ಬೀದಿನಾಯಿಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಕಂಬದಾಳ ಹೊಸೂರು ಗ್ರಾಮ ಪಂಚಾಯಿತಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕಂಬದಾಳು ಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಡಜನ್ ಗಟ್ಟಲೆ ನಾಯಿಗಳ ಮೃತದೇಹ ಪತ್ತೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಷ್ಟು ನಾಯಿಗಳು ಸತ್ತಿವೆ ಎಂಬ ಖಚಿತತೆ ಇಲ್ಲ. ದಿ ಹಿಂದೂ ಪತ್ರಿಕೆ 100 ನಾಯಿಗಳು ಸತ್ತಿವೆ ಎಂದು ವರದಿ ಮಾಡಿದ್ದರೆ, ಎನ್.ಡಿ.ಟಿ.ವಿ. 40 ನಾಯಿಗಳು ಸತ್ತಿವೆ ಎಂದಿದೆ.
ಪ್ರಾಣಿ ಹಕ್ಕುಗಳ ಹೋರಾಟಗಾರರು ಮಂಗಳವಾರ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಲಾಗಿದೆ. ನಾಯಿಗಳು ನಾಪತ್ತೆಯಾಗಿದ್ದು, ಕೆಲವು ದಿನಗಳಿಂದ ಅವುಗಳ ಕೂಗು ಕೇಳಿಸುತ್ತಿಲ್ಲ ಎಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಹೋರಾಟಗಾರರು ಹುಡುಕಾಟ ನಡೆಸಿದ್ದರು.
ಗ್ರಾಮ ಪಂಚಾಯಿತಿಯ ಆದೇಶದ ಮೇರೆಗೆ ನಾಯಿಗಳನ್ನು ಕೊಲ್ಲಲಾಗಿದೆ ಎಂದು ದೂರು ನೀಡಲಾಗಿದೆ. ಪಶುವೈದ್ಯರ ತಂಡ ಪರಿಶೀಲನೆ ನಡೆಸುತ್ತಿದ್ದು, ಸಾವಿನ ಕಾರಣಗಳು ತಿಳಿದುಬರಲಿವೆ. ವರದಿಯ ಆಧಾರದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಳೆ ಬಂದರೆ ಹಂದಿಗಳೂ ಬರುತ್ತವೆ: ಕಾಡು ಹಂದಿಗಳ ಗೂಟಾಟ
ನಾಯಿಗಳ ಸಂತಾಹ ಹರಣಕ್ಕೆ ಗ್ರಾಮ ಪಂಚಾಯಿತಿ ಗುತ್ತಿಗೆ ನೀಡಿದೆ. ಗುತ್ತಿಗೆದಾರರು ನಾಯಿಗಳನ್ನು ಕೊಂದಿರಬಹುದು. ಗುತ್ತಿಗೆದಾರರು 30ರಿಂದ 40 ನಾಯಿಗಳನ್ನು ಕೊಂದಿದ್ದಾರೆ. ಈ ಕೃತ್ಯದಲ್ಲಿ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರೂ ಭಾಗಿಯಾಗಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಶಿವಮೊಗ್ಗ ಪ್ರಾಣಿ ರಕ್ಷಣಾ ಕ್ಲಬ್ ಕಾರ್ಯಕರ್ತ ಜಿ.ಎಸ್.ಬಸವ ಪ್ರಸಾದ್, “ಸಂತಾನಹರಣ ಕ್ರಮಗಳ ಕುರಿತು ಗ್ರಾಮ ಪಂಚಾಯಿತಿ ಸದಸ್ಯರು ಮುಂಜಾಗ್ರತೆ ವಹಿಸಿಲ್ಲ. ನಾಯಿಗಳನ್ನು ಹಿಡಿದು ಅವರು ಸುಟ್ಟು ಹಾಕಿದಂತೆ ಕಾಣುತ್ತಿದೆ” ಎಂದು ಆರೋಪಿಸಿದ್ದಾರೆ.
“ನಾಯಿಗಳನ್ನು ಕೊಲ್ಲಲು ಯಾವುದೇ ಆದೇಶ ನೀಡಿಲ್ಲ” ಎಂದು ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಪ್ರತಿಕ್ರಿಯೆ ನೀಡಿದೆ.