ಸರಿಯಾಗಿ ಒಂದು ವರ್ಷದ ಹಿಂದೆ 14 ಸೆಪ್ಟೆಂಬರ್ 2020 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ, 19 ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ಮೇಲ್ಜಾತಿಯ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿ, ಮಾರಣಾತಿಂಕ ಹಲ್ಲೆ ನಡೆಸಿದ್ದರು. ಇದಾಗಿ ಎರಡು ವಾರಗಳ ನಂತರ ಯುವತಿ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಮಂಗಳವಾರ ಪ್ರತಿಕ್ರಿಯಿಸಿದ್ದು, ಸಂತ್ರಸ್ತೆಗೆ ನ್ಯಾಯದಾನ ವಿಳಂಬವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದು ಸರಿಯಾಗಿ ಒಂದು ವರ್ಷವಾಗಿದೆ, ಆದರೆ ಉತ್ತರ ಪ್ರದೇಶ ಸರ್ಕಾರವು ಕುಟುಂಬಕ್ಕೆ ನ್ಯಾಯ ಮತ್ತು ಭದ್ರತೆ ನೀಡುವ ಬದಲಾಗಿ ಜೀವ ಬೆದರಿಕೆಗಳನ್ನು ಹಾಕಿತು ಎಂದು ಪ್ರಿಯಾಂಕಾ ಗಾಂಧಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಗೌರವಯುತವಾದ ಶವ ಸಂಸ್ಕಾರದ ಹಕ್ಕನ್ನೂ ಹೆತ್ತವರಿಂದ ಕಸಿದುಕೊಂಡ ಸರ್ಕಾರ, ಇಡೀ ರಾಜ್ಯದ ಆಡಳಿತ ಯಂತ್ರವನ್ನು ಬಳಸಿಕೊಂಡು ಯುವತಿಯ ಘನತೆಗೆ ಅಪಪ್ರಚಾರ ಮಾಡಿ ಚಾರಿತ್ಯ್ರ ಹರಣ ಮಾಡಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣ: ಸಂತ್ರಸ್ತ ಕುಟುಂಬ ಮತ್ತು ವಕೀಲರಿಗೆ ನ್ಯಾಯಾಲಯದಲ್ಲೇ ಬೆದರಿಕೆ!
“ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ಇಂತಹ ಕೆಟ್ಟ ನಿಲುವು ತೆಗೆದುಕೊಂಡ ಸರ್ಕಾರದ ಮುಖ್ಯಸ್ಥರಿಂದ ಸೂಕ್ಷ್ಮತೆಯನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ? ಅದೇನೇ ಇರಲಿ, ಯುಪಿಯ ಮುಖ್ಯಮಂತ್ರಿ ಮಹಿಳಾ ವಿರೋಧಿ ಚಿಂತನೆಯ ನಾಯಕ. ಅವರು ‘ಮಹಿಳೆಯರು ಸ್ವತಂತ್ರವಾಗಿರಬಾರದು’ ಎಂದು ಹೇಳಿಕೊಂಡಿದ್ದಾರೆ” ಎಂದು ಪ್ರಿಯಾಂಕ ಗಾಂಧಿ ಟ್ವೀಟ್‌ನಲ್ಲಿ ಬರೆದಿದ್ದಾರೆ.
ಪ್ರಕರಣವು ಮೊದಲಿಗೆ, ಒಬ್ಬ ಆರೋಪಿಯು ಯುವತಿಯನ್ನು ಕೊಲ್ಲಲು ಪ್ರಯತ್ನಿಸಿದನೆಂದು ವರದಿಯಾಗಿತ್ತು. ಆದರೆ, ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಯುವತಿ ಮ್ಯಾಜಿಸ್ಟ್ರೇಟಿಗೆ ನೀಡಿದ ಹೇಳಿಕೆಯ ನಂತರ ಸಾಮೂಹಿಕ ಅತ್ಯಾಚಾರದ ಬಗ್ಗೆ ತಿಳಿದು ಬಂದಿತ್ತು. ಜೊತೆಗೆ ಸಂತ್ರಸ್ತ ಯುವತಿಯೆ ತನ್ನ ಮೇಲೆ ಅತ್ಯಾಚಾರ ಮಾಡಿದ ನಾಲ್ವರು ಆರೋಪಿಗಳನ್ನು ಹೆಸರಿಸಿದ್ದರು. ಅಷ್ಟೆ ಅಲ್ಲದೆ ಯುವತಿಯ ಮೃತದೇಹವನ್ನು ಅವರ ಕುಟುಂಬದ ಒಪ್ಪಿಗೆಯಿಲ್ಲದೆ ಪೊಲೀಸರು ಬಲವಂತವಾಗಿ ರಾತ್ರೋರಾತ್ರಿ ಸುಟ್ಟು ಹಾಕಿದ್ದರು.
ಹತ್ರಾಸ್ ದಲಿತ ಯುವತಿಯ ಸಾಮೂಹಿತ ಅತ್ಯಾಚಾರ ಮತ್ತು ಹತ್ಯೆ ಘಟನೆ? ಯಾಕೆ ದೇಶದಾದ್ಯಂತ ಗಮನಸೆಳೆಯಿತು?
2020 ರ ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ, 19 ವರ್ಷದ ದಲಿತ ಯುವತಿ ಜಾನುವಾರಿಗೆ ಮೇವು ಸಂಗ್ರಹಿಸಲು ಹೊಲಕ್ಕೆ ಹೋದಾಗ ಈ ಘಟನೆ ನಡೆದಿದೆ. ರಾಜ್ಯದ ಮೇಲ್ಜಾತಿಯಾದ ಠಾಕೂರ್ ಸಮುದಾಯಕ್ಕೆ ಸೇರಿದ ಸಂದೀಪ್, ರಾಮು, ಲವ್ಕುಶ್ ಮತ್ತು ರವಿ ಎಂಬ ನಾಲ್ವರು ಯುವತಿಯ ಕುತ್ತಿಗೆಗೆ ದುಪ್ಪಟ್ಟಾ ಹಾಕಿ ಎಳೆದೊಯ್ದಿದ್ದಾರೆ. ಇದರಿಂದಾಗಿ ಯುವತಿಯ ಬೆನ್ನು ಹುರಿಗೆ ಗಾಯವಾಗಿತ್ತು. ನಂತರ ಸಾಮೂಹಿಕ ಅತ್ಯಾಚಾರ ನಡೆಸಿದ್ದ ದುಷ್ಕರ್ಮಿಗಳು, ಅತ್ಯಾಚಾರ ಯತ್ನವನ್ನು ವಿರೋಧಿಸಿದ ಕಾರಣ ಯುವತಿಯ ಕತ್ತು ಹಿಸುಕಿದ್ದರು, ಈ ವೇಳೆ ಯುವತಿ ನಾಲಿಗೆ ಕತ್ತರಿಸಲ್ಪಟ್ಟಿತ್ತು.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ-ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಮ್ಯಾಜಿಸ್ಟ್ರೇಟ್ ವರ್ಗಾವಣೆ!
ಈ ವೇಳೆ ಯುವತಿಯ ಕೂಗು ಕೇಳಿ ಹೊಲಕ್ಕೆ ಬಂದಿದ್ದ ತಾಯಿ ಮೊದಲಿಗೆ ಚಾಂದ್ ಪಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆದರೆ ಅಲ್ಲಿ ಪೊಲೀಸರು ಅವರ ದೂರನ್ನು ಪಡೆಯದೆ, ಅವರನ್ನು ಅವಮಾನಿಸಿದ್ದರು. ಇದಾಗಿ ಸುಮಾರು ಆರು ದಿನಗಳ ನಂತರ ಅಂದರೆ ಸೆಪ್ಟೆಂಬರ್ 20 ರಂದು ಪೊಲೀಸರು ದೂರು ದಾಖಲಿಸಿದ್ದರು. ಸೆಪ್ಟೆಂಬರ್ 22 ರಂದು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದರು. ಯುವತಿ ಹೇಳಿಕೆ ನೀಡಿ, ತನ್ನ ಮೇಲೆ ಅತ್ಯಾಚಾರ ನಡೆದಿರುವುದು ಮತ್ತು ಅದನ್ನು ವಿರೋಧಿಸಿದ್ದಕ್ಕೆ ಕತ್ತು ಹಿಸುಕಿರುವುದನ್ನು ಉಲ್ಲೇಖಿಸಿದ್ದರು.
ಘಟನೆ ನಡೆದ ದಿನದಂದು ಯುವತಿಯನ್ನು ಅಲಿಗಡದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಹದಗೆಟ್ಟ ನಂತರ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಾಕಾರಿಯಾಗದೆ 2020 ರ ಸೆಪ್ಟೆಂಬರ್ 29 ರಂದು ನಿಧನರಾದರು.
ಶವಪರೀಕ್ಷೆಯ ವರದಿಯಲ್ಲಿ, ‘ಗಟ್ಟಿಯಾದ ವಸ್ತುವಿನಿಂದ ಕುತ್ತಿಗೆಯ ಬಳಿಯ ಬೆನ್ನುಮೂಳೆಗೆ ಬಲವಾದ ಏಟು’ ಬಿದ್ದಿದ್ದರಿಂದ ಸಾವಾಗಿದೆ ಎಂದು ದಾಖಲಾಗಿತ್ತು. ಆದರೆ ವೈದ್ಯಕೀಯ ದಾಖಲೆ, “ಅತ್ಯಾಚಾರ ಮತ್ತು ಕತ್ತು ಹಿಸುಕುವಿಕೆ” ಸಾವಿಗೆ ಕಾರಣ ಎಂದು ಉಲ್ಲೇಖಿಸಿತ್ತು.
ಇದನ್ನೂ ಓದಿ: ಹತ್ರಾಸ್: ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್ – ವಕೀಲರ ಹೇಳಿಕೆ
ಸರ್ಕಾರ, ಬಿಜೆಪಿ ಮತ್ತು ಮೇಲ್ಜಾತಿ ಸಂಘಟನೆಗಳು ನಡೆದುಕೊಂಡ ಬಗ್ಗೆ
ದಲಿಯ ಯುವತಿಯ ಅತ್ಯಾಚಾರ ನಡೆದಿದೆ ಎಂದು ತಿಳಿದ ನಂತರವು, ಆಡಳಿತವು ತನಿಖೆ ವಿಳಂಬ ಮಾಡಿರುವ ಬಗ್ಗೆ ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಷ್ಟೆ ಅಲ್ಲದೆ ಮೃತಪಟ್ಟ ನಂತರ ಯುವತಿಯ ಮೃತದೇಹವನ್ನು ದೆಹಲಿಯಿಂದ ರಾತ್ರೋರಾತ್ರಿ ತಂದು ಹೆತ್ತವರ ಅನುಮತಿಯಿಲ್ಲದೆ ಪೊಲೀಸರು ಬಲವಂತವಾಗಿ ಸುಟ್ಟು ಹಾಕಿದ್ದರು. ಇದು ಕೂಡಾ ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಇಷ್ಟೆ ಅಲ್ಲದೆ ಯುವತಿಯ ಕುಟುಂಬವನ್ನು ಸಂದರ್ಶಿಸಲು ಕೂಡಾ ಯಾರಿಗೆ ಅನುಮತಿ ನೀಡಿರಲಿಲ್ಲ. ಅವರ ಮನೆಯ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಘಟನೆಯನ್ನು ವರದಿ ಮಾಡಲು ಹೊರಟ ಪತ್ರಕರ್ತರನ್ನೂ ಯುಎಪಿಎ ಅಂತಹ ಕರಾಳ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿತ್ತು. ಜೊತೆಗೆ ಕುಟುಂಬವನ್ನು ಬೆದರಿಸುವ ತಂತ್ರವನ್ನೂ ಸರ್ಕಾರ ಮಾಡಿತ್ತು.
ಅತ್ಯಾಚಾರ ಆರೋಪಿಗಳನ್ನು ಬೆಂಬಲಿಸಿ ನಡೆಸಿದ ರ್‍ಯಾಲಿಯಲ್ಲಿ ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳ ಸದಸ್ಯರು ಭಾಗಿ!
ಈ ಎಲ್ಲದರ ಮಧ್ಯೆ “ರಾಷ್ಟ್ರೀಯ ಸವರ್ಣ ಪರಿಷತ್” ಎಂಬ ಸಂಘಟನೆ ಆರೋಪಿಗಳ ಬೆಂಬಲಕ್ಕೆ ನಿಂತಿತ್ತು. ಅಕ್ಟೋಬರ್ 4 ರಂದು ಬಿಜೆಪಿಯ ಮಾಜಿ ಶಾಸಕರಾದ ರಾಜವೀರ್ ಸಿಂಗ್ ಪೆಹೆಲ್ವಾನ್ ಆರೋಪಿಗಳನ್ನು ಬೆಂಬಲಿಸಿ ರ್‍ಯಾಲಿ ನಡೆಸಿದ್ದರು. ಈ ರ್‍ಯಾಲಿಯಲ್ಲಿ ನಾಲ್ವರು ಆರೋಪಿಗಳ ಕುಟುಂಬ ಸದಸ್ಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಜೊತೆಗೆ ಈ ಸಭೆಯಲ್ಲಿ ಆರ್‌ಎಸ್‌ಎಸ್, ಕರ್ಣಿ ಸೇನೆ ಮತ್ತು ಬಜರಂಗದಳದಂತಹ ಬಲಪಂಥೀಯ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಈ ಸದಸ್ಯರು ಕ್ಷತ್ರಿಯ ಮಹಾಸಭಾ, ರಾಷ್ಟ್ರೀಯ ಸವರ್ಣ ಸಂಘಟನೆ ಮುಂತಾದವುಗಳನ್ನು ಒಳಗೊಂಡಂತೆ ವಿವಿಧ ಮೇಲ್ಜಾತಿಯ ಸಂಘಟನೆಗಳ ಭಾಗವಾಗಿದ್ದರು.
ತನಿಖೆಯ ಎಲ್ಲಿವರೆಗೆ ಆಗಿವೆ?
2020 ಡಿಸೆಂಬರ್ 19 ರಂದು, ಸಿಬಿಐ ಹತ್ರಾಸ್‌ನ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ. ನಾಲ್ಕು ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ಹೊರಿಸಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಲಿಖಿತವಾಗಿ ದಾಖಲಿಸುವುದರಲ್ಲಿ ತೋರಿದ ವಿಳಂಬ ಮತ್ತು ಯುವತಿಯ ವೈದ್ಯಕೀಯ ಪರೀಕ್ಷೆಯಲ್ಲಿ ಯುಪಿ ಪೊಲೀಸರ ಲೋಪದೋಷಗಳನ್ನೂ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಯದಲ್ಲಿ ಬದುಕುತ್ತಿದೆ ಹತ್ರಾಸ್ ಸಂತ್ರಸ್ತೆ ಕುಟುಂಬ: PUCL ಸತ್ಯಶೋಧನಾ ವರದಿ


