ಫೇಸ್‌ಬುಕ್, ವಾಟ್ಸ್‌ಆಪ್, ಇನ್‌ಸ್ಟಾ ಗ್ರಾಮ್ ಸೇವೆ ಸುಮಾರು ಆರು ಗಂಟೆಗಳ ಕಾಲ ಸ್ಥಗಿತವಾಗಿ ಬಳಕೆದಾರರ ಚಡಪಡಿಕೆಗೆ ಕಾರಣವಾಗಿದ್ದ ಈ ಮೂರು ಅಪ್ಲಿಕೇಷನ್‌ಗಳ ಒಡೆಯನಾದ ಫೇಸ್‌ಬುಕ್ ಸಂಸ್ಥೆಯು, ಸೇವೆಯನ್ನು ಪುನಾರಂಭ ಮಾಡಿದೆ. ಬಳಕೆದಾರರಿಗೆ ಅಡಚಣೆ ಉಂಟು ಮಾಡಿದ್ದಕ್ಕೆ ಫೇಸ್‌ಬುಕ್ ಕ್ಷಮೆಯಾಚಿಸಿದೆ.
“ನಮ್ಮನ್ನು ಅವಲಂಭಿಸಿ ವ್ಯವಹರಿಸುವ ದೊಡ್ಡ ಮಟ್ಟದ ಸಮುದಾಯ ಪ್ರಪಂಚದಾದ್ಯಂತ ಇದ್ದು, ಇವರೆನ್ನೆಲ್ಲ ಕ್ಷಮೆಯಾಚಿಸುತ್ತೇವೆ” ಎಂದು ಫೇಸ್‌ಬುಕ್ ಸಂಸ್ಥೆ ಟ್ವೀಟ್ ಮಾಡಿದೆ.
We’re aware that some people are having trouble accessing our apps and products. We’re working to get things back to normal as quickly as possible, and we apologize for any inconvenience.
— Facebook (@Facebook) October 4, 2021
“ನಮ್ಮ ಅಪ್ಲಿಕೇಷನ್‌ಗಳು ಸೇವೆಗಳಿಗೆ ಪ್ರವೇಶಿಸುವಂತೆ ಮರುಸ್ಥಾಪಿಸಲು ನಾವು ಶ್ರಮಿಸುತ್ತಿದ್ದೇವೆ. ಈಗ ಅವು ಬಳಕೆಗೆ ಲಭ್ಯವಿವೆ ಎಂದು ವರದಿ ಮಾಡಲು ಸಂತೋಷವಾಗಿದೆ. ನಮ್ಮೊಂದಿಗೆ ಸಹಕರಿಸಿದಕ್ಕಾಗಿ ಧನ್ಯವಾದಗಳು” ಎಂದು ಫೇಸ್‌ಬುಕ್ ಹೇಳಿದೆ.
ಭಾರತೀಯ ಕಾಲಮಾನ ಮುಂಜಾನೆ 3.30ರ ವೇಳೆಗೆ ಈ ಅಪ್ಲಿಕೇಷನ್‌ಗಳು ಸ್ವಸ್ಥಿತಿಗೆ ಮರಳಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ವೆಬ್‌ಸೈಟ್ ಸ್ಥಗಿತದ ವರದಿ ಮಾಡುವ ಡೌನ್‌ಡಿಟೆಕ್ಟರ್ ಪ್ರಕಾರ ಸೋಮವಾರ ರಾತ್ರಿ 9.30ರ ವೇಳೆಗೆ ಸುಮಾರು 6,900 ವರದಿಗಳು ಫೇಸ್‌ಬುಕ್ ಸ್ಥಗಿತದ ಕುರಿತು ಆಗಿವೆ. ಅದೇ ಸಮಯದಲ್ಲಿ ಸುಮಾರು 30,000 ವರದಿಗಳು ವಾಟ್ಸ್‌ಆಪ್ ಸಂಬಂಧಿಸಿದಂತೆ ಆಗಿವೆ. ರಾತ್ರಿ 9.27ರ ವೇಳೆಗೆ 18,739 ವರದಿಗಳು ಇನ್‌ಸ್ಟಾಗ್ರಾಮ್ ಸ್ಥಗಿತದ ಕುರಿತಾಗಿವೆ ಎನ್ನಲಾಗಿದೆ.
ಸ್ಥಗಿತ ಆರಂಭವಾದ ಸ್ವಲ್ಪ ಸಮಯದ ನಂತರ ಫೇಸ್‌ಬುಕ್, ತನ್ನ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಬಳಕೆದಾರರಿಗೆ ತೊಂದರೆ ಆಗುತ್ತಿದೆ ಎಂದು ಒಪ್ಪಿಕೊಂಡಿದೆ. ಆದರೆ ಸಮಸ್ಯೆಯ ಸ್ವರೂಪದ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡಲಿಲ್ಲ. ಬಳಕೆದಾರರು ತಮಗೆ ಬೇಕಾದದ್ದನ್ನು ಪಡೆಯಲು ಅಗತ್ಯವಿರುವ ಡೊಮೈನ್ ನೇಮ್ ಸಿಸ್ಟಮ್‌ನಲ್ಲಿ ಉಂಟಾದ ಅಡಚಣೆಯೇ ಈ ಸ್ಥಗಿತಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಹೆಸರು ಹೇಳಲಿಚ್ಛಿಸದ ಫೇಸ್‌ಬುಕ್ ಉದ್ಯೋಗಿಗಳು ರಾಯಿಟರ್ಸ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದು, ಇಂಟರ್‌ನೆಟ್ ಡೊಮೇನ್‌ಗೆ ಆಂತರಿಕ ಮಾರ್ಗಗಳ (ಇಂಟರ್‌ನೆಟ್ ನೆಟ್‌ವರ್ಕ್‌ನಲ್ಲಿ ಬಳಕೆದಾರರ ಸಂಚಾರಕ್ಕಾಗಿ ಮಾರ್ಗವನ್ನು ಆಯ್ಕೆ ಮಾಡುವ ಪ್ರಕ್ರಿಯೆ) ಸಮಸ್ಯೆ ಉಂಟಾಗಿದೆ ಎಂದು ನಾವು ನಂಬಿದ್ದೇವೆ. ಅದೇ ಡೊಮೇನ್ ಮೇಲೆ ಅವಲಂಬಿತವಾಗಿರುವ ಆಂತರಿಕ ಪರಿಕರಗಳು ಮತ್ತು ಇತರ ಸಂಪನ್ಮೂಲಗಳೂ ಕಾರ್ಯನಿರ್ವಹಿಸದ ಕಾರಣ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು ಎಂದು ಅವರು ತಿಳಿಸಿದ್ದಾರೆ.
ಡೌನ್‌ಡಿಟೆಕ್ಟರ್ ಪ್ರಕಾರ ಹೇಳುವುದಾದರೆ ಫೇಸ್‌ಬುಕ್ ಸ್ಥಗಿತದ ಕುರಿತು ಆದ ವರದಿಗಳು ಸ್ಥಗಿತಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ ಆಗಿರುವ ಅತಿದೊಡ್ಡ ವರದಿಯಾಗಿದೆ. ಭಾರತೀಯ ಕಾಲಮಾನ ಮುಂಜಾನೆ 3.30ರ ವೇಳೆಗೆ 1.4 ಕೋಟಿ ವರದಿಗಳಾಗಿವೆ ಎನ್ನಲಾಗಿದೆ.
ಇದನ್ನೂ ಓದಿರಿ: ಮೆಸೆಂಜರ್‌ನ ವಾಯ್ಸ್ ಮತ್ತು ವಿಡಿಯೊ ಕರೆಗಳಿಗೆ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್’ ನೀಡಲಿರುವ ಫೇಸ್‌ಬುಕ್!


