ಹಿಂದಿ ಪ್ರಚಾರ ದಿವಸ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವ ಕನ್ನಡಿಗರು ಸೆಪ್ಟಂಬರ್ 14 ರಂದು ಹಿಂದಿ ಹೇರಿಕೆ ವಿರೋಧಿಸಿ ಕರಾಳ ದಿನ ಆಚರಿಸಿ ಪ್ರತಿಭಟಿಸಲು ಕರೆ ನೀಡಿದ್ದಾರೆ. ಅಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ಜನಾಧಿಕಾರ ಪಕ್ಷದ ಹರೀಶ್ ಕುಮಾರ್ ಬಿ ತಿಳಿಸಿದ್ದಾರೆ.
ಹಿಂದಿ ಹೇರಿಕೆಯನ್ನ ಶುರು ಮಾಡಿದ್ದು ಕಾಂಗ್ರೆಸ್ ಪಕ್ಷ. ಆ ಹೇರಿಕೆಯನ್ನು ಅತ್ಯಂತ ವೇಗವಾಗಿ, ವ್ಯವಸ್ಥಿತವಾಗಿ ನಡೆಸುತ್ತಿರುವುದು ಬಿಜೆಪಿ. ಪರೀಕ್ಷೆಗಳಂತೂ ಕನ್ನಡದಲ್ಲಿಲ್ಲ, ಕೇಂದ್ರ ಸರ್ಕಾರದ ಕೆಲಸಗಳ ಜಾಹೀರಾತುಗಳನ್ನು ಕನ್ನಡ ಪತ್ರಿಕೆಗಳಲ್ಲಿ ಹಿಂದಿಯಲ್ಲಿ ಕೊಡ್ತಾರೆ ಅಂದ್ರೆ ಇದನ್ನ ಹೇರಿಕೆ, ದಬ್ಬಾಳಿಕೆಯೆನ್ನದೆ ಏನೆನ್ನಬೇಕು? ಹಿಂದಿ ಹೇರಿಕೆ ವಿಚಾರದಲ್ಲಿ, ಕನ್ನಡ ನಾಡಿಗೆ ಅನ್ಯಾಯಗಳ ವಿಚಾರಗಳಲ್ಲಿ ಈ ಕಾಂಗ್ರೆಸ್ ಬಿಜೆಪಿ ಇಬ್ಬರೂ ಒಂದೇ ಎಂದು ಅವರು ಕಿಡಿಕಾರಿದ್ದಾರೆ.
ಭಾರತದಲ್ಲಿ ಪ್ರಜೆಗಳೆಲ್ಲ ಸಮಾನರು ಎಂಬೋದು ಸುಳ್ಳು. ಈ ಹಿಂದಿ ಸರಕಾರಗಳು/ಜನರು ಹಿಂದಿಯೇತರರನ್ನು ಎರಡನೆಯ ದರ್ಜೆಯ ಜನರೆಂದೇ ತಿಳಿದಿರುವುದು. ಇವತ್ತೇನೋ ಹಿಂದಿ ದಿವಸವಂತೆ! ಹಿಂದಿಯೇತರ ರಾಜ್ಯಗಳ ತೆರಿಗೆ ಹಣವನ್ನ ಕೇವಲ 200 ವರ್ಷಗಳ ಹಿಂದೆ ಹುಟ್ಟಿದ, ಸಂಸ್ಕೃತ ಲೇಪಿತ ಉರ್ದು ನುಡಿಯನ್ನ ಮೆರೆಸಲು, ಬೆಳೆಸಲು, ಹೇರಲು ಬಳಸುತ್ತಿದ್ದಾರೆ. ನಮ್ಮ ನೆಲದಲ್ಲಿ, ನಮ್ಮ ಹಣದಲ್ಲಿ, ನಮ್ಮದಲ್ಲದ ನುಡಿಯನ್ನ ಹೇರಿ ಆಚರಿಸೋ ಕೇಂದ್ರ ಸರ್ಕಾರದ ಹಿಂದಿ ದಿವಸಕ್ಕೆ ಧಿಕ್ಕಾರ. ಕಾಲ ಪೂರ್ತಿ ಮಿಂಚಿಹೋಗುವ ಮುನ್ನ ಎಚ್ಚೆತ್ತುಕೊಳ್ಳೋಣ ಎಂದು ಕರೆ ನೀಡಿದ್ದಾರೆ.
ಹಾಗಾಗಿ ಸೆಪ್ಟಂಬರ್ 14 ರಂದು ನಡೆಸುವ ಪ್ರತಿಭಟನೆಗೆ ಸಮಾನಮನಸ್ಕರು ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಗೆ ಹಿಂದಿ ದಿವಸ ಬೇಕಾಗಿಲ್ಲ; ರಾಜ್ಯಾದ್ಯಂತ ಪ್ರತಿಭಟನೆಗೆ ಕರವೇ ಸಜ್ಜು: ನಾರಾಯಣಗೌಡ


