ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳಾ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ (ಎಸ್‌ಎಚ್ 1) ಸ್ಪರ್ಧೆಯಲ್ಲಿ ಶೂಟರ್ ಅವನಿ ಲೇಖರಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಆ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ.
ಅವನಿ ಲೇಖರಾ 249.6 ಅಂಕಗಳೊಂದಿಗೆ ಪ್ಯಾರಾಲಿಂಪಿಕ್ಸ್ ದಾಖಲೆ ಸೃಷ್ಟಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಆ ಮೂಲಕ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಸ್ಪರ್ಧೆಯಲ್ಲಿ ಚೀನಾದ ಕ್ಯುಪಿಂಗ್ ಜಾಂಗ್ 248.9 ಅಂಕಗಳೊಂದಿಗೆ ಬೆಳ್ಳಿ ಹಾಗೂ ಉಕ್ರೇನ್‌ನ ಇರಿನಾ ಶ್ಚೆಟ್ನಿಕ್ ಒಟ್ಟು 227.5 ಅಂಕಗಳೊಂದಿಗೆ ಕಂಚು ಪಡೆದರು.
ಯೋಗೀಶ್ ಕಠುನಿಯಾಗೆ ಬೆಳ್ಳಿ ಪದಕ
ಸೋಮವಾರ ಇಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಎಫ್ 56 ಸ್ಪರ್ಧೆಯಲ್ಲಿ ಭಾರತದ ಡಿಸ್ಕಸ್ ಎಸೆತಗಾರ ಯೋಗೀಶ್ ಕಠುನಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು 44.38ಮೀಟರ್ ದೂರ ಎಸೆದು ಸಾಧನೆಗೈದಿದ್ದಾರೆ.
ದೇವೇಂದ್ರ ಜಜಾರಿಯಾಗೆ ಬೆಳ್ಳಿ ಪದಕ
ಎರಡು ಬಾರಿ ಚಿನ್ನ ಗೆದ್ದ ಜಾವೆಲಿನ್ ಥ್ರೋ ಅನುಭವಿ ಸ್ಪರ್ಧಿ ದೇವೇಂದ್ರ ಜಜಾರಿಯಾ ಈ ಬಾರಿ ಮೂರನೇ ಪ್ಯಾರಾಲಿಂಪಿಕ್ ಪದಕವನ್ನು ಗೆದ್ದರು. ಎಫ್ 46 ಫೈನಲ್ ಪಂದ್ಯದಲ್ಲಿ 64.35 ಮೀಟರ್ ದೂರ ಎಸೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.
ಇದೇ ಸ್ಪರ್ಧೆಯಲ್ಲಿ ಸುಂದರ್ ಸಿಂಗ್ ಗುರ್ಜಾರ್ ಕೂಡ ಕಂಚಿನ ಪದಕ ಪಡೆದರು. ಅವರು 64.01 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು.
ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ನಿಶಾದ್ ಕುಮಾರ್ ಪುರುಷರ ಎತ್ತರ ಜಿಗಿತ (ಟಿ 46/47) ವಿಭಾಗದಲ್ಲಿ ಭಾನುವಾರ ಬೆಳ್ಳಿ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತದ ಭವಿನಾ ಪಟೇಲ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನಿನ್ನೆ ನಡೆದ ಡಿಸ್ಕಸ್ ಥ್ರೋ ಎಫ್52 ಫೈನಲ್ ಪಂದ್ಯದಲ್ಲಿ ಭಾರತದ ವಿನೋದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಆದರೆ ಅದಕ್ಕೆ ಆಕ್ಷೇಪ ವ್ಯಕ್ತವಾದ ನಂತರ ಅದು ರಿವ್ಯೂನಲ್ಲಿದೆ. ಆ ಮೂಲಕ ಈ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಟ್ಟು ಏಳು ಪದಕಗಳು ಲಭಿಸಿದಂತಾಗಿವೆ.
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಬೆಳ್ಳಿ ತಂದುಕೊಟ್ಟ ಹೈಜಂಪರ್ ನಿಶಾದ್ ಕುಮಾರ್


