ಬಿಜೆಪಿ ನಡೆಸುತ್ತಿರುವ ಸಭೆಯ ವಿರುದ್ಧ ಪ್ರತಿಭಟಿಸಲು ಕರ್ನಾಲ್ ಕಡೆಗೆ ತೆರಳುತ್ತಿದ್ದ ರೈತರ ಗುಂಪಿನ ಮೇಲೆ, ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಶನಿವಾರ ನಡೆದಿದೆ. ಲಾಠಿ ಚಾರ್ಜ್‌ನಿಂದ ಸುಮಾರು 10 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ನಡೆಸುತ್ತಿದ್ದ ಸಭೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಜೊತೆಗೆ, ರಾಜ್ಯ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧಂಕರ್ ಮತ್ತು ಪಕ್ಷದ ಇತರ ಹಿರಿಯ ನಾಯಕರು ಹಾಜರಿದ್ದರು.
ಇದನ್ನೂ ಓದಿ: ರೈತ ಹೋರಾಟ: ದೆಹಲಿಯ ಗಡಿಗಳಲ್ಲಿ ರೈತರ ತಿರಂಗಾ ಯಾತ್ರೆ
ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದ್ದು, ಹಲವಾರು ರಸ್ತೆಗಳನ್ನು ತಡೆಹಿಡಿಯಲಾಗಿದೆ. ಜೊತಗೆ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಫತೇಹಾಬಾದ್-ಚಂಡೀಗಡ, ಗೊಹಾನಾ-ಪಾಣಿಪತ್, ಜಿಂದ್-ಪಟಿಯಾಲ ಹೆದ್ದಾರಿಗಳು, ಅಂಬಾಲಾ-ಚಂಡೀಗಡ ಮತ್ತು ಹಿಸಾರ್-ಚಂಡೀಗಡ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಹರಿಯಾಣ ಭಾರತೀಯ ಕಿಸಾನ್ ಯೂನಿಯನ್ (ಚದುನಿ) ಮುಖ್ಯಸ್ಥ ಗುರ್ನಾಮ್ ಸಿಂಗ್ ಚದುನಿ ಆರೋಪಿಸಿದ್ದಾರೆ. ಘಟನೆಯಿಂದ 8-10 ಜನರು ಗಾಯಗೊಂಡಿದ್ದಾರೆ ಎಂದು ಕರ್ನಾಲ್‌ನಿಂದ 15 ಕಿಮೀ ದೂರದಲ್ಲಿರುವ ಬಸ್ತಾರಾ ಟೋಲ್ ಪ್ಲಾಜಾದ ಬಳಿ ಇರುವ ಹಲವಾರು ಪ್ರತಿಭಟನಾಕಾರರು ಹೇಳಿದ್ದಾರೆ.
ಆದಾಗ್ಯೂ, ರೈತರ ಪ್ರತಿಭಟನೆಯಿಂದಾಗಿ ಸಂಚಾರಕ್ಕೆ ತೊಂದರೆ ಉಂಟಾಗಿದ್ದರಿಂದ, ಅವರ ಮೇಲೆ ಸೌಮ್ಯವಾಗಿ ಬಲ ಪ್ರಯೋಗಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಹೋರಾಟನಿರತ ರೈತರ ಬಗ್ಗೆ ಅಮೆರಿಕಾದ ರೈತರ ಮಾತುಗಳು
ದೆಹಲಿಯಲ್ಲಿ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು, ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ಸರ್ಕಾರ ನಡೆಸುವ ಪ್ರತಿ ಸಾರ್ವಜನಿಕ ಕಾರ್ಯಕ್ರಮಗಳನ್ನು ವಿರೋಧಿಸುತ್ತಿದ್ದಾರೆ.
ರೈತರ ಪ್ರತಿಭಟನೆಯ ಸುಳಿವು ಸಿಕ್ಕಿದ್ದ ಪೊಲೀಸರು ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಸೇರುವುದನ್ನು ನಿಷೇಧಿಸಿ ಪ್ರದೇಶದಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ಜಾರಿಗೊಳಿಸಿದ್ದರು.
“ಯಾವುದೇ ಪ್ರಚೋದನೆಯಿಲ್ಲದೆ ಪೊಲೀಸರು ಕ್ರೂರವಾಗಿ ಲಾಠಿಚಾರ್ಜ್ ಮಾಡಿದ್ದಾರೆ. ಇದರಿಂದಾಗಿ ಅನೇಕ ರೈತರು ಗಾಯಗೊಂಡಿದ್ದಾರೆ. ಕೆಲವರಿಗೆ ರಕ್ತ ಬರುವ ಹಾಗೆ ದಾಳಿ ಮಾಡಲಾಗಿದೆ” ಎಂದು ಚದುನಿ ಪೊಲೀಸರ ಕ್ರಮವನ್ನು ಬಲವಾಗಿ ಖಂಡಿಸಿದ್ದಾರೆ.
“ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದ ಭಾಗವಾಗಿ, ರೈತರು ಬಿಜೆಪಿ ನಾಯಕರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ಬಸ್ತಾರಾ ಟೋಲ್ ಪ್ಲಾಜಾದಲ್ಲಿ ಸಮಾವೇಶಗೊಂಡಿದ್ದರು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ತಾಳ್ಮೆ, ಬದ್ಧತೆ, ಶಿಸ್ತಿನ ಐತಿಹಾಸಿಕ ಹೋರಾಟಕ್ಕೆ 9 ತಿಂಗಳು


