ಉತ್ತರ ಪ್ರದೇಶದ ಲಕ್ನೋದಿಂದ ಮಹಾರಾಷ್ಟ್ರದ ಮುಂಬೈಗೆ ರೈಲಿನಲ್ಲಿ ತೆರಳುತ್ತಿದ್ದ ಯುವತಿ ಮೇಲೆ 8 ಜನ ದರೋಡೆಕೋರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಉಳಿದವರಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ, ಎಂಟು ಜನರು ಶಸ್ತ್ರಾಸ್ತ್ರಗಳನ್ನು ಹಿಡಿದು, ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್‌ಗೆ ಮಹಾರಾಷ್ಟ್ರದ ಇಗತ್ಪುರಿ ಪಟ್ಟಣದಲ್ಲಿ ಹತ್ತಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರನ್ನು ದರೋಡೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರೋಡೆ ನಡೆಸುತ್ತಿದ್ದ ತಂಡ 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ತಡೆಯಲು ಯತ್ನಿಸಿದ ಸುಮಾರು ಐದಾರು ಜನರನ್ನು ಹರಿತವಾದ ಆಯುಧಗಳಿಂದ ತಿವಿದು ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ, ಇಬ್ಬರ ಬಂಧನ
With reference to Kalyan RPS CR. No. 771/21 the victim is twenty years old and she has been taken for medical examination by our lady officer. She is fine. We are collecting all evidences. The accused are being questioned by our team. We are checking their previous records.
— Quaiser Khalid IPS (@quaiser_khalid) October 9, 2021
ಮುಂಬೈನ ಕಾಸರ ನಿಲ್ದಾಣದಲ್ಲಿ ರೈಲು ನಿಂತಾಗ, ಪ್ರಯಾಣಿಕರು ಸಹಾಯಕ್ಕಾಗಿ ಕೂಗಲಾರಂಭಿಸಿದ್ದರು. ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೆ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಂಬೈ ಜಿಆರ್‌ಪಿಯ ಪೊಲೀಸ್ ಆಯುಕ್ತ ಖೈಸರ್ ಖಾಲಿದ್ ಮಾಹಿತಿ ನೀಡಿದ್ದಾರೆ.
“ಸಂತ್ರಸ್ತೆಗೆ ಇಪ್ಪತ್ತು ವರ್ಷ. ಆಕೆಯನ್ನು ನಮ್ಮ ಮಹಿಳಾ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಆಕೆಯ ಆರೋಗ್ಯ ಸ್ಥಿತಿ ಸುಧಾರಿಸಿವೆ. ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇವೆ. ಬಂಧಿಸಿರುವ ಆರೋಪಿಗಳನ್ನು ನಮ್ಮ ತಂಡ ಪ್ರಶ್ನಿಸುತ್ತಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ದರೋಡೆಕೋರರ ತಂಡ ರೈಲಿನಲ್ಲಿ ಪ್ರಯಾಣಿಕರಿಂದ 96,390 ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ. ಈವರೆಗೆ 34,200 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 395 (ಡಾಕಾಯಿತಿ), 397 (ದರೋಡೆ), 376 (ಡಿ) (ಸಾಮೂಹಿಕ ಅತ್ಯಾಚಾರ), 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲದ ಬಳಕೆ) ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಯಾದಗಿರಿ: ಅತ್ಯಾಚಾರ ವಿರೋಧಿಸಿದ್ದಕ್ಕೆ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ; ಮತ್ತೆ ಇಬ್ಬರ ಬಂಧನ


