ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಪ್ರಮುಖ ಆಟಗಾರ್ತಿ, ಒಲಿಂಪಿಕ್ ಸಾಧಕಿ ವಂದನಾ ಕಟಾರಿಯಾ ಅವರ ಕುಟುಂಬದ ಮೇಲೆ ಜಾತಿ ನಿಂದನೆ ಮಾಡಿದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಬಂಧನಕ್ಕೆ ಒಳಗಾದವರ ಸಂಖ್ಯೆ ಮೂರಕ್ಕೆ ಏರಿದೆ.
ಇಪ್ಪತ್ತೆರಡು ವರ್ಷದ ಸುಮಿತ್ ಚೌಹಾಣ್‌ನನ್ನು ಶನಿವಾರದಂದು ಆತನ ಮನೆಯಿಂದ ಬಂಧಿಸಲಾಗಿದೆ ಎಂದು ಹರಿದ್ವಾರ ಎಸ್‌ಎಸ್‌ಪಿ ಸೆಂಥಿಲ್ ಆವೊದೈ ಕೃಷ್ಣರಾಜ್ ಎಸ್ ಹೇಳಿದ್ದಾರೆ.
ಇದನ್ನೂ ಓದಿ: ವಂದನಾ ಜಾತಿ ನಿಂದನೆ ಪ್ರಕರಣ; ಘಟನೆ ನಾಚಿಕೆಗೇಡು ಎಂದ ಹಾಕಿ ತಂಡದ ನಾಯಕಿ
ಆತನ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ವಿಜಯ್ ಪಾಲ್ ಮತ್ತು ಆತನ ಸಹೋದರ ಅಂಕುರ್ ಪಾಲ್‌ನನ್ನು ಈ ಮೊದಲು ಬಂಧಿಸಲಾಗಿತ್ತು ಎಂದು ಸೆಂಥಿಲ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ ಸೆಕ್ಷನ್ 504 (ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸೆಂಥಿಲ್ ತಿಳಿಸಿದ್ದಾರೆ.
ಭಾರತೀಯ ಮಹಿಳಾ ಹಾಕಿ ತಂಡವು ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೋತ ತಕ್ಷಣ ವಂದನಾ ಅವರ ಮನೆಯ ಹೊರಗೆ ಸಂಭ್ರಮ ವ್ಯಕ್ತಪಡಿಸಿ, ಪಟಾಕಿಗಳನ್ನು ಸಿಡಿಸಿ ಜೊತೆಗೆ ಜಾತಿ ಮತ್ತು ಜನಾಂಗೀಯ ನಿಂದನೆಯನ್ನು ದುಷ್ಕರ್ಮಿಗಳು ಮಾಡಿದ್ದರು.
ಇದನ್ನೂ ಓದಿ: ‘ತಂಡದಲ್ಲಿ ದಲಿತರು ಹೆಚ್ಚು ಇದ್ದಿದ್ದರಿಂದ ಸೋಲಾಯಿತು!’; ಸಾಧಕಿ ವಂದನಾಗೆ ಜಾತಿ ನಿಂದನೆ
“ದಲಿತ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದರಿಂದಲೇ ಆಟ ಸೋತಿದೆ. ದಲಿತರನ್ನು ಎಲ್ಲಾ ಆಟದಿಂದ ಹೊರಗೆ ಇಡಬೇಕು” ಎಂದು ದುಷ್ಕರ್ಮಿಗಳು ಹೇಳಿದ್ದಾರೆ ಎಂದು ವಂದನಾ ಅವರ ಸಹೋದರ ಶೇಖರ್ ಹೇಳಿದ್ದಾರೆ.
ಈತನ್ಮಧ್ಯೆ, ಕುಟುಂಬದ ಭದ್ರತೆಗಾಗಿ ಉತ್ತರಾಖಂಡ್‌ನ ರೊಷನಾಬಾದ್ ಪ್ರದೇಶದಲ್ಲಿ ಇರುವ ಒಲಿಂಪಿಯನ್ ವಂದನಾ ಅವರ ಮನೆಯ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಒಲಿಂಪಿಕ್ಸ್‌ನಲ್ಲಿ ವಂದನಾ ಅವರ ಉತ್ತಮ ಪ್ರದರ್ಶನವನ್ನು ಗುರುತಿಸಿ ಅವರಿಗೆ 25 ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ. ಶನಿವಾರ ವಂದನಾ ಅವರೊಂದಿಗೆ ಮಾತನಾಡಿ ಅವರನ್ನು ಅಭಿನಂದಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Fact Check: ಮುಸ್ಲಿಮರಿಂದ ಕಲ್ಲು ತೂರಾಟ- ಯುಪಿ ವೈದ್ಯೆ ವಂದನಾ ತಿವಾರಿ ಸಾವು: ಈ ಸುದ್ದಿ ನಿಜವಲ್ಲ


