ನಾಳೆ ದೇಶಾದ್ಯಂತ ರೈಲ್ ರೋಕೋ ಚಳವಳಿಗೆ ರೈತರ ಕರೆ
PC: PTI

ಲಖಿಂಪುರ್‌ ಖೇರಿ ಹತ್ಯಾಕಾಂಡವನ್ನು ಖಂಡಿಸಿ, ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ತೇನಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಎಸ್‌ಕೆಎಂ ಸೋಮವಾರ (ಅ.18)ಕ್ಕೆ ದೇಶಾದ್ಯಂತ ರೈಲ್ ರೋಕೋ ಚಳವಳಿಗೆ ಕರೆ ನೀಡಿದೆ.

ಸಚಿವ ಅಜಯ್ ಮಿಶ್ರಾ ತೇನಿಯನ್ನು  ಸಚಿವ ಸ್ಥಾನದಿಂದ ತೆಗೆದುಹಾಕಿ, ತಕ್ಷಣ ಬಂಧಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿದೆ. ಇದೇ ಬೇಡಿಕೆಗಾಗಿ ನಾಳೆ 6 ಗಂಟೆಗಳ ಕಾಲ, ಅಂದರೆ, ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಭಾರತದಾದ್ಯಂತ ರೈಲು ಸಂಚಾರಕ್ಕೆ ತಡೆ ಒಡ್ಡಿ ರೈಲ್ ರೋಕೋ ಚಳವಳಿ ನಡೆಸಲಿದೆ.

ರೈಲ್ ರೋಕೋ ಶಾಂತಿಯುತವಾಗಿರುವಂತೆ ಮತ್ತು ರೈಲ್ವೆ ಆಸ್ತಿಗೆ ಯಾವುದೇ ರೀತಿಯ ಹಾನಿಯಾಗದಂತೆ  ಚಳವಳಿ ಮಾಡಬೇಕು ಎಂದು ಎಸ್‌ಕೆಎಂ ಮನವಿ ಮಾಡಿದೆ. ಉತ್ತರ ಪ್ರದೇಶದ ಲಖಿಂಪುರ್‌ ಖೇರಿ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆಗಳು ತೀವ್ರಗೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ರೈತ ಹೋರಾಟ ನೆಲದಲ್ಲಿ ಕೊಲೆ: ನಿಹಾಂಗ್‌‌ ಬೆಂಬಲಿತ ವ್ಯಕ್ತಿ ಪೊಲೀಸರಿಗೆ ಶರಣು

“ಅಕ್ಟೋಬರ್ 3ರಂದು ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಹತ್ಯಾಕಾಂಡದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ, ಸಚಿವ ಅಜಯ್ ಮಿಶ್ರಾ ತೇನಿ ಮಗನಾಗಿದ್ದಾರೆ. ಅಜಯ್ ಮಿಶ್ರಾ ಒಕ್ಕೂಟ ಸರ್ಕಾರದಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿರುವುದರಿಂದ, ಈ ಪ್ರಕರಣದಲ್ಲಿ ನ್ಯಾಯ ಸಿಗುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು” ಎಂದು ಎಸ್‌ಕೆಎಂ ತನ್ನ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ.

’ಸಚಿವ ಅಜಯ್ ಮಿಶ್ರಾ ತೇನಿ ರೌಡಿ ಶೀಟರ್‌ನಂತೆ ಸಾರ್ವಜನಿಕ ಸಭೆಯಲ್ಲಿ ರೈತರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ತಮ್ಮ ಭಾಷಣಗಳಲ್ಲಿ ಹಿಂದೂಗಳು ಮತ್ತು ಸಿಖ್ಖರ ನಡುವೆ ದ್ವೇಷ ಬಿತ್ತಲು ಯತ್ನಿಸಿದ್ದಾರೆ. ಶಾಮತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಹತ್ಯೆ ಮಾಡಲು ಅವರ ಕಾರುಗಳನ್ನು ಬಳಸಲಾಗಿದೆ. ಆರೋಪಿಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಇವರನ್ನು ಮೊದಲೇ ಬಂಧಿಸಬೇಕಿತ್ತು” ಎಂದು ಹೇಳಿದೆ.

ಅಜಯ್ ಮಿಶ್ರಾ ತೇನಿಯವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುತ್ತಿರುವುದು ಸಂಪುಟಕ್ಕೆ ಅವಮಾನ. ಅವರನ್ನು ಸ್ಥಾನದಿಂದ ವಜಾಗೊಳಿಸಿ, ತಕ್ಷಣ ಬಂಧಿಸಬೇಕು ಎಂದು ಎಸ್‌ಕೆಎಂ ತೀವ್ರವಾಗಿ ಒತ್ತಾಯಿಸಿದೆ.

ಇನ್ನು ಲಖಿಂಪುರ್ ಖೇರಿ ಹತ್ಯಾಕಾಂಡದ ಹುತಾತ್ಮ ರೈತರ ಅಸ್ಥಿ ಯಾತ್ರೆಯೂ ಪ್ರಸ್ತುತ ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.


ಇದನ್ನೂ ಓದಿ: ರೈತ ಹೋರಾಟ: ರಾವಣನ ಬದಲು ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ದಸರಾ ಆಚರಣೆ

LEAVE A REPLY

Please enter your comment!
Please enter your name here