ಮೈಕ್ರೋಸಾಫ್ಟ್ ಭಾರತದಲ್ಲಿ ಏನೆಲ್ಲಾ ಮಾಡುತ್ತಿದೆ, ಏನು ಮಾಡಲು ಹೊರಟಿದೆ ಎಂಬುದನ್ನು ಹೇಳುವುದಕ್ಕೂ ಮೊದಲು, ಇಲ್ಲಿಯವರೆಗೆ ಏನು ಮಾಡಿದೆ ಎಂಬುದನ್ನು ಹೇಳಿಬಿಡುತ್ತೇನೆ. ಸಾಫ್ಟ್‌ವೇರ್‌ನಿಂದ ಅಕ್ಕಿ ಬೆಳೆಯಲು ಆಗುತ್ತಾ ಎಂದವರ ಬಾಯಿ ಮುಚ್ಚಿಸುತ್ತೇವೆಂದು ಹೊರಟಂತೆ ಮೈಕ್ರೋಸಾಫ್ಟ್ ಸಂಸ್ಥೆ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ವರ್ಷಗಳಾಗಿವೆ. ಅಮೆರಿಕದ ಅತಿ ದೊಡ್ಡ ರಾಜ್ಯಗಳೆನಿಸಿಕೊಂಡ ಕನಾಸ್, ಐಯೋವಾ ಮತ್ತು ನೆಬ್ರಾಸ್ಕಾಗಳಲ್ಲಿ 2,42,000 ಕೃಷಿ ಭೂಮಿಯನ್ನು ತನ್ನದಾಗಿಸಿಕೊಂಡಿದೆ. ಇಲ್ಲಿ ಹೊಸ ತಂತ್ರಜ್ಞಾನ ಬಳಸಿ ಕೃಷಿ ಮಾಡಲು ಹೊರಟಿದೆ. ತನ್ನದೇ ಸೋದರ ಸಂಸ್ಥೆಯಾದ ಗೇಟ್ಸ್ ಫೌಂಡೇಷನ್ ಮೂಲಕ ಎಜಿಒನ್ ಹೆಸರಿನ ಒಂದು ಕಾರ್ಯಯೋಜನೆಗೆ ಚಾಲನೆ ನೀಡಿದೆ. ಇದು ಬೆಳೆ ಉತ್ಪಾದನೆಯ ಪ್ರಮಾಣ ಹೆಚ್ಚಿಸಲು, ಸಣ್ಣ ಹಿಡುವಳಿದಾರರ ಕೃಷಿ ಚಟುವಟಿಕೆಗೆ ನೆರವಾಗಲು, ಹವಾಮಾನದಲ್ಲಾಗುವ ಬದಲಾವಣೆಗೆ ಅನುಗುಣವಾಗಿ ಕೃಷಿಚಟುವಟಿಕೆ ನಡೆಸುವುದಕ್ಕೆ ಅಗತ್ಯ ನೆರವು ನೀಡುವ ಉದ್ದೇಶದೊಂದಿಗೆ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆಯಂತೆ.
ಈ ಎಜಿಒನ್ (AgOne) ಅನ್ನು ಜಗತ್ತಿನಲ್ಲಿ ಅತಿ ದೊಡ್ಡದಾದ ಅಸಂಘಟಿತವಾಗಿ ಉಳಿದಿರುವ ಕೃಷಿ ವಲಯಗಳಲ್ಲಿ ಪ್ರಯೋಗಿಸುವ ಉದ್ದೇಶ ಮೈಕ್ರೊಸಾಫ್ಟ್ ಸಂಸ್ಥೆಯದ್ದು. ಅವುಗಳಲ್ಲಿ ಬಹಳ ಮುಖ್ಯವಾಗಿ ಮೈಕ್ರೋಸಾಫ್ಟ್ ಗಮನದಲ್ಲಿರುವುದು- ಒಂದು, ಸಬ್ ಸಹರನ್ ಆಫ್ರಿಕಾ, ಇನ್ನೊಂದು ದಕ್ಷಿಣ, ಏಷ್ಯಾ. ಈ ಭಾಗಗಳಲ್ಲಿ ಅಧ್ಯಯನ ನಡೆಸಿರುವ ಫೌಂಡೇಷನ್, ‘ ಇಲ್ಲಿ ಇಳುವರಿ, ಜಗತ್ತಿನ ಇತರ ಭಾಗದ ರೈತರು ಪಡೆಯುತ್ತಿರುವ ಇಳುವರಿಗಿಂತ ಕಡಿಮೆ. ಹವಮಾನದಲ್ಲಾಗುತ್ತಿರುವ ಬದಲಾವಣೆಯಿಂದ ಇಳುವರಿ ಇನ್ನಷ್ಟು ಕುಸಿಯುತ್ತದೆ ಎಂದು ಹೇಳಿದೆ. ಹಾಗಾಗಿ ಇಳುವರಿ ಹೆಚ್ಚಿಸಲು ಎಜಿಒನ್ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ತನ್ನ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಕೃಷಿ ಸ್ಥಿತಿಯನ್ನು ಸುಧಾರಿಸಬಹುದು ಎಂದು ಪ್ರತಿಪಾದಿಸಿದೆ.
ಹಾಗಾಗಿ ಈ ಭಾಗದ ದೇಶಗಳಲ್ಲಿ ಅಗತ್ಯವಿರುವ ಮಾಹಿತಿ ಸಂಗ್ರಹಿಸಲು ಹೊರಟಿದೆ. ಅಮೆರಿಕ ಮತ್ತು ಕೆನಡಾದಲ್ಲಿ ಇದೇ ರೀತಿಯ ಯೋಜನೆಯನ್ನು ಕೈಗೆತ್ತಿಕೊಂಡಿದ್ದ ಮೈಕ್ರೋಸಾಫ್ಟ್, ಅಲ್ಲಿನ ಕೃಷಿ ವ್ಯವಸ್ಥೆಯನ್ನು ಡಿಜಿಟಲ್ ರೂಪಕ್ಕೆ ರೂಪಾಂತರಿಸಿತು. ಇದರಿಂದ ನಿಜಕ್ಕೂ ಪವಾಡವಾಯಿತೆ? ಕೃಷಿ ವಲಯ ಉತ್ತಮವಾಯಿತೆ? ರೈತನ ಸ್ಥಿತಿ ಸುಧಾರಿಸಿತೆ? ಇಲ್ಲ! ಬದಲಿಗೆ ಹೊಸ ಸಮಸ್ಯೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಬಹಳ ಮುಖ್ಯವಾದದ್ದು ಟ್ರ್ಯಾಕ್ಟರ್‌ಗಳದ್ದು. ಅಮೆರಿಕ ಮತ್ತು ಕೆನಡಾದ ಬಹುತೇಕ ರೈತರು ಬಳಸುತ್ತಿರುವುದು ಜಾನ್ ಡೀರ್ ಕಂಪನಿಯ ಟ್ರ್ಯಾಕ್ಟರ್‌ಗಳನ್ನು. ಇತರೆ ಕೃಷಿ ಉಪಕರಣಗಳನ್ನು ಇದೇ ಕಂಪನಿಯಿಂದ ಖರೀದಿಸಲಾಗುತ್ತದೆ. ಈ ಟ್ರ್ಯಾಕ್ಟರ್‌ಗಳಿಗೆ ಅಗತ್ಯವಿರುವ ಸಾಫ್ಟ್‌ವೇರ್ ಒದಗಿಸುವುದು ಮೈಕ್ರೋಸಾಫ್ಟ್ ಸಂಸ್ಥೆ. ಟ್ರ್ಯಾಕ್ಟರ್ ಅಥವಾ ಯಾವುದೇ ಉಪಕರಣ ಕೆಟ್ಟರೆ ಅದನ್ನು ರೈತರು ತಮಗೆ ಬೇಕಾದ್ದಲ್ಲಿ ರಿಪೇರಿ ಮಾಡಿಸಿಕೊಳ್ಳುವ ಅವಕಾಶವಿಲ್ಲ. ಕಂಪನಿಯವರಲ್ಲಿಯೇ ದುರಸ್ತಿಗೆ ಒಯ್ಯಬೇಕು ಮತ್ತು ಅದೂ ದುಬಾರಿ ಸೇವೆಯಾಗಿರುತ್ತದೆ.
ದುರಂತವೆಂದರೆ ಅಮೆರಿಕದಲ್ಲಿರುವ ಡಿಜಿಟಲ್ ರೈಟ್ ಟು ರಿಪೇರ್ ಆಕ್ಟ್ ಪ್ರಕಾರ ರೈತರು ಸಾಫ್ಟ್‌ವೇರ್ ಸಮಸ್ಯೆ ಏನು ಎಂದು ತಾವೇ ಖುದ್ದು ಕಂಡುಕೊಂಡು ಬಗೆಹರಿಸಿಕೊಳ್ಳುವಂತಿಲ್ಲ. ಉಲ್ಲಂಘಿಸಿದರೆ ಅಪರಾಧ. ರೈತರ ಕೈ ಕಟ್ಟಿಹಾಕುವ ಮೈಕ್ರೋಸಾಫ್ಟ್‌ನ ಈ ತಂತ್ರದಿಂದ ರೋಸಿರುವ ಅಮೆರಿಕದ ರೈತರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.
ಇದೊಂದು ಸಮಸ್ಯೆಯಾದರೆ, ಇನ್ನೊಂದು ಮತ್ತೊಂದು ವಿಷ ವರ್ತುಲ. ಅರವತ್ತರ ದಶಕದಲ್ಲಿ ಭಾರತದಲ್ಲಿ ಹಸಿರುಕ್ರಾಂತಿಯಾಗಿತ್ತು, ನೆನಪಿರಬಹುದು. ಇದೇ ಮಾದರಿಯಲ್ಲಿ ಕ್ರಾಂತಿ ಉಂಟು ಮಾಡುವ ಉತ್ಸಾಹದಲ್ಲಿರುವ ಗೇಟ್ಸ್ ಫೌಂಡೇಷನ್ ಆಫ್ರಿಕಾದಲ್ಲಿ ರಾಕ್‌ಫೆಲ್ಲರ್ ಗೋಲ್ಡನ್ ಬತ್ತ ಬೆಳೆಯುವುದಕ್ಕೆ ಪ್ರೋತ್ಸಾಹಿಸುತ್ತಿದೆ. ಆದರೆ ಹಲವು ಸಂಶೋಧನೆಗಳು ಅಮೆರಿಕದ ಈ ಬತ್ತದ ತಳಿ ಉತ್ತರ ಅಮೆರಿಕದ ಹೊರಗೆ ಇನ್ನಾವುದೇ ಪರಿಸರದಲ್ಲಿ ಉತ್ತಮ ಇಳುವರಿ ಕೊಡುವುದಿಲ್ಲ ಎಂದು ಹೇಳಿವೆ. ಅಷ್ಟೇ ಅಲ್ಲ, ಯಾವ ಬಿಟಿ ಬದನೆಯನ್ನು ಭಾರತದಿಂದ ಕಿತ್ತು ಹೊರಗೆ ಹಾಕಿದೆವು, ಯಾವುದನ್ನು ವಿಷವೆಂದು ರೈತರು ಕರೆದರೋ, ಅದೇ ತಳಿಯನ್ನು ಈ ಮೈಕ್ರೋಸಾಫ್ಟ್ ಮತ್ತು ಅದರ ಅಂಗ ಸಂಸ್ಥೆ ಗೇಟ್ಸ್ ಫೌಂಡೇಷನ್ ಆಫ್ರಿಕಾದಲ್ಲಿ ಬೆಳೆಸಲು ಹೊರಟಿದೆ!
ಇವುಗಳ ಜೊತೆಗೆ ಆಫ್ರಿಕಾದಲ್ಲಿ ತನ್ನ ಉದ್ಯಮ ಚಟುವಟಿಕೆಗಳಿಗೆ ಪಾಲುದಾರರನ್ನಾಗಿ ಮಾಡಿಕೊಂಡಿರುವ ಕಾರ್ಗಿಲ್ ಎಂಬ ಸಂಸ್ಥೆಯು ಸಣ್ಣ ಹಿಡುವಳಿದಾರರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ, ಅವರ ಕೃಷಿಭೂಮಿಯನ್ನು ಕಿತ್ತುಕೊಳ್ಳುತ್ತಿರುವುದಾಗಿಯೂ ವರದಿಗಳಾಗಿವೆ.
ಇದನ್ನೂ ಓದಿ: ವಿವಾದಾತ್ಮಕ ಕೃಷಿ ಕಾಯ್ದೆಗಳ ಹಿಂದೆ ಮೈಕ್ರೋಸಾಫ್ಟ್, ಅಮೆಜಾನ್ ಕಂಪನಿಗಳ ಲಾಬಿ: ಕುಮಾರ್ ಎಸ್
ಹೀಗೆ ನಾಲ್ಕಾರು ದೇಶಗಳಲ್ಲಿ ರೈತರನ್ನು ಅಸಹಾಯಕ ಸ್ಥಿತಿಗೆ ತಳ್ಳಿರುವ ಮೈಕ್ರೋಸಾಫ್ಟ್ ಸಂಸ್ಥೆ ಭಾರತದಲ್ಲಿ ತಂತ್ರಜ್ಞಾನ ಬಳಸಿ ಭಾರತದಲ್ಲಿ ಕೃಷಿ ಕ್ರಾಂತಿಯನ್ನು ಮಾಡಿಬಿಡುವ ಭ್ರಮೆಯನ್ನುಬಿತ್ತುತ್ತಿದ್ದು, ಇದನ್ನು ಎಷ್ಟು ನಂಬಬೇಕು? ಹಾಗೇನಾದರೂ ಸಮಸ್ಯೆಯಾದರೆ, ರೈತರಿಗೆ ಅನ್ಯಾಯವಾದರೆ ಸರ್ಕಾರ ಮಧ್ಯಪ್ರವೇಶಿಸಿ, ಭಾರತದ ರೈತನ ಪರ ನಿಲ್ಲುತ್ತದೆಯೇ? ಇವುಗಳಿಗೆ ಉತ್ತರ ಕೊಡುವ ಗೋಜಿಗೆ ಭಾರತವೂ ಸರ್ಕಾರವೂ ಹೋಗಿಲ್ಲ. ಮೈಕ್ರೋಸಾಫ್ಟ್ ಸಂಸ್ಥೆಗೆ ಅದೊಂದು ಬದ್ಧತೆ ಎಂದು ಎನ್ನಿಸಿಲ್ಲ. ಆದರೆ ರೈತರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಕೆಲಸವಂತೂ ಅವ್ಯಾಹತವಾಗಿ ನಡೆಯುತ್ತಿದೆ.
ಮೈಕ್ರೋಸಾಫ್ಟ್‌ಗೆ ಕೆಂಪು ಹಾಸಿನ ಸ್ವಾಗತ!
ಒಂದು ದಶಕದಿಂದ ಭಾರತಕ್ಕೆ ಕ್ಲೌಡ್ ಸರ್ವಿಸ್ ಸೇರಿದಂತೆ ವಿವಿಧ ತಂತ್ರಜ್ಞಾನ ಸೇವೆಗಳನ್ನು ನೀಡುತ್ತಿರುವ ಮೈಕ್ರೋಸಾಫ್ಟ್ ಈಗ ಕೃಷಿ ಕ್ಷೇತ್ರದ ಭಾರಿ ದೊಡ್ಡ ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. 2018ರ ಫೆಬ್ರವರಿಯಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವ ಕೃಷಿ ಇಲಾಖೆಯ ವರದಿಯೊಂದರಲ್ಲಿ ಕೃಷಿ ವಲಯವನ್ನು ಡಿಜಿಟೈಸ್ ಮಾಡುವುದಕ್ಕೆ ಒತ್ತು ನೀಡಿತ್ತು. ಈ ವರದಿಯನ್ನು ಅದೇ ವರ್ಷ ಜೂನ್ ತಿಂಗಳಲ್ಲಿ ಆಧರಿಸಿ ನೀತಿ ಆಯೋಗವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ರಾಷ್ಟ್ರೀಯ ಕಾರ್ಯತಂತ್ರ ಕುರಿತು ಪತ್ರಿಕೆಯೊಂದನ್ನು ಮಂಡಿಸಿತ್ತು. ಇದರಲ್ಲಿ ಕೃಷಿಕರ ಮಾಹಿತಿ ಸಂಗ್ರಹಿಸುವುದು. ಬಹುಮುಖ್ಯವಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಮಣ್ಣಿನ ಫಲವತ್ತತೆ ಮಾಹಿತಿ ಮತ್ತು ಫಸಲ್ ಬಿಮಾಯೋಜನೆಯ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸುವುದು ಸೇರಿತ್ತು. ಇದೇ ವೇಳೆ ಅಗ್ರಿ ಸ್ಟ್ಯಾಕ್ ಕಲ್ಪನೆ ಮೊಳಕೆಯೊಡೆಯುವುದಕ್ಕೆ ಆರಂಭವಾಗಿತ್ತು.
2020 ಭಾರತ ಸರ್ಕಾರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆಯಲ್ಲಿ ತಿದ್ದುಪಡಿ ತಂದರು, ಸೆಕ್ಷನ್ 42, 5, 7 ಮತ್ತು 17-2ಎ ಮೂಲಕ ರೈತರು, ವ್ಯಾಪರಿಗಳು, ಸಾರಿಗೆ ಮತ್ತು ಗ್ರಾಹಕರ ಆನ್‌ಲೈನ್ ಜಾಲವನ್ನು ನಿರ್ಮಿಸುವುದಕ್ಕೆ ಅನುವು ಮಾಡಿಕೊಡುವ ಕಾನೂನನ್ನು ಜಾರಿಗೆ ತಂದಿತು.
ಈ ಕಾನೂನು ಬದಲಾವಣೆಗಳು ಮುಂದೆ ಜಾರಿಗೆ ತರಲು ಹೊರಟಿದ್ದ ತಂತ್ರಜ್ಞಾನ ಯೋಜನೆಗೆ ಹಾಕಲಾಗಿದ್ದ ಬುನಾದಿ. ಇದಾಗಿ ಕೆಲವೇ ತಿಂಗಳಲ್ಲಿ ಅಂದರೆ 2021ರ ಏಪ್ರಿಲ್ 13ರಂದು ಮೈಕ್ರೋಸಾಫ್ಟ್‌ನೊಂದಿಗೆ ಅಗ್ರಿಸ್ಟ್ಯಾಕ್ ಯೋಜನೆಗೆ ತಿಳಿವಳಿಕೆ ಒಪ್ಪಂದ ಭಾರತ ಸರ್ಕಾರ ಸಹಿ ಹಾಕಿತು. ಈ ಒಪ್ಪಂದದಲ್ಲಿ ಏನಿದೆ ಎಂಬುದನ್ನು ಆಗ ಕೃಷಿ ಇಲಾಖೆ ಬಹಿರಂಗಗೊಳಿಸಿರಲಿಲ್ಲ. ಆಗ ಕೃಷಿ, ಕಾರ್ಮಿಕ ಹಾಗೂ ಇಂಟರ್ನೆಟ್ ಖಾಸಗಿತನದ ಹಕ್ಕುಗಳಿಗೆ ಹೋರಾಡುವ 55 ಸಂಘಟನೆಗಳು ಇಲಾಖೆಗೆ ಪತ್ರ ಬರೆದು ಒತ್ತಾಯಿಸಿದ ಮೇಲೆ ಒಪ್ಪಂದ ವಿವರಗಳ ಜೊತೆಗೆ ಕಾರ್ಯಾಚರಣೆಯ ವಿಧಾನವನ್ನು ಬಹಿರಂಗ ಪಡಿಸಿತು.
ಈ ವಿಧಾನದಂತೆ ರೈತನ ಖಾಸಗಿ ಮಾಹಿತಿ ಅಂದರೆ ಹೆಸರು, ವಯಸ್ಸು, ಲಿಂಗ, ಕುಟುಂಬದ ಗಾತ್ರ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು, ಕೃಷಿ ಭೂಮಿಯ ವಿವರಗಳು- ಕ್ಯಾಡಸ್ಟ್ರಲ್ ಮ್ಯಾಪ್, ಕೃಷಿ ಭೂಮಿಯ ಗಾತ್ರ, ಸ್ಥಳೀಯ ಹವಾಮಾನ, ಭೌಗೋಳಿಕ ಸ್ಥಿತಿ. ಕೃಷಿ ಉತ್ಪನ್ನದ ವಿವರಗಳು – ಯಾವ ಬೆಳೆ ಬೆಳೆಯಲಾಗುತ್ತದೆ, ಕೃಷಿ ಉತ್ಪನ್ನಗಳ ಇತಿಹಾಸ, ಯಾವ ಗುಣಮಟ್ಟದ ಇಳುವರಿ ಸಿಕ್ಕಿದೆ, ಯಾವ ರೀತಿಯ ಸಲಕರಣೆ, ಯಂತ್ರೋಪಕರಣಗಳು ಇವೆ ಮತ್ತು ಹಣಕಾಸಿನ ವಿವರಗಳು, ಅಂದರೆ ಕೃಷಿ ಚಟುವಟಿಕೆಗೆ ಮಾಡುವ ವೆಚ್ಚ, ಆದಾಯ, ಸಾಲದ ವಿವರಗಳು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸಿಇಒ ಅಶಿಶ್ ಕುಮಾರ್ ಭುತಾನಿ ಹೇಳಿದ್ದೇನೆಂದರೆ, ‘ ಈ ವ್ಯವಸ್ಥೆ ಸಮಗ್ರ ಮಾಹಿತಿಒದಗಿಸುವ ಏಕೈಕ ಕೇಂದ್ರವಾಗಲಿದೆ. ಹಣಕಾಸು ಸಂಸ್ಥೆಗಳಿರಲಿ, ರೈತರಿರಲಿ, ಸ್ಟಾರ್ಟಪ್ ಕಂಪನಿಗಳಿರಲಿ, ಹೊಸ ಮೊಬೈಲ್ ಅಪ್ಲಿಕೇಷನ್ ಡೆವಲೆಪ್ ಮಾಡಲು ಸಂಶೋಧನೆ ನಡೆಸುವವರಿರಲಿ, ಎಲ್ಲರಿಗೂ ಇದು ಏಕಮಾತ್ರ ಸಂಪನ್ಮೂಲವಾಗಿರಲಿದೆ” ಎಂದಿದ್ದರು.
ಅತ್ಯಂತ ಸೂಕ್ಷ್ಮ, ಮಹತ್ವದಿಂದ ಕೂಡಿದ ದಾಖಲೆಗಳು ಭಾರತದ ಸರ್ಕಾರಿ ಕಚೇರಿಗಳಲ್ಲಿ ಅಷ್ಟೊಂದು ವ್ಯವಸ್ಥಿತವಾಗಿ ಇರಿಸಿಲ್ಲ. ಹೀಗಿರುವಾಗ ರೈತರಿಂದ ಮಾಹಿತಿ ಸಂಗ್ರಹಿಸುವುದು, ಸಂಗ್ರಹಿಸಿದ ಮಾಹಿತಿಗಳನ್ನು ಸರ್ಕಾರದ ದಾಖಲೆಗಳೊಂದಿಗೆ ತಾಳೆ ನೋಡುವುದು ಎಲ್ಲವೂ ಸವಾಲಿನ ಕೆಲಸವಾಗಿತ್ತು. ಸರ್ಕಾರಿ ವ್ಯವಸ್ಥೆಗೆ ಮಾಹಿತಿ ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ಯಾವುದೇ ವಿಧಾನ ಅಥವಾ ವ್ಯವಸ್ಥೆ ಇಲ್ಲ ಎನ್ನುವುದನ್ನು ನ್ಯೂಸ್‌ಲಾಂಡ್ರಿ.ಕಾಮ್‌ಗೆ ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ಹೇಳಿದ್ದರು. ಅದೇ ಅಧಿಕಾರಿ ಈ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲದು ಎಂಬ ಕಾರಣಕ್ಕೆ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ ಮೈಕ್ರೋಸಾಫ್ಟ್ ಸಂಸ್ಥೆಯೇ ಏಕೆ ಎಂಬುದಕ್ಕೆ ಅವರು ಪ್ರತಿಕ್ರಿಯೆ ನೀಡಿಲ್ಲ ಎಂಬುದನ್ನು ನ್ಯೂಸ್‌ಲಾಂಡ್ರಿ ತಿಳಿಸಿದೆ.
ಮೇಲೆ ಹೇಳಿದಂತೆ ಕೃಷಿ ಮತ್ತು ಭೂದಾಖಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕುವುದು ಅಷ್ಟು ಸುಲಭವಲ್ಲ. ಇನ್ನೂ ಹಳೆಯ ಕಾಗದ ಪತ್ರಗಳನ್ನೇ ಅವಲಂಬಿಸಿರುವ ಭೂದಾಖಲೆಗಳ ಇಲಾಖೆ, ಡಿಜಿಟಲ್ ರೂಪಕ್ಕೆ ಹೊರಳಿಲ್ಲ. ಹಾಗಾಗಿ ಮೈಕ್ರೋಸಾಫ್ಟ್ ಮೊದಲು ಈ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುವುದಕ್ಕೆ ಚಾಲನೆ ನೀಡಿದೆ. ಅದಕ್ಕಾಗಿ ನಾಗಪುರ ಮೂಲದ ಕ್ರಾಪ್‌ಡೇಟಾ ಟೆಕ್ನಾಲಜಿ ಎಂಬ ಸಂಸ್ಥೆಯನ್ನು ಪಾಲುದಾರರನ್ನಾಗಿ ಮಾಡಿಕೊಂಡಿದೆ. ಈಗಾಗಲೇ ರೈತರಿಗೆ ಆನ್‌ಲೈನ್ ಮಾರುಕಟ್ಟೆ ಸೃಷ್ಟಿಸುವ, ರೈತರಿಗೆ ತಂತ್ರಜ್ಞಾನ ಬಳಸಿ ಪರಿಹಾರ ಒದಗಿಸುವ ಉದ್ಯಮವಾಗಿ ಕಾರ್ಯನಿರ್ವಹಿಸುತ್ತಿರುವ ಈ ಖಾಸಗಿ ಸಂಸ್ಥೆಯನ್ನು ಯೋಜನೆಯಲ್ಲಿ ಭಾಗಿಯಾಗಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ಸಂಸ್ಥೆಯ ಮೂಲಕ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ಗುಜರಾತ್, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಸೇರಿ 10 ರಾಜ್ಯಗಳ 100 ಹಳ್ಳಿಗಳಲ್ಲಿ ಮಾಹಿತಿ ಕಲೆಹಾಕುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ನಿಮ್ಮ ಖಾಸಗಿತನ ಕದಿಯುತ್ತಿದೆ: ಪ್ರೊಪಬ್ಲಿಕಾ ವರದಿ | ಭಾಗ-1
ಖಾಸಗಿ ಸಂಸ್ಥೆಗಳನ್ನು ಒಳಗೊಂಡು ಕಲೆಹಾಕಲಾಗುತ್ತಿರುವ ಈ ಮಾಹಿತಿಯ ಸುರಕ್ಷತೆ ಯಾರ ಹೊಣೆ. ಉದ್ಯಮ ಆಸಕ್ತಿಗಳಿರುವ, ಜಾಗತಿಕ ಮಟ್ಟದಲ್ಲಿ ಪ್ರಭಾವಿ ಶಕ್ತಿಗಳಾಗಿ ಬೆಳೆದಿರುವ ಸಂಸ್ಥೆಗಳು ಈಯೋಜನೆಯಲ್ಲಿ ಸಕ್ರಿಯವಾಗಿ ಹಾಗೂ ಮಹತ್ವದ ಜವಾಬ್ದಾರಿಗಳನ್ನು ಹೊತ್ತಿರುವಾಗ ಇಲ್ಲಿ ರೈತ ಅಥವಾ ಕೃಷಿ ವಲಯಕ್ಕೆ ಯಾವುದೇ ರೀತಿಯ ಅನ್ಯಾಯವಾಗದು ಎಂಬುದನ್ನು ಖಾತ್ರಿ ಪಡಿಸುವವರು ಯಾರು? ಭವಿಷ್ಯದಲ್ಲಿ ಈ ಮಾಹಿತಿಯ ದುರುಪಯೋಗ ನಿಯಂತ್ರಣಕ್ಕೆ ಸರ್ಕಾರದ ನಿಲುವೇನು? ಭಾರತದಲ್ಲಿ ಖಾಸಗಿ ಮಾಹಿತಿ ರಕ್ಷಣೆ ಕಾಯ್ದೆಯೇ ಇಲ್ಲದಿರುವಾಗ, ಹಲವು ಉದ್ಯಮ ಆಸಕ್ತಿಗಳಿರುವ ಕಂಪನಿಗಳು ಇಂತಹ ಬಹುದೊಡ್ಡ ಯೋಜನೆಯನ್ನು ಮುನ್ನಡೆಸಲು ಹೊರಟಿರುವಾಗ ಮೂಲಭೂತ ಹಕ್ಕುಗಳ ಜೊತೆಗೆ ಹಲವು ಅವಕಾಶಗಳನ್ನು ಕಿತ್ತುಕೊಳ್ಳುವ ಅಪಾಯವಿರುವಾಗ ಭಾರತ ಸರ್ಕಾರ ಯಾವ ಭರವಸೆಯನ್ನು ನೀಡುತ್ತದೆ? ಮೇಕ್ ಇನ್ ಇಂಡಿಯಾದಂತಹ ಆದರ್ಶದ ಘೋಷಣೆಗಳನ್ನು ನೀಡಿದ ಭಾರತ ಸರ್ಕಾರ, ಸಣ್ಣ ಪ್ರಮಾಣದ ಉದ್ಯಮಗಳು, ಸ್ಟಾರ್ಟಪ್‌ಗಳಿಗೆ ಯಾವುದೇ ಅವಕಾಶ ಇಲ್ಲದಂತೆ ಮಾಡುವ ಇಂತಹ ಯೋಜನೆಗಳಿಂದ ನಿಜಕ್ಕೂ ಆತ್ಮನಿರ್ಭರತೆ ಸಾಧಿಸುವುದೆ? ಮಹತ್ವಕಾಂಕ್ಷಿಯಾಗಿ ಕಾಣಿಸುವ ಈ ಯೋಜನೆಯ ಮೂಲಕ ನಿಜಕ್ಕೂ ರೈತ ಏನನ್ನು ಪಡೆಯಲಿದ್ದಾನೆ? ಕೃಷಿ ಎಷ್ಟು ಶ್ರೀಮಂತವಾಗಲಿದೆ? ನಿಜಕ್ಕೂ ಇದರ ಲಾಭವನ್ನುಯಾರು ಪಡೆಯಲಿದ್ದಾರೆ? ಇಂತಹ ಪ್ರಶ್ನೆಗಳು ಬಹಳಷ್ಟಿವೆ? ಉತ್ತರ ಹೇಳಲು ಸರ್ಕಾರ ಸಿದ್ಧವಿಲ್ಲ. ಮೈಕ್ರೋಸಾಫ್ಟ್ ಸಂಸ್ಥೆಗೆ ಈ ಹೊಣೆಗಾರಿಕೆ ಇಲ್ಲ!!
ಕೃಪೆ: ಅನ್ನದ ಋಣ ಜಾಲತಾಣ


