ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಲಾಗಿರುವ ಪ್ರಹಸನ ಸಂಬಂಧ ಏಮ್ಸ್ ವಿದ್ಯಾರ್ಥಿ ಸಂಘಟನೆ ಕ್ಷಮೆಯಾಚಿಸಿದೆ.
“ಈ ಪ್ರಹಸನವನ್ನು ಯಾರಿಗಾದರೂ ನೋವು ನೀಡಬೇಕೆಂದು ಏಮ್ಸ್ ವಿದ್ಯಾರ್ಥಿಗಳು ಮಾಡಿಲ್ಲ” ಎಂದು ಹೇಳಿರುವ ಸಂಘವು, “ಮುಂದೆ ಈ ರೀತಿಯ ಪ್ರಮಾದಗಳು ಆಗದಂತೆ ಎಚ್ಚರಿಕೆ ವಹಿಸುತ್ತೇವೆ” ಎಂದು ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆಗೆ ವರದಿ ಮಾಡಿದೆ.
“ಏಮ್ಸ್‌ನ ಕೆಲವು ವಿದ್ಯಾರ್ಥಿಗಳಿಂದ ಮಾಡಲಾದ ರಾಮಲೀಲಾ ಸ್ಕಿಟ್‌ನ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಯಾರೊಬ್ಬರ ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲದ ಈ ಪ್ರಹಸನದ ನಡವಳಿಕೆಗಾಗಿ ನಾವು ವಿದ್ಯಾರ್ಥಿಗಳ ಪರವಾಗಿ ಕ್ಷಮೆಯಾಚಿಸುತ್ತೇವೆ. ಭವಿಷ್ಯದಲ್ಲಿ ಅಂತಹ ಯಾವುದೇ ಚಟುವಟಿಕೆ ನಡೆಯದಂತೆ ನಾವು ನೋಡಿಕೊಳ್ಳುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಹಸನದಲ್ಲಿ ರಾಮಾಯಣಕ್ಕೆ ಆಧುನಿಕ ಸ್ಪರ್ಶ ನೀಡಲಾಗಿತ್ತು. ಶೂರ್ಪನಖಿ ಲಕ್ಷ್ಮಣನ ಮುಂದೆ ‘ತು ಚೀಜ್ ಬಡಿ ಹೈ ಮಸ್ತ್ ಮಸ್ತ್’ ಹಾಡುತ್ತಿರುವುದು ಈಗ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಕಾಣಬಹುದು. ಲಕ್ಷ್ಮಣನು ಆಧುನಿಕ ಶುಪನಕಿಯ ಮೂಗನ್ನು ಕತ್ತರಿಸಿದ ನಂತರ, ಅವಳು, ‘ತು ಜಂತಾ ನಹಿ ಮೇರಾ ಭಾಯ್ ಕೌನ್ ಹೈ (ನನ್ನ ಸಹೋದರ ಯಾರೆಂದು ನಿನಗೆ ಗೊತ್ತಾ?)’ ಎಂದು ಕೇಳುತ್ತಾಳೆ.
“ಹಾಸ್ಯವಾಗಿಸಲು ಯತ್ನಿಸಿರುವ ವಿದ್ಯಾರ್ಥಿಗಳು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ” ಎಂದು ಆರೋಪಿಸಲಾಗಿದೆ. ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಶೋಹೆಬ್ ಆಕ್ತಬ್ ಮತ್ತು ಎಜುಕೇಷನ್ ಆಪ್‌ನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಆಯೋಜಕರನ್ನು ಕಟುವಾಗಿ ಟೀಕಿಸಲಾಗಿದೆ.
ಕಾರ್ಯಕ್ರಮ ಆಯೋಜಕರ ಧರ್ಮವನ್ನು ಸಾಮಾಜಿಕ ಮಾಧ್ಯಮದ ಬಳಕೆದಾರರು ಬೊಟ್ಟು ಮಾಡಿದ್ದಾರೆ. “ಅಭಿನಯಿಸುವ ಕಲಾವಿದರು ಹಿಂದೂಗಳಾಗಿರಬೇಕು” ಎಂದು ಬರೆದಿದ್ದಾರೆ. ಆಯೋಜಕರು ಮಾತ್ರವಲ್ಲ, ಕಲಾವಿದರೂ ಈ ತಪ್ಪಿಗೆ ಕಾರಣರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ. ಈ ಕಾರ್ಯಕ್ರಮವನ್ನು ಎಜುಕೇಷನ್ ಆಪ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.
ಬಿಜೆಪಿ ವಕ್ತಾರ ಸುರೇಶ್ ನಾಕ್ವಾ ಪ್ರತಿಕ್ರಿಯಿಸಿ, “ಅಕ್ತಬ್ ಶೋಯೆಬ್ ಈ ತಪ್ಪನ್ನು ಮೊದಲ ಬಾರಿಗೆ ಮಾಡುತ್ತಿಲ್ಲ. ಹಿಂದೂ ದೇವರುಗಳನ್ನು ಅಣಕಿಸುವ ಕೆಲಸವನ್ನು ಈ ಹಿಂದೆಯೂ ಮಾಡಿದ್ದಾರೆ. ಅನ್‌ಅಕಾಡೆಮಿಯವರು ವಿಡಿಯೋವನ್ನು ತಕ್ಷಣ ತೆಗೆದು ಹಾಕಿರುವುದು ಸ್ವಾಗತಾರ್ಹ. ಅಫ್ತಬ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ” ಎಂದಿದ್ದಾರೆ.
ಇದನ್ನೂ ಓದಿರಿ: ’ಹಿಂದೂಗಳಿಗೆ ಮಾತ್ರ’: ವಿವಾದ ಸೃಷ್ಟಿಸಿದ ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆ ಜಾಹೀರಾತು


