ಸಿಎಂ ‘ಬುರುಡೆ ಬೊಮ್ಮಾಯಿ’ ಬಿಜೆಪಿ ‘ಬಂಡಲ್’: ಸಿದ್ದರಾಮಯ್ಯ | Naanu gauri

‘ಎರಡೂಕಾಲು ವರ್ಷಗಳಲ್ಲಿ ಬಿಜೆಪಿ ಏನೆಲ್ಲಾ ಕೆಲಸ ಮಾಡಿದೆ ಎಂದು ಪಟ್ಟಿಕೊಡಲಿ, ಐದು ವರ್ಷದ ನನ್ನ ಆಡಳಿತದಲ್ಲಿ ನಾನು ಯಾವೆಲ್ಲಾ ಯೋಜನೆ ಜಾರಿ ಮಾಡಿದ್ದೆ ಎಂದು ಪಟ್ಟಿ ಕೊಡುತ್ತೇನೆ. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆಯಾಗಲಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲೆಸೆದಿದ್ದಾರೆ. ಮುಖ್ಯಮಂತ್ರಿಯನ್ನು ‘ಬುರುಡೆ ಬೊಮ್ಮಾಯಿ’ ಎಂದಿರುವ ಅವರು ಬಿಜೆಪಿಯನ್ನು ‘ಬಂಡಲ್’ ಎಂದು ಜರೆದಿದ್ದಾರೆ.

“ನಮ್ಮ ಸರ್ಕಾರದ ಯಾವ ಭಾಗ್ಯ ಯಾರಿಗೆ ಮುಟ್ಟಿದೆ ಎಂಬ ಲೆಕ್ಕ ಬೇಕಾ ಬೊಮ್ಮಾಯಿಯವರೇ? ಅಕ್ಕಿ ಪಡೆದ 1.10 ಕೋಟಿ ಕುಟುಂಬಗಳ 4 ಕೋಟಿ ಬಡವರ ಮನೆಗೆ ಹೋಗಿ ಕೇಳಿ ಉತ್ತರ ಕೊಟ್ಟಾರು. ಕೊರೊನಾ ಸೋಂಕಿನಿಂದ ಉದ್ಯೋಗ ಕಳೆದು ಕೊಂಡ ಜನ ಬದುಕಿದ್ದು ಅನ್ನಭಾಗ್ಯ ಅಕ್ಕಿಯಿಂದ, ಇಂದಿರಾ ಕ್ಯಾಂಟೀನಿಂದ. ನರೇಂದ್ರ ಮೋದಿಯವರು ಹೇಳಿದಂತೆ ನೀವು ಬಡಿದ ತಟ್ಟೆ, ಹಚ್ಚಿದ ದೀಪದಿಂದ ಅಲ್ಲ. ನೀವು ನಿರ್ದಯಿಗಳು, ನಾವು ಕೊಟ್ಟ ಅಕ್ಕಿಯನ್ನು ಕಸಿದುಕೊಳ್ಳಲು ಹೊರಟಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 68 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ, ಯಾವ ಸಾಧನೆಗೆ ಸಂಭ್ರಮಾಚರಣೆ?- ಸಿದ್ದರಾಮಯ್ಯ

“ಕ್ಷೀರಭಾಗ್ಯ ಯೋಜನೆಯ ಲೆಕ್ಕ ಬೇಕಾ ಬೊಮ್ಮಾಯಿಯವರೇ, ಕ್ಷೀರಭಾಗ್ಯದ ಹಾಲು ಕುಡಿದ ರಾಜ್ಯದ 1.07 ಕೋಟಿ ಶಾಲಾ ಮಕ್ಕಳನ್ನು ಕೇಳಿ. ಕೊರೊನಾ ನೆಪದಲ್ಲಿ ಅವರು ಕುಡಿಯುತ್ತಿದ್ದ ಹಾಲನ್ನು, ಮಧ್ಯಾಹ್ನದ ಬಿಸಿಯೂಟವನ್ನು ಕಿತ್ತುಕೊಂಡವರು ನೀವೇ ಅಲ್ಲವೇ? ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕೃಷಿಭಾಗ್ಯ, ಕ್ಷೀರಧಾರೆ, ಪಶುಭಾಗ್ಯ, ಶೂ ಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ ಹೀಗೆ ಹಲವು ಯೋಜನೆಗಳನ್ನು ನಿಲ್ಲಿಸಲಾಗಿದೆ. ಬಡವರಿಗೆ ನೀಡುವ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದ್ದಾರೆ. ಇದೇನಾ ಬಿಜೆಪಿ ಅವರ ಅಭಿವೃದ್ಧಿ?” ಎಂದು ಅವರು ಪ್ರಶ್ನಿಸಿದ್ದಾರೆ.

“ನಾವು ಜಾರಿ ಮಾಡಿದ್ದ ಅನುಗ್ರಹ ಯೋಜನೆಯನ್ನು ನಿಲ್ಲಿಸುವ ಮೂಲಕ ಬಡ ರೈತರ, ಹೈನುಗಾರರ, ಕುರಿಗಾಹಿಗಳ ಬದುಕನ್ನು ಸಂಕಷ್ಟಕ್ಕೀಡು ಮಾಡಿದವರು ಬಿಜೆಪಿಯವರು. ಈ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದೆಯೇ? ಲಾಕ್ ಡೌನ್ ಇದ್ದಾಗ ಬಡವರಿಗೆ ಉಚಿತವಾಗಿ ಹತ್ತು ಕೆ.ಜಿ ಅಕ್ಕಿ ಕೊಡಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಒತ್ತಾಯಿಸಿದರೆ ಯಡಿಯೂರಪ್ಪ ಅವರು ಸರ್ಕಾರದ ಬಳಿ ಹಣವಿಲ್ಲ ಎಂದರು. ಜನರ ಕಷ್ಟಕಾಲದಲ್ಲಿ ನೆರವಿಗೆ ಧಾವಿಸದ ಸರ್ಕಾರ ಇದ್ದರೆಷ್ಟು ಹೋದರೆಷ್ಟು?
ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಕೊಡ್ತೀವಿ ಎಂದು ಹೇಳಿ ಇವತ್ತಿನವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ. ತಂದೆ, ತಾಯಿ ಕುಟುಂಬವನ್ನು ಕಳೆದುಕೊಂಡು ಸಾವಿರಾರು ಮಕ್ಕಳು ಅನಾಥವಾಗಿವೆ. ಆ ಮಕ್ಕಳ ಭವಿಷ್ಯಕ್ಕೆ ಯಾರು ಹೊಣೆ?” ಎಂದು ಅವರು ಕೇಳಿದ್ದಾರೆ.

“ನಮ್ಮ ಸರ್ಕಾರ ವಾರ್ಷಿಕ 3 ಲಕ್ಷ ಮನೆಗಳಂತೆ 5 ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು, ಈಗಿನ ಸರ್ಕಾರ ಒಂದೇ ಒಂದು ಮನೆ ಕಟ್ಟಿ ಕೊಟ್ಟ ಉದಾಹರಣೆ ಇದ್ದರೆ ತೋರಿಸಿ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಉದ್ಯೋಗ ಖಾತ್ರಿ ಯೋಜನೆ, ಆಹಾರ ಸುರಕ್ಷತಾ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ. ಹಾಗಾದರೆ ದೇಶಕ್ಕೆ ನರೇಂದ್ರ ಮೋದಿ ಅವರ ಕೊಡುಗೆ ಏನು?” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಹಾತ್ಮರನ್ನು ಬಿಡದ ಟೀಕಾಕಾರರು ನನ್ನಂತಹ ಹುಲುಮಾನವರನ್ನು ಬಿಡುತ್ತಾರೆಯೇ?- ಸಿದ್ದರಾಮಯ್ಯ

“14ನೇ ಹಣಕಾಸು ಶಿಫಾರಸಿನ ಪ್ರಕಾರ ರಾಜ್ಯದ ತೆರಿಗೆ ಪಾಲು 38,000 ಕೋಟಿ ರೂಪಾಯಿ ಬರುತ್ತಿತ್ತು. ಈಗದು 20,000 ಕೋಟಿ ರೂಪಾಯಿಗೆ ಬಂದು ನಿಂತಿದೆ. ಕೇಂದ್ರದ ಸಹಾಯಧನ, ಜಿ.ಎಸ್.ಟಿ ಪರಿಹಾರದ ಹಣ ಇವೆಲ್ಲಾ ಕಡಿಮೆಯಾಗಿ ರಾಜ್ಯಕ್ಕೆ ಕನಿಷ್ಟ ರೂ.40,000 ಕೋಟಿ ನಷ್ಟವಾಗ್ತಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಲಿ, ರಾಜ್ಯದಿಂದ ಆಯ್ಕೆಯಾದ 25 ಮಂದಿ ಸಂಸದರಾಗಲಿ ಮೋದಿ ಅವರೆದುರು ಬಾಯಿ ಬಿಟ್ಟು ಮಾತನಾಡಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಹಾನಗಲ್ ಮತ್ತು ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಪರವಾದ ವಾತಾವರಣ ಇದೆ. ನಮ್ಮ ಸರ್ಕಾರ ಮತ್ತು ಕೇಂದ್ರದ ಮನಮೋಹನ್ ಸಿಂಗ್ ಅವರ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನೀಡಿದ್ದ ಕಾರ್ಯಕ್ರಮಗಳನ್ನು ಜನ ಇಂದಿಗೂ ಮರೆತಿಲ್ಲ. ಕಳೆದ ಎರಡೂಕಾಲು ವರ್ಷಗಳ ರಾಜ್ಯ ಸರ್ಕಾರದ ಮತ್ತು ಏಳು ವರ್ಷಗಳ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳು ಜನರನ್ನು ಭ್ರಮನಿರಸನಗೊಳಿಸಿದೆ. 2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ” ಎಂದು ಹೇಳಿದ್ದಾರೆ.

“ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಕೇಂದ್ರ ಸರ್ಕಾರ ಎರಡು ಕಾರಣ ನೀಡುತ್ತಿದೆ. ಒಂದು ಹಿಂದಿನ ಯು.ಪಿ.ಎ ಸರ್ಕಾರ ಕಚ್ಚಾತೈಲದ ಮೇಲೆ ಸಾಲ ಮಾಡಿತ್ತು. ಎರಡನೆಯದು ಬೆಲೆಯೇರಿಕೆ ಇಂದ ಬಂದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡುತ್ತಿದ್ದೇವೆ ಎಂದು. ಇದನ್ನು ಮನ್ ಕೀ ಬಾತ್ ನಲ್ಲಿ ಮೋದಿಯವರು ಹೇಳಿದ್ದಾರೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ; ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಸಿದ್ದರಾಮಯ್ಯ

“ತೈಲಬಾಂಡ್ ಖರೀದಿ ಆರಂಭ ಮಾಡಿದ್ದು ವಾಜಪೇಯಿ ಸರ್ಕಾರ. ಒಟ್ಟು 1 ಲಕ್ಷದ 40 ಸಾವಿರ ರೂಪಾಯಿ ಮೌಲ್ಯದ ತೈಲಬಾಂಡ್ ಖರೀದಿ ಮಾಡಲಾಗಿದೆ. ಈವರೆಗೆ ತೀರಿಸಿರುವ ಸಾಲ 3,500 ಕೋಟಿ. ವಾರ್ಷಿಕ 10,000 ಕೋಟಿ ಬಡ್ಡಿ ಕಟ್ಟಲಾಗಿದೆ. 2014 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9 ರೂಪಾಯಿ 21 ಪೈಸೆ, ಡೀಸೆಲ್ 3 ರೂಪಾಯಿ 45 ಪೈಸೆ ಇತ್ತು, ಈಗ ಡೀಸೆಲ್ ಮೇಲೆ 31 ರೂಪಾಯಿ 84 ಪೈಸೆ, ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆ ಗೆ ಹೆಚ್ಚಾಗಿದೆ” ಎಂದು ಲೆಕ್ಕ ಹೇಳಿದ್ದಾರೆ.

“ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಬೆಲೆ 47 ರೂಪಾಯಿ ಇತ್ತು, ಇಂದು 100 ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆ 70 ಇತ್ತು ಇಂದು 112 ರೂಪಾಯಿ ಆಗಿದೆ. ಏಳು ವರ್ಷಗಳಲ್ಲಿ ಡೀಸೆಲ್ ಪೆಟ್ರೋಲ್ ಮೇಲೆ ಸಂಗ್ರಹವಾಗಿರುವ ತೆರಿಗೆ 23 ಲಕ್ಷ ಕೋಟಿ. ಒಟ್ಟು ಸಾಲ ಇರುವುದೇ 1‌ ಲಕ್ಷದ 40 ಸಾವಿರ ಕೋಟಿ” ಎಂದು ತಿಳಿಸಿದ್ದಾರೆ.

“ಯು.ಪಿ.ಎ ಅವಧಿಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ವೊಂದಕ್ಕೆ 120- 125 ಡಾಲರ್ ಇತ್ತು. ಈಗ 70-80 ಡಾಲರ್ ಇದೆ. ಇದು 2013 ರಿಂದ 16 ರ ವರೆಗೆ 45, 46, 49 ಡಾಲರ್ ಆಗಿತ್ತು. ಆಗ ಪೆಟ್ರೋಲ್ ಬೆಲೆ ಇಳಿಕೆ ಮಾಡಿ ಜನರಿಗೆ ಲಾಭವನ್ನು ವರ್ಗಾವಣೆ ಮಾಡಿದ್ದರಾ? 2013 ರಲ್ಲಿ ಒಂದು ಸಿಲಿಂಡರ್ ಬೆಲೆ 414 ರೂಪಾಯಿ ಇತ್ತು. ಇವತ್ತು 980 ರೂಪಾಯಿ ಆಗಿದೆ. ಮೋದಿ ಹೇಳಿದ ಅಚ್ಚೇ ದಿನ್ ಎಲ್ಲಿದೆ? ಡೀಸೆಲ್ ಬೆಲೆ ಹೆಚ್ಚಾದರೆ ಸಾಗಾಣಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತೆ” ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

“ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂಕಾಲು ವರ್ಷ ಆಗಿದೆ. ಈ ಅವಧಿಯಲ್ಲಿ ಸೂರಿಲ್ಲದ ಬಡವರಿಗೆ ಒಂದೇ ಒಂದು ಮನೆಯನ್ನು ಕಟ್ಟಿಸಿಕೊಟ್ಟಿಲ್ಲ. ಅದಕ್ಕಾಗಿಯೇ ನಿನ್ನೆ ನಾನು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಬಸವರಾಜ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದೆ. ಇದಕ್ಕೆ ಅವರು ಉತ್ತರವನ್ನೇ ಕೊಟ್ಟಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಮೈಷುಗರ್ ಕಾರ್ಖಾನೆ ಪುನರ್ ಆರಂಭಿಸುತ್ತೇವೆ: ಸಿದ್ದರಾಮಯ್ಯ

LEAVE A REPLY

Please enter your comment!
Please enter your name here