕೂ ಯೋಗ್ಯವಲ್ಲದ ಬದಲಾವಣೆ

ಯಡಿಯೂರಪ್ಪ ಪದಚ್ಯುತಿ; ದುಃಖಕ್ಕೂ ಸಂಭ್ರಮಕ್ಕೂ ಯೋಗ್ಯವಲ್ಲದ ಬದಲಾವಣೆ

- Advertisement -
- Advertisement -

ಈ ಸಾರಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡ ದಿನದಿಂದಲೇ ಅವರ ಬದಲಾವಣೆಯ ಸುದ್ದಿ ಹರಡತೊಡಗಿತ್ತು. ಅಂತಹದೊಂದು ಸುದ್ದಿ ಸದಾಕಾಲ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳುವುದರಲ್ಲಿ ಕೆಲವರ ಹಿತಾಸಕ್ತಿಯೂ ಇದ್ದಿರಬಹುದು. ಅದನ್ನು ಬಲವಾಗಿ ಎದುರಿಸಿ ಪೂರಾ ಎರಡು ವರ್ಷ ಅಧಿಕಾರ ನಡೆಸಿದ ಯಡಿಯೂರಪ್ಪನವರ ಜಿಗುಟುತನವೂ ಎದ್ದುಕಂಡ ಒಂದು ಸಂಗತಿಯಾಗಿತ್ತು.

ಆದರೆ ಈ ಬದಲಾವಣೆಯಿಂದ ಕೆಲವರು ವಿಚಿತ್ರ ಕಾರಣಗಳಿಗಾಗಿ ದುಃಖಿತರಾದಂತೆ
ತೋರಿಸಿಕೊಳ್ಳುತ್ತಾ ಸಂಭ್ರಮಪಡುತ್ತಿದ್ದು ವಿಚಿತ್ರವಾಗಿತ್ತು. ಅದು ಕರ್ನಾಟಕವು ಸಂಪೂರ್ಣವಾಗಿ ಮತೀಯ ಶಕ್ತಿಗಳ ಕೈಗೆ ಹೋಗಿಬಿಡಬಾರದು ಎಂಬ ಸದ್ಬಯಕೆ ಹೊಂದಿದ್ದವರ ದುಃಖಭರಿತ ಸಂಭ್ರಮ. ಯಡಿಯೂರಪ್ಪ ಇದ್ದುದರಲ್ಲಿ ಪರವಾಗಿಲ್ಲ ಎಂದು ಹೇಳುತ್ತಲೇ, ಅವರ ಬದಲಾವಣೆಯಿಂದ ಲಿಂಗಾಯಿತರು ಬಿಜೆಪಿಯ ವಿರುದ್ಧ ತಿರುಗಿಬೀಳಲಿ ಎಂಬ ಆಶಯ ಅವರದ್ದು. ಇದೀಗ ಒಂದೆಡೆ ಯಡಿಯೂರಪ್ಪನವರ ಆಪ್ತ ಎಂಬಂತೆ ಬಿಂಬಿತವಾಗಿ ಈಗ ಹೈಕಮಾಂಡ್‌ನ ಆಯ್ಕೆಯೂ ಆಗಿರುವ, ಮೂಲತಃ ಸಂಘಪರಿವಾರದವರಲ್ಲದ, ಗೃಹ ಸಚಿವರಾಗಿದ್ದಾಗ ಆರೆಸ್ಸೆಸ್‌ಗೆ ಪೂರಕವಾಗಿಯೇ ಖಾತೆ ನಿರ್ವಹಿಸಿದ ವೀರಶೈವ ಲಿಂಗಾಯಿತ ಬಸವರಾಜ ಬೊಮ್ಮಾಯಿಯವರು ಸಿಎಂ ಗಾದಿಗೇರುತ್ತಿರುವ ಹೊತ್ತಿನಲ್ಲಿ ಅಂತಹವರ ಭಾವವೇನಾಗಿದೆಯೋ ಇನ್ನೂ ಗೊತ್ತಾಗಿಲ್ಲ.

ಇನ್ನು ಲಿಂಗಾಯಿತ ಮಠಗಳ ಮುಖ್ಯಸ್ಥರದ್ದು ದುಃಖವೋ, ಸಂಭ್ರಮವೋ ಗೊತ್ತಾಗುತ್ತಿರಲಿಲ್ಲ. ಅವರಿಗೆ ಇದ್ದಕ್ಕಿದ್ದ ಹಾಗೆ ರಾಜ್ಯ ರಾಜಕಾರಣದಲ್ಲಿ ಎಲ್ಲಿಲ್ಲದ ಮಹತ್ವ ಬಂದಿದ್ದು, ರಾಜ್ಯಮಟ್ಟದಲ್ಲಿ ಹೆಸರೇ ಕೇಳಿರದ ಕಾವಿಧಾರಿಗಳು ಪತ್ರಿಕಾಗೋಷ್ಠಿಗಳಲ್ಲಿ ಮಿಂಚಿದ್ದು, ಯಾವ ಲಜ್ಜೆಯೂ ಇಲ್ಲದೇ ಹಣ ಪಡೆದು ಗುಟುರು ಹಾಕಿದ್ದು, ಸರ್ಕಾರೀ ಅತಿಥಿಗೃಹದಿಂದ ಬೆಡ್‌ಶೀಟ್ ಹೊತ್ತೊಯ್ದರೆಂಬ ಆರೋಪಕ್ಕೆ ತುತ್ತಾಗಿದ್ದು ಇವೆಲ್ಲವೂ ಅವರಿಗೆ ನಿಜವಾದ ಸಿಟ್ಟಿಗಿಂತ ಮೋಜಿರಬಹುದು ಎಂಬ ಭಾವ ಮೂಡಿಸುತ್ತಿತ್ತು.

ಬಿಜೆಪಿಯ ಮಾಧ್ಯಮಗಳದ್ದು ಇನ್ನೊಂದು ವಿಶಿಷ್ಟ ಸ್ಥಿತಿ. ಒಂದೆಡೆ ತಮ್ಮಿಷ್ಟದ ಪಕ್ಷದಲ್ಲಿ ಆಗುತ್ತಿರುವ ತುಮುಲದಿಂದ ಡ್ಯಾಮೇಜ್ ಆಗಿಬಿಡುತ್ತದೇನೋ ಎಂಬ ಆತಂಕ; ಇನ್ನೊಂದೆಡೆ ಟಿಆರ್‌ಪಿಗಾಗಿ ಅರಚಾಡುತ್ತಾ ಗಾಳಿಸುದ್ದಿಗಳನ್ನು ತೇಲಿಬಿಡುವ ಉಮೇದು.

ವಾಸ್ತವದಲ್ಲಿ ಕರ್ನಾಟಕದ ಪ್ರಜ್ಞಾವಂತರು ಗಂಭೀರವಾಗಿ ತಲೆಕೆಡಿಸಿಕೊಳ್ಳಬೇಕಾದ ವಿದ್ಯಮಾನವಿದು. ಯಡಿಯೂರಪ್ಪ ಎಂಬ ವಿದ್ಯಮಾನ ಈಗಲೂ ಸಂಪೂರ್ಣವಾಗಿ ಮರೆಗೆ ಸರಿಯದೇ ಇದ್ದರೂ, ಇನ್ನೇನಿದ್ದರೂ ತೆರೆಯ ಹಿಂದಿನ ಚಟುವಟಿಕೆಯಷ್ಟೇ ಕೆಲಕಾಲ ನಡೆದು, ಕಾಲನ ಸೂಚನೆಗೆ ತಕ್ಕಂತೆ ವಿಶ್ರಾಂತ ಜೀವನ ನಡೆಸಬೇಕಾದ ಸ್ಥಿತಿ ಅವರದ್ದು. ಆದರೆ ಬಹಳಷ್ಟು ಜನರು ಚಿತ್ರಿಸುತ್ತಿರುವಂತೆ ಮತ್ತು ಸ್ವತಃ ಅವರೇ ವಿದಾಯ ಭಾಷಣದಲ್ಲಿ ಬಿಂಬಿಸಿಕೊಂಡಂತೆ ಯಡಿಯೂರಪ್ಪನವರದ್ದು ಜನಪರ ಹೋರಾಟ, ಮತೀಯ ರಾಜಕಾರಣವಲ್ಲದ ಭಿನ್ನ ನಡೆ, ತಳಹಂತದಿಂದ ಬಿಜೆಪಿಯನ್ನು ಕಟ್ಟಿದ ಶ್ರಮಜೀವಿಯ ಜೀವನ ಎಂಬುದೆಲ್ಲಾ ನಿಜವೇ? ಅಥವಾ ಎಂಬುದಷ್ಟೇ ನಿಜವೇ? ಎಲ್ಲಾ ರಾಜಕಾರಣಿಗಳಂತೆ ಒಂದಷ್ಟು ಭ್ರಷ್ಟರೇ ಹೊರತು ಅವರನ್ನು ಮಾತ್ರ ಏಕೆ ಗುರಿ ಮಾಡಬೇಕು ಎಂಬ ಮಾತುಗಳಲ್ಲಿ ಹುರುಳಿದೆಯೇ?

ಉಳಿದ ಸರ್ಕಾರಗಳೇನೂ ಸಾಚಾ ಅಲ್ಲವಾದರೂ, ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿತ್ತು ಎನ್ನಲು ಕಾರಣಗಳಿವೆ; ಸಂವಿಧಾನ ಬಾಹಿರ ಶಕ್ತಿಯೊಂದು ಸರ್ಕಾರದ ಆಡಳಿತದಲ್ಲಿ ಕೈ ಹಾಕಿ, ಅತೀ ಹೆಚ್ಚು ಆದಾಯ ತರುತ್ತಿದ್ದ ಇಲಾಖೆಗಳ ಮೇಲೆ ನೇರ ಹಿಡಿತವನ್ನೂ ಸಾಧಿಸಿದ ಪರಿ ಹಿಂದೆಂದೂ ಈ ಮಟ್ಟಿಗೆ ಕರ್ನಾಟಕದಲ್ಲಿ ಕಂಡಿರಲಿಲ್ಲ. ಬಿಜೆಪಿಯ ಹೈಕಮಾಂಡ್ ಇದೇ ಕಾರಣಕ್ಕೆ ಯಡಿಯೂರಪ್ಪನವರನ್ನು ತೆಗೆಯಿತೆಂಬುದೂ ವಾಸ್ತವವಲ್ಲ. ಹೀಗಾಗಿ ಯಡಿಯೂರಪ್ಪನವರು ಕಣ್ಣೀರು ಹಾಕಿದ ಹೊತ್ತಿನಲ್ಲಿ ಅಕ್ಷರಗಳೂ ಅನಗತ್ಯ ಭಾವುಕವಾಗದೇ ಸತ್ಯವನ್ನು ಒರೆಗೆ ಹಚ್ಚುವ ಕೆಲಸ ಮಾಡುವ ಅಗತ್ಯವಿದೆ. ಇದೇ ಬಿಜೆಪಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಎಂಬೊಬ್ಬ ದೊಡ್ಡ ನಾಯಕರಿದ್ದರು. ಆರೆಸ್ಸೆಸ್‌ನ ಸ್ವಯಂಸೇವಕರಾಗಿದ್ದ ಅವರು ಸೈದ್ಧಾಂತಿಕ ವಿರೋಧಿಗಳಿಗೂ ಪ್ರೀತಿಪಾತ್ರರಾಗಿದ್ದರು. ಅವರು ಹಾಗಿದ್ದುದರಿಂದ ಅದೇ ಪಾತ್ರವನ್ನು ಅವರಿಗೆ ವಹಿಸಲಾಗಿತ್ತು.

ಬಾಬ್ರಿ ಮಸೀದಿ ಧ್ವಂಸವಾದ ದಿನ ಮಾಧ್ಯಮಗಳ ಮುಂದೆ ಮಾತಾಡಿ ಅದನ್ನು ಖಂಡಿಸಿದ ವಾಜಪೇಯಿ, ಅದೇ ಧ್ವಂಸ ಮತ್ತು ಅದರಿಂದುಂಟಾದ ಧ್ರುವೀಕರಣದ ಫಲವಾಗಿಯೇ ಪ್ರಧಾನಿಯೂ ಆದರು. ಏಕೆಂದರೆ ಖುದ್ದಾಗಿ ಧ್ವಂಸ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಡ್ವಾಣಿಯವರೇ ಪ್ರಧಾನಿಯಾಗುವ ಸಂದರ್ಭವಿನ್ನೂ ದೇಶದ ರಾಜಕಾರಣದಲ್ಲಿ ಬಂದಿರಲಿಲ್ಲ. ಹಾಗೆಯೇ ಕರ್ನಾಟಕದಲ್ಲಿ ಅನಂತ ಕುಮಾರ ಹೆಗಡೆಯೋ, ಸಿ.ಟಿ.ರವಿಯೋ, ಬಿ.ಎಲ್.ಸಂತೋಷೋ ಮುಖ್ಯಮಂತ್ರಿಯಾಗುವ ಸಂದರ್ಭ ಇನ್ನೂ ಬಂದಿಲ್ಲವೆಂಬ ಕಾರಣಕ್ಕೇ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅಂತಹುದೇ ಕಾರಣಗಳಿಂದ ತಳಮಟ್ಟದ ವಾಜಪೇಯಿ ಗುಣಗಳನ್ನು ಹೊಂದಿದ್ದ ಯಡಿಯೂರಪ್ಪ ಬಿಜೆಪಿಯ ದೊಡ್ಡ ನಾಯಕರಾದರು ಮತ್ತು ಪ್ರತೀ ಹಂತದಲ್ಲೂ ರಾಜ್ಯದಲ್ಲಿ ಮತೀಯವಾದ ಬೆಳೆಯಲು ಬೇಕಾದ ನೀರು, ಗೊಬ್ಬರವನ್ನೆರೆದರು.

ಅದರ ಜೊತೆಜೊತೆಗೇ ಸ್ವಂತ ಅಧಿಕಾರದ ಆಸೆಯನ್ನೂ ವಿಪರೀತ ಬೆಳೆಸಿಕೊಳ್ಳುತ್ತಾ ಬಂದಿದ್ದರು. ಹಾಗಾಗಿಯೇ ಅವರು ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಒಂದು ರಾತ್ರಿ ಶೋಭಾ ಕರಂದ್ಲಾಜೆಯವರ ಜೊತೆಗೆ ಕುಮಾರಸ್ವಾಮಿಯವರ ಮನೆ ಬಾಗಿಲು ಬಡಿದು, ನೀವು ಸಿಎಂ ಆಗಿ ನಾವು ಬಂದು ಬೆಂಬಲ ಕೊಡುತ್ತೇವೆ, ನಮ್ಮನ್ನು ಮಂತ್ರಿಗಳನ್ನಾಗಿಸಿದರೆ ಸಾಕು ಎಂದಿದ್ದರು. ಕೆಲ ತಿಂಗಳ ನಂತರ ಕುಮಾರಸ್ವಾಮಿ ಜೊತೆ ಸೇರಿ ಉಪಮುಖ್ಯಮಂತ್ರಿಯೂ ಆದರು. ಅದರ ನಂತರ ಒಪ್ಪಂದದಂತೆ ಇವರು ಸಿಎಂ ಆಗಲು ಜೆಡಿಎಸ್ ಬೆಂಬಲ ಕೊಡಲ್ಲ ಎಂದಾಗ ಸಿದ್ಧಗಂಗಾ ಮಠದ ಮುಖ್ಯಸ್ಥರಿಗೆ ನಮಸ್ಕರಿಸಿ ರಾಜ್ಯ ಪ್ರವಾಸ ಮಾಡಿ ಹೋರಾಡುತ್ತೇನೆಂದು ಹೊರಟವರು, ಬನ್ನಿ ಬೆಂಬಲ ಕೊಡುತ್ತೇವೆಂದು ಕರೆದಾಗ ಮತ್ತೆ ಬಂದು ಪ್ರಮಾಣವಚನ ಸ್ವೀಕರಿಸಿದ್ದರು. ಮತ್ತೆ ಜೆಡಿಎಸ್ ಕೈ ಕೊಟ್ಟಿತು.

ಆ ನಂತರದ ಚುನಾವಣೆಯಲ್ಲೂ ಬಹುಮತ ಬಾರದಿದ್ದಾಗ ಪಕ್ಷೇತರರಿಂದ ಬೆಂಬಲ ಪಡೆದು ಸಿಎಂ ಆದವರು ಅಲ್ಲಿಗೇ ನಿಲ್ಲದೇ, ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಗಣಿ ಪಾತಕದ ಹಣದಿಂದ ಲೋಡುಗಟ್ಟಲೇ ಶಾಸಕರನ್ನು ರಾಜೀನಾಮೆ ಕೊಡಿಸಿ, ಮಂತ್ರಿಗಳನ್ನಾಗಿಸಿ, ಮತ್ತೆ ಗೆಲ್ಲಿಸಿಕೊಂಡು ಬರುವ ಅಸಹ್ಯದ ಆಪರೇಷನ್‌ಅನ್ನು ಎಗ್ಗಿಲ್ಲದೇ ಮಾಡಿದರು.

ಪೂರ್ಣ ಬಹುಮತದ ಸಿಎಂ ಆದವರು, ರೆಡ್ಡಿಗಳ ಬಲವಿಲ್ಲದೇ ಅಧಿಕಾರದಲ್ಲುಳಿಯಲು ಬೇಕಾದ ಹಣವನ್ನು ಗುಡ್ಡೆ ಹಾಕಿಕೊಳ್ಳತೊಡಗಿದರು. ಚೆಕ್‌ನಲ್ಲಿ ಲಂಚ ಸ್ವೀಕರಿಸಿದ, ಜೈಲಿಗೆ ಹೋದ ಮೊದಲ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಅವರದ್ದು. ಆಗಲೂ ಅಧಿಕಾರ ಬಿಡಲು ಒಪ್ಪದೇ ಎಳೆದಾಡಿದ್ದು, ಎರಡೆರಡು ಬಾರಿ ಸಿಎಂ ಬದಲಾವಣೆಗೆ ಕಾರಣವಾಗಿದ್ದು, ಪಕ್ಷವನ್ನೂ ಬಿಟ್ಟು ಹೋಗಿದ್ದು ಎಲ್ಲವೂ ನಡೆದು ಬಹಳ ಕಾಲವಾಗಿಲ್ಲ.
ಆ ಅವಧಿಯ ನಂತರದ ಚುನಾವಣೆಯಲ್ಲಿ ಹಿಂದಿಗಿಂತ ಕಡಿಮೆ ಸೀಟುಗಳು ಬಂದಿದ್ದಲ್ಲದೇ, ಜೆಡಿಎಸ್ ಮತ್ತು ಕಾಂಗ್ರೆಸ್‌ಗಳು ಬಹಿರಂಗವಾಗಿ ಒಟ್ಟಿಗೆ ನಿಂತರೂ ಬಿಡದೇ ಪ್ರಮಾಣವಚನ ಸ್ವೀಕರಿಸಿದರು. ಎಚ್‌ಡಿಕೆ ಸಿಎಂ ಆದ ಮೇಲೆ ನಿರಂತರವಾಗಿ ಆ ಸರ್ಕಾರ ಕೆಡವಲು ಹಿಂದಿನಿಂದ ಹುನ್ನಾರ ನಡೆಸಿದ ಯಡಿಯೂರಪ್ಪನವರು ಮತ್ತೊಮ್ಮೆ ಅಸಹ್ಯದ ಆಪರೇಷನ್‌ಗೆ ಕೈ ಹಾಕಿದ್ದನ್ನು ರಾಜ್ಯದ ಪ್ರಜ್ಞಾವಂತ ಜನರು ಇಷ್ಟು ಸಲೀಸಾಗಿ ಹೇಗೆ ಮರೆತು ಹೋಗುತ್ತಾರೆ? ಹೇಗಾದರೂ ಸರಿ ಅಧಿಕಾರ ಹಿಡಿಯಬೇಕು, ಅಧಿಕಾರವಿದ್ದಾಗ ಲೂಟಿ ಹೊಡೆಯಬೇಕು ಮತ್ತು ಅಧಿಕಾರ ಬಿಟ್ಟುಕೊಡಬಾರದು ಎಂಬ ಅವರ ಧೋರಣೆಯನ್ನು ’ಮತೀಯವಾದಿ ಅಲ್ಲ, ಲಿಂಗಾಯಿತರ ಧ್ರುವೀಕರಣ ಮಾಡಿದರೂ ಇತರ ಜಾತಿಗಳನ್ನು ದ್ವೇಷಿಸುವುದಿಲ್ಲ, ತನ್ನ ಪರ ನಿಂತವರು ಎಂತಹ ಭ್ರಷ್ಟರೂ ನಾಲಾಯಕ್‌ಗಳಾದರೂ ಅವರ ಹಿತ ಕಾಪಾಡುತ್ತಾರೆ’ ಎಂಬ ’ಮೌಲ್ಯಗಳನ್ನು ಮುಂದಿಟ್ಟು ಉಪೇಕ್ಷಿಸುವುದು ಹೇಗೆ?

ಯಡಿಯೂರಪ್ಪನವರು ಕೋಮುವಾದೇತರ ಇಶ್ಯೂಗಳಿಂದ ರಾಜಕೀಯವಾಗಿ ಮೇಲೆ ಬಂದರು ಎಂಬುದು ಅರ್ಧ ಸತ್ಯ. ಅವರ ಬೆಳವಣಿಗೆಯಿಂದ ಕೋಮುವಾದಿಗಳಿಗೆ ಅನುಕೂಲವಾಯಿತು ಎಂಬುದು ಪೂರ್ಣ ಸತ್ಯ. ಕೊರೊನಾ ಕಾಲದಲ್ಲಿ ತಬ್ಲಿಗಿ ಜಮಾತ್ ಘಟನೆಯನ್ನಿಟ್ಟುಕೊಂಡು ಮುಸ್ಲಿಮರ ವಿರುದ್ಧ ಮಾತಾಡಬಾರದು ಎಂದು ಮಾತಾಡಿದ್ದನ್ನು ಬಿಟ್ಟರೆ ಯಡಿಯೂರಪ್ಪ ಕೋಮುವಾದೀ ಸಂಚಿನ ವಿರುದ್ಧ ನಿಂತ ಯಾವ ಉದಾಹರಣೆಯೂ ಇಲ್ಲ. ಬಾಬಾಬುಡನ್‌ಗಿರಿಯಲ್ಲಿ ಒಮ್ಮೆ ಸ್ವತಃ ದತ್ತಮಾಲೆ ಹಾಕಿಕೊಂಡು ಹೋಗಿದ್ದ ಯಡಿಯೂರಪ್ಪ, ಆ ನಂತರ ಡೆಪ್ಯುಟಿ ಸಿಎಂ ಆದ ಸಂದರ್ಭದಲ್ಲಿ ರಾಮಸೇತು ನೆಪವಿಟ್ಟುಕೊಂಡು ಬಸ್‌ಗೆ ಬೆಂಕಿ ಹಾಕಿ ಇಬ್ಬರ ಜೀವಂತದಹನ ನಡೆದಾಗಲೂ ಅದನ್ನು ಖಂಡಿಸಲಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಹಾಗೂ ಅಟಲ್ ಬಿಹಾರಿ ವಾಜಪೇಯಿ ಥರದವರ ಮೋಡಸ್ ಒಪರಾಂಡಿಯನ್ನು ಸರಿಯಾಗಿ ಒರೆಗೆ ಹಚ್ಚಬೇಕಿದೆ. ಸಂವಿಧಾನ ಪರಾಮರ್ಶೆ ಹೆಸರಿನಲ್ಲಿ ಬದಲಾವಣೆಯ ಪ್ರಯತ್ನ ಶುರುವಾಗಿದ್ದು ಉದಾರವಾದಿ ವಾಜಪೇಯಿಯವರ ಕಾಲದಲ್ಲಿ. ಭಾರತದಲ್ಲಿರುವ ಸಂಕೀರ್ಣ ಸಾಮಾಜಿಕ ಸನ್ನಿವೇಶದಲ್ಲಿ ಹಲವು ಬಗೆಯ ಮುಖವಾಡಗಳು ಬೇಕಾಗುತ್ತವೆ. ಯಡಿಯೂರಪ್ಪನವರು ವ್ಯಕ್ತಿಗತ ಅಧಿಕಾರದ ಆಸೆಯ ಆಚೆಗೂ ಆ ಮುಖವಾಡದ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದರು. ಯಡಿಯೂರಪ್ಪನವರು ಮೊದಲ ಸಾರಿ ಸಿಎಂ ಆಗಿದ್ದಾಗ ’ಆಂತರಿಕ ಸಭೆಯಲ್ಲಿ ಹೇಳಬೇಕಿದ್ದ ಮಾತೊಂದನ್ನು’ ಅಪ್ಪಿತಪ್ಪಿ ಸಭಾಂಗಣದ ವೇದಿಕೆಯೊಂದರಿಂದ ಹೇಳಿಬಿಟ್ಟಿದ್ದರು. ಅದೂ ಪಠ್ಯಪುಸ್ತಕ ಬದಲಿಸುವ ವಿಚಾರದಲ್ಲಿ. ’ಪಠ್ಯಪುಸ್ತಕ ಬದಲಿಸುವ ವಿಚಾರವನ್ನು ಸುದ್ದಿ ಮಾಡುತ್ತಾ ಮಾಡಬೇಡಿ, ನೀವೇನು ಮಾಡಬೇಕೋ ಅದನ್ನು ಮಾಡಿಬಿಡಿ ಅಷ್ಟೇ’ ಎಂದಿದ್ದರು. ಹಾಗೇ ಮಾಡಿದರೂ ಸಹಾ. ಮುಖವಾಡಗಳಿಗೆ ಸಾಧ್ಯವಾಗುವ ಚಾಲಾಕಿತನ ಇಂಥಾದ್ದು.

ವಿವಿಧ ದಮನಿತ ಸಮುದಾಯಗಳನ್ನು ದಮನಕ ವೈದಿಕಶಾಹಿ ಸಿದ್ಧಾಂತದ ಬಿಜೆಪಿ ತೆಕ್ಕೆಗೆ ತರುವುದರಲ್ಲಿ ಯಡಿಯೂರಪ್ಪನವರದ್ದು ದೊಡ್ಡ ಪಾಲಿದೆ. ಕರ್ನಾಟಕದಲ್ಲೊಂದು ಸೋಷಿಯಲ್ ಎಂಜಿನಿಯರಿಂಗ್‌ಅನ್ನು ಸಾಧಿಸುವುದರಲ್ಲಿ ಆರೆಸ್ಸೆಸ್ ಮತ್ತು ಯಡಿಯೂರಪ್ಪ ಜೊತೆ ಜೊತೆಗೇ ಕೆಲಸ ಮಾಡಿದ್ದಾರೆ. ಜೊತೆಗೆ ಲಿಂಗಾಯಿತರ ಗಟ್ಟಿ ಬೇಸ್‌ಅನ್ನೂ ನಿರ್ಮಿಸಿಕೊಟ್ಟಿದ್ದಾರೆ. ಲಿಂಗಾಯತ ನಾಯಕನೆಂಬ ಪಟ್ಟ ಪಡೆಯಲು – ಆಯಾಚಿತವಾಗಿ ಲಭ್ಯವಾದ ಅವಕಾಶವನ್ನು ಬಳಸಿಕೊಂಡಿದ್ದಷ್ಟೇ ಅಲ್ಲ. ಅದನ್ನು ಗಟ್ಟಿಗೊಳಿಸಿಕೊಳ್ಳಲು ಅಪಾರವಾದ ಹಣ ಚೆಲ್ಲಿದ್ದಾರೆ. ಅದೂ ಯಾರ ಹಣ? ಒಂದೆಡೆ ನೇರವಾಗಿ ಸರ್ಕಾರದ ಬಜೆಟ್‌ನಿಂದ ಎತ್ತಿಕೊಟ್ಟರೆ, ಇನ್ನೊಂದೆಡೆ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿ ಕೊರೆದ ಹಣ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕರ್ನಾಟಕದ ದೊಡ್ಡ ವೀರಶೈವ ಲಿಂಗಾಯಿತ ಮಠಗಳ ಮುಖ್ಯಸ್ಥರಲ್ಲಿ ಹಲವರು ಲಜ್ಜೆಯಿಲ್ಲದೇ ಅದಕ್ಕೆ ಪಕ್ಕಾದದ್ದು ಬಸವ ಪರಂಪರೆಗೆ ಎಸಗಿದ ದ್ರೋಹವೆಂದು ಅನಿಸದ ರೀತಿಯಲ್ಲಿ ಇದನ್ನು ನೆರವೇರಿಸಿದರು. ಇವೆಲ್ಲವೂ ಯಡಿಯೂರಪ್ಪನವರು ತಂದಿಟ್ಟ ದೊಡ್ಡ ಅಪಾಯವೆಂದು ಬಗೆಯದೇ, ಅವರು ಅನಂತ ಕುಮಾರ ಹೆಗಡೆಯಂತೆ, ಸಿ.ಟಿ.ರವಿಯಂತೆ ಮಾತಾಡುವುದಿಲ್ಲವೆಂಬುದೇ ದೊಡ್ಡದು ಎಂದುಕೊಳ್ಳುವುದು ಕೇವಲ ಅಮಾಯಕತನವಲ್ಲ.

ಆರೆಸ್ಸೆಸ್‌ನ ಮತ್ತು ಅದರ ವೈದಿಕ ಮುಂದಾಳುಗಳ ಗೋಸುಂಬೆತನಕ್ಕೆ ಎಣೆಯೇ ಇಲ್ಲ. ಯಡಿಯೂರಪ್ಪನವರನ್ನು ಭ್ರಷ್ಟಾಚಾರದ ಕಾರಣಕ್ಕೆ ಕೆಳಗಿಳಿಸಲಾಗುತ್ತಿದೆ ಎಂಬಂತೆ ಬಿಂಬಿಸಲಾಯಿತು. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಿದ್ದೇ ಭ್ರಷ್ಟಾಚಾರದಿಂದ. ಅದಕ್ಕೆ ಖುದ್ದು ಹೈಕಮ್ಯಾಂಡ್‌ನ ಸಂಪೂರ್ಣ ರಕ್ಷಣೆಯಿತ್ತು. ಮಹಾರಾಷ್ಟ್ರದಲ್ಲಿ ಅವರದ್ದೇ ಪಕ್ಷ ಅಧಿಕಾರದಲ್ಲಿದ್ದಾಗ, ಬಾಂಬೆ ಬಾಯ್ಸ್‌ರಿಗೆ ಪೊಲೀಸ್ ರಕ್ಷಣೆ ಕೊಟ್ಟು ಸಾಕಿಕೊಳ್ಳಲಾಗಿತ್ತು. ಶಾಸಕರನ್ನು ಕೊಳ್ಳಲು, ಉಪಚುನಾವಣೆಗಳಲ್ಲಿ ಹೇಗಾದರೂ ಮಾಡಿ ಗೆಲ್ಲಲು ಯಡಿಯೂರಪ್ಪನವರು ಅಥವಾ ವಿಜಯೇಂದ್ರ ದುಡಿದು ತಂದ ಹಣವನ್ನೇನೂ ಹಾಕಿರಲಿಲ್ಲ. ಹಾಗೆ ನೋಡಿದರೆ ಇದೇ ಯಡಿಯೂರಪ್ಪನವರನ್ನು ಮೊದಲ ಸಾರಿ ಭ್ರಷ್ಟಾಚಾರದ ಕಾರಣ ಹೇಳಿಯೇ ಕೆಳಗಿಳಿಸಲಾಗಿತ್ತು. ಭ್ರಷ್ಟಾಚಾರವೇ ಕಾರಣವೆಂಬಂತೆ ಸುದ್ದಿ ಹರಡಿಸಿದರೂ, ಅದನ್ನು ಬಹಿರಂಗವಾಗಿ ಹೇಳಿಲ್ಲ. ಇದುವರೆಗೂ ಅಧಿಕೃತವಾಗಿ ಒಬ್ಬನೇ ಒಬ್ಬ ಬಿಜೆಪಿಯ ನಾಯಕ ಅಥವಾ ನಾಯಕಿ ಯಡಿಯೂರಪ್ಪನವರನ್ನು ಇಳಿಸಲು ಏನು ಕಾರಣ ಎಂದು ಮಾತಾಡಿಲ್ಲ. ಅವರಿಗೆ 75ಕ್ಕಿಂತ ಹೆಚ್ಚು ವಯಸ್ಸಾಗಿದೆ ಎನ್ನುವುದಾದಲ್ಲಿ, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗಲೇ 75 ದಾಟಿತ್ತು. ವಿಜಯೇಂದ್ರರ ಮಧ್ಯಪ್ರವೇಶ ಹೆಚ್ಚಾಗಿದ್ದೇ ಕಾರಣ ಎನ್ನುವುದಾದಲ್ಲಿ, ಅದು ತಾರಕಕ್ಕೇರಿದ್ದಾಗಲೇ ಆತನನ್ನು ಬಿಜೆಪಿಯ ರಾಜ್ಯ ಉಪಾಧ್ಯಕ್ಷನನ್ನಾಗಿಸಲಾಗಿತ್ತು ಮತ್ತು ವಿವಿಧ ಉಪಚುನಾವಣೆಗಳ ಉಸ್ತುವಾರಿಯನ್ನು ನೀಡಲಾಗಿತ್ತು. ಕರ್ನಾಟಕದ ಯಾವ ದೊಡ್ಡ ನಾಯಕರಿಗೂ ಸಿಗದ ದೆಹಲಿಯ ದೊಡ್ಡ ನಾಯಕರು ವಿಜಯೇಂದ್ರರನ್ನು ಮಾತ್ರ ಭೇಟಿ ಮಾಡುತ್ತಿದ್ದರು. ಅಂದರೆ ಈ ಭ್ರಷ್ಟತೆಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ದೊಡ್ಡ ನಾಯಕರೂ ಶಾಮೀಲಾಗಿದ್ದಾರೆ.

ಹಾಗಾಗಿ ಕರ್ನಾಟಕದ ಪ್ರಜ್ಞಾವಂತರು ಸೀಮಿತ ದೃಷ್ಟಿಕೋನದಿಂದ ಯಡಿಯೂರಪ್ಪನವರನ್ನು ವೈಭವೀಕರಿಸುವ ಅಥವಾ ಯಡಿಯೂರಪ್ಪನವರನ್ನು ತೆಗೆದಿದ್ದಕ್ಕಾಗಿ ಸಂತಸ ಪಡುವುದರಾಚೆಗೆ ಆಲೋಚಿಸುವ ಅಗತ್ಯವಿದೆ.

ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....