ಭಾರತದ ಪ್ರಾಚೀನ ಇತಿಹಾಸದ ಬಹುಭಾಗವು ಇತಿಹಾಸವೇ ಅಲ್ಲ. ಹೀಗೆಂದರೆ ಪ್ರಾಚೀನ ಭಾರತಕ್ಕೆ ಇತಿಹಾಸವಿಲ್ಲ ಎಂದು ಹೇಳಿದಂತಲ್ಲ. ಅದಕ್ಕೆ ವಿಫುಲವಾದ ಇತಿಹಾಸವುಂಟು. ಆದರೆ ಅದು ವಿರೂಪಗೊಂಡಿದೆ. ಅದು ಸ್ತ್ರೀಯರನ್ನೂ, ಮಕ್ಕಳನ್ನೂ ರಂಜಿಸಲೆಂದು ರಚಿಸಿದ ಪುರಾಣವಾಗಿಬಿಟ್ಟಿದೆ. ಬ್ರಾಹ್ಮಣ ಲೇಖಕರು ಬುದ್ಧಿಪೂರ್ವಕವಾಗಿ ಹೀಗೆ ಮಾಡಿರಬೇಕೆಂದು ಅನ್ನಿಸುತ್ತದೆ. …ಭಗ್ನಾವಶೇಷಗಳನ್ನು ಹೊರತೆಗೆಯುವುದರಿಂದ ನಾವು ಪ್ರಾಚೀನ ಭಾರತದ ಇತಿಹಾಸವನ್ನು ಹೊಸ ಬೆಳಕಿನಲ್ಲಿ ನೋಡುವುದು ಸಾಧ್ಯ.
ಡಾ. ಬಿ. ಆರ್. ಅಂಬೇಡ್ಕರ್.
ಅಂಬೇಡ್ಕರರು ಈ ಮೇಲಿನ ಮಾತುಗಳನ್ನಾಡುವಾಗ ಈ ದೇಶದ ಶಿಷ್ಠ ಪರಂಪರೆಯನ್ನುದ್ದೇಶಿಸಿ ಬಹಳ ನಿಖರವಾದ ಅಭಿಪ್ರಾಯಗಳನ್ನೇ ದಾಖಲಿಸಿದ್ದಾರೆ. ಈ ದೇಶದ ಪಟ್ಟಭದ್ರ ಹಿತಾಸಕ್ತಿಯ ಮನಸ್ಥಿತಿಗಳು ಪುರಾಣವನ್ನು ಇತಿಹಾಸವಾಗಿಸುವ ಹಾಗೂ ಇತಿಹಾಸವನ್ನು ಪುರಾಣವಾಗಿಸುವ ದಾರಿಯಲ್ಲಿ ನಡೆಯಲು ಗಟ್ಟಿ ನೆಲವನ್ನು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಸಾಕ್ಷಿ ದೆಹಲಿ ವಿಶ್ವವಿದ್ಯಾಲಯ ಪಠ್ಯದಿಂದ ಕೈಬಿಟ್ಟಿರುವ ದಲಿತ ಲೇಖಕರ ಸ್ತ್ರೀವಾದಿ ಪಠ್ಯಗಳು ಹಾಗೂ ನಮ್ಮದೇ ರಾಜ್ಯದ ಪ್ರಾಥಮಿಕ ಶಾಲೆಯ ಸಮಾಜ ವಿಜ್ಞಾನದ ’ಹೊಸ ಮತಧರ್ಮಗಳ ಉದಯ’ ಪಾಠವನ್ನು ಪರಿಷ್ಕರಿಸಲು ಮುಂದಾಗಿರುವುದು. ಇದನ್ನು ಪರಿಷ್ಕರಿಸಲು ಇತಿಹಾಸವನ್ನು ’ಹಿಂದುತ್ವ’ ಅಜೆಂಡಾದ ಪೂರ್ವಾಗ್ರಹ ಕಣ್ಣುಗಳಿಂದ ನೋಡುವ ವ್ಯಕ್ತಿಗಳಿಗೆ ವಹಿಸಿದರೆ ಅದರ ಕತೆ ಏನಾಗಬಹುದು ನೀವೇ ಊಹಿಸಿ. ಅಂತಹ ಬೆಳವಣಿಗೆ ಇಂದು ’ಗುಜರಾತ್ ಮಾದರಿ’ಯ ನೆಪದಲ್ಲಿ ಕರ್ನಾಟಕಕ್ಕೂ ಕಾಲಿಟ್ಟಿದೆ. ಈ ರೀತಿಯಲ್ಲಿ ಶಾಲಾ ಕಾಲೇಜು ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ನೆಪದಲ್ಲಿ ಇತಿಹಾಸವನ್ನು ಪುರಾಣದೊಂದಿಗೆ ಮಿಶ್ರಣ ಮಾಡುವ ಪ್ರಕ್ರಿಯೆಗೆ ಒಂದು ಸುದೀರ್ಘ ಇತಿಹಾಸವಿದೆ.
ಭಾರತದ ಇತಿಹಾಸ ರಚನೆಯೇ ಬಹಳ ಪೂರ್ವಾಗ್ರಹಗಳಿಂದ ಕೂಡಿತ್ತು. ಬ್ರಿಟಿಷರು ಈ ಪ್ರಾಚೀನ ಭಾರತದ ಇತಿಹಾಸವನ್ನು ಬರೆಯಲು ಆರಂಭಿಸಿದಾಗ ಅವರ ಕಣ್ಮುಂದೆ ಸಾವಿರಾರು ಜಾತಿಗಳಾಗಿ ಒಡೆದುಹೋಗಿದ್ದ ಭಾರತದ ಜನರಿದ್ದರು. ಆದರೆ ಅದನ್ನವರು ಹಿಂದೂ-ಮುಸ್ಲಿಂ ಕಣ್ಣುಗಳಿಂದ ನೋಡಲು ಪ್ರಜ್ಞಾಪೂರ್ವಕವಾಗಿ ಆರಂಭಿಸಿದರು. ಏಕೆಂದರೆ 1857ರಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತದ ಹಿಂದೂ ಮತ್ತು ಮುಸ್ಲಿಂ ರಾಜರುಗಳ ಒಕ್ಕೂಟ ಹಾಗೂ ಸ್ಥಳೀಯ ನಾನಾ ರೈತಾಪಿ, ಬುಡಕಟ್ಟು ಜಾತಿಗಳು ಹಾಗೂ ಸೂಫಿ-ಭಕ್ತಿ ಚಳವಳಿಯ ಪ್ರಭಾವದಲ್ಲಿ ಶೋಷಣೆಯ ವಿರುದ್ಧ ನಿಂತಿದ್ದ ಜನಮಾನಸ ಬ್ರಿಟಿಷರ ಸಾಮ್ರಾಜ್ಯಶಾಹಿಯ ವಿರುದ್ಧ ದಂಗೆ ಎದ್ದಿತ್ತು. ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಬ್ರಿಟಿಷ್ ಆಡಳಿತ ಭಾರತದ ಇತಿಹಾಸವನ್ನು ಕೋಮುಗಣ್ಣಿನಲ್ಲಿ ನೋಡಲು ಆರಂಭಿಸಿತು. ಇದಕ್ಕೆ ಸೊಪ್ಪು ಹಾಕಿದ ಸಾವರ್ಕರ್ ನೇತೃತ್ವದ ’ಹಿಂದುತ್ವ’ ಪ್ರತಿಪಾದಕ ಪಡೆ ಬ್ರಿಟಿಷರ ಬೆನ್ನಿಗೆ ನಿಂತಿತ್ತು. ಭಾರತ ಮತ್ತು ಪಾಕಿಸ್ತಾನ ವಿಭಜನೆ ಪ್ರಕ್ರಿಯೆಯಲ್ಲಿ ಮಹಮ್ಮದ್ ಅಲಿ ಜಿನ್ನಾಗೆ ಸರಿಸಮಾನವಾಗಿ ಈ ಸಾವರ್ಕರ್ ಮತ್ತು ಬ್ರಿಟಿಷರು ನಿಂತರು.
ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ನೆಲೆಯಲ್ಲಿ ಸಮಾಜವಾದ ಹಾಗೂ ಜಾತ್ಯತೀತ ಮೌಲ್ಯಗಳನ್ನೂ ಸೇರಿಸಿಕೊಂಡು 1972 ಮತ್ತು 1986ರಲ್ಲಿ ಭಾರತದ ಶಾಲಾ ಕಾಲೇಜುಗಳ ಪಠ್ಯಕ್ರಮವನ್ನು ರಚಿಸಲಾಗಿತ್ತು. ಈ ಪಠ್ಯಕ್ರಮದಲ್ಲಿಯೂ ಸಮಸ್ಯೆಗಳಿದ್ದವು. ಅಂಬೇಡ್ಕರರು ಪ್ರತಿಪಾದಿಸಿದ ಜಾತಿ ವಿನಾಶ, ರಾಷ್ಟ್ರೀಕರಣ ಹಾಗೂ ಮಹಿಳಾ ವಿಮೋಚನೆಯ ಮಹತ್ವವನ್ನು ಈ ಕಾಲದ ಪಠ್ಯಕ್ರಮ ಒಳಗೊಳ್ಳಲೇ ಇಲ್ಲ. ಹಾಗಿದ್ದರೂ ಅಂದಿನ ಕಾಲದ ಪಠ್ಯಕ್ರಮ ರಾಷ್ಟ್ರೀಯ ಐಕ್ಯತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದಲ್ಲಿಯೇ ರಚಿತವಾದುವು. ಹೀಗೆ ರಚಿತವಾದರೂ ಮುನ್ನಡೆಯಬೇಕಾದ ಹಾದಿ ಬಹಳಷ್ಟಿತ್ತು. ರಾಷ್ಟ್ರ ಹಾಗೂ ರಾಜ್ಯಮಟ್ಟದ ಪಠ್ಯಪುಸ್ತಕಗಳಲ್ಲಿ ಅಂಬೇಡ್ಕರ್, ಫುಲೆ ದಂಪತಿಗಳು, ಪೆರಿಯಾರ್, ನಾರಾಯಣ ಗುರು, ಶಾಹು ಮಹಾರಾಜ್, ಬಿರ್ಸಾ ಮುಂಡಾ ಮುಂತಾದ ಜಾತಿ ವಿರೋಧಿ ಹೋರಾಟದ ಮಹನೀಯರು ಕಾಣಿಸಿಕೊಳ್ಳಲು ಬರೋಬ್ಬರು 60 ವರ್ಷಗಳೇ ಬೇಕಾದವು. ಇನ್ನೂ ಕುದ್ಮುಲ್ ರಂಗರಾವ್, ಅಯ್ಯಂಕಾಳಿ, ಅಯೋಥಿದಾಸ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದ ಮಹನೀಯರು ತಲುಪಬೇಕಾದಷ್ಟು ಜನರಿಗೆ ತಲುಪಿಯೇ ಇಲ್ಲ.

ಪಠ್ಯಪುಸ್ತಕಗಳ ಪರಿಸ್ಥಿತಿ ಹೀಗಿರುವಾಗ ಅವುಗಳ ಮುಂಚಲನೆಯನ್ನು ತಡೆದು ಹಿಂದೆ ಸರಿಸುವ ಘಟನೆಗಳು ಇಂದು ರಾರಾಜಿಸುತ್ತಿವೆ. ವಿಪರ್ಯಾಸವೆಂದರೆ ಇದಕ್ಕೆ ಪ್ರಭುತ್ವವೇ ಕೈ ಹಾಕಿದೆ. ಶಾಲಾಕಾಲೇಜು ಪಠ್ಯಗಳನ್ನು ತಮ್ಮ ಪಕ್ಷದ ಪ್ರಣಾಳಿಕೆ ಮಾಡಲು ಹೊರಟಿವೆ. ಅದರಲ್ಲೂ ಇತಿಹಾಸದ ಬೆಳವಣಿಗೆಯನ್ನು ವಸ್ತುನಿಷ್ಠವಾಗಿ ಹೇಳಬೇಕಾದ ತುರ್ತಿರುವಾಗ ಬರೀ ಸುಳ್ಳುಗಳ ಸರಮಾಲೆಗಳನ್ನೇ ಸೇರಿಸಿ ಸತ್ಯವನ್ನು ತಿರುಚುವ ಕೃತ್ಯಕ್ಕೆ ಚಾಲನೆ ನೀಡಿದೆ.
ಈ ಬೆಳವಣಿಗೆ 1977ರಲ್ಲಿ ಮೊರಾರ್ಜಿ ದೇಸಾಯಿಯವರ ಸರ್ಕಾರದಿಂದ ಆರಂಭವಾಯಿತು. ಇವರು ಆರ್. ಎಸ್. ಶರ್ಮಾ, ಬಿಪಿನ್ ಚಂದ್ರ, ರೋಮಿಲಾ ಥಾಪರ್‌ರಂತಹ ವಸ್ತುನಿಷ್ಠ ಹಾಗೂ ಸಮಾಜೋ-ಆರ್ಥಿಕ ನೆಲೆಗಟ್ಟಿನಲ್ಲಿ ರಚಿಸಲಾಗಿದ್ದ ಇತಿಹಾಸ ಪಠ್ಯವಸ್ತುಗಳನ್ನು ರದ್ದು ಮಾಡುವುದರ ಮೂಲಕ ಹಿಂದುತ್ವದ ಅಜೆಂಡಾಕ್ಕೆ ಚಾಲನೆ ನೀಡಲಾಯಿತು. ಈ ಪ್ರಕ್ರಿಯೆ ದುರ್ಬಲವಾಗಿತ್ತಾದರೂ ಗಮನಾರ್ಹವಾದುದು. ಈ ಇತಿಹಾಸ ತಿರುಚುವ ಕಾರ್ಯಕ್ಕೆ ಮೂಲ ಕಾರಣ ಮೊರಾರ್ಜಿ ದೇಸಾಯಿಯವರ ಮಂತ್ರಿ ಮಂಡಲದಲ್ಲಿ ಜನಸಂಘದ (ಇಂದಿನ ಬಿಜೆಪಿ) ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿಯಂತಹವರು ಇದ್ದದ್ದು ಹಾಗೂ. ಸಂಘ ಪರಿವಾರದ ಸಿದ್ಧಾಂತಕ್ಕೆ ತಲೆಬಾಗುತ್ತಿದ್ದ ಪ್ರತಾಪ್ ಚಂದ್ರ ಶಿಕ್ಷಣ ಮಂತ್ರಿಗಳಾಗಿದ್ದದ್ದು. ಹಾಗೆ ನೋಡಿದರೆ ಸ್ವತಃ ಮೊರಾರ್ಜಿ ದೇಸಾಯಿಯವರೇ ಜನಸಂಘದವರೊಂದಿಗೆ ಕೈಜೋಡಿಸಿದ್ದ ವ್ಯಕ್ತಿಯಾಗಿದ್ದರು.
ಅದಾದನಂತರ 1998ರಲ್ಲಿ ಸ್ವತಃ ಸಂಘಪರಿವಾರದ ರಾಜಕೀಯ ರೂಪವಾದ ಬಿಜೆಪಿಯೇ ಅಧಿಕಾರಕ್ಕೆ ಬಂದಾಗ ಇತಿಹಾಸದ ಪಠ್ಯಪುಸ್ತಕಗಳನ್ನು ತಿರುಚುವ ಪ್ರಕ್ರಿಯೆ ಪ್ರಬಲವಾಗಿಯೇ ನಡೆಯಿತು. ಎನ್‌ಸಿಎಫ್ (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು)-2000 ಸ್ಥಾಪನೆ ಮಾಡಿದ ಅಟಲ್ ನೇತೃತ್ವದ ಬಿಜೆಪಿ ಸರ್ಕಾರ ಪಠ್ಯಪುಸ್ತಕಗಳನ್ನು ತಿರುಚುವ ಕಾರ್ಯಕ್ಕೆ ಕೈಹಾಕಿತು. ಈ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬದಿಗೆ ಸರಿಸಿ ’ಮೌಲ್ಯ ಶಿಕ್ಷಣ’ದ ಹೆಸರಿನಲ್ಲಿ ’ನೈತಿಕ ಪಾಠ’ ಮಾಡಲು ಆರಂಭಿಸಿದರು. ಆ ಭಾಗವಾಗಿ ಪುರಾಣಗಳನ್ನು ಇತಿಹಾಸದೊಂದಿಗೆ ಜೋಡಿಸಲಾಯಿತು. ಅಷ್ಟಕ್ಕೇ ನಿಲ್ಲದೆ ಹಸಿಸುಳ್ಳುಗಳಾದ ವೇದಗಳಲ್ಲಿ ಗಣಿತ-ವಿಜ್ಞಾನವಿದೆ – ಪ್ಲಾಸ್ಟಿಕ್ ಸರ್ಜರಿ, ಟೆಲಿವಿಷನ್, ಇಂಟರ್ನೆಟ್‌ಗಳೆಲ್ಲಾ ವೇದ ಕಾಲದಲ್ಲಿಯೇ ಇದ್ದವು – ಗುರುತ್ವಾಕರ್ಷಣ ಬಲವನ್ನು ವೈದಿಕರೇ ಕಂಡುಹಿಡಿದಿದ್ದರು ಎಂಬ ಆಧಾರರಹಿತ, ಹಾಸ್ಯಾಸ್ಪದ ಸುಳ್ಳುಗಳನ್ನು ಪಠ್ಯಪುಸ್ತಕಗಳಲ್ಲಿ ತುರುಕುವ ಯೋಜನೆ ಅದಾಗಿತ್ತು. ಇನ್ನೂ ಮುಂದೆ ಹೋಗಿ ಆರ್ಯರು ಭಾರತದ ಮೂಲ ನಿವಾಸಿಗಳು ಎಂಬ ಸುಳ್ಳನ್ನು ನಿಜವಾಗಿಸುವ ಪ್ರಯತ್ನವಾಗಿತ್ತು.
ಈ ಮೇಲಿನ ವಾದವನ್ನು 1926ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್), 1964ರಿಂದ ವಿಶ್ವ ಹಿಂದೂ ಪರಿಷತ್, 1956ರಿಂದ ಜನಸಂಘ, 1980ರಿಂದ ಬಿಜೆಪಿ ತಮ್ಮ ವಲಯಗಳಲ್ಲಿ ಮಾತ್ರ ಹೇಳುತ್ತಿದ್ದ ಈ ತಿರುಚಿದ ಇತಿಹಾಸವನ್ನು 1998 ನಂತರ ದೇಶಾದ್ಯಂತ ಪಠ್ಯಕ್ರಮದಲ್ಲಿಯೇ ಅಳವಡಿಸಲು ಮುಂದಾಗಿದ್ದರು. ಮುಸ್ಲಿಂ ಮತ್ತು ಕ್ರೈಸ್ತರನ್ನು ಹೀಗೆಳೆಯಲೆಂದೇ ಪಠ್ಯವಸ್ತುಗಳು ತಯಾರಾದುವು. ಆದರೆ ಈ ಅತಿರೇಕದ ವೇಗಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಆದರೂ ಸಹ ಗುಜರಾತಿನಲ್ಲಿ ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸಮಾಜ ವಿಜ್ಞಾನ ಪಠ್ಯವನ್ನು ಇನ್ನಿಲ್ಲದಂತೆ ತಮ್ಮ ’ಹಿಂದುತ್ವ ಸಿದ್ಧಾಂತಕ್ಕೆ ಬಳಸಿಕೊಳ್ಳಲು ಮುಂದಾಗಿಯೇಬಿಟ್ಟಿತು. ಆ ಮೂಲಕ ರಾಷ್ಟ್ರ ಮತ್ತು ರಾಜ್ಯಮಟ್ಟಗಳಲ್ಲಿ ಪಠ್ಯಕ್ರಮಗಳನ್ನು ಬದಲಾಯಿಸುವ ಪ್ರಕ್ರಿಯೆಗೆ ಒಟ್ಟಿಗೆ ಚಾಲನೆ ನೀಡಲಾಯಿತು.
1998ರ ನಂತರ ಬಿಜೆಪಿ ಸರ್ಕಾರಗಳು ಭಾರತದ ಮಧ್ಯಕಾಲೀನ ಇತಿಹಾಸವನ್ನು ತಿರುಚಲು ಕೈ ಹಾಕಿದವು. ಏಕೆಂದರೆ ಜಗತ್ತಿನ ಬಲಾಢ್ಯ ದೇಶಗಳು ರಾಜಕೀಯ ಸ್ವಾರ್ಥಕ್ಕಾಗಿ ಕಪೋಲಕಲ್ಪಿತ ಇಸ್ಲಮೋಫೋಬಿಯಾದಿಂದ ನರಳುತ್ತಿದ್ದಾಗ ಭಾರತದಲ್ಲಿಯೂ ಅದನ್ನೇ ಮುಂದುವರೆಸಿ ಮುಸ್ಲಿಮರನ್ನು ವಿದೇಶಿಗಳೆಂದು, ಹಿಂದೂ ವಿರೋಧಿಗಳೆಂದು ಪ್ರಚಾರ ಮಾಡಬೇಕಾಗಿತ್ತು. ಅದಕ್ಕಾಗಿ ಮುಸ್ಲಿಂ ರಾಜರನ್ನು ಹಿಂದೂ ವಿರೋಧಿಗಳೆಂದು ಜರೆಯಬೇಕಾಗಿತ್ತು. ಹಾಸ್ಯಾಸ್ಪದವೆಂದರೆ ಛತ್ರಪತಿ ಶಿವಾಜಿ ಮಹಾರಾಜ್‌ಗೆ ಪಟ್ಟಾಭಿಷೇಕ ಮಾಡಲು
ನಿರಾಕರಿಸಿದ ಬ್ರಾಹ್ಮಣ್ಯ ಶಕ್ತಿಗಳೇ ಇಂದು ಶಿವಾಜಿಯನ್ನು ಕೊಂಡಾಡುತ್ತಾ ಮುಸ್ಲಿಮರ ವಿರುದ್ಧ ಮರಾಠರನ್ನು ಎತ್ತಿಕಟ್ಟಿವೆ. ಆದರೆ ನೈಜ ಇತಿಹಾಸ ಬೇರೆಯೇ ಇದೆ.
ಶಿವಾಜಿ ಮಹಾರಾಜ್ ಸೇನೆ ಸೂರತ್ ಮೇಲೆ ಆಕ್ರಮಣಗೈಯ್ಯಲು ಮುಂದಾದಾಗ ಸೇನಾಪತಿಗೆ ಶಿವಾಜಿಯಿಂದ ಎರಡು ಮುಖ್ಯ ಆದೇಶವಿತ್ತು. ಅವೇನೆಂದರೆ ಸೂರತ್‌ಗೆ ತೆರಳುವ ದಾರಿಯಲ್ಲಿ ’ಹಜರತ್ ಬಾಬಾ ದರ್ಗಾ’ ಇದ್ದು ಅದಕ್ಕೇನು ಹಾನಿ ಮಾಡಬಾರದು ಹಾಗೂ ಹಜರತ್ ಬಾಬಾಗೆ ಶಿವಾಜಿಯಿಂದ ಕೊಡುಗೆಯನ್ನೂ ನೀಡುವುದು. ಮತ್ತೊಂದು ಆದೇಶವೆಂದರೆ, ದಾಳಿ ವೇಳೆ ಇತರೆ ಧರ್ಮದವರ ಪವಿತ್ರ ಗ್ರಂಥ ದೊರೆತರೆ ಅದನ್ನು ಗೌರವಪೂರ್ವಕವಾಗಿ ಸಂಬಂಧಪಟ್ಟವರಿಗೆ ಹಿಂದಿರುಗಿಸಬೇಕೆನ್ನುವುದು. ಶಿವಾಜಿ ಸೇನೆಯಲ್ಲಿ ಮುಸ್ಲಿಂ ಸೇನಾಪತಿಗಳಿದ್ದರು ಹಾಗೂ ಮುಸ್ಲಿಂ ಸೈನಿಕರಿದ್ದರು. ಶಿವಾಜಿಯ ಆಪ್ತ ಸೇನಾಪತಿ ಹೈದರ್ ಅಲಿ ಕೊಹರಿಯಾಗಿದ್ದರೆ, ಶಿವಾಜಿ ಸಾಮ್ರಾಜ್ಯದ ಎದುರಾಳಿ ಫಿರೋಜ್ ಖಾನ್‌ನ ಸೇನಾಪತಿ ಕೃಷ್ಣಾಜಿ ಬಾಸ್ಕರ್ ಕುಲಕರ್ಣಿ. ಇಲ್ಲಿ ಛತ್ರಪತಿ ಶಿವಾಜಿಯನ್ನು ಮುಸ್ಲಿಂ ವಿರೋಧಿ ಎಂದು ಹೇಗೆ ತೀರ್ಮಾನಿಸುವುದು?
ಸುಳ್ಳುಗಳನ್ನೇ ಪಿತ್ರಾರ್ಜಿತ ಆಸ್ತಿಗಳನ್ನಾಗಿ ಮಾಡಿಕೊಂಡ ಬಲಪಂಥೀಯ ಸಂಘಟನೆ ನೇತೃತ್ವದ ಸರ್ಕಾರಗಳಲ್ಲಿ ಗುಜರಾತ್ ಅಗ್ರಗಣ್ಯವಾಗಿ ನಿಂತಿತು. ಉದಾಹರಣೆಗೆ, ಗುಜರಾತಿನ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಭಯೋತ್ಪಾದನೆ ಮುಸ್ಲಿಂ ರಾಷ್ಟ್ರಗಳಲ್ಲಿ ಮಾತ್ರ ಎಂದು ಬಿಂಬಿಸಲಾಗಿದೆ. 5ನೇ ತರಗತಿಯ ಪಠ್ಯದಲ್ಲಿ 15 ಪುರಾಣ ಕತೆಗಳಿವೆ. 2005ರ ಸಮಾಜವಿಜ್ಞಾನ ಪಠ್ಯದಲ್ಲಿ ಹಿಟ್ಲರನ ಬಗ್ಗೆ ಹೊಗಳಿ ಬರೆಯಲಾಗಿದೆ. ಆತ ಜ್ಯೂಗಳನ್ನು ಕ್ರೂರವಾಗಿ ಕೊಂದದ್ದರ ಪ್ರಸ್ತಾಪವೇ ಇಲ್ಲ. 10ನೇ ತರಗತಿಯಲ್ಲಿ ’ಸರ್ವಶ್ರೇಷ್ಠ ನಾಯಕ ಹಿಟ್ಲರ್’ ಎಂಬ ಪಾಠವೇ ಇದೆ. ಜೊತೆಗೆ ’ನಾಜಿವಾದದ ಆಂತರಿಕ ಸಾಧನೆಗಳು’ ಪಾಠವೂ ಇದೆ. ಇದರ ’ನಾಜೀವಾದದ ಸಿದ್ಧಾಂತ’ ವಿಭಾಗದಲ್ಲಿ ಹಿಟ್ಲರನನ್ನು ’ಉದ್ಧಾರಕ’ ಎಂದು ಕೊಂಡಾಡಲಾಗಿದೆ. ಇಷ್ಟು ಸಾಲದು ಎಂಬಂತೆ, ಅದೇ ರಾಜ್ಯದ ಪ್ರಾಥಮಿಕ ತರಗತಿಯ ಪಠ್ಯಪುಸ್ತಕದಲ್ಲಿ, ಅತ್ಯಾಚಾರ ಅರೋಪದ ಮೇಲೆ ಜೈಲಿನಲ್ಲಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪುನನ್ನು “ಜನಪ್ರಿಯ ಸಂತ” ಎಂದು ಹೆಸರಿಸಲಾಗಿದೆ. ಆತನನ್ನು ಮದರ್ ತೆರೆಸಾ, ಸಿಖ್ ಧರ್ಮಗುರು ಗುರು ನಾನಕ್, ಸ್ವಾಮಿ ವಿವೇಕಾನಂದರ ಸಾಲಿನಲ್ಲಿ ಸೇರಿಸಲಾಗಿದೆ.
ಗುಜರಾತ್ ಪಠ್ಯಗಳು ಜಾತಿಪದ್ಧತಿಯನ್ನು ’ಮಹದೋಪಕಾರಿ ವ್ಯವಸ್ಥೆ’ ಎಂದು ಕೊಂಡಾಡುತ್ತವೆ. 1997ರ ಸಮಾಜವಿಜ್ಞಾನ ಪಠ್ಯವೊಂದರಲ್ಲಿ ’ಸಮಾಜ ಸುಧಾರಕರೂ ಅದೆಷ್ಟೇ ಜಾತಿ ನಿರ್ಮೂಲನೆ ಹೋರಾಟ ಮಾಡಿದರೂ ಜಾತಿಪದ್ಧತಿಯು ಆದರ್ಶವಾಗಿರುವ ಕಾರಣ ಹಾಗೂ ಸಾಮಾಜಿಕ-ಆರ್ಥಿಕ ರಚನೆಗೆ ಉಪಕಾರಿಯಾಗಿರುವ ಕಾರಣ ಅದಿನ್ನೂ ಅಸ್ತಿತ್ವದಲ್ಲಿದೆ’ ಎಂಬ ಬ್ರಾಹ್ಮಣಶಾಹಿ ಧೋರಣೆಯನ್ನು ನೇರವಾಗಿಯೇ ಪ್ರತಿಪಾದಿಸುತ್ತದೆ.
ಈ ಗುಜರಾತ್ ಮಾದರಿಯನ್ನು ನಂತರದಲ್ಲಿ ಬಿಜೆಪಿ ರಾಜ್ಯಗಳು ಪಾಲಿಸಿವೆ. ರಾಜಸ್ತಾನ, ಉತ್ತರ ಪ್ರದೇಶ, ಗೋವಾ ಹಾಗೂ ನಮ್ಮ ರಾಜ್ಯ ಕರ್ನಾಟಕದಲ್ಲಿಯೂ ಈ ಪ್ರಕ್ರಿಯೆ ಮುಂದುವರೆದಿದೆ. ಇದರ ಭಾಗವಾಗಿಯೇ 2001ರಲ್ಲಿ ಗೋವಾದ ಮನೋಹರ್ ಪರಿಕ್ಕರ್ 51 ಪ್ರಾಥಮಿಕ ಶಾಲೆಗಳನ್ನು ಸಂಘಪರಿವಾರದ ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆಗೆ ದತ್ತು ನೀಡಿದರು. ಬಿಜೆಪಿ ಆಡಳಿತದಲ್ಲಿ ಕರ್ನಾಟಕದ ಪಠ್ಯಪುಸ್ತಕವೊಂದು ರೇಖಾಗಣಿತವು ಯಾಗಯಜ್ಞಗಳಿಂದ ಬೆಳವಣಿಗೆ ಹೊಂದಿದೆ ಎಂದು ಹೇಳಿತ್ತು. ಈಗ ’ಹೊಸ ಮತಧರ್ಮಗಳ ಉದಯ’ ಭಾಗವನ್ನು ಕೈಬಿಡುವ ಎಲ್ಲಾ ಹುನ್ನಾರವನ್ನೂ ಇಂದಿನ ಬಿಜೆಪಿ ಸರ್ಕಾರ ಮಾಡುತ್ತಿದೆ. ಅಂಬೇಡ್ಕರರ ಬರೆಹ ಭಾಷಣಗಳನ್ನು ಓದಿದರೆ ಆರ್ಯರು ಗೋಮಾಂಸ ಭಕ್ಷಣೆ ಮಾಡುತ್ತಿದ್ದರು, ಯಾಗ-ಯಜ್ಞಗಳಲ್ಲಿ ಸಾವಿರಾರು ಗೋವುಗಳನ್ನು ಬಲಿ ಕೊಡುತ್ತಿದ್ದರು, ಆ ಕಾರಣಕ್ಕಾಗಿಯೇ ಕೃಷಿಗೆ ಅಗತ್ಯವಾದ ಗೋವುಗಳು ನಾಶವಾಗಿ ಅರ್ಥವ್ಯವಸ್ಥೆಗೆ ಪೆಟ್ಟು ಬಿದ್ದಾಗ ಅದನ್ನು ಸರಿಪಡಿಸಲು ಚಾತುರ್ವರ್ಣ ಧರ್ಮವನ್ನು ವಿರೋಧಿಸಿ ಬೌದ್ಧ, ಜೈನದಂತಹ ಧರ್ಮಗಳು ಹುಟ್ಟಿಕೊಂಡವು ಎಂಬ ಸತ್ಯ ತಿಳಿಯುತ್ತದೆ.
ಅಂಬೇಡ್ಕರರ ಮಾತಲ್ಲೇ ಹೇಳುವುದಾದರೆ ’ಪ್ರಾಚೀನ ಭಾರತದ ಇತಿಹಾಸವು ಬೌದ್ಧ ಮತ್ತು ಬ್ರಾಹ್ಮಣ ಧರ್ಮಗಳ ನಡುವಿನ ಸಂಘರ್ಷ’. ಈ ಸತ್ಯವನ್ನು ಮಕ್ಕಳಿಗೆ ಹೇಳುವುದರಲ್ಲಿ ಹಿಂಜರಿಕೆ ಯಾಕೆ? ಇಂದು ಶುದ್ಧ ಜನಾಂಗ ಯಾವುದೂ ಇಲ್ಲವಲ್ಲ. ಮುಸ್ಲಿಂ, ಕ್ರೈಸ್ತ, ಬೌದ್ಧರ ವಿರುದ್ಧ ಸುಳ್ಳು ಹೇಳಲು ತುದಿಗಾಲಲ್ಲಿ ನಿಲ್ಲುವ ಬಲಪಂಥೀಯ ಸರ್ಕಾರಗಳಿಗೆ ಆರ್ಯರ ಬಗ್ಗೆ ಸತ್ಯ ಹೇಳಿದರೆ ಯಾಕಿಷ್ಟು ಭಯ? ಕೊನೆಯದಾಗಿ, ಶುದ್ಧತೆಯನ್ನು ಆರೋಪಿಸಿಕೊಳ್ಳುವ ಬೆರಳೆಣಿಕೆಯಷ್ಟು ಜಾತಿವಾದಿಗಳಿಗಾಗಿ ಸತ್ಯವನ್ನು ಮರೆಮಾಚಿಸುವ ಅಗತ್ಯವಿಲ್ಲ. ಬುದ್ಧ, ಮಹಾವೀರ ಪುರಾಣ ಪುರುಷರಲ್ಲ. ಅವರು ಪ್ರಜಾಪತಿಯ ಮುಖ, ತೋಳು, ತೊಡೆ ಮತ್ತು ಪಾದಗಳಿಂದ ಹುಟ್ಟಿದವರಲ್ಲ. ತಮ್ಮ ತಾಯಿಯ ಗರ್ಭದಲ್ಲಿ ಜನಿಸಿದವರು.
ಆದರೆ, ಒಳಚರಂಡಿಯಲ್ಲಿ ’ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್’ ಕಂಡುಹಿಡಿದ ಪ್ರಧಾನಮಂತ್ರಿ ಇರುವಾಗ ಪಠ್ಯಪುಸ್ತಕಗಳು ಪುರಾಣವನ್ನಲ್ಲದೆ ವಿಜ್ಞಾನ, ಇತಿಹಾಸವನ್ನು ಹೇಳಲು ಸಾಧ್ಯವೇ?
ಇದನ್ನೂ ಓದಿ: ಸಂದರ್ಶನ; ಶೈಕ್ಷಣಿಕ ಮಂಡಳಿಗಳಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು: ಡಾ. ವಿ.ಪಿ.ನಿರಂಜನಾರಾಧ್ಯ
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ-2020; ಪದವಿ ಶಿಕ್ಷಣ ಪುನಾರಚನೆ ತೇಪೆ ಕೆಲಸ ಆಗದಿರಲಿ


