ಫೇಸ್‌ಬುಕ್ ಮೆಸೆಂಜರ್‌ನಲ್ಲಿ ವಾಯ್ಸ್ ಮತ್ತು ವೀಡಿಯೊ ಕರೆಗಳನ್ನು ‘ಎಂಡ್-ಟು-ಎಂಡ್ ಎನ್‌ಕ್ರಿಪ್ಟ್’ ಮಾಡುವ ಹೊಸ ಆಯ್ಕೆಯನ್ನು ನೀಡಲು ಕಂಪೆನಿ ನಿರ್ಧರಿಸಿದೆ. ಇದರ ಜೊತೆಗೆ ‘ಡಿಸ್‌ಅಪಿಯರಿಂಗ್ ಮೇಸೇಜ್’ ಅನ್ನು ನಿಯಂತ್ರಣ ಮಾಡುವ ಆಯ್ಕೆಯನ್ನೂ ಫೇಸ್‌ಬುಕ್ ನೀಡಲಿದೆ.
‘ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್’ ಎಂದರೆ, ಒಂದು ವೇಳೆ ನೀವು ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸಿದರೆ, ಅದನ್ನು ಯಾರಿಗೆ ಕಳುಹಿಸಿದ್ದೀರೋ ಅವರನ್ನು ಮತ್ತು ಕಳುಹಿಸಿರುವ ನಿಮ್ಮನ್ನು ಬಿಟ್ಟರೆ ಬೇರೆ ಯಾರಿಗೂ ನೋಡಲು ಸಾಧ್ಯವಿಲ್ಲ, ಸ್ವತಃ ಫೇಸ್‌ಬುಕ್ ಕೂಡಾ ಇದನ್ನು ನೋಡುವುದಿಲ್ಲ ಎಂದರ್ಥ. ಈ ರೀತಿಯಾದ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಈಗಾಗಲೇ ವಾಟ್ಸ್‌ಆ್ಯಪ್‌ನಂತಹ ಆಪ್‌ಗಳು ಬಳಸುತ್ತಿದೆ.
ಟೆಕ್ಸ್ಟ್ ಚಾಟ್‌ಗಳ ಸುರಕ್ಷತೆಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಕಂಪೆನಿಯು 2016 ರಿಂದ ನೀಡಿತ್ತು ಎಂದು ಫೇಸ್‌ಬುಕ್ ಹೇಳಿದೆ.
ಇದನ್ನೂ ಓದಿ: ಹೋರಾಟಗಾರನ ಫೇಸ್‌ಬುಕ್ ಪೋಸ್ಟ್‌ಗೆ NSA ಪ್ರಕರಣ: ಸಂಜೆಯೊಳಗೆ ಬಿಡುಗಡೆಗೊಳಿಸಿ ಎಂದ ಸುಪ್ರೀಂ
ಮೆಸೆಂಜರ್‌ನ ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ ನಿರ್ದೇಶಕಿ ರುತ್ ಕ್ರಿಚೆಲಿ ಬ್ಲಾಗ್ ಅವರು ಇದನ್ನು ಘೋಷಿಸಿದ್ದಾರೆ. ಅವರು ತನ್ನ ಬ್ಲಾಗ್‌ನಲ್ಲಿ ಬರೆದಂತೆ, “ಜನರು ತಮ್ಮ ಮೆಸೇಜಿಂಗ್ ಆಪ್‌ಗಳು ಸುರಕ್ಷಿತ ಮತ್ತು ಖಾಸಗಿಯಾಗಿರಬೇಕು ಎಂದು ನಿರೀಕ್ಷಿಸುತ್ತಾರೆ. ಈಗ ನೀಡುತ್ತಿರುವ ಹೊಸ ವೈಶಿಷ್ಟ್ಯಗಳೊಂದಿಗೆ ಅವರ ಕರೆಗಳು ಮತ್ತು ಚಾಟ್‌ಗಳು ತಮಗೆ ಎಷ್ಟು ಖಾಸಗಿಯಾಗಿ ಬೇಕು ಎಂಬುದರ ಮೇಲೆ ನಾವು ಅವರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂಭಾಷಣೆಯಲ್ಲಿ ನಿಮ್ಮ ಸಂದೇಶಗಳು ಮತ್ತು ಕರೆಗಳು ನಿಮ್ಮ ಸಾಧನವನ್ನು ಬಿಟ್ಟ ಕ್ಷಣದಿಂದ ರಿಸೀವರ್‌ನ ಸಾಧನವನ್ನು ತಲುಪುವವರೆಗೂ ರಕ್ಷಿಸುತ್ತದೆ” ಎಂದು ಕಂಪನಿ ಹೇಳಿದೆ.
“ಇದರರ್ಥ, ಫೇಸ್‌ಬುಕ್ ಸೇರಿದಂತೆ ಬೇರೆ ಯಾರಿಗೂ ನೀವು ಕಳುಹಿಸಿದ ಅಥವಾ ಹೇಳಿದ್ದನ್ನು ನೋಡಲು ಅಥವಾ ಕೇಳಲು ಸಾಧ್ಯವಿಲ್ಲ. ಇವುಗಳಲ್ಲಿ ಏನಾದರೂ ತಪ್ಪಾಗಿದ್ದರೆ ನೀವು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶವನ್ನು ನಮಗೆ ದೂರು ನೀಡಬಹುದು” ಎಂದು ಫೇಸ್‌ಬುಕ್ ಹೇಳಿದೆ.
ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳ ಜೊತೆಗೆ ಕಂಪೆನಿಯು ‘ಡಿಸಪಿಯರಿಂಗ್ ಮೆಸೇಜ್’ ಎನ್ನುವ ಅಪ್‌ಡೇಟ್‌ಗಳನ್ನೂ ನೀಡುತ್ತಿದೆ. ಡಿಸಪಿಯರಿಂಗ್ ಮೆಸೇಜ್ ಎಂದರೆ, ನಿರ್ದಿಷ್ಟ ಸಮಯದ ನಂತರ ನಮಗೆ ಬಂದಂತಹ ಮತ್ತು ನಾವು ಕಳುಹಿಸಿದ ಮೇಸೇಜ್‌ಗಳು ಅದಾಗಿಯೆ ಡಿಲೀಟ್ ಆಗುವುದಾಗಿದೆ.
ಇದನ್ನೂ ಓದಿ: ಫೇಸ್‌ಬುಕ್ ಪೋಸ್ಟ್ ವಿರುದ್ಧ ಬಿಜೆಪಿ ದೂರು: ಮಣಿಪುರದಲ್ಲಿ ಇಬ್ಬರ ಬಂಧನ