ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಅನುಕೂಲಕ್ಕಾಗಿ, ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ವಿಷಯವನ್ನು ತಿರುಚಿ ಲಾಭ ಮಾಡಿಕೊಳ್ಳಲು ಒಕ್ಕೂಟ ಸರ್ಕಾರ ಪ್ರಯತ್ನಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಶುಕ್ರವಾರ ಆರೋಪಿಸಿದ್ದಾರೆ.
“ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಭಾರತದ ಪಾತ್ರವಿಲ್ಲ. ಇದನ್ನು ಯುಪಿ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದು ಎನ್ನುವುದನ್ನು ಒಕ್ಕೂಟ ಸರ್ಕಾರ ಯೋಜಿಸುತ್ತಿದೆ. ಇದು ಕಹಿ ಸತ್ಯ! ಇದಕ್ಕಾಗಿ ಮಾಧ್ಯಮ ಈಗಾಗಲೇ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ!” ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮೈತ್ರಿಗಳು: ಇಲ್ಲಿಂದ ಮುಂದೇನು?
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಗುರುವಾರದಂದು ಅಫ್ಘಾನ್ ಪ್ರದೇಶವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು, ದಾಳಿ ಮಾಡಲು, ಭಯೋತ್ಪಾದಕರಿಗೆ ಆಶ್ರಯ ನೀಡಲು, ತರಬೇತಿ ನೀಡಲು, ತಾಲಿಬಾನ್ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಲು ಹಾಗೂ ಹಣಕಾಸು ಒದಗಿಸಲು ಬಳಸಬಾರದು ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಜನರ ಕಲ್ಯಾಣ ಮತ್ತು ಯೋಗಕ್ಷೇಮಕ್ಕೆ ಭಾರತ ಒತ್ತು ನೀಡಿದೆ. ಭಾರತವು ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ 500 ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾಡಿದ ಭಾಷಣದಲ್ಲಿ ತಿರುಮೂರ್ತಿಯವರು ಮಾಹಿತಿ ನೀಡಿದ್ದರು.
ಈ ಮಧ್ಯೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ರಚಿಸಿರುವುದಾಗಿ ಘೋಷಿಸಿದೆ. ಇದರ ನಡುವೆಯೆ ನೆರೆಯ ಪಾಕಿಸ್ತಾನದೊಂದಿಗೆ ಉದ್ವಿಗ್ನತೆ ಭುಗಿಲೆದ್ದಿದೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೆ, ಜನರಿಂದ ತೀವ್ರ ಆಕ್ರೋಶವನ್ನು ತಾಲಿಬಾನ್ ಎದುರಿಸುತ್ತಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸೇರಿದಂತೆ ಪತ್ರಕರ್ತರು, ಮಹಿಳೆಯರು ಮತ್ತು ಹೋರಾಟಗಾರರು ದೇಶದ ಹೊಸ ಸರ್ಕಾರದ ವಿರುದ್ದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಮತ್ತು ಶೀತಲ ಸಮರ 2.0


