ಬಾಲಿವುಡ್ ನಟಿ ಆಲಿಯಾ ಭಟ್ ಮುಖ್ಯಪಾತ್ರದಲ್ಲಿರುವ ಮಾನ್ಯವರ್ ಬಟ್ಟೆ ಬ್ರಾಂಡ್‌ನ ಕನ್ಯಾಮಾನ್ ಜಾಹೀರಾತು ಭಾರಿ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಭಾರತದ ಸಿನಿಮಾಗಳು, ಟಿವಿ ಶೋಗಳಿಗಿಂತ ಈ ಜಾಹೀರಾತು ಮುಂದುವರೆದಿದೆ ಎಂದಿದ್ದಾರೆ.
ಇನ್ನು ಕೆಲವರು ಹಿಂದೂ ಸಂಸ್ಕೃತತಿಯನ್ನು ಅರ್ತ ಮಾಡಿಕೊಳ್ಳದೇ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನವಿ ಮುಂಬೈನ ಬಟ್ಟೆ ಬ್ರಾಂಡ್‌ನ ಶೋರೂಂನ ಹೊರ ಭಾಗದಲ್ಲಿ ಹಿಂದೂ ಧಾರ್ಮಿಕ ಸಂಘಟನೆಯೊಂದು ಪ್ರತಿಭಟನೆ ನಡೆಸಿದೆ.
ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರುವ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು, ನವಿ ಮುಂಬೈನ ವಾಶಿ ಪ್ರದೇಶದ ಮಳಿಗೆಯ ಹೊರಗೆ ಮಾನ್ಯವರ್ ಬಟ್ಟೆ ಬ್ರಾಂಡ್‌ನ ವೇದಾಂತ ಫ್ಯಾಶನ್ಸ್ ಲಿಮಿಟೆಡ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: ಭಾವುಕ ಅನುಭವ ನೀಡುವ ‘ಪುಕ್ಸಟ್ಟೆ ಲೈಫು, ಪುರ್‌ಸೊತ್ತೇ ಇಲ್ಲ’ ಸಿನಿಮಾ: ಪ್ರೀತಿ ನಾಗರಾಜ್
ಬಲಪಂಥೀಯ ಸಂಘಟನೆಯ ವಕ್ತಾರ ಡಾ.ಉದಯ್ ಧುರಿ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಂಪನಿಯ ಜಾಹೀರಾತಿನಲ್ಲಿ ಹಿಂದೂ ವಿವಾಹ ಸಮಾರಂಭಗಳಲ್ಲಿ ‘ಕನ್ಯಾದಾನ’ ಆಚರಣೆಯನ್ನು “ತಪ್ಪಾಗಿ ಚಿತ್ರಿಸಲಾಗಿದೆ” ಮತ್ತು ಆದ್ದರಿಂದ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದಿದ್ದಾರೆ.
ಮಾನ್ಯವರ್ ಬಟ್ಟೆ ಬ್ರಾಂಡ್‌ನ ವೇದಾಂತ ಫ್ಯಾಶನ್ಸ್ ಲಿಮಿಟೆಡ್ ಸಂಸ್ಥೆಯು ಬೇಷರತ್ ಕ್ಷಮೆ ಕೇಳಬೇಕು. ಕ್ಷಣವೇ ಜಾಹೀರಾತನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿತ್ತು. ಸಂಸ್ಥೆಯು ಕ್ಷಮೆ ಯಾಚಿಸುವವರೆಗೆ ಮತ್ತು ಜಾಹೀರಾತನ್ನು ಹಿಂಪಡೆಯುವವರೆಗೂ ಬಟ್ಟೆ ಬ್ರಾಂಡ್ ಅನ್ನು ಬಹಿಷ್ಕರಿಸುವಂತೆ ಜನರಲ್ಲಿ ಮನವಿ ಮಾಡಿದೆ.
1.41 ನಿಮಿಷಗಳ ಜಾಹೀರಾತಿನಲ್ಲಿ, ಆಲಿಯಾ ಭಟ್, ‘ಮಂಟಪ’ದಲ್ಲಿ ಕುಳಿತುಕೊಂಡು ತಾನು ಮನೆಯಲ್ಲಿ ಹೇಗೆ ಬೆಳೆದೆ, ಮನೆಯವರ ಪ್ರೀತಿ ಹೇಗಿತ್ತು ಎನ್ನುತ್ತಾ…ತಾನು ಬೆಳೆಯುತ್ತಲೇ ಹೇಗೆ ಬೇರೆ ಮನೆಯ ಹೆಣ್ಣು, ಬೇರೆಯವರ ಆಸ್ತಿ, ಬೇರೆ ಮನೆಗೆ ಹಾರಿ ಹೋಗುವ, ಅಲ್ಲಿ ಅನ್ನಾಹಾರ ತಿನ್ನುವ ಚಿಡಿಯಾ (ಪಕ್ಷಿ) ಎಂಬುದನ್ನು ನೆನಪಿಸುತ್ತಿದ್ದರು ಎಂಬುದನ್ನು ಹೇಳುತ್ತಾರೆ.

ಜೊತೆಗೆ ಇಷ್ಟು ಪ್ರೀತಿಸುತ್ತಿದ್ದವರು ಕೂಡ ನಾನು ಬೇರೆ ಮನೆಯ ಆಸ್ತಿಯಲ್ಲ ಎಂಬುದನ್ನು ಹೇಳಲಿಲ್ಲ. ಯಾಕೆ ಯಾವಗಲೂ ಕನ್ಯಾದಾನ್ ಆಗುತ್ತದೆ…? ನಾನು ದಾನ ಮಾಡುವ ವಸ್ತುವೇ ಎಂದು ಪ್ರಶ್ನಿಸುತ್ತಾರೆ. ಬಳಿಕ ಆಚರಣೆಯಲ್ಲಿ ವರನ ಕಡೆಯವರು ಕನ್ಯಾದಾನ್ ತೆಗೆದುಕೊಳ್ಳುವ ಬದಲು ತಮ್ಮ ಮಗನನ್ನು ದಾನ ನೀಡುವ ರೀತಿ ಚಿತ್ರಿಸಿದ್ದಾರೆ. ಇಲ್ಲಿ ಆಲಿಯಾ ಭಟ್ ಕನ್ಯಾದಾನ್ ಅಲ್ಲ…ಕನ್ಯಾಮಾನ್…ಹೊಸ ಐಡಿಯಾ ಎನ್ನುತ್ತಾರೆ.
ಇತ್ತ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಆಲಿಯಾ ಬಟ್ ಜಾಹೀರಾತಿಗೆ ಕಟುವಾಗಿ ಟೀಕಿಸಿದ್ದರು. ‘ಎಲ್ಲಾ ಬ್ರಾಂಡ್‌ಗಳಿಗೆ ವಿನಂತಿ … ನಿಮ್ಮ ವಸ್ತುಗಳನ್ನು ಮಾರಾಟ ಮಾಡಲು ಧರ್ಮವನ್ನು ಬಳಸುವುದನ್ನು ನಿಲ್ಲಿಸಿ, ಅಲ್ಪಸಂಖ್ಯಾತರು ಮತ್ತು ಹಿಂದೂ ದ್ವೇಷಿಗಳನ್ನು ಮೆಚ್ಚಿಸಲು ಪ್ರಯತ್ನಿಸುವ ಹಿಂದೂಫೋಬಿಕ್ ಜಾಹೀರಾತುಗಳನ್ನು ನಿಲ್ಲಿಸಿ. ದಾನದ ಅರ್ಥ ತಿಳಿದುಕೊಳ್ಳಿ’ ಎಂದಿದ್ದಾರೆ.
ಈ ಜಾಹೀರಾತಿಗೆ ಮೆಚ್ಚುಗೆ , ವಿಮರ್ಶೆ, ಕಟು ವಿಮರ್ಶೆ ಕೂಡ ವ್ಯಕ್ತವಾಗಿದೆ. ಹಿಂದೂ ಸಂಪ್ರದಾಯವನ್ನು ಬಾಲಿವುಡ್ ಮತ್ತು ಜಾಹೀರಾತು ಕಂಪನಿ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಕನ್ಯಾದಾನ ಎಂದರೆ ಹೆಣ್ಣನ್ನು ದಾನವಾಗಿ ನೀಡುವುದಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗಿದೆ.
ಇದನ್ನೂ ಓದಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ


