ಆಂಧ್ರ ಪ್ರದೇಶದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ.
ಸೋಮವಾರ ನಡೆದ ಕೋವಿಡ್ ಪರಿಸ್ಥಿತಿಯ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ನವೆಂಬರ್ 30 ರೊಳಗೆ ಅನುಕಂಪದ ಆಧಾರದ ಮೇಲೆ ನಡೆಯುವ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಕೆಲಸ ನಿರ್ವಹಿಸಿದ ಆರೋಗ್ಯ ಮತ್ತು ವೈದ್ಯಕೀಯ, ಕಂದಾಯ ಮತ್ತು ಪೋಲಿಸ್ ಇಲಾಖೆಯಂತಹ ಮುಂಚೂಣಿ ವಿಭಾಗಗಳ ಹಲವಾರು ಉದ್ಯೋಗಿಗಳು ಕೋವಿಡ್ ಕರ್ತವ್ಯದಲ್ಲಿ ಸಾವನ್ನಪ್ಪಿದ್ದಾರೆ. ಈಗ, ಅಧಿಕಾರಿಗಳು ಕೋವಿಡ್ ಕರ್ತವ್ಯದಲ್ಲಿ ಮೃತಪಟ್ಟ ಸರ್ಕಾರಿ ನೌಕರರ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದಾಗಿ ಮೃತಪಟ್ಟವರಿಗೆ 5 ಲಕ್ಷ ಪರಿಹಾರ ನೀಡಿ: ಸಿದ್ದರಾಮಯ್ಯ ಆಗ್ರಹ
ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ಹುದ್ದೆಗಳ ಸಂಖ್ಯೆಯನ್ನು ಆಧರಿಸಿ ಉದ್ಯೋಗದ ಚಾರ್ಟ್ ತಯಾರಿಸಲಾಗಿದೆ. ಅಕ್ಟೋಬರ್ 20 ರಂದು ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಅಧಿಕಾರಿಗಳು ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗೆ ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಧಿಸೂಚನೆಯಾದ ಹುದ್ದೆಗಳ ನೇಮಕಾತಿ ಆದೇಶ ಮತ್ತು ವಿತರಣೆ ಪ್ರಕ್ರಿಯೆ ಡಿಸೆಂಬರ್ 10 ರೊಳಗೆ ಪೂರ್ಣಗೊಳ್ಳಲಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (DME) ಅಧೀನದಲ್ಲಿರುವ ಎಲ್ಲಾ ಅಧಿಸೂಚಿತ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 5 ರೊಳಗೆ ಪೂರ್ಣಗೊಳ್ಳಲಿದೆ.
ಆಂಧ್ರ ಪ್ರದೇಶ ವೈದ್ಯ ವಿಧಾನ ಪರಿಷತ್ (APVVP) ಗೆ ಸಂಬಂಧಿಸಿದಂತೆ, ಅಕ್ಟೋಬರ್ 20 ರಿಂದ 23 ರೊಳಗೆ ಉದ್ಯೋಗ ಅಧಿಸೂಚನೆ ಹೊರಡಿಸಲಾಗುವುದು ಮತ್ತು ಡಿಸೆಂಬರ್ 25 ರೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ರಾಜ್ಯದಲ್ಲಿ 176 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣವನ್ನು ಜನವರಿ 2022 ರೊಳಗೆ ಕೈಗೆತ್ತಿಕೊಳ್ಳಬೇಕು. ಒಂಬತ್ತು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಬೇಕು ಎಂದು ಆದೇಶಿಸಿದ್ದಾರೆ. ಜೊತೆಗೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಮಾನದಂಡಗಳ ಪ್ರಕಾರ ಸಾಕಷ್ಟು ಸಿಬ್ಬಂದಿ ಇರುವಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿ ಜಗನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸಾವು: ₹1 ಲಕ್ಷ ಪರಿಹಾರ ಆದೇಶ ಹಿಂಪಡೆದ ರಾಜ್ಯದ ಬಿಜೆಪಿ ಸರ್ಕಾರ


