ಕೇರಳ ಸರ್ಕಾರ ಶಾಲೆಗಳಲ್ಲಿ ಬಳಸುವ ಪಠ್ಯಪುಸ್ತಗಳನ್ನು ಆಡಿಟ್ ಮಾಡಿ ಅವುಗಳಲ್ಲಿ ಲಿಂಗತ್ವ ತಟಸ್ಥ ಭಾಷೆಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವುದಾಗಿ ಇತ್ತೀಚೆಗೆ ಘೋಷಿಸಿದೆ. ಇದರ ಸುತ್ತ ಹಲವು ಚರ್ಚೆಗಳು ನಡೆದಿವೆ. ಇಂಗ್ಲಿಷ್‌ಗೆ ಸಂವಾದಿಯಾಗಿ ಮಲಯಾಳಂನಲ್ಲಿ ಪದಗಳು ಲಭ್ಯವಿದೆಯೇ ಎಂಬುದರಿಂದ ಹಿಡಿದು, ಕೇವಲ ಗಂಡು-ಹೆಣ್ಣಿಗೆ ಸೀಮಿತಗೊಂಡ ತಟಸ್ಥ ಭಾಷೆಯಷ್ಟೇ ಅಲ್ಲದೆ ಟ್ರಾನ್ಸ್ ಲಿಂಗತ್ವವನ್ನೊಳಗೊಂಡಂತೆ ಅದನ್ನು ರೂಪಿಸಬೇಕು ಎಂಬಂತಹ ಚರ್ಚೆಗಳು ನಡೆದಿವೆ. ಈ ನಿಟ್ಟಿನಲ್ಲಿ ಎಚ್ ಎಸ್ ಶ್ರೀಮತಿಯವರು ಚರ್ಚೆಯನ್ನು ಮುಮದುವರೆಸಿದ್ದಾರೆ.

ಪಿತೃಪ್ರಧಾನ ವ್ಯವಸ್ಥೆಯ ಎಲ್ಲ ಚಿಂತನೆಗಳೂ ಪುರುಷಕೇಂದ್ರಿತವೇ ಆಗಿರುತ್ತವೆ. ಈ ಮೂಲ ಆಶಯದ ತನ್ನ ತಂತ್ರಗಾರಿಕೆಯನ್ನು ವಿವಿಧ ಸಾಂಸ್ಥಿಕ ಅಂಗರಚನೆಗಳ ಮೂಲಕ ಅದು ಜಾರಿಗೊಳಿಸುತ್ತದೆ. ಯಾವುದೇ ಕುಟುಂಬದಲ್ಲಿ ಮಗುವು ಹುಟ್ಟಿದ ಕ್ಷಣದಿಂದಲೇ ಪುರುಷ ಅಧಿಕಾರ ಎಂಬ ಮೌಲ್ಯದ ತರಬೇತಿಗೆ ತೊಡಗುತ್ತದೆ. ಸುತ್ತಲಿನ ಪರಿಸರದಲ್ಲಿಯೂ ದೊರೆಯುವ ಇದೇ ವಾತಾವರಣದಲ್ಲಿ ಮಗುವಿಗೆ ಈ ತರಬೇತಿಯು ನಿರಂತರವಾಗಿ ಸಾಗುತ್ತದೆ. ಹದವಾಗಿ ಬಲಗೊಂಡ ಈ ಬೀಜವು ಈಗಿನ ಔಪಚಾರಿಕ ಶಿಕ್ಷಣ ಪದ್ಧತಿಯಲ್ಲಿ ಬೆಳೆದು ಸ್ಥಿರೀಕರಣಗೊಳ್ಳುತ್ತದೆ. ಇದರ ಬೇರುಗಳ ಹಿಡಿತದಿಂದ ಯಾರಿಗೂ ಮುಕ್ತಿ ದೊರೆಯಲಾರದು.

ಪುರುಷ ಅಧಿಕಾರದ ಮೌಲ್ಯವನ್ನು ಗಂಡುಗಳಷ್ಟೇ ತೀವ್ರವಾಗಿ ಹೆಣ್ಣುಗಳೂ ಒಪ್ಪಿ ಬದುಕುತ್ತಾರೆ. ಹಾಗಾಗಿ ತಾರತಮ್ಯದ ಬದುಕುಗಳು ಬದುಕಿನ ಸಹಜ ಸಂಗತಿಗಳು ಎಂದೇ ಅವರಿಬ್ಬರೂ ನಂಬುತ್ತಾರೆ. ಆದರೂ ಬದುಕಿನ ವಾಸ್ತವಗಳ ಅನುಭವದಲ್ಲಿ ಇಬ್ಬರಲ್ಲಿಯೂ ಪರಸ್ಪರ ದ್ವೇಷ ನೆಲೆಗೊಳ್ಳುತ್ತದೆ. ಈ ಕೃತಕ ಸಾಮಾಜಿಕ
ತಂತ್ರಗಾರಿಕೆಯನ್ನು, ಗಂಡುಹೆಣ್ಣುಗಳ ನಡುವೆ ಏರ್ಪಡುವ ಭೇದವನ್ನು ಸ್ತ್ರೀವಾದಿಗಳು ’ಲಿಂಗತ್ವ’ ಎಂಬ ಪರಿಭಾಷೆಯಲ್ಲಿ ವಿವರಿಸುತ್ತಾರೆ. ಈ ಪರಿಭಾಷೆಯು ಮಾನವರಲ್ಲಿ ಕಂಡುಬರುವ ಎಲ್ಲ ಲೈಂಗಿಕತಾ ವೈವಿಧ್ಯಗಳನ್ನೂ ಒಳಗೊಳ್ಳುತ್ತದೆ. ಬಹುಸಂಖ್ಯಾತರಾದ ಗಂಡು ಹೆಣ್ಣು ಎಂಬ ಬಗೆಗಳವರಷ್ಟೇ ಅಲ್ಲದೆ ಇವೆರಡಕ್ಕಿಂತ ಭಿನ್ನ ಲೈಂಗಿಕತಾ ಗುಣಗಳನ್ನು ಹೊಂದಿದ LGBTQA ಎಂಬ ಅಲ್ಪಸಂಖ್ಯಾತರೂ ಇದೇ ಮಾನವ ಕುಲದಲ್ಲಿ ಇದ್ದಾರೆ. ಇವರನ್ನೂ ಒಳಗೊಂಡಂತೆ ಲಿಂಗತ್ವ ತಾರತಮ್ಯವನ್ನು ಸರಿಪಡಿಸುವ ಚಿಂತನೆಗಳು ಬೆಳೆಯುವ ಅಗತ್ಯ ಇದೆ. ಇತ್ತೀಚಿನ ಸಾಮಾಜಿಕ ಚಿಂತನೆಗಳು, ಹೋರಾಟಗಳು ಈ ದಿಸೆಯಲ್ಲಿ ಇವೆ.

ವ್ಯವಸ್ಥೆಯು ಜಾರಿಗೊಳಿಸಿರುವ ಈ ದ್ವೇಷ ಮೂಲದ ರಾಜಕಾರಣದಲ್ಲಿ ಪ್ರತಿಯೊಬ್ಬರೂ ಹಿಂಸೆ, ದೌರ್ಜನ್ಯಗಳನ್ನಷ್ಟೇ ಕಾಣುತ್ತಿರುವುದು. ಮೇಲುನೋಟಕ್ಕೆ ಈ ಹಿಂಸೆ ದೌರ್ಜನ್ಯಗಳನ್ನು ಎಸಗುವವರು ಪುರುಷರು, ಅದಕ್ಕೆ ಒಳಗಾಗುವವರು ಮಹಿಳೆಯರು ಎನಿಸಬಹುದು. ಆದರೆ ಸರಿಯಾಗಿ ನೋಡಿದರೆ ಹೆಂಗಸರು, ಭಿನ್ನ ಲೈಂಗಿಕತಾ ಗುಣದವರು, ಎಲ್ಲ ಬಗೆಯ ದುರ್ಬಲ ಜಾತಿವರ್ಗಗಳವರೂ ಮಾತ್ರವಲ್ಲದೆ, ಅಧಿಕಾರವನ್ನು ಪಡೆದವರು ಎಂಬ ಪುರುಷರು ಕೂಡಾ ಇದೇ ಮೂಲದ ಮನೋಕ್ಷೋಭೆಗೆ ಸಿಲುಕಿದ್ದಾರೆ ಎಂಬುದು ಅರ್ಥವಾಗುತ್ತದೆ.

PC : Human Resourcing

ಈ ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸುವ ಚಿಂತನೆಗಳು, ಹೋರಾಟಗಳು ನಡೆಯುತ್ತಲೇ ಬಂದಿವೆ. ಆದರೆ ಇವುಗಳಿಂದ ಕೆಲವೊಂದು ಸುಧಾರಣೆಗಳು ಸಾಧ್ಯವಾದರೂ ಪರಿಹಾರಗಳು ದೊರೆಯದೇ ಹೋದವು. ಇತ್ತೀಚಿನ ದಿನಗಳಲ್ಲಿ ನಮ್ಮ ಚಿಂತನೆಗಳು ಸಾಮಾಜಿಕ ತರಬೇತಿಯನ್ನು ಕುರಿತ ಅರಿವಿನೊಂದಿಗೆ ಸಾಂಸ್ಥಿಕ ರಚನೆಗಳನ್ನು ನವೀಕರಿಸುವ ಪ್ರಯತ್ನಗಳ ಅಗತ್ಯವನ್ನು ಮನಗಂಡಿವೆ.

ಔಪಚಾರಿಕ ಶಿಕ್ಷಣದ ರಚನೆಯು ಉಳಿದೆಲ್ಲ ಸಂಸ್ಥೆಗಳಿಗಿಂತಲೂ ಹೆಚ್ಚು ಮೂರ್ತವಾದದ್ದು. ಏಕೆಂದರೆ ಅಲ್ಲಿನ ಕಾರ್ಯವಿಧಾನದ ವಿವರಗಳನ್ನು ಮತ್ತು ಅಲ್ಲಿ ಬಳಕೆಯಾಗುವ ಸಂಪನ್ಮೂಲಗಳನ್ನು ದಾಖಲಿಸಬಹುದಾಗಿದೆ. ಭಾಷಿಕ ದಾಖಲೆಯಾಗಿಯೇ ಬಳಕೆಯಾಗುವ ಪಠ್ಯಸಾಮಗ್ರಿಗಳು ಇನ್ನಷ್ಟು ಸುಲಭವಾಗಿ ಪ್ರಯೋಗಗಳಿಗೆ ದಕ್ಕಬಲ್ಲವು. ಪ್ರಾಥಮಿಕ ಹಂತದಿಂದ ಉನ್ನತ ಹಂತದವರೆಗಿನ ಶಿಕ್ಷಣದಲ್ಲಿ ಬಳಕೆಯಾಗುವ ಪಠ್ಯ ಸಾಮಗ್ರಿಗಳನ್ನು ಕೇಂದ್ರವಾಗಿಸಿಕೊಂಡು ’ಲಿಂಗತ್ವ ಸಮಾನತೆ’ಯ ಹಾದಿಗಳನ್ನು ಶೋಧಿಸಬಹುದು.

ಆದರೆ, ಭಾಷಿಕ ರಚನೆಗಳನ್ನು ಲಿಂಗತ್ವ ತಟಸ್ಥವಾಗಿ ನಿರೂಪಿಸಿದ ಮಾತ್ರಕ್ಕೆ ಲಿಂಗತ್ವ ಸಮಾನತೆ ಎಂಬುದನ್ನು ಸಾಧಿಸಬಹುದೇ ಎಂಬುದು ಬಹಳ ದೊಡ್ಡ ಪ್ರಶ್ನೆ. ಏಕೆಂದರೆ ಒಟ್ಟು ಸಮಾಜವು ಲಿಂಗತ್ವ ಸಂವೇದನೆಯನ್ನೇ ಕಳೆದುಕೊಂಡಿದೆ ಎಂಬುದು ನಮ್ಮೆದುರಿಗೆ ಇರುವ ದೊಡ್ಡ ವಾಸ್ತವ. ಎರಡನೆಯದಾಗಿ ಲಿಂಗತ್ವ ತಟಸ್ಥ ನಿರೂಪಣೆಯನ್ನು ಕೇವಲ ಭಾಷಿಕ ನೆಲೆಯಲ್ಲಿಯಾದರೂ ಸಾಧಿಸಬಹುದೇ ಎಂಬುದಕ್ಕೂ ಉತ್ತರವಿಲ್ಲ. ಪದಬಳಕೆಯಲ್ಲಿ ಬದಲುಗಳನ್ನು ತರುವುದು ಕೂಡಾ ಎಲ್ಲ ಭಾಷೆಗಳಿಗೂ ಸಾಧ್ಯವಾಗುತ್ತದೆ ಎನ್ನಲಾಗದು. ಇಂಗ್ಲಿಷ್‌ನಂತಹ ಭಾಷೆಯು ತೀವ್ರತರದ ಬದಲುಗಳನ್ನು ಅಳವಡಿಸಿಕೊಂಡರೆ ನೂರಾರು ಪ್ರಾದೇಶಿಕ ಭಾಷೆಗಳಿಗೆ ಇದು ಅಸಾಧ್ಯವೇ ಎನಿಸಿಬಿಡಬಹುದು. ಭಾಷಿಕ ನಿರೂಪಣೆಯ ಉದ್ದಕ್ಕೂ ವಾಕ್ಯರಚನೆ, ನೆರೆಟಿವ್‌ಗಳು ಹೀಗೆ ಎಲ್ಲದರಲ್ಲಿಯೂ ಅನ್ವಯವಾಗಬೇಕಾದ ಸಂದರ್ಭದಲ್ಲಿ ಇದು ಇನ್ನಷ್ಟು ಸಮಸ್ಯಾತ್ಮಕವಾಗಬಲ್ಲದು. ಇಂಗ್ಲಿಷಿನ ಹಲಕೆಲವು ಉದಾಹರಣೆಗಳನ್ನಷ್ಟೇ ಹಿಡಿದು ಲಿಂಗತ್ವ ತಟಸ್ಥ ಎಂಬ ಭಾಷಿಕ ರಚನೆಗೆ ತೊಡಗುವುದು ಕಷ್ಟವಾಗುತ್ತದೆ.

ಆದುದರಿಂದ, ಇದಕ್ಕಿಂತಲೂ ಮುಖ್ಯವಾದ ಪ್ರಶ್ನೆ ವಸ್ತುವನ್ನು ಕುರಿತದ್ದು. ಮುಖ್ಯವಾಗಿ ಕ್ರಿಯೆಗಳನ್ನು, ಅಂದರೆ ಗಂಡುಹೆಣ್ಣುಗಳಿಗೆ ನಿಗದಿತವಾಗಿರುವ ಸ್ಥಿರಮಾದರಿ ಕೆಲಸಗಳನ್ನು ಭಾಷಿಕವಾಗಿ ಅದಲುಬದಲು ಮಾಡುವುದೇನೋ ಸುಲಭ. ಕಮಲ ಅಪ್ಪನ ಜೊತೆ ಹೊಲಕ್ಕೆ ಹೊರಟರೆ ಬಸವ ಅಮ್ಮನಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತಾನೆ. ಇನ್ನೂ ಮುಂದೆ ಹೋಗಿ ಅಪ್ಪ ಅಡುಗೆ ಮಾಡುತ್ತಾನೆ. ಅಮ್ಮ ಹೊಲಕ್ಕೆ ಹೋಗುತ್ತಾಳೆ. ಪಠ್ಯವೇನೋ ಇದನ್ನು ಹೇಳುತ್ತದೆ. ಆದರೆ ಸಾಮಾಜಿಕ ವಾಸ್ತವಗಳಿಗೆ ವಿರುದ್ಧವಾದ ಈ ಸನ್ನಿವೇಶಗಳನ್ನು ಮಕ್ಕಳಿರಲಿ, ಅವರಿಗೆ ಪಾಠ ಮಾಡುವ ಅಧ್ಯಾಪಕಿ/ಕರು ಹೇಗೆ ನಂಬುತ್ತಾರೆ ಎಂಬುದು ಪ್ರಶ್ನೆ. ವಾಸ್ತವಕ್ಕೆ ವಿರುದ್ಧವಾದುದನ್ನು ಕಲಿಯುವುದು, ಬೋಧಿಸುವುದು ಎರಡೂ ಕಷ್ಟವೇ.

PC : Wavell Room

ಹಾಗಾದರೆ ನಮ್ಮ ಬದುಕುಗಳನ್ನು ಕಂಗೆಡಿಸಿರುವ ಸಾಮಾಜೀಕರಣದ ತರಬೇತಿಯ ಪಾಠಗಳಿಂದ ಹೊರಬರುವುದು ಅಸಾಧ್ಯವೇ ಎಂದೇನೂ ನಿರಾಶರಾಗಬೇಕಿಲ್ಲ. ಕಲಿತ ಪಾಠಗಳಿಂದ ಹೊರಬರುವ ಅನ್‌ಲರ್ನಿಂಗ್ (unlearning) ಪ್ರಕ್ರಿಯೆಗೆ ಇರುವ ದಾರಿ ಒಂದೇ: ಪ್ರಾಥಮಿಕ ಹಂತದಿಂದಲೇ ತೊಡಗಿ ಶಿಕ್ಷಣದ ಉದ್ದಕ್ಕೂ ಮಕ್ಕಳನ್ನು ಸಂವೇದನಾಶೀಲರನ್ನಾಗಿ ಬೆಳೆಸುವ ಒಂದು ಒಳದಾರಿಯನ್ನು ಶೋಧಿಸಬೇಕು. ಇಂಥಾ ಸಂವೇದನೆಗಳನ್ನು ಈಗಾಗಲೇ ಕಳೆದುಕೊಂಡಿರುವ ಪ್ರೌಢ ವಯಸ್ಕರಲ್ಲಿ ಜಾಗೃತಿಯನ್ನು ಉಂಟುಮಾಡುವ ಪ್ರಯತ್ನಗಳು ಹೆಚ್ಚಬೇಕು. ಉದಾಹರಣೆಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮೊದಲಿಗೆ ಅಲ್ಲಿನ ಅಧ್ಯಾಪಕಿ/ಕರಿಗೆ ಸಂವೇದನಾ ಜಾಗೃತಿ ಶಿಬಿರಗಳು ಅಗತ್ಯವಾಗಿರುತ್ತವೆ. ’ಲಿಂಗತ್ವ ತಟಸ್ಥ’ ಎಂಬುದಕ್ಕಿಂತಲೂ ’ಲಿಂಗತ್ವ ಸಂವೇದನಾ’ ಪಠ್ಯಗಳು ತಕ್ಷಣಕ್ಕೆ ತಯಾರಾಗಲಾರವು. ಸಂವೇದನಾಶೀಲರಾದ ಪ್ರೌಢರೇ ಅದನ್ನು ತಯಾರಿಸಬೇಕು. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಈಗಿನ ಪಠ್ಯಗಳು ಈಗಿನ ಸಾಮಾಜಿಕ ವಾಸ್ತವಗಳೇ ಆದ ಲಿಂಗತ್ವ ತಾರತಮ್ಯ, ಅಸಮಾನತೆ – ಇವುಗಳನ್ನೇ ಬಿಂಬಿಸುತ್ತವೆ ಮತ್ತು ಕಾಣಿಸುತ್ತವೆ. ಆದರೆ ಸಂವೇದನಾಶೀಲ, ಜಾಗೃತ ಅಧ್ಯಾಪಕಿ/ಕರು ತರಗತಿಯಲ್ಲಿ ಈ ವಾಸ್ತವಗಳ ಮೂಲವನ್ನೇ ಹಿಡಿದು ಕಲಿಯುವವರಲ್ಲಿ ಪ್ರಶ್ನೆಗಳನ್ನು, ಹುಡುಕಾಟಗಳನ್ನು ಮೂಡಿಸುವ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳಬಹುದು. ಇದಕ್ಕಾಗಿ ಅಭ್ಯಾಸದ ಭಾಗದಲ್ಲಿ, ಹಲವು ವಿನ್ಯಾಸಗಳಲ್ಲಿ ಆಟಗಳು, ನಾಟಕಗಳು, ಚಿತ್ರಗಳು ಎಂಬ ಪಠ್ಯೇತರ ಸಾಮಗ್ರಿಗಳನ್ನು ಬಳಸಿಕೊಳ್ಳಬೇಕು.

ಪ್ರೌಢಹಂತದ ತರಗತಿಗಳಲ್ಲಿ ಇನ್ನಷ್ಟು ಸೂಕ್ಷ್ಮದ ಭಾಷಿಕ ಹಾಗೂ ಇತರ ಅಭ್ಯಾಸಗಳಿಗೆ ಅವರನ್ನು ಪ್ರೇರೇಪಿಸುವುದಕ್ಕೆ ಆಗ ಸಾಧ್ಯವಾಗುತ್ತದೆ. ಸಾಮಾಜೀಕರಣದ ತರಬೇತಿಯ ಮೂಲಕ ನಾವೆಲ್ಲರೂ ಹಲವಾರು ಮಿಥ್ಯೆಗಳನ್ನು ಆವಾಹಿಸಿಕೊಂಡಿದ್ದೇವೆ. ಅವುಗಳಲ್ಲಿ ತೀರಾ ಅಪಾಯಕಾರಿಯಾದ ಮಿಥ್ಯೆಯೆಂದರೆ ಗಂಡುತನ ಮತ್ತು ಹೆಣ್ಣುತನಗಳನ್ನು ಕುರಿತದ್ದು. ಅಧಿಕಾರ, ಅಧೀನತೆಗಳನ್ನೇ ಮನುಷ್ಯರ ಸಾಧನೆ ಎಂದು ತಿಳಿಯುವುದು ಕೂಡ ಒಂದು ಮಿಥ್ಯೆಯೇ. ಇಂಥಾ ಮಿಥ್ಯೆಗಳನ್ನು ಒಡೆಯುವ, ಸಹಜ ಬದುಕಿನ ಅರ್ಥವನ್ನು ಕಂಡುಕೊಳ್ಳಲು ನೆರವಾಗುವ ಹಲವಾರು ಅಭ್ಯಾಸಸೂಚಿಗಳನ್ನು ರೂಪಿಸಬಹುದು. ಹಿರಿಯ ತಲೆಮಾರಿನವರು ಇದಕ್ಕಾಗಿ ತುಂಬಾ ಶ್ರಮ ಮತ್ತು ಸಮಯಗಳನ್ನು ಮೀಸಲಾಗಿರಿಸಬೇಕಾಗುತ್ತದೆ ನಿಜ. ಆದರೆ ಆಗ ಮಾತ್ರ ನಮ್ಮ ಕಿರಿಯರು ಈ ಸಂಪತ್ತಿನ ವಾರಸುದಾರರಾಗಿ ಬದುಕಿನ ನಿಜವಾದ ಸಂತೋಷವನ್ನು ಪಡೆಯುತ್ತಾರೆ ಎಂಬುದೇ ದೊಡ್ಡ ಭರವಸೆ.

ಎಚ್ ಎಸ್ ಶ್ರೀಮತಿ

ಎಚ್ ಎಸ್ ಶ್ರೀಮತಿ
ಕನ್ನಡದ ಸ್ತ್ರೀವಾದಿ ಚಿಂತಕಿ ಮತ್ತು ಲೇಖಕಿ. ಮಹಾಶ್ವೇತಾ ದೇವಿಯವರ ಬೆಟ್ಟಿ ಫ್ರೀಡನ್ ಅವರ ’ದ ಫೆಮಿನಿಸ್ಟ್ ಮಿಸ್ಟಿಕ್’, ಬೆಲ್ ಹುಕ್ಸ್ ಅವರ ’ಎಲ್ಲರಿಗಾಗಿ ಸ್ತ್ರೀವಾದ’ ಸೇರಿದಂತೆ ಹಲವು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವ ಶ್ರೀಮತಿ ಅವರು ’ಸ್ತ್ರೀವಾದ’, ’ಸ್ತ್ರೀವಾದ : ಪಾರಿಭಾಷಿಕ ಪದಕೋಶ’, ’ಗೌರಿ ದುಃಖ’ ಸೇರಿದಂತೆ ಇನ್ನು ಹಲವಾರು ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.


ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಪ್ರೈಡ್ ತಿಂಗಳು; ಸಮಸ್ಯೆಗಳ ಸಾಗರಕ್ಕೆ ಆತ್ಮಗೌರವವೇ ಸಮಾಧಾನ

LEAVE A REPLY

Please enter your comment!
Please enter your name here