ಶಿಕ್ಷಣಕ್ಕೆ ಹಲವು ಉದ್ದೇಶಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಮಕ್ಕಳಿಗೆ ಚಿಂತಿಸುವುದನ್ನು ಕಲಿಸುವುದು ಮತ್ತು ವೈಚಾರಿಕತೆಯನ್ನು ಬೆಳೆಸುವುದು ಹಾಗೂ ಸಾಮಾಜೀಕರಣಕ್ಕೆ ನೆಲೆ ಒದಗಿಸುವುದು. ಈ ನಿಟ್ಟಿನಲ್ಲಿ ಸ್ವಾತಂತ್ರ್ಯಾನಂತರದಲ್ಲಿ ಪಠ್ಯಪುಸ್ತಕ ರಚನೆ, ಪರಿಶೀಲನೆ ನಿರಂತರವಾಗಿ ನಡೆದು, ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಕೆಲಸ ಮಾಡಲಾಗಿದೆ. ಅದರಲ್ಲಿ ಹಲವು ಕೊರತೆಗಳಿವೆ ಮತ್ತೆ ಹಲವು ಬಾರಿ ವಿವಾದಗಳಿಗೂ ಅದು ಎಡೆಮಾಡಿಕೊಟ್ಟಿದೆ. ಆದರೆ ಪಕ್ಷರಾಜಕೀಯದ ಸಲುವಾಗಿ ನಡೆಯುವ ಪಠ್ಯಪುಸ್ತಕ ರಚನೆ ಪರಿಶೀಲನೆಗಳ ಬಗ್ಗೆ ಸಾರ್ವಜನಿಕರು ಎಂತಹ ನಿಲುವು ತಳೆಯಬೇಕು ಎಂಬ ಪ್ರಶ್ನೆ ಏಳುತ್ತದೆ.

ಕೆಲವು ತಿಂಗಳುಗಳ ಹಿಂದೆ 6ನೇ ತರಗತಿಯ ಪಠ್ಯಪುಸ್ತಕದ ’ಹೊಸಧರ್ಮಗಳ ಉದಯ’ ಎಂಬ ಪಾಠದ ಬಗ್ಗೆ ವಿವಾದ ಎದ್ದಿತ್ತು. ಕೊರೊನಾ ಕಾರಣದಿಂದ, ಪಾಠ ಮಾಡುವುದಕ್ಕೆ ಕಡಿತಗೊಂಡಿರುವ ಅವಧಿಯ ಕಾರಣ ಹೇಳಿ ಆ ಪಠ್ಯವನ್ನು ಕೈಬಿಡುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತಾದರೂ, ಅದರ ಉದ್ದೇಶ ಅಷ್ಟು ಮಾತ್ರವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಈಗ ಆ ಪಠ್ಯವನ್ನು ಪರಿಶೀಲಿಸಿ ಕೈಬಿಡಲು ಮತ್ತು 1 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಭಾಷಾ ವಿಷಯಗಳ ಪಠ್ಯಗಳನ್ನು ಪರಿಶೀಲಿಸಿ ಸಮಗ್ರ ವರದಿ ನೀಡಲು ಒಂದು ಸಮಿತಿಯನ್ನು ರಚಿಸಲಾಗಿದೆ.

ಸಂಘಪರಿವಾರದ ಹಿನ್ನೆಲೆ ಇರುವ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿರುವ ರೋಹಿತ್ ಚಕ್ರತೀರ್ಥ ಎನ್ನುವವರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಲಾಗಿದೆ. ಇದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ. ಅಧ್ಯಕ್ಷರಾಗಿ ನೇಮಕವಾಗಿರುವ ವ್ಯಕ್ತಿಯ ಧೋರಣೆ ಮತ್ತು ಅರ್ಹತೆಯ ಬಗ್ಗೆ ಆಕ್ಷೇಪಗಳು ಇರುವುದಲ್ಲದೆ, ಸಮಿತಿಯಲ್ಲಿನ ಬಹುತೇಕ ಸದಸ್ಯರು ಸಂಘಪರಿವಾರದ ಹಿನ್ನೆಲೆಯಿಂದ ಬಂದಿರುವುದರಿಂದ, ಈ ಪರಿಶೀಲನೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತವೆಯೇ ಎಂಬ ಪ್ರಶ್ನೆ ಕೂಡ ಎದ್ದಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣ ಸಮಿತಿಗಳ ರಾಜ್ಯ ಮಾರ್ಗದರ್ಶಕ ಡಾ. ವಿ.ಪಿ.ನಿರಂಜನಾರಾಧ್ಯ ಅವರು ’ನ್ಯಾಯಪಥ’ ಪತ್ರಿಕೆಯೊಂದಿಗೆ ಶಿಕ್ಷಣ, ಪಠ್ಯಪುಸ್ತಕ ಮುಂತಾದ ಸಂಗತಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಪ್ರಶ್ನೆ: ನಿರ್ದಿಷ್ಟ ವಿಷಯವನ್ನು (ಹೊಸ ಧರ್ಮಗಳ ಉದಯ ಇತ್ಯಾದಿ) ಪರಿಶೀಲಿಸಿ ಕೈಬಿಡುವ ಸಂಬಂಧ ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನು ರಚಿಸಿದೆ. ಅದು ವಿವಾದಕ್ಕೂ ಕಾರಣವಾಗಿದೆ. ಪಠ್ಯಪುಸ್ತಕವನ್ನು ಪರಿಶೀಲಿಸುವಂತವರ ಹಿನ್ನೆಲೆಯೂ ಆತಂಕಕ್ಕೆ ಕಾರಣವಾಗಿದೆ. ಕಾಲಕಾಲಕ್ಕೆ ಪಠ್ಯಪುಸ್ತಕವನ್ನು ಪರಿಶೀಲಿಸುವುದು ಸಾಮಾನ್ಯವಾಗಿದೆ. ಹೀಗಿರುವಾಗ ಪಠ್ಯಪುಸ್ತಕವನ್ನು ನಿರ್ಧರಿಸುವವರು ಎಂಥವರಾಗಿರಬೇಕು?

ಡಾ. ವಿ.ಪಿ.ನಿರಂಜನಾರಾಧ್ಯ: ಪ್ರತಿ ಸರ್ಕಾರ ಬದಲಾದಾಗಲೂ ಪಠ್ಯಪುಸ್ತಕವನ್ನು ಬದಲಾಯಿಸಬೇಕು ಎಂಬ ವಿಚಾರ ಮುನ್ನಲೆಗೆ ಬರುತ್ತದೆ. ಈ ಪದ್ಧತಿಯೇ ಸರಿಯಲ್ಲ. ಯಾಕೆಂದರೆ ಶಿಕ್ಷಣದಲ್ಲಿ ಒಂದು ಪಠ್ಯಕ್ರಮ ಚೌಕಟ್ಟನ್ನು ನಿಗದಿಪಡಿಸಲಾಗಿರುತ್ತದೆ. ಪಠ್ಯಕ್ರಮ ಚೌಕಟ್ಟಿನಲ್ಲಿ ಸಿಲಬಸ್‌ಅನ್ನು (ಪಠ್ಯವಸ್ತು) ರೂಪಿಸಲಾಗಿರುತ್ತದೆ. ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕ- ಈ ಮೂರಕ್ಕೂ ಒಂದಕ್ಕೊಂದು ಸಂಬಂಧವಿದೆ. ಪಠ್ಯಕ್ರಮ ವಿಶಾಲವಾದ ಚೌಕಟ್ಟನ್ನು ಹೊಂದಿರುತ್ತದೆ. ಮಕ್ಕಳಿಗೆ ವಿವಿಧ ವಲಯಗಳ, ವಿವಿಧ ವಿಷಯಗಳ ಜ್ಞಾನವನ್ನು ಕಟ್ಟಿಕೊಡುವಾಗ ಮಕ್ಕಳ ವಯಸ್ಸು ಮತ್ತು ತರಗತಿಗಳ ಅನುಗುಣವಾಗಿ ಏನೆಲ್ಲ ಸೇರಿಸಬೇಕು ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ.

’ಒಂದು ವಿಶಾಲವಾದ ಪಠ್ಯಕ್ರಮ ಚೌಕಟ್ಟನ್ನು ಸೂಚಿಸುವುದು ಮಾತ್ರ ಕೇಂದ್ರ ಸರ್ಕಾರದ ಜವಾಬ್ದಾರಿ. ಪಠ್ಯ ವಸ್ತು ಏನಿರಬೇಕು, ಪಠ್ಯ ಪುಸ್ತಕ ಹೇಗಿರಬೇಕು ಎಂಬುದನ್ನು ನಿರ್ಧರಿಸಬೇಕಿರುವುದು ರಾಜ್ಯ ಸರ್ಕಾರ. ಕೇಂದ್ರದ ಚೌಕಟ್ಟನ್ನು ಯಥಾವತ್ತಾಗಿ ಅನುಸರಿಬೇಕಾದ ಅವಶ್ಯಕತೆ ಇರುವುದಿಲ್ಲ. ರಾಜ್ಯದಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಬೇರೆ ಬೇರೆ ಆಯಾಮಗಳನ್ನು ಅನುಸರಿಸಿ ನಿಗದಿ ಮಾಡಬಹುದು’ ಎಂದು ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಹೇಳಲಾಗುತ್ತದೆ. ಒಂದು ಸಲ ಪಠ್ಯಕ್ರಮ ಚೌಕಟ್ಟನ್ನು ಮಾಡಿಕೊಂಡ ಮೇಲೆ ಅದನ್ನು ಪದೇಪದೇ ಬದಲಾಯಿಸುವುದರಲ್ಲಿ ಅರ್ಥವಿಲ್ಲ. ಅದು ಸರಿಯಾದ ಕ್ರಮವೂ ಅಲ್ಲ. ಹೀಗಾದಾಗ ಸಾಕಷ್ಟು ಗೊಂದಲಗಳು ಉಂಟಾಗುತ್ತವೆ. ಅಲ್ಲದೇ ಪಠ್ಯಕ್ರಮ ಬದಲಾವಣೆಯನ್ನು ಮೂರನೇ ವ್ಯಕ್ತಿ ನಿರ್ಧರಿಸುವುದು ಅಪಾಯಕಾರಿ.

ಶಿಕ್ಷಣ ವ್ಯವಸ್ಥೆಯಲ್ಲಿ ಮುಖ್ಯವಾಗಿ ಶಿಕ್ಷಕರು, ಶಿಕ್ಷಣ ಇಲಾಖೆ ಇರುತ್ತದೆ. ಅದಕ್ಕಾಗಿ ಭಾರತದಲ್ಲಿ ವಿಶೇಷವಾಗಿ ಒಂದು ಶೈಕ್ಷಣಿಕ ವಾಹಿನಿಯನ್ನೇ ಕಟ್ಟಿಕೊಳ್ಳಲಾಗಿದೆ. ಶಾಲೆ, ನಂತರ ಕ್ಲಸ್ಟರ್ ರಿಸೋರ್ಸ್ ಸೆಂಟರ್ (ಗುಚ್ಛ ಸಂಪನ್ಮೂಲ ಕೇಂದ್ರ), ಬ್ಲಾಕ್ ರಿಸೋರ್ಸ್ ಸೆಂಟರ್ (ಕ್ಷೇತ್ರ ಸಂಪನ್ಮೂಲ ಕೇಂದ್ರ), ನಂತರ ಡಯಟ್ (ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರ), ಅದಾದ ಮೇಲೆ ಎಸ್‌ಇಆರ್‌ಟಿ (ರಾಜ್ಯ ಮಟ್ಟದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಕೇಂದ್ರ)- ಇವು ಶೈಕ್ಷಣಿಕ ಸಂಸ್ಥೆಗಳಾಗಿವೆ. ಇದೆಲ್ಲವನ್ನೂ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಕಾನೂನುಬದ್ಧವಾಗಿ ತೀರ್ಮಾನ ಮಾಡಿ ರೂಪಿಸಿಕೊಳ್ಳಲಾಗಿದೆ. ಯಾವುದೇ ಪಠ್ಯವನ್ನು ಬದಲಿಸುವಾಗ ಶೈಕ್ಷಣಿಕ ಪ್ರಾಧಿಕಾರ (ಎಜುಕೇಷನ್ ಅಥಾರಿಟಿ) ಎಂದರೆ ಎಸ್‌ಇಆರ್‌ಟಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಎಸ್‌ಇಆರ್‌ಟಿ ಯಾವುದೇ ಬದಲಾವಣೆಯನ್ನು ಸೂಚಿಸುತ್ತಲೇ ಇಲ್ಲ. ಪಠ್ಯಕ್ರಮ ಬದಲಾಯಿಸುವ ಅವಶ್ಯಕತೆ ಇದೆ ಎಂದು ಎಸ್‌ಇಆರ್‌ಟಿ ಶಿಫಾರಸು ಮಾಡಿಯೇ ಇಲ್ಲ. ಸರ್ಕಾರ ತಮಗೆ ಬೇಕಾದವರನ್ನು ಒಳಗೊಂಡ ಸಮಿತಿ ಮಾಡಿಬಿಡುತ್ತದೆ. ಶೈಕ್ಷಣಿಕ ಮಂಡಳಿಗಳಲ್ಲಿ ಈ ಥರದ ರಾಜಕೀಯ ಹಸ್ತಕ್ಷೇಪ ಮೊದಲು ನಿಲ್ಲಬೇಕು.

ಯಾವುದೇ ವಿಷಯವನ್ನು ಕಲಿಸುವಾಗಲೂ ಮೂಲ ಚೌಕಟ್ಟು ಸಂವಿಧಾನ ಆಗಿರಬೇಕು. ಸಂವಿಧಾನದ ನೆಲೆಯಲ್ಲಿ ಸಾಮಾಜಿಕ ನ್ಯಾಯ ಎಂದರೆ ಏನು? ಅದನ್ನು ಹೇಗೆ ನಾವು ಮಕ್ಕಳಲ್ಲಿ ಬೆಳೆಸುತ್ತೇವೆ? ಬಹುತ್ವವನ್ನು ಹೇಗೆ ಹೇಳಿಕೊಡುತ್ತೇವೆ? ಬಹುಭಾಷೆಗಳನ್ನು ಹೇಗೆ ಬಳಸುತ್ತೇವೆ? ಸಾಂಸ್ಕೃತಿಕವಾಗಿ ಭಾರತವನ್ನು ಯಾವ ರೀತಿ ಕಟ್ಟಬೇಕು?- ಈ ಎಲ್ಲ ಅಂಶಗಳು ಪಠ್ಯಪುಸ್ತಕದಲ್ಲಿ ಬರುತ್ತವೆ. ಹಾಗಾಗಿ ಯಾವುದೇ ಸರ್ಕಾರಗಳು ಬದಲಾದಾಗ ಪಠ್ಯಪುಸ್ತಕವನ್ನು ಬದಲಾಯಿಸುವ ವ್ಯಾಧಿ ಮೊದಲು ನಿಲ್ಲಬೇಕು. ಈ ಜವಾಬ್ದಾರಿಗಳನ್ನು ಶೈಕ್ಷಣಿಕ ಪ್ರಾಧಿಕಾರಗಳಿಗೆ, ಶಿಕ್ಷಣದ ಮೂಲ ವಾರಸುದಾರರಿಗೆ (ಶಿಕ್ಷಕರು) ತೀರ್ಮಾನ ಮಾಡುವಂತಹ ಹೊಸ ಸಂಪ್ರದಾಯವನ್ನು ನಾವು ಮೊದಲು ಹುಟ್ಟಿಹಾಕಬೇಕು.

ಪ್ರ: ಈ ಹಿಂದಿನ ತಲೆಮಾರು ಈಗಿರುವ ಪಠ್ಯವನ್ನು ಓದಿಕೊಂಡು ಬಂದಿದೆ. ಈಗ ಪಠ್ಯವನ್ನು ತಿರುಚಲು ಹೊರಟಿದ್ದಾರೆ. ಇದರಿಂದಾಗುವ ಪರಿಣಾಮಗಳೇನು?

ಡಾ. ವಿ.ಪಿ.ನಿರಂಜನಾರಾಧ್ಯ: ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಮಕ್ಕಳನ್ನು ಕೇಂದ್ರವಾಗಿ ಇಟ್ಟುಕೊಂಡೇ ಇಲ್ಲ. ನಮ್ಮ ಇಷ್ಟದ ಪ್ರಕಾರ ನಾವು ಮಾಡುತ್ತಿದ್ದೇವೆಯೇ ಹೊರತು, ಇದರಿಂದ ಮಕ್ಕಳ ಮನಸ್ಸಿನ ಮೇಲೆ, ಅವರ ಬೆಳವಣಿಗೆ ಹಾಗೂ ಚಿಂತನೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಕನಿಷ್ಠ ಜ್ಞಾನ ಕೂಡ ನಮಗೆ ಇಲ್ಲ.

ಶಿಕ್ಷಣ ಮೂಲ ಉದ್ದೇಶ- ವಸ್ತುನಿಷ್ಠವಾದ, ವೈಜ್ಞಾನಿಕವಾದ ಜ್ಞಾನವನ್ನು ಮಕ್ಕಳಿಗೆ ನೀಡುವುದಾಗಿದೆ. ಇದಿಷ್ಟೇ ಶಿಕ್ಷಣ ಅಲ್ಲ. ಮಕ್ಕಳು ಈ ಜ್ಞಾನವನ್ನು ಆಧರಿಸಿ, ಅರ್ಥೈಸಿಕೊಂಡು, ವಿಶ್ಲೇಷಣೆ ಮಾಡಿ ಅವರದ್ದೇ ಆದ ಕೆಲವು ತೀರ್ಮಾನಗಳಿಗೆ ಬರುತ್ತಾರೆ. ಇದನ್ನೇ ಕ್ರಿಟಿಕಲ್ ಥಿಂಕಿಂಗ್, ಡಿಸಿಷನ್ ಮೇಕಿಂಗ್ ಎಂದು ಕರೆಯುತ್ತೇವೆ. ನೀವು ಎಲ್ಲವನ್ನೂ ಇಂತಿಷ್ಟೇ ಎಂದು ಹೇಳಿಕೊಡುವುದಾದರೆ ಅದು ಶಿಕ್ಷಣವಾಗುವುದಿಲ್ಲ. ಶಿಕ್ಷಣ ಎನ್ನುವುದು ಮನುಷ್ಯನನ್ನು ಆಲೋಚನೆಗೆ ಒಳಪಡಿಸಬೇಕು. ಅವನು ಆ ವಿಷಯವನ್ನು ವಿಶ್ಲೇಷಣೆ ಮಾಡಿ, ಮರು ವಿಮರ್ಶೆಗೆ ಒಳಪಡಿಸಿ ವಿಮರ್ಶಾತ್ಮಕವಾಗಿ ನೋಡಿ ತನ್ನದೇ ಆದ ತೀರ್ಮಾನಗಳನ್ನು ರೂಪಿಸಿಕೊಳ್ಳುವಂತಿರಬೇಕು. ಶಿಕ್ಷಣ ಮೂಲಭೂತವಾಗಿ ವ್ಯಕ್ತಿತ್ವ, ಚಿಂತನಾಕ್ರಮ, ಪ್ರಪಂಚವನ್ನು ನೋಡುವ ದೃಷ್ಟಿಕೋನವನ್ನು ರೂಪಿಸುವಂತಿರಬೇಕು. ಹೀಗಾಗಿ ಶಿಕ್ಷಣವನ್ನು ಸಾಮಾಜೀಕರಣದ ಸಾಧನ, ಸಾಮಾಜಿಕ ಪರಿವರ್ತನೆಯ ಸಾಧನ ಎಂದು ಕರೆಯುತ್ತೇವೆ.

ಸಮಾಜದಲ್ಲಿ ಸಮಸ್ಯೆಗಳಿವೆ, ಏರಿಳಿತಗಳಿವೆ, ಅಸಮಾನತೆಗಳಿವೆ ಎಂದು ತಿಳಿದಾಗ ಸಮಾಜವನ್ನು ಬದಲಾಯಿಸಿಕೊಂಡು ಮಾನವೀಯತೆ ಕಡೆಗೆ ಹೋಗಬೇಕೆಂದು ಮಗು ಯೋಚಿಸುತ್ತದೆ. ನಾವು ಏನು ಮಾಡುತ್ತಿದ್ದೇವೆ, ಆ ಥರದ ಶಿಕ್ಷಣಗಳನ್ನು ನೀಡುವ ಬದಲು ನಮ್ಮ ರಾಜಕೀಯ ಅಜೆಂಡಾಗಳನ್ನು ಹೇರುವ ಕೆಲಸ ಮಾಡುತ್ತಿದ್ದೇವೆ. ನಾವು ಹೀಗೆ, ನಾವು ಇರಬೇಕಾದದ್ದು ಹೀಗಷ್ಟೇ ಎಂದು ಹೇಳಿಕೊಡುವುದಾದರೆ ಅದು ಶಿಕ್ಷಣ ಎನಿಸುವುದಿಲ್ಲ. ಅದನ್ನು concentration camp ಎಂದು ಕರೆಯುತ್ತೇವೆ. ಒಂದು ಬಗೆಯ ಅಜೆಂಡಾವನ್ನು, ಒಂದು ಬಗೆಯ ಯೋಚನೆಯನ್ನು ಮಕ್ಕಳ ಮೇಲೆ ಹೇರುವುದು ಶಿಕ್ಷಣ ಅಲ್ಲ. ಅದನ್ನು ಮೊದಲು ಇವರು ಅರ್ಥಮಾಡಿಕೊಳ್ಳಬೇಕು. ನಾವು ವಿಷಯವನ್ನು ಹೇಳುವಾಗ ವಸ್ತುನಿಷ್ಠವಾಗಿರಬೇಕು. ಆಗ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ, ತಮ್ಮ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ವಿವೇಚನೆ ಮಾಡುತ್ತಾರೆ. ಆ ಜ್ಞಾನದಿಂದ ಹೊಸ ಜ್ಞಾನವನ್ನು ಕಟ್ಟಿಕೊಳ್ಳುತ್ತಾರೆ. ನಾವು ವಿಜ್ಞಾನವನ್ನು ಕಲಿಯುವುದು ಹೀಗೆ ಅಲ್ಲವೇ? ಒಂದಿಷ್ಟು ಪ್ರಯೋಗಗಳನ್ನು ಮಾಡುತ್ತೇವೆ, ಪ್ರಯೋಗಗಳಿಂದ ಒಂದು ಅಂಶಗಳು ಕಂಡುಬರುತ್ತದೆ. ಇದನ್ನು ಮಾಡುವುದರಿಂದ ಇದಾಗುತ್ತದೆ ಎಂದು ತೀರ್ಮಾನಕ್ಕೆ ಮಗು ಬರುತ್ತದೆ. ಇದು ನಿಜವಾದಂತಹ ಕಲಿಕೆ.

ಹೊಸದಾಗಿ ಪಠ್ಯ ರೂಪಿಸಲು ಹೊರಟವರು ಏನು ಮಾಡುತ್ತಿದ್ದಾರೆಂದರೆ, ನಾವು ಹೇಳುವುದೇ ಇತಿಹಾಸ, ನಾನು ಬರೆದದ್ದೇ ಇತಿಹಾಸ ಎನ್ನುತ್ತಾರೆ. ಇದು ಶಿಕ್ಷಣವಲ್ಲ, ಸರ್ವಾಧಿಕಾರವಾಗುತ್ತದೆ. ಇಡೀ ಶಿಕ್ಷಣ ಪ್ರಜಾಪ್ರಭುತ್ವೀಕರಣವಾಗಬೇಕು. ನಾವು ಇದನ್ನು ಮಾಡದೆ ಪಕ್ಷ ರಾಜಕೀಯ ಅಜೆಂಡಾಗಳಿಗೋಸ್ಕರ, ಪಕ್ಷ ರಾಜಕೀಯಕ್ಕೊಸ್ಕರ, ಕೊಳಕು ರಾಜಕೀಯಕೋಸ್ಕರ ಪಠ್ಯವನ್ನು ತಿರುಚಲಾಗುತ್ತಿದೆ. ನಾವು ಮಾಡಬೇಕಾಗಿರುವುದು ಇಂತಹ ರಾಜಕಾರಣವನ್ನಲ್ಲ, ಸಂವಿಧಾನಾತ್ಮಕ ರಾಜಕಾರಣ ಮಾಡಬೇಕು. ದೇಶ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಒಕ್ಕೂಟ ರಾಷ್ಟ್ರವನ್ನಾಗಿ ಮಾಡಬೇಕೆಂದು ನಾವು ಸಂವಿಧಾನದಲ್ಲಿ ಬರೆದುಕೊಂಡಿದ್ದೇವೆ. ಈ ಎಲ್ಲ ಮೌಲ್ಯಗಳು ನಮ್ಮ ಶಿಕ್ಷಣದಲ್ಲಿ ಅಭಿವ್ಯಕ್ತಿ ಆಗಬೇಕಲ್ಲವೇ? ಏಕಮುಖವನ್ನು ತೋರಿಸುವುದು ಸರಿಯಲ್ಲ. ಈ ಶಿಕ್ಷಣವನ್ನು ರಾಜಕೀಯಕರಣಗೊಳಿಸುವುದು, ಕೇಸರೀಕರಣಗೊಳಿಸುವುದು ಮಾಡಬಾರದು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಿಕ್ಷಣವನ್ನು ಉಪಯೋಗಿಸಿಕೊಳ್ಳಬಾರದು. ಇಂಥವಕ್ಕೆ ಹೆಚ್ಚು ಅವಕಾಶಗಳನ್ನು ಕೊಡಲೂಬಾರದು.

ಪ್ರ: ಸಾಂವಿಧಾನಿಕ ಚೌಕಟ್ಟನ್ನು ಶಿಕ್ಷಣ ವ್ಯವಸ್ಥೆಯಲ್ಲಿ ತರುವುದಕ್ಕಾಗಿ ನಾವು ಏನೆಲ್ಲ ಕ್ರಮಗಳನ್ನು ಈ ಹಿಂದೆ ಕೈಗೊಂಡಿದ್ದೇವೆ?

ಡಾ. ವಿ.ಪಿ.ನಿರಂಜನಾರಾಧ್ಯ: 1966ರಲ್ಲಿ ಕೊಠಾರಿ ಆಯೋಗವು ಎರಡು ವರ್ಷಗಳ ದೀರ್ಘ ಕಾಲ ಅಧ್ಯಯನ ನಡೆಸಿ ನಾಲ್ಕು ಸಂಪುಟಗಳಲ್ಲಿ ವರದಿಯನ್ನು ಸಲ್ಲಿಸಿತು. ಕೊಠಾರಿಯವರು ಮಂಡಿಸಿದ ವರದಿ ಸಮಗ್ರವಾಗಿತ್ತು.
ಈ ಆಯೋಗದಲ್ಲಿ ಕೇವಲ ಭಾರತೀಯರು ಮಾತ್ರ ಇರಲಿಲ್ಲ. ಬೇರೆ ಬೇರೆ ದೇಶಗಳ ತಜ್ಞರು ಇದರಲ್ಲಿದ್ದರು. “ಯಾವುದೇ ದೇಶವನ್ನು ರೂಪಿಸುವಂತಹ ಶಕ್ತಿ ಆ ದೇಶದ ತರಗತಿಗಳ ಕೋಣೆಯಲ್ಲಿರುತ್ತದೆ” ಎಂದು ಈ ತಜ್ಞರು ಅಭಿಪ್ರಾಯಪಟ್ಟರು. ಇವತ್ತಿನ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಚಿಂತಿಸುವುದು, ವೈಜ್ಞಾನಿಕವಾಗಿ ಆಗುತ್ತಿರುವ ಬೆಳವಣಿಗೆಗಳನ್ನು ಕಲಿಸುವುದು, ವೈಚಾರಿಕ ಪ್ರಜ್ಞೆಯನ್ನು ಬೆಳೆಸುವುದು ಮುಖ್ಯ ಆಗಬೇಕು ಎಂದು ಕೊಠಾರಿ ಆಯೋಗದ ತಜ್ಞರು ಒಮ್ಮತದ ನಿರ್ಣಯಕ್ಕೆ ಬರುತ್ತಾರೆ. ಆ ನಂತರದಲ್ಲಿ ನಾವು ಶಿಕ್ಷಣ ನೀತಿಗಳನ್ನು ರೂಪಿಸಲು ಆರಂಭಿಸಿದೆವು. ಭಾರತಕ್ಕೆ ಸ್ವಾತಂತ್ರ್ಯ ಬಂದು ಸುಮಾರು 18 ವರ್ಷಗಳವರೆಗೆ ಯಾವುದೇ ಶಿಕ್ಷಣ ನೀತಿ ಇರಲಿಲ್ಲ.

ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ನೀಡಬೇಕೆಂದು ಸಂವಿಧಾನದಲ್ಲಿ ಕಾಲಮಿತಿ ಮಾಡಿದ್ದರೂ ಅದಕ್ಕೊಂದು ನೀತಿ ಇರಲಿಲ್ಲ. 1968ರಲ್ಲಿ ಮೊದಲ ಶಿಕ್ಷಣ ನೀತಿ ಬಂತು. 1986ರಲ್ಲಿ ಅದನ್ನು ಕಾಲಕ್ಕೆ ಅನುಗುಣವಾಗಿ ಪರಿವರ್ತನೆ ಮಾಡಿಕೊಳ್ಳಲಾಯಿತು. 1992ರಲ್ಲಿ ಅದನ್ನು ನಾವು ಪರಿಷ್ಕೃತ ಮಾಡಿದ್ದೇವೆ. ಈ ಎಲ್ಲ ನೀತಿಗಳು ’ಭಾರತವನ್ನು ಸಂವಿಧಾನಾತ್ಮಕವಾಗಿ ಹೇಗೆ ಕಟ್ಟುತ್ತೇವೆ’ ಎಂಬ ಗುರಿಯನ್ನು ಹೊಂದಿವೆ. ನಾವೆಲ್ಲ ಅನುಭವಿಸಬೇಕಾದ ಧರ್ಮಗ್ರಂಥ ಸಂವಿಧಾನ. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಪಾಲಿಸಬೇಕಾದ ಧರ್ಮಗ್ರಂಥ ಸಂವಿಧಾನ. ನಾವು ಏನೇ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಂಡರೂ ಸಂವಿಧಾನದ ಚೌಕಟ್ಟಿನಲ್ಲೇ ಕಟ್ಟಬೇಕು. ಮಕ್ಕಳು ಯಾವ ರೀತಿ ಕಲಿಯಬೇಕು ಎಂಬುದನ್ನು ನ್ಯಾಷನಲ್ ಕರಿಕುಲಮ್ ಪ್ರೇಮ್‌ವರ್ಕ್ ಮೂಲಕ ನಿರ್ಧರಿಸಿಕೊಂಡಿದ್ದೇವೆ. ಶಿಕ್ಷಣ ನೀತಿಗಳು ಹಾಗೂ ಕರಿಕುಲಮ್ ಫ್ರೇಮ್‌ವರ್ಕ್ ಒಂದಕ್ಕೊಂದು ಪೂರಕವಾಗಿವೆ. ಹೀಗಿರುವಾಗ ನಾವು ಸಂಪ್ರದಾಯಕ್ಕೆ ಹೋಗುತ್ತೇವೆ, ಪ್ರಾಚೀನ ಭಾರತಕ್ಕೆ ಹೋಗುತ್ತೇವೆ, ಇತಿಹಾಸವನ್ನು ಮರುಸೃಷ್ಟಿ ಮಾಡುತ್ತೇವೆ ಎಂದರೆ ಏನರ್ಥ? ನೀವು ಸಂವಿಧಾನವನ್ನು ಸಂಪೂರ್ಣ ಬುಡಮೇಲು ಮಾಡಲು ಹೊರಟಿದ್ದೀರಿ. ಪಠ್ಯಕ್ರಮ ಚೌಕಟ್ಟನ್ನು ನಿಮ್ಮ ಮೂಗಿನ ನೇರಕ್ಕೆ ಬದಲಾಯಿಸುತ್ತಿದ್ದೀರಿ.

ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನು ಅಸಂವಿಧಾನಿಕವಾಗಿ ರಚಿಸಿದೆ. ನಿಮ್ಮದೊಂದು ಅಭಿಪ್ರಾಯ, ನಮ್ಮದೊಂದು ಅಭಿಪ್ರಾಯವಿದ್ದಾಗ ಪ್ರಜಾಪ್ರಭುತ್ವದಲ್ಲಿ ಹೇಗೆ ಬಗೆಹರಿಸಿಕೊಳ್ಳಲಾಗುತ್ತದೆ? ಇಬ್ಬರು ಮುಖಾಮುಖಿಯಾಗಿ ಕುಳಿತು ಇಬ್ಬರ ಅಭಿಪ್ರಾಯವನ್ನು ಕೇಳಿ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಸ್ತುನಿಷ್ಠವಾಗಿ, ಸಾಕ್ಷ್ಯಾಧಾರಗಳ ಆಧಾರದಲ್ಲಿ ನಿರ್ಧರಿಸಬೇಕಲ್ಲವೇ? ಬದಲಾವಣೆ ಮಾಡುವುದಾದರೆ ಚರ್ಚೆ ನಡೆಸಿ ಒಮ್ಮತಕ್ಕೆ ಬರಬೇಕಲ್ಲವೇ? ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಅನೇಕ ತಜ್ಞರು ಸೇರಿ, ಸಾಕಷ್ಟು ಚರ್ಚೆಗಳನ್ನು ಮಾಡಿ ಒಂದು ಪಠ್ಯ ರೂಪಿಸಿದ್ದಾರೆ. ನೀವು ಪುಸ್ತಕವನ್ನು ಬದಲಿಸುವುದಾದರೆ ಬರಗೂರು ರಾಮಚಂದ್ರಪ್ಪ ಹಾಗೂ ಇತರ ತಜ್ಞರೊಂದಿಗೆ ಒಟ್ಟಿಗೆ ಕೂರಬೇಕಲ್ಲವೇ?

PC : Prajavani

ಬರಗೂರು ರಾಮಚಂದ್ರಪ್ಪನವರೇ, ನೀವು ಯಾವ ಉದ್ದೇಶವನ್ನಿಟ್ಟುಕೊಂಡು ಹೊಸಧರ್ಮಗಳ ಉದಯವನ್ನು ಪಾಠವನ್ನು ಸೇರಿಸಿದ್ದೀರಿ? ಈ ಪಠ್ಯಕ್ಕೆ ಯಾವ ಸಾಕ್ಷ್ಯಾಧಾರಗಳಿವೆ ಎಂದು ಕೇಳಬೇಕಲ್ಲವೇ? ಏಕಾಏಕಿ ಇದು ಬರೆದದ್ದು ಸರಿ ಇಲ್ಲ ಎಂದರೆ ನಿಮ್ಮದು ಸರ್ವಾಧಿಕಾರ. ನೀನು ಹೇಳಿದ್ದು ಸರಿ, ಬೇರೆಯವರು ಹೇಳಿದ್ದು ತಪ್ಪಾ? ಸರಿ ತಪ್ಪುಗಳನ್ನು ಹೇಗೆ ನಿರ್ಧಾರ ಮಾಡುತ್ತೀರಿ? ಸರಿ ತಪ್ಪು ವೈಯಕ್ತಿಕವಾಗಿರಬಾರದು, ವಸ್ತುನಿಷ್ಠವಾಗಿರಬೇಕು. ನಾನು ಹೇಳಿದ್ದು ನೀನು ಕೇಳು ಎಂದರೆ ಅದು ಶಿಕ್ಷಣ ಆಗುವುದಿಲ್ಲ, ಅದು subjugation (ಅಧೀನಕ್ಕೊಳಪಡಿಸುವುದು) ಆಗುತ್ತದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಮೂಲ ಸಮಸ್ಯೆಗಳಿವೆ. ನಾವು ಮಕ್ಕಳನ್ನು ಆಲೋಚನೆಗಳಿಗೆ ಒಳಪಡಿಸುತ್ತಲೇ ಇಲ್ಲ. ಆಲೋಚನೆ ಮಾಡಲು ಇರುವ ಅಲ್ಪಸ್ವಲ್ಪ ಅವಕಾಶಗಳನ್ನು ನಾವು ಕಿತ್ತುಕೊಂಡುಬಿಡುವುದೇ ಆದರೆ? ಯಾರು ಮೆಕಾಲೆ ಶಿಕ್ಷಣವನ್ನು ವಿರೋಧ ಮಾಡುತ್ತಿದ್ದರೋ, ಈಗ ಅವರು ಕೂಡ ’ನಾನು ಆಳುತ್ತೇನೆ, ನೀನು ಆಳಿಸಿಕೊ’ ಎಂದು ಶಿಕ್ಷಣ ನೀತಿ ರೂಪಿಸುತ್ತೇನೆಂದರೆ ಇವರನ್ನು ಮೆಕಾಲೆಗಳ ಪಳೆಯುಳಿಕೆ ಎನ್ನಬೇಕಾ? ಹೊಸ ಭಾರತವನ್ನು ಕಟ್ಟುವವರು ಎನ್ನಬೇಕಾ?

ಪ್ರ: ಜಗತ್ತಿನ ವಿದ್ಯಮಾನಗಳನ್ನು ಗಮನಿಸಿ ಹೇಳುವುದಾದರೆ ಇಂದಿನ ಪಠ್ಯ ಕ್ರಮ ಹೇಗಿರಬೇಕು? ಯಾವ ರೀತಿಯ ಬದಲಾವಣೆಗಳು ಅಗತ್ಯ ಎಂದೆನಿಸುತ್ತದೆ ನಿಮಗೆ?

ಡಾ. ವಿ.ಪಿ.ನಿರಂಜನಾರಾಧ್ಯ: ಶಿಕ್ಷಣ ವ್ಯವಸ್ಥೆಗೆ ಒಂದು ದಿಕ್ಕಿರುತ್ತದೆ. ನಾವು ಅದನ್ನು ಅನೇಕ ಮೂಲಗಳಿಂದ ಪಡೆದುಕೊಂಡಿರುತ್ತೇವೆ. ಅನೇಕ ಮೂಲಗಳಿಂದ ಪಡೆದುಕೊಂಡರೂ ಅದನ್ನು ಯಥಾವತ್ತಾಗಿ ಪಡೆದುಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ. ಅನೇಕ ಮೂಲಗಳನ್ನು ಪರಿಶೀಲಿಸಿ, ಬದಲಾವಣೆಗಳನ್ನು ಗಮನಿಸಿ ನಮ್ಮ ದೇಶಕ್ಕೆ ಅಳವಡಿಸಿಕೊಳ್ಳಬೇಕು- ಅದು ನಿಜವಾದ ಶಿಕ್ಷಣ. ಶಿಕ್ಷಣ ಎಂದರೆ ನಾನು ಯಾವ ಜ್ಞಾನವನ್ನೂ ನಿರಾಕರಿಸುವುದಿಲ್ಲ ಎಂದರ್ಥ. ಯುಕೆ, ಯುಎಸ್‌ಎ, ದಕ್ಷಿಣ ಆಫ್ರಿಕಾ ಹೀಗೆ ಬೇರೆ ಬೇರೆ ದೇಶಗಳಲ್ಲಿ ಸಮಾನತೆಯ ನೆಲೆಯಲ್ಲಿ ಶಿಕ್ಷಣವನ್ನು ಕಟ್ಟಿಕೊಳ್ಳಲಾಗಿದೆ. ಈ ಸಮಾನತೆ ಕೂಡ ನಮ್ಮ ಸಂವಿಧಾನದ ಆಶಯ. ಸಮಾನತೆಯ ಆಶಯದಲ್ಲಿ ಶಿಕ್ಷಣವನ್ನು ಕಟ್ಟಿಕೊಂಡಿರುವ ದೇಶಗಳು ಪ್ರಗತಿಯಲ್ಲಿ ಮುನ್ನುಗ್ಗುತ್ತಿವೆ.

ಭಾರತದಲ್ಲಿ ಈಗಲೂ ಅಸಮಾನತೆ, ತಾರತಮ್ಯ, ಶ್ರೇಣಿಕೃತ ವ್ಯವಸ್ಥೆ ಕಾಡುತ್ತಿದೆ. ಕೊಳಕು ಜಾತಿವ್ಯವಸ್ಥೆಯಿಂದ ಹೊರಗಡೆ ಬರಲು ಸಾಧ್ಯವಾಗಿಲ್ಲ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರಗಳು ನಿರಂತರವಾಗಿವೆ. ಈ ಥರದ ಸಮಾಜವನ್ನು ಬದಲಾಯಿಸಲು ಸಂವಿಧಾನ ಕಟ್ಟಿಕೊಂಡಿದ್ದೇವೆ. ಶಿಕ್ಷಣ ವ್ಯವಸ್ಥೆಯೇ ಸಂವಿಧಾನದ ತೊಟ್ಟಿಲು. ನಿಜವಾದ ಸಂವಿಧಾನ ಆಶಯಗಳನ್ನು ಈಡೇರಿಸಬೇಕಾದರೆ ನೀವು ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು. ನಾವು ಸಮಾನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಂಡಿಲ್ಲ. ಎಂಟು ಥರದ ಶಿಕ್ಷಣ ವ್ಯವಸ್ಥೆಯನ್ನು ನಾವು ಕಟ್ಟಿಕೊಂಡಿದ್ದೇವೆ. ಅಂತಾರಾಷ್ಟ್ರೀಯ ಶಾಲೆಗಳು, ಐಸಿಎಸ್‌ಇ, ಸಿಬಿಎಸ್‌ಇ, ಇಂಗ್ಲಿಷ್ ಮಾಧ್ಯಮ ಹೀಗೆ ಸಾಗುತ್ತದೆ ಪಟ್ಟಿ. ಕಟ್ಟಕಡೆಯಲ್ಲಿರುವುದು ಸರ್ಕಾರಿ ಶಾಲೆ. ಸಮಾನತೆಯನ್ನು ಬೋಧಿಸುವ ಸಂವಿಧಾನವನ್ನು ನಾವು ನಿರಂತರ ಉಲ್ಲಂಘಿಸುತ್ತಿದ್ದೇವೆ.

ಪ್ರ: ದೆಹಲಿ ವಿಶ್ವವಿದ್ಯಾಲಯದಲ್ಲಿ ಹಿಂದೊಮ್ಮೆ ಎ ಕೆ ರಾಮಾನುಜನ್ ಅವರ ’300 ರಾಮಾಯಣಗಳು’ ಪ್ರಬಂಧ ತೆಗೆಯಬೇಕೆಂಬ ವಿವಾದ ಎದ್ದಿತು. ಇದೀಗ ಮಹಾಶ್ವೇತಾದೇವಿಯವರ ಪಾಠ ತೆಗೆಯುವಂತೆ ಕೂಡ ಕೂಗೆದ್ದಿದೆ. ಈ ವಿವಾದಗಳನ್ನು ಸೃಷ್ಟಿ ಮಾಡುತ್ತಿರುವ ವಾತಾವರಣವನ್ನು ಹೇಗೆ ಎದುರಿಸಬೇಕು ಅನ್ನಿಸತ್ತೆ ಸರ್?

ಡಾ. ವಿ.ಪಿ.ನಿರಂಜನಾರಾಧ್ಯ: ಪ್ರಜಾಪ್ರಭುತ್ವವನ್ನು ಗೌರವಿಸದೇ ಇರುವವರು ಮಾಡುವ ಕೆಲಸ ಇದು. ನಮ್ಮ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಒಪ್ಪೋಣ, ಒಪ್ಪದಿರೋಣ ಎಂಬುದು ಪ್ರಜಾಪ್ರಭುತ್ವದ ಮೂಲ ಗುಣ. ಒಂದು ಪಠ್ಯವನ್ನು ತೆಗೆದು ಹಾಕಬೇಕು ಎಂಬುದೇ ಫ್ಯಾಸಿಸ್ಟ್ ಧೋರಣೆಯನ್ನು ತೋರುತ್ತದೆ. ನಿಮ್ಮ ಬಗ್ಗೆ ಅಸಹನೆ, ಅಸಹಿಷ್ಣುತೆ ಇದೆ ಎಂಬುದರ ಸೂಚನೆ. ಇದು ಪ್ರಜಾಪ್ರಭುತ್ವದ ಬಹುದೊಡ್ಡ ಅಪಾಯ. ನಮ್ಮ ದೇಶವನ್ನು ಫ್ಯಾಸಿಸ್ಟ್ ಲೋಕಕ್ಕೆ ಕರೆದೊಯ್ಯುವ ಸೂಚನೆ. ಯಾವುದೇ ವಿಚಾರವನ್ನು ತೆಗೆಯುತ್ತೇನೆ ಎಂಬುದಕ್ಕೆ ಒಂದು ವೈಚಾರಿಕ ಕಾರಣ ಬೇಕಲ್ಲವೇ? ಒಂದು ಕಾಯಿಲೆಯನ್ನು ಪತ್ತೆ ಹಚ್ಚುವ ಕೆಲಸಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ’ಡಯಾಗ್ನೋಸಿಸ್’ ಎನ್ನುತ್ತೇವೆ. ಇದು ಶಿಕ್ಷಣದ ಮೂಲಗುಣವೂ ಹೌದು.


ಇದನ್ನೂ ಓದಿ: “12ನೇ ಶತಮಾನದ ಕಲ್ಯಾಣವನ್ನು ಕತೆಗಳಲ್ಲಾದರೂ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿದ್ದೇನೆ”; ಕತೆಗಾರ ಅಮರೇಶ್ ನುಗಡೋಣಿ ಸಂದರ್ಶನ

LEAVE A REPLY

Please enter your comment!
Please enter your name here