ಹರಿಯಾಣ ರಾಜ್ಯದ ಸಿರ್ಸಾದ ಎಲ್ಲೆನಾಬಾದ್‌ನಲ್ಲಿ ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದೆ. ಬಿಜೆಪಿ ಗೋವಿಂದ್ ಕಂದಾ ಅವರಿಗೆ ಟಿಕೆಟ್ ನೀಡಿದೆ. ಆದರೆ, ಸಿರ್ಸಾದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದ್ದು, ರಸ್ತೆಗಳಲ್ಲಿ ಪ್ರಚಾರಕ್ಕೆ ಹಾಕಿದ್ದ ಬಿಜೆಪಿ ಧ್ವಜಗಳನ್ನು ಕಿತ್ತು ಒಂದೆಡೆ ಹಾಕಿ ಬೆಂಕಿ ಹಚ್ಚಿದ್ದಾರೆ.
ಭಾರತೀಯ ಜನತಾ ಪಾರ್ಟಿ ಇಂದು ಗೋವಿಂದ್ ಕಂದಾ ಅವರಿಗೆ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿತ್ತು. ಹರಿಯಾಣದಲ್ಲಿ ಬಿಜೆಪಿ ನಾಯಕರ ಯಾವುದೇ ಕಾಯ್ರಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದಿರುವ ರೈತರು ನಾಮಪತ್ರ ಸಲ್ಲಿಕೆಗೆ ತೆರಳುತ್ತಿದ್ದ ಅಭ್ಯರ್ಥಿ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು.
ನಾಮಪತ್ರ ಸಲ್ಲಿಕೆಗಾಗಿ ರಸ್ತೆಯುದ್ದಕ್ಕೂ ಹಾಕಲಾಗಿದ್ದ ಬಿಜೆಪಿ ಬಾವುಟಗಳನ್ನು ಕಿತ್ತು, ಒಂದು ಕಡೆ ಗುಡ್ಡೆ ಹಾಕಿದ ಪ್ರತಿಭಟನಾ ನಿರತ ರೈತರು ಆಕ್ರೋಶದಲ್ಲಿ ಬೆಂಕಿ ಹಾಕಿದ್ದಾರೆ. ಪ್ರತಿಭಟನೆಯನ್ನು ಮೊದಲೆ ಊಹಿಸಿದ್ದ ಸರ್ಕಾರ ಭಾರಿ ಬಿಗಿ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಿತ್ತು. ಪೊಲೀಸ್ ರಕ್ಷಣೆಯಲ್ಲಿ ಹೋಗಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ರೈತರ ಪರ ಟ್ವೀಟ್: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ವರುಣ್ ಗಾಂಧಿ, ಮೇನಕಾ ಗಾಂಧಿ ಔಟ್
“ನಾವು ಈ ಧ್ವಜಗಳನ್ನು ದ್ವೇಷಿಸುತ್ತೇವೆ. ಈ ಧ್ವಜಗಳ ಅಡಿಯಲ್ಲಿ ಅಧಿಕಾರಕ್ಕೆ ಬಂದವರು ನಮ್ಮವರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಹೀಗಾಗಿ ಇವುಗಳಿಗೆ ಬೆಂಕಿ ಹಾಕಿದ್ದೇವೆ” ಎಂದು ಪ್ರತಿಭಟನಾನಿರತ ರೈತರೊಬ್ಬರು ತಿಳಿಸಿದ್ದಾರೆ.
ಲಖಿಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ನಾಲ್ವರನ್ನು ಹತ್ಯೆ ಮಾಡಲಾಗಿದೆ. ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರ ಮಗ ಆಶಿಶ್ ಮಿಶ್ರಾ ಕಾರು ಹರಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಯುಪಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ಸಮನ್ಸ್ ನೀಡಿದ್ದಾರೆ. ಆದರೆ, ಆರೋಪಿ ತಪ್ಪಿಸಿಕೊಂಡಿದ್ದಾರೆ.
“3 ಪೊಲೀಸ್ ತಂಡಗಳು ಕಾಣೆಯಾದ ಆರೋಪಿ ಆಶಿಶ್ ಮಿಶ್ರಾ ಅವರನ್ನು ಹುಡುಕುತ್ತಿವೆ. ಇಬ್ಬರನ್ನು ಬಂಧಿಸಲಾಗಿದೆ ಮತ್ತು ಮೂರು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ಯುಪಿ ಸರ್ಕಾರ ಅಪರಾಧಿಗಳನ್ನು ರಕ್ಷಿಸುವ ಕೊಳಕು ಆಟಗಳನ್ನು ನಿಲ್ಲಿಸಬೇಕು” ಎಂದು ಎಸ್‌ಕೆಎಂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.
ವಿಡಿಯೋ ನೋಡಿ…
ಇದನ್ನೂ ಓದಿ: ಡ್ರಗ್ಸ್ ಕೇಸ್‌ನಲ್ಲಿ ಬಿಜೆಪಿ ಕೈವಾಡವಿದೆ ಎಂದು ಕಿಡಿ ಕಾರಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್


