Homeಮುಖಪುಟದಲಿತ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ದೆಹಲಿ ಪೊಲೀಸರ ಚಾರ್ಜ್‌ಶೀಟ್‌‌ ಹೇಳುವುದೇನು?

ದಲಿತ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ದೆಹಲಿ ಪೊಲೀಸರ ಚಾರ್ಜ್‌ಶೀಟ್‌‌ ಹೇಳುವುದೇನು?

9 ವರ್ಷದ ದಲಿತ ಬಾಲಕಿಯ ಮೇಲೆ ಭೀಕರವಾಗಿ ಅತ್ಯಾಚಾರ ನಡೆಸಿ, ಬಾಲಕಿಯನ್ನು ಸಾಯಿಸಿದ್ದಷ್ಟೇ ಅಲ್ಲದೇ, ಅತ್ಯಾಚಾರದ ಆರೋಪಿಗಳು ಬಲವಂತವಾಗಿ ಅಂತ್ಯಸಂಸ್ಕಾರ ನಡೆಸಿದ್ದರು.

- Advertisement -

9 ವರ್ಷದ ದಲಿತ ಬಾಲಕಿಯ ಮೇಲೆ ಭೀಕರವಾಗಿ ಅತ್ಯಾಚಾರ ನಡೆಸಿ, ಬಾಲಕಿಯನ್ನು ಸಾಯಿಸಿದ್ದಷ್ಟೇ ಅಲ್ಲದೇ, ಅತ್ಯಾಚಾರದ ಆರೋಪಿಗಳು ಬಲವಂತವಾಗಿ ಅಂತ್ಯಸಂಸ್ಕಾರ ನಡೆಸಿದ್ದ ಘಟನೆಗೆ ದೇಶದ ರಾಜಧಾನಿ ದೆಹಲಿ ಸಾಕ್ಷಿಯಾಗಿತ್ತು. ದೆಹಲಿಯ ಕಂಟೋನ್ಮೇಟ್‌ ಪ್ರದೇಶದಲ್ಲಿ, ಆಗಸ್ಟ್‌ 1ರಂದು ಘಟನೆ ನಡೆದಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ದೆಹಲಿ ಪೊಲೀಸರು, ಇದೇ ಮೊದಲ ಬಾರಿಗೆ ಬಾಲಕಿಯ ಸಾವಿನ ಕಾರಣವನ್ನು ನ್ಯಾಯಾಲಯಕ್ಕೆ ತಿಳಿಸಿದ್ದು, ಚಾರ್ಜ್‌‌ಶೀಟ್‌ ಸಲ್ಲಿಕೆಯಾಗಿದೆ.

ಅತ್ಯಾಚಾರ ಎಸಗಿದ ಸಂದರ್ಭದಲ್ಲಿ ಬಾಲಕಿ ಉಸಿರುಗಟ್ಟಿದ್ದರಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ. ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದ್ದು, ಮುಖ್ಯ ಆರೋಪಿ, ಪೂಜಾರಿ ರಾಧೆ ಶ್ಯಾಮ್ ಈ ಹಿಂದೆಯೂ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾಧೇ ಶ್ಯಾಮ್‌ ಹೇಳಿಕೆಯನ್ನು ಪಡೆದಿರುವ ಪೊಲಿಸರು, “ರಾಧೇ ಶ್ಯಾಮ್‌ ಈ ಹಿಂದೆಯೂ ಬಾಲಕಿಗೆ ಲೈಂಗಿಕ ಸಂದೇಶಗಳನ್ನು ಕಳುಹಿಸಿದ್ದ, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಪ್ರಚೋದಿಸಲು ಯತ್ನಿಸಿದ್ದ” ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು (ಶ್ಯಾಮ್, ಕುಲ್‌ದೀಪ್‌ ಸಿಂಗ್, ಲಕ್ಷ್ಮಿನಾರಾಯಣ್ ಮತ್ತು ಸಲೀಂ ಅಹಮದ್‌) ಆಗಸ್ಟ್ 2ರಂದು ಪೊಲೀಸರು ಬಂದಿಸಿದ್ದರು. ಶ್ಯಾಮ್‌ ಪೂಜಾರಿಯಾಗಿದ್ದು, ಇನ್ನುಳಿದ ಆರೋಪಿಗಳು ಕೊಲೆಯಾದ ಬಾಲಕಿಯ ತಾಯಿಗೆ ಪರಿಚಯಸ್ಥರಾಗಿದ್ದರು.

ಅತ್ಯಾಚಾರ, ಕೊಲೆ ಹಾಗೂ ಸಾಕ್ಷ್ಯನಾಶ ಮಾಡಿದ್ದಾರೆ ಎಂದು ನಾಲ್ವರ ಮೇಲೂ ಜಾರ್ಜ್‌‌ಶೀಟ್‌ ಸಲ್ಲಿಕೆಯಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಪರಿಶಿಷ್ಟರ ಮೇಲೆ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲೂ ದೋಷಾರೋಪ ಪಟ್ಟಿ ಮಾಡಲಾಗಿದೆ.

ಪೊಲೀಸರು ಆರೋಪಿಗಳ ಬಹಿರಂಗ ಹೇಳಿಕೆಗಳು, ಸಾರ್ವಜನಿಕ ಸಾಕ್ಷಿಗಳು ಮತ್ತು ಸಿಸಿಟಿವಿ ಕ್ಯಾಮೆರಾ ತುಣುಕನ್ನು ಅವಲಂಬಿಸಿ ಪೊಲೀಸರು ಜಾರ್ಜ್‌‌ಶೀಟ್ ರೂಪಿಸಿದ್ದಾರೆ.

ಇದನ್ನೂ ಓದಿ:  ದಲಿತರ ಮಗಳು ಕೂಡ ದೇಶದ ಮಗಳು: ದೆಹಲಿ ಅತ್ಯಾಚಾರ ಕೊಲೆಗೆ ರಾಹುಲ್ ಗಾಂಧಿ ಆಕ್ರೋಶ

ಸ್ಮಶಾನದಲ್ಲಿ ನೀರು ತರಲೆಂದು ಬಾಲಕಿ ಹೋದಾಗ ಅತ್ಯಾಚಾರ ನಡೆದಿದೆ. ಅತ್ಯಾಚಾರ ಎಸಗಿದಾಗ ಶ್ಯಾಮ್‌, ಬಾಲಕಿಯ ಬಾಯಿಯನ್ನು ಬಿಗಿಹಿಡಿದಿದ್ದರಿಂದ ಸಾವು ಸಂಭವಿಸಿದೆ. ಅತ್ಯಾಚಾರ ಎಸಗುವಾಗ ಕುಲದೀಪ್‌ ಸಿಂಗ್‌ ಬಾಲಕಿಯ ಕೈಗಳನ್ನು ಹಿಡಿದಿದ್ದನು. ಶ್ಯಾಮ್‌ ಮತ್ತು ಸಿಂಗ್‌ ಅತ್ಯಾಚಾರ ಎಸಗುವಾಗ ಅಹಮದ್‌ನನ್ನು ಜಿಲೇಬಿ ತರಲು ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ಮಶಾನದಲ್ಲಿ ವಾಟರ್ ಕೂಲರ್‌ನಿಂದ ನೀರು ತರುವಾಗ ವಿದ್ಯುತ್ ತಗುಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಯು ಬಾಲಕಿಯ ತಾಯಿಗೆ ಹೇಳಿ‍ದ್ದನು. ಆದಾಗ್ಯೂ, ವಾಟರ್ ಕೂಲರ್‌ನಲ್ಲಿ “ವಿದ್ಯುತ್ ಪ್ರವಾಹ” ಇಲ್ಲದ ಕಾರಣ ವಿದ್ಯುತ್ ಆಘಾತಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬಾಲಕಿಯು ಉಸಿರಾಡುವುದನ್ನು ನಿಲ್ಲಿಸಿದ ನಂತರ ಆರೋಪಿಯು ಗಲಿಬಿಲಿಗೊಂಡನು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದು, ‘ವಿದ್ಯುತ್ ತಂತಿ ತಗುಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪೋಷಕರು ನಂಬುವಂತೆ ಮಾಡಲು ಆರೋಪಿಗಳು ಬಾಲಕಿಯ ದೇಹದ ಮೇಲೆ ನೀರು ಸುರಿದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ಯಾಮ್‌ ತಾನು ಪೋರ್ನ್‌ ವಿಡಿಯೊಗಳನ್ನು ನೋಡಲು ಬಳಸುತ್ತಿದ್ದ ಮೊಬೈಲ್‌ ಹಾಗೂ ಅತ್ಯಾಚಾರಕ್ಕೆ ಬಳಕೆಯಾಗಿದ್ದ ಬೆಡ್‌ಶೀಟ್‌ಅನ್ನು ಸ್ಮಶಾನದಲ್ಲಿ ಬೆಂಕಿ ಹಾಕುವ ಮೂಲಕ ಸಾಕ್ಷ್ಯಾನಾಶಕ್ಕೆ ಯತ್ನಿಸಿದ್ದಾನೆ.

ಆರೋಪಿಯು ಬಾಲಕಿಯ ಪೋಷಕರನ್ನು ಬೆದರಿಸಿದ್ದಾರೆ. ಅವರ ಬಡತನ, ಅನಕ್ಷರತೆ, ಜಾತಿಯ ಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಬಾಲಕಿಯನ್ನು ಬಲವಂತವಾಗಿ ಸುಟ್ಟಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸೆ.29ರಂದು ಕೋರ್ಟ್‌ ವಿಚಾರಣೆ ನಡೆಸಲಿದೆ.


ಇದನ್ನೂ ಓದಿ: ಹೆಣ್ಣು ಮಕ್ಕಳ ಆಕ್ರಂದನ ಕೇಳುತ್ತಿಲ್ಲವೇ? ದೆಹಲಿಯ ದಲಿತ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial