2020-21ನೇ ಸಾಲಿನಲ್ಲಿ ರಾಜ್ಯದ ಸಾರ್ವಜನಿಕ ವಲಯದ (ಪಿಎಸ್‌ಯು) 2,87,250 ಉದ್ಯೋಗಿಗಳಿಗೆ 216.38 ಕೋಟಿ ರೂ.ಗಳ ಬೋನಸ್ (8.33% ಬೋನಸ್ ಮತ್ತು 1.67% ಎಕ್ಸ್ ಗ್ರೇಷಿಯಾ) ಅನ್ನು ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಶನಿವಾರ ಘೋಷಿಸಿದ್ದಾರೆ.
“ಲಾಭ ಗಳಿಸುವ ಮತ್ತು ನಷ್ಟದಲ್ಲಿರುವ ಪಿಎಸ್‌ಯುಗಳಲ್ಲಿ ಕೆಲಸ ಮಾಡುವ ಸಿ ಮತ್ತು ಡಿ ವರ್ಗಗಳ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ 10% ರಷ್ಟು ಬೋನಸ್ ನೀಡಲಾಗುವುದು. ಖಾಯಂ ಉದ್ಯೋಗಿಗಳಿಗೆ 8,400 ರೂಪಾಯಿಗಳನ್ನು ನೀಡಲಾಗುವುದು” ಎಂದು ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪಟಾಕಿ ಬ್ಯಾನ್: 4 ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್
ಕೊರೊನಾದ ಮೊದಲ ಅಲೆಯು ರಾಜ್ಯದ ಆರ್ಥಿಕ ಬೆಳವಣಿಗೆ ಮೇಲೆ ತೀವ್ರವಾಗಿ ಪರಿಣಾಮ ಬೀರಿತ್ತು. ಎರಡನೇ ಅಲೆಯಂತೂ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ ಎಂದು ಪ್ರಕಟಣೆ ನೆನಪಿಸಿದೆ.
ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳು, ತಮಿಳುನಾಡು ಉತ್ಪಾದನೆ ಮತ್ತು ವಿತರಣಾ ನಿಗಮ, ತಮಿಳುನಾಡು ನಾಗರಿಕ ಸರಬರಾಜು ನಿಗಮ ಮತ್ತು ತಮಿಳುನಾಡು ಚಹಾ ತೋಟ ಕಾರ್ಪೊರೇಷನ್ ಲಿ. ಸೇರಿದಂತೆ ರಾಜ್ಯದ ಪಿಎಸ್‌ಯುಗಳ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಕೊರೊನಾ ಅಲೆಗಳಿಂದ ತೀವ್ರ ಪರಿಣಾಮ ಎದುರಿಸಿವೆ.
ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಈ ನೌಕರರ ಕುಟುಂಬದ ಹಿತದೃಷ್ಟಿಯಿಂದ ಅವರಿಗೆ ಪೂರ್ಣ ವೇತನ ನೀಡಲಾಗಿದೆ. ಈ ವರ್ಷ, ಸಾರ್ವಜನಿಕ ಸಂಸ್ಥೆಗಳ ಉದ್ಯೋಗಿಗಳಿಗೆ ದೀಪಾವಳಿಯನ್ನು ಆಚರಿಸಲು ಸಹಾಯ ಮಾಡುವುದಕ್ಕಾಗಿ, 2020-21 ನೇ ಸಾಲಿನ ಬೋನಸ್ ಮತ್ತು ಎಕ್ಸ್-ಗ್ರೇಷಿಯಾವನ್ನು ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: NEET ವಿರುದ್ಧ ಮಸೂದೆ ಅಂಗೀಕರಿಸಿದ ತಮಿಳುನಾಡು ಸರ್ಕಾರ; ಸಿಎಂ ಸ್ಟಾಲಿನ್ ಹೇಳಿದ್ದೇನು?


