Homeಅಂಕಣಗಳುಮಳೆ ಬಂದರೆ  ಹಂದಿಗಳೂ ಬರುತ್ತವೆ: ಕಾಡು ಹಂದಿಗಳ ಗೂಟಾಟ

ಮಳೆ ಬಂದರೆ  ಹಂದಿಗಳೂ ಬರುತ್ತವೆ: ಕಾಡು ಹಂದಿಗಳ ಗೂಟಾಟ

ಹಂದಿಗಳು ಒಂಟಿಯಾಗಿರುವುದು ಅಪರೂಪ. ಇವು ನಮ್ಮಂತೆಯೇ ಸಂಘ ಜೀವಿಗಳು. ಹಿಂಡು ಹಿಂಡಾಗಿ ಇವು ತಿರುಗುವುದರಿಂದ ಬೇಟೆಗಾರರಿಗೆ ಸ್ವರ್ಗ, ಒಂದು ತಪ್ಪಿಸಿಕೊಂಡರೆ ಇನ್ನೊಂದು.

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-11 

ಮಳೆ ಬಂದರೆ  ಹಂದಿಗಳೂ ಬರುತ್ತವೆ. ಇದು ರೈತರೆಲ್ಲರ ಅನುಭವ. ಹೀಗೆ ಮಳೆ ಬಂದ ಮಾರನೆಯ ದಿನ ಹಂದಿಗಳ ಹಸಿ ಹೆಜ್ಜೆಗಳ ಜಾಡು ಹಿಡಿದು ಒಂದಷ್ಟು ದೂರ ಹೋಗಿಬರುವುದು ನನಗೊಂದು ಚಟವಾಗಿ ಬೆಳೆದಿದೆ. ಅವುಗಳಲ್ಲಿ ಒಂದಾದರೂ ಹಂದಿ ನನ್ನ ಕೈಗೆ ಸಿಕ್ಕಿಬಿಡಬಹುದೆಂದು ಭ್ರಮೆಪಡುವುದು ನನಗಿಷ್ಟ. ಒಳಗೆ ಕುದಿಯುವ ಪೋರ್ಕ್‌ ನಿಜದಾಸೆ ಇರುವುದಿಲ್ಲವೆಂದು ಯಾವ ಬಾಯಿಯಿಂದ ಹೇಳುವುದು.

ಒಮ್ಮೆ ನಾನು ಗೆಳೆಯ ಉಜ್ಜಜ್ಜಿ ರಾಜಣ್ಣ ನಮ್ಮೂರಿನ ಪಕ್ಕದ ಗೊಲ್ಲರ ಗುಡ್ಡ ಸುತ್ತುವ ಉಮೇದಿನಲ್ಲಿ ಹೊರಟೆವು. ಅದನ್ನು ಟ್ರಕ್ಕಿಂಗ್‌ ಎಂದು ಕರೆಯುವುದಕ್ಕಿಂತ ಮೊಲದ ಆಸೆಯ ಪಯಣ ಎಂದು ಕರೆದರೆ ಸರಿಯೆನಿಸುತ್ತದೆ. ಕೈಯ್ಯಲ್ಲಿ ದೊಣ್ಣೆಗಳನ್ನು ಹಿಡಿದು ಸಾಗುತ್ತಿದ್ದೆವು. ನಾವೊಂದು ಬಗೆದರೆ ಹಂದಿಯೊಂದು ಬಗೆಯಿತು ಎನ್ನುವಂತೆ, ಇದ್ದಕ್ಕಿದ್ದಂತೆ ಪೊದೆಯೊಳಗಿಂದ ತಾಯಿ ಹಂದಿಯೊಂದು ಗಾಬರಿಗೊಂಡು ತನ್ನ ಪಗಡದಸ್ತಾದ ಆರು ಮರಿಗಳೊಂದಿಗೆ ನಮ್ಮತ್ತ ಧಾವಿಸಿ ಕಾಲು ಸಂದಿಯಲ್ಲಿ ನುಗ್ಗಲು ಏರ್ಪಾಟು ಮಾಡಿಕೊಳ್ಳುತ್ತಿದ್ದಾಗ ಸಕಾಲಕ್ಕೆ ಎಚ್ಚೆತ್ತ ನಾವಿಬ್ಬರೂ ಅದಕ್ಕೆ ಜಾಗ ತೆರವು ಮಾಡಿ ದಿಕ್ಕಾ ಪಾಲಾಗಿ ಓಡಿದೆವು. ಕುಡಿದಿದ್ದ ಮೂರು ಚಿಪ್ಪು ನೀರಾದ ಮತ್ತು ಇಳಿದು ಹೋಗಿತ್ತು. ಕೈಯ್ಯಲ್ಲಿದ್ದ ದೊಣ್ಣೆಯಿಂದ ಒಂದು ಮರಿಯನ್ನಾದರೂ ಹೊಡೆಯಬಹುದಿತ್ತು ಎಂದು ನಿರಾಸೆಯಿಂದ ನಾನು ಹೇಳಿದಾಗ, “ಸ್ವಾಮಿ ಮರಿಯುಳ್ಳ ತಾಯಿ ಹಂದಿ ನಮ್ಮಿಬ್ಬರನ್ನು ಮುಗಿಸುವ ಹುನ್ನಾರದಲ್ಲಿದ್ದುದನ್ನು ನೀವು ಗಮನಿಸಲಿಲ್ಲವೆಂದು ಕಾಣುತ್ತದೆ”  ಎಂದಾಗ ಎದೆ ಝಲ್‌ ಎಂದಿತು. ಹಂದಿಗಳು ಬೇಕಾದಷ್ಟು ಜನ ಬೇಟೆಗಾರರ ತೊಡೆ ಸೀಳಿ ಕೊಂದ ಕತೆಯನ್ನೂ, ಅಮಾಯಕ ರೈತರನ್ನು ಗೂಟಾಡಿದ ವ್ಯಥೆಗಳನ್ನು ಹೇಳಿ ನನ್ನ ಮರಿಹಂದಿ ಬೇಟೆಯ ಕನಸನ್ನು ನುಚ್ಚು ನೂರು ಮಾಡಿದ.

ನಮ್ಮ ತೋಟಕ್ಕೆ ಯಾವ ಹಂದಿಗಳು ರೂಢಿಯಾಗಿರುತ್ತವೋ ಅವು ಅವೇ ಹಂದಿಗಳು ಬರುತ್ತವೆಂದು ಕಾಣುತ್ತದೆ. ಒಂದೇ ದಾರಿಯಲ್ಲಿ ಬಂದು ನಮ್ಮ ಉಳುಮೆ ಇಲ್ಲದ ತೋಟದ ಕೆಲ ಭಾಗಗಳನ್ನು ಗೂಟಾಡಿ ಉಳುಮೆ ಮಾಡುತ್ತಾ ಶುಂಠಿಗೆಡ್ಡೆ, ಗೆಣಸುಗಳನ್ನು ತಿಂದು ಬಂದ ದಾರಿಯಲ್ಲೇ ಅವು ತಮ್ಮ ಗುಡ್ಡದ ತಾವಿಗೆ ಹಿಂದಿರುಗುತ್ತವೆ.

ಮಳೆ ಬಂದರೆ ಹಂದಿಗಳಿಗೆ ಎಲ್ಲಿಲ್ಲದ ಹರುಷ. ರಾತ್ರಿ ಕತ್ತಲಲ್ಲೂ ನೆಲದೊಳಗೆ ಅಡಗಿ ಬೆಚ್ಚಗೆ ಮಲಗಿರುತ್ತಿದ್ದ, ಗೊಣ್ಣೆ ಹುಳ, ಎರೆಹುಳ, ಶುಂಠಿಗೆಡ್ಡೆ, ಗೆಣಸು ಎಂಬ ಯಾವ ಭೇದ ಭಾವವೂ ಇಲ್ಲದೆ ಏಕಪ್ರಕಾರವಾಗಿ ಹಸಿಮಣ್ಣಿನೊಂದಿಗೆ ನೆಂಚಿಕೊಂಡು ತಿಂದು ಬೆಳಗಾಗುವುದಕ್ಕೆ ಮೊದಲೆ ತಮ್ಮ ಗೂಡು ಸೇರುವುದು ಅವುಗಳ ಪರಿಪಾಠ.

ಅವು ಇತ್ತೀಚೆಗೆ ಅವು ನಮ್ಮ ತೋಟದ ಪಕ್ಕದಲ್ಲಿನ ಹಳ್ಳದ ಸರದಲ್ಲಿ ಬೀಡುಬಿಟ್ಟು ಹಗಲು ಕಳೆಯುವುದನ್ನು ರೂಢಿ ಮಾಡಿಕೊಂಡಿವೆ. ಆ ದೂರದ ಕಣಿವೆ ಸಾಲಿನ ಗುಡ್ಡಕ್ಕೆ ಹೋಗಿಬರುವುದು ವ್ಯರ್ಥವೆಂದೂ ಈ ಹಳ್ಳದ ಪೊದೆಗಳಲ್ಲಿ ಹಾಯಾಗಿ ಮಲಗುವುದೇ ಸೂಕ್ತವೆಂದು ಅವು ಅರ್ಥಮಾಡಿಕೊಂಡಿರಬೇಕು.

ಹಂದಿಗಳು ಒಂಟಿಯಾಗಿರುವುದು ಅಪರೂಪ. ಇವು ನಮ್ಮಂತೆಯೇ ಸಂಘ ಜೀವಿಗಳು. ಹಿಂಡು ಹಿಂಡಾಗಿ ಇವು ತಿರುಗುವುದರಿಂದ ಬೇಟೆಗಾರರಿಗೆ ಸ್ವರ್ಗ, ಒಂದು ತಪ್ಪಿಸಿಕೊಂಡರೆ ಇನ್ನೊಂದು. ಬಂದೂಕದಿಂದ ಬೇಟೆ ಆಡುವವರದು ಮೊದಲ ವರ್ಗ. ದಪ್ಪ ದಪ್ಪ ಹಗ್ಗದಿಂದ ಮಾಡಿದ ಬಲೆಯಲ್ಲಿ ಹಿಡಿಯುವವರದ್ದು ಎರಡನೇ ಆದರೆ ಸಾಹಸೀ ವರ್ಗ. ಇವರು ನೇರಾನೇರ ಕಾಡುಹಂದಿಗಳ ಜೊತೆ ಮುಖಾಮಖಿಗೆ ಇಳಿಯುತ್ತಾರೆ, ಇವರು ಹಂದಿಗಳನ್ನು ಹಿಡಿಯುವುದಕ್ಕೂ ಸೈ, ಪ್ರಾಣ ಕಳೆದುಕೊಳ್ಳುವುದಕ್ಕೂ ಸೈ. ಇನ್ನೂ ಒಂದು ವರ್ಗವಿದೆ ಅವರು ಹಂದಿಗಳ ಹಿಂಡು ಓಡಾಡುವ ಜಾಗ ಊಹಿಸಿ ಅಲ್ಲಲ್ಲಿ ದವಡೆ ಬಾಂಬುಗಳನ್ನು ಇಟ್ಟು, ಹಂದಿಗಳ ದವಡೆ ಸ್ಪೋಟಿಸಿ ಅವುಗಳನ್ನು ಪಾಲು ಹಾಕಿಕೊಂಡು ರುಚಿ ನೋಡುತ್ತಾರೆ. ಈ ಎಲ್ಲಾ ವರ್ಗದ ಬೇಟೆಗಾರರಿಗೂ ಮಳೆ ಬಂದ ಮಾರನೇ ದಿನ ಹಂದಿ ಬೇಟೆಗೆ ಪ್ರಶಸ್ತ ಕಾಲ. ಹೆಜ್ಜೆ ಗುರುತುಗಳನ್ನು ಹಿಂಬಾಲಿಸಿ ಅವುಗಳ ಮೂಲ ತಾಣವನ್ನು ಕಂಡುಹಿಡಿದು ಅಲ್ಲೆ ಅವುಗಳ ಬೇಟೆಗೆ ಹೊಂಚು ಹಾಕುತ್ತಾರೆ. ಹಂದಿ ಹೊಡೆಯುವುದು ಕಾನೂನಿನ ಉಲ್ಲಂಘನೆಯೆಂಬುದು ನಿಜವಾದರೂ ಯಾರೂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಅವುಗಳ ಸಂಖ್ಯೆ ವಿಪರೀತ ಎನ್ನುವಷ್ಟು ಹೆಚ್ಚಿರುವುದೂ ಇದಕ್ಕೆ ಕಾರಣವಿರಬೇಕು. ಇದಕ್ಕಿಂತ ಮುಖ್ಯ ಕಾರಣ ಇನ್ನೊಂದಿದೆ. ಚಿಕ್ಕನಾಯಕನ ಹಳ್ಳಿ ಗುಡ್ಡ ಸಾಲಿನಲ್ಲಿ ಕೊನೆಯಿಲ್ಲವೆಂಬಂತೆ ನಡೆದ ಭೀಕರ ಗಣಿಗಾರಿಕೆಯು ಹಂದಿಗಳು ಗುಡ್ಡಗೋರಣ್ಯ ಬಿಟ್ಟು ತೋಟದ ಸಾಲು ಸೇರುವುದಕ್ಕೆ ಕಾರಣವಾಯಿತು.

ನಮ್ಮ ತೋಟಕ್ಕೆ ಬರುವ ಹಂದಿಗಳು ಸ್ವಂತ ತೋಟಕ್ಕೆ ಬರುವಷ್ಟೆ ಧೈರ್ಯವಾಗಿ ಬಂದು ಹೋಗುತ್ತವೆ. ಇಲ್ಲಿ ಎಂದೂ ಅವುಗಳಿಗೆ ಘಾಸಿ ಆಗಿಯೇ ಇಲ್ಲ. ಅವುಗಳ ಮೇಲೆ ಯಾವ ಚಿಕ್ಕ ದಾಳಿಯ ಪ್ರಯತ್ನವೂ ನಡೆದಿಲ್ಲದಿರುವುದು ಒಂದು ಕಾರಣವಾದರೆ ಇಲ್ಲಿ ಸಿಕ್ಕುವ ನೀರು ಆಹಾರ ಇನ್ನೊಂದು ಕಾರಣ. ಹಂದಿಗಳಿಗೆ ಕೆಸರಿನಾಟ ಬಲುಪ್ರಿಯ. ಉಣ್ಣೆ, ಚಿಗಟ, ಹೇನು, ಸೊಳ್ಳೆಗಳೇ ಮುಂತಾದ ಕೀಟಗಳ ಕಾಟದಿಂದ ತಪ್ಪಿಸಿಕೊಳ್ಳಲು ಕಾಲಾಂತರದಲ್ಲಿ ಅವು ಕಂಡ ಪ್ಲಾನ್‌ ಇದು. ನಮ್ಮ ತೋಟದಲ್ಲಿ ಹಂದಿಗಳಿಗೆ ಊಟವಿಲ್ಲದ ದಿನವೇ ಇಲ್ಲ. ಆದರೂ ಒಮ್ಮೊಮ್ಮೆ ಸಂಭವಿಸಿದ ಆಹಾರದ ಕೊರತೆಯ ಕಾರಣಕ್ಕೊ ಏನೋ ಹಂದಿಗಳು ತೆಂಗಿನ ಕಾಯಿ ಸುಲಿಯುವುದನ್ನು ಕಲಿತು ತಿನ್ನಲಾರಂಭಿಸಿವೆ. ಮೊದ ಮೊದಲು ತಮ್ಮ ಬುದ್ಧಿಯನ್ನೆಲ್ಲಾ ಖರ್ಚುಮಾಡಿ ಇಡೀ ರಾತ್ರಿ ಸುಲಿದ ಕಾಯಿಯನ್ನು ಒಡೆಯಲಾಗದೆ, ಅಷ್ಟೊತ್ತಿಗೆ ಬೆಳಗಾಗುತ್ತಿದ್ದ ಪರಿಣಾಮ ಆ ಸುಲಿದ ಕಾಯಿಯನ್ನು ಅಲ್ಲೇ ಬಿಟ್ಟು ಖಾಲಿ ಹೊಟ್ಟೆಯಲ್ಲಿ ತಮ್ಮ ತಾವಿಗೆ ಹಿಂದಿರುಗುತ್ತಿದ್ದವು. ನಾವು ಬೆಳಗ್ಗೆ ಎದ್ದು ತೋಟಕ್ಕೆ ಹೋದಾಗ ಅವು ಸುಲಿದು ಬಿಟ್ಟುಹೋದ ಈ ತರದ ನುಣ್ಣಗೆ ಬೋಳಿಸಿದ ಒಂಚೂರು ಗುಂಜಿಲ್ಲದ ಮೊಟ್ಟೆಯಂತಾ ಕಾಯಿಗಳು ಸಿಗುತ್ತದ್ದವು. ಆಗ ಅವುಗಳ ಬಗೆಗೆ ಪಾಪ ಎನಿಸುತ್ತಿತ್ತು. ಈ ಬಗೆಯ ಕಸರತ್ತಿನ ಬದಲು ಅವು ತಮ್ಮ ಮಾಮೂಲಿ ಆಹಾರವನ್ನು ಮಣ್ಣಿನಲ್ಲಿ ದೊಗೆದು ಹುಡುಕಿದ್ದರೆ ಆಗುತ್ತಿತ್ತಲ್ಲ ಎನಿಸುತ್ತಿತ್ತು. ಅವು ನೀರಿಗಾಗಿ ಬಾಳೆ ಕಂದುಗಳನ್ನು ಸಿಗಿದು ಹಾಕುವುದನ್ನು ನೋಡಿದರೆ ಅದು ಮನುಷ್ಯರ ವಿರುದ್ದದ ಕಾರ್ಯಾಚರಣೆಯಂತೆ ಗೋಚರಿಸುತ್ತದೆ.

ಆದರೆ ಇತ್ತೀಚೆಗೆ ಸದರಿ ಹಂದಿಗಳು ಕಾಯಿ ಸುಲಿದು ಕಷ್ಟಪಟ್ಟಾದರೂ ಒಡೆದು ತಿನ್ನುವ ಮೂಲಕ ಕಲೆ ಕಲಿತು ನಮ್ಮನ್ನು ಆಶ್ಚರ್ಯಗೊಳಿಸಿವೆ ಮತ್ತು ಚಿಂತೆಗೂ ಕಾರಣವಾಗಿವೆ. ಆ ಗವ್ವೆನ್ನು ಕತ್ತಲಲ್ಲಿ ತೆಂಗಿನ ಕಾಯಿಯ ಮೂರು ಕಣ್ಣುಗಳಲ್ಲಿ, ಮೊಳಕೆಯೊಡೆಯುವ ಮೆದು ಕಣ್ಣೆನ ಜಾಗ ಪತ್ತೆ ಮಾಡಿ ಅಲ್ಲಿಗೆ ಹಲ್ಲು ಹಾಕಿ ಮೀಟಿ ಒಡೆದು ತಿನ್ನುತ್ತವೆ ಎಂದರೆ ಹಸಿವೆಂಬುದು ಎಂಥಾ ಮಂತ್ರವಾದಿ ಎಂಬುದು ಅರಿವಿಗೆ ಬರುತ್ತದೆ. ಇದೀಗ ತೋಟದ ಯಾವ ಕಡೆಗೆ ಹೋದರೂ ಹಂದಿಗಳು ಬಿಟ್ಟು ಹೋದ ಗುಂಜು, ಚಿಪ್ಪುಗಳು ಇಟ್ಟಾಡಿರುವುದು ಕಾಣುತ್ತದೆ. ಆಗ ಕನಿಕರ ಈಗ ಸಿಟ್ಟು. ಹಂದಿ ಬೇಟೆಗಾರರು ನಮ್ಮ ತೋಟದತ್ತ ಸುಳಿದರೆ ಅವರನ್ನೀಗ ಬೈದು ಓಡಿಸುತ್ತಿಲ್ಲ.

ಮುಳ್ಳು ಹಂದಿಗಳ ಬಗೆಗೆ ಹೇಳದಿದ್ದರೆ, ತಪ್ಪಾಗುತ್ತದೆ. ಇವು ಯಾಕೋ ಸಂಖ್ಯೆಯಲ್ಲಿ ತೀರಾ ಕಡಿಮೆ ಇವೆ ಅನಿಸುತ್ತದೆ. ಚಿಕ್ಕಡಕವಾದ ಪ್ರಾಣಿಗಳಿವು. ನಮ್ಮ ತೋಟದ ಬೇಲಿಗುಚ್ಚಿಯ ನಾಲ್ಕಾರು ಕಡೆಗಳಲ್ಲಿ ತಮ್ಮ ಆಹಾರ ಸಂಸ್ಕರಣೆಯಲ್ಲಿ ತೊಡಗುತ್ತವೆ. ಗರಗಸದಲ್ಲೆಂಬಂತೆ ತೆಂಗಿನ ಕಾಯಿಯ ಸಿಪ್ಪೆಯನ್ನು ಸರಿಯಾಗಿ ಒಂದು ಇಂಚು ಉದ್ದ ಒಂದು ಇಂಚು ಅಗಲಕ್ಕೆ ಕತ್ತರಿಸಿ ಅಚ್ಚುಕಟ್ಟಾಗಿ ಗುಪ್ಪೆ ಹಾಕಿ ಗಟ್ಟಿಯಾದ ಚಿಪ್ಪನ್ನು ಹಾಗೆ ಚೂರು ಮಾಡಿ ಆಯಕಟ್ಟಿನಲ್ಲಿ ಕೂತು ಅಚ್ಚುಕಟ್ಟಾಗಿ ತಿಂದು ಹೋಗುತ್ತವೆ. ಈ ಮುಳ್ಳು ಹಂದಿಗಳು ಕಲಾಕಾರ ಜೀವಿಗಳೂ ಸಮಾಧಾನಿಗಳೂ ಹೌದು.

PC : vijaya karnataka

ಮುಳ್ಳು ಹಂದಿಗಳು ನಮಗೆ ಚಿಕ್ಕಂದಿನಲ್ಲೇ ಪರಿಚಯವಾಗಿದ್ದವು. ಮುಳ್ಳು ಹಂದಿಗಳು ಎನ್ನುವುದಕ್ಕಿಂತ ಅದರ ಮುಳ್ಳುಗಳು ಎಂದರೇ ಸರಿಯಾದೀತು. ಸುಮಾರು ಮುಕ್ಕಾಲು ಅಡಿ ಉದ್ದದ ಮುಳ್ಳಂದಿ ಮುಳ್ಳೊಂದನ್ನು ನಮ್ಮ ಹಿರಿಯ ಸ್ನೇಹಿತನೊಬ್ಬ ಅದು ಹೇಗೋ ಸಂಪಾದಿಸಿಕೊಂಡು ತಂದು ನಮಗೆ ತೋರಿಸುತ್ತಿದ್ದ. ಅವನು ಹೇಳುತ್ತಿದ್ದ ಪ್ರಕಾರ, ಅದನ್ನು ತನ್ನ ಎದುರು ಪಾರ್ಟಿಯವರ ವಿರುದ್ಧ ಒಂದಲ್ಲ ಒಂದು ದಿನ ಬಳಸುವುದಾಗಿಯೂ, ಅದರ ಚೂಪು ತುದಿ ಚರ್ಮದ ಒಳಕ್ಕೆ ಸ್ವಲ್ಪ ತಿವಿಯಲ್ಪಟ್ಟರೂ ಎದುರಾಳಿಯ ಸ್ಥಿತಿ ಖತಂ ಆಗುವುದು ಗ್ಯಾರಂಟಿ ಎಂದು ನಮ್ಮನ್ನು ಹೆದರಿಸುತ್ತಿದ್ದ. ಅಂದಿನಿಂದ ನಾವು ಕೆಲವು ಜನ ಗೆಳೆಯರು ಅವನಿಂದ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಯಿತು. ನಾನಂತೂ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ಬಿಟ್ಟೆ.

ಮುಂದೊಂದು ದಿನ ಅವನ ಬಳಿ ಸದರಿ ಸಯನೈಡ್‌ ರೂಪಿ ಅಸ್ತ್ರವಿರುವುದು ಮೇಷ್ಟ್ರಿಗೆ ಗೊತ್ತಾಗಲಾಗಿ, ಅವನಿಗೆ ನಾಲ್ಕು ತದುಕಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವವರೆಗೂ ಅವನ ಆಟ ನಡೆಯುತ್ತಲೇ ಇತ್ತು. ಆ ಅಸ್ತ್ರವನ್ನು ಅವನು ತನ್ನ ಸಹಚರರಿಂದ ಇಂಕು, ಪೆನ್ನು, ಪೆನ್‌ಸಿಲ್, ಸೌತೆಕಾಯಿ, ಬೆಲ್ಲದುಂಡೆ, ಎರದೆಹಣ್ಣು, ಸೀಬೇ ಹಣ್ಣು ಮುಂತಾದುವುಗಳನ್ನು ಸುಲಿಗೆ ಮಾಡಲು ಬಳಸುತ್ತಿದ್ದ ವಿಷಯ ಆ ನಂತರದ ವಿಚಾರಣೆಯಿಂದ ಹೊರಬಂತು.

ಆದರೆ ಆ ಮುಳ್ಳಂದಿ ಮುಳ್ಳು ಅಷ್ಟು ಅಪಾಯಕಾರಿಯಲ್ಲವೆಂಬುದು ನಮಗೆ ತಡವಾಗಿ ತಿಳಿಯಿತು. ಆ ಪುಟ್ಟ ಅಮಾಯಕ ಪ್ರಾಣಿ ತನ್ನ ರಕ್ಷಣೆಗಾಗಿ ಪಡೆದುಕೊಂಡ ರಕ್ಷಾ ಕವಚ ಅದಾಗಿತ್ತು. ಆಗಾಗ ಈಗಲೂ ನಮಗೆ ಎಲ್ಲೋ ಒಂದೊಂದು ಮುಳ್ಳು ಸಿಗುತ್ತವೆ. ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸ್ನೇಹಸೇತುವಾಗಿ ಅವುಗಳನ್ನು ಇಟ್ಟುಕೊಳ್ಳುವುದು ಖುಷಿ ಎನಿಸುತ್ತವೆ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-5: ಗೊಬ್ಬರೋತ್ಪಾದಕ ಗೆದ್ದಲುಗಳಿಗೊಂದು ಸಲಾಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...