Homeಚಳವಳಿನಾವು ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಮೈಷುಗರ್ ಕಾರ್ಖಾನೆ ಪುನರ್ ಆರಂಭಿಸುತ್ತೇವೆ: ಸಿದ್ದರಾಮಯ್ಯ

ನಾವು ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಮೈಷುಗರ್ ಕಾರ್ಖಾನೆ ಪುನರ್ ಆರಂಭಿಸುತ್ತೇವೆ: ಸಿದ್ದರಾಮಯ್ಯ

- Advertisement -
- Advertisement -

ಮಂಡ್ಯ ಜಿಲ್ಲೆಯ ಜೀವನಾಡಿ ಎನಿಸಿಕೊಂಡಿದ್ದ ಮೈಷುಗರ್ ಕಾರ್ಖಾನೆ ಸ್ಥಗಿತಗೊಂಡಿದೆ. ಅದನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸಿವೆ. ಈ ಕುರಿತು ಇಂದು ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ನಾವು ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಮೈಷುಗರ್ ಕಾರ್ಖಾನೆ ಪುನರ್ ಆರಂಭಿಸುತ್ತೇವೆ’ ಎಂದು ಘೋಷಿಸಿದ್ದಾರೆ.

ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಳಿ ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯವಿರುವ ಅನುದಾನ ನೀಡುವಂತೆ ಮಾತನಾಡುತ್ತೇನೆ. ಒಂದು ವೇಳೆ ಅವರು ಈ ಕೆಲಸ ಮಾಡದಿದ್ದರೆ ಮತ್ತೆ ನಾವು ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗಾಗಿ ಕಾರ್ಖಾನೆಯನ್ನು ಪುನರ್ ಆರಂಭಿಸುತ್ತೇವೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿರುವ 65 ಸಕ್ಕರೆ ಕಾರ್ಖಾನೆಗಳ ಪೈಕಿ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಎಂದರೆ ಮೈಶುಗರ್ ಕಾರ್ಖಾನೆ. ಸ್ವಾತಂತ್ರ್ಯ ಪೂರ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಾರ್ಖಾನೆಯನ್ನು ಸ್ಥಾಪಿಸಿದ್ದರು. ಇದರ ಖಾಸಗೀಕರಣ ಜನದ್ರೋಹ ಎಂದು ಕಿಡಿಕಾರಿದರು.

ಮೈಶುಗರ್ ಕಾರ್ಖಾನೆ ಹಲವು ವರ್ಷಗಳ ಕಾಲ ಲಾಭದಲ್ಲೇ ಇತ್ತು, ಈಗ ನಷ್ಟಕ್ಕೆ ಸಿಲುಕಿದೆ. ಈ ನಷ್ಟಕ್ಕೆ ಸರ್ಕಾರ ಹೊಣೆಯೇ ಹೊರತು ರೈತರಲ್ಲ. ಸರ್ಕಾರದ ಹಲವು ಕಾರ್ಖಾನೆಗಳು, ಸಂಸ್ಥೆಗಳು ನಷ್ಟದಲ್ಲಿವೆ.‌ ಅವುಗಳನೆಲ್ಲ ಮಾರಾಟ ಮಾಡೋಕಾಗುತ್ತಾ? ನಷ್ಟಕ್ಕೆ ಕಾರಣಗಳನ್ನು ಪತ್ತೆಹಚ್ಚಿ, ಪುನರುಜ್ಜೀವನಗೊಳಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಮೈಶುಗರ್ ಕಾರ್ಖಾನೆ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ನಷ್ಟಕ್ಕೆ ಕಾರಣಗಳೇನು ಎನ್ನುವುದನ್ನು ವಿವರಿಸಿ, ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವಂತೆ ಒತ್ತಾಯಿಸಿದ್ದೆ. ಮಂಡ್ಯದ ಖಾಸಗಿ ಸಕ್ಕರೆ ಕಾರ್ಖಾನೆಗಳು ಲಾಭಗಳಿಸುತ್ತವೆ, ಆದರೆ ಸರ್ಕಾರಿ ಕಾರ್ಖಾನೆಗೆ ಏಕೆ ಲಾಭ ಗಳಿಸಲು ಸಾಧ್ಯವಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಕಾರ್ಖಾನೆ ಉಳಿಯಬೇಕು ಎಂಬ ಉದ್ದೇಶದಿಂದ ರೂ. 145 ಕೋಟಿ ಅನುದಾನ ನೀಡಿದ್ದೆ. ಬಿ.ಎಸ್ ಯಡಿಯೂರಪ್ಪನವರು ಮಂಡ್ಯ ಜಿಲ್ಲೆಯವರು, ಅವರು ಈ ಕಾರ್ಖಾನೆಯನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರ ಕಾಲದಲ್ಲೇ ಖಾಸಗೀಕರಣಗೊಳಿಸುವ ಕೆಲಸ ಆರಂಭ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಖಾನೆಗೆ ಸಂಬಂಧಿಸಿದ ಆಸ್ತಿ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಇದೆ. ರವೀಂದ್ರ ಕಲಾಕ್ಷೇತ್ರದ ಎದುರು ಭಾಗದಲ್ಲಿ ಕಾರ್ಖಾನೆಗೆ ಸೇರಿದ ಭೂಮಿ ಇದೆ. ಈ ಭೂಮಿಯನ್ನು ಅಭಿವೃದ್ಧಿಪಡಿಸಿ, ಅದರಿಂದ ಬರುವ ಆದಾಯವನ್ನು ಕಾರ್ಖಾನೆಗೆ ಬಳಕೆ ಮಾಡಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಮೈಶುಗರ್ ಸಕ್ಕರೆ ಕಾರ್ಖಾನೆಯೊಂದಿಗೆ ಮಂಡ್ಯದ ಜನರಿಗೆ ಭಾವನಾತ್ಮಕ ಸಂಬಂಧವಿದೆ. ರೈತ ಹಿತರಕ್ಷಣಾ ವೇದಿಕೆಯವರು ಮೈಸೂರಿನಲ್ಲಿ ಧರಣಿ ಮಾಡುತ್ತಿದ್ದಾರೆ, ಯಾವುದೇ ಕಾರಣಕ್ಕೂ ಸರ್ಕಾರ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂದು ಸದನದಲ್ಲಿ ಆಗ್ರಹಿಸಿದ್ದೆ. ನಮ್ಮ ಒತ್ತಡಕ್ಕೆ ಮಣಿದು ಬಿಜೆಪಿ ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಕೈಬಿಟ್ಟಿತ್ತು. ಈಗ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ, ಶೀಘ್ರ ಕಾರ್ಯಾರಂಭಗೊಳಿಸುವಂತೆ ಒತ್ತಾಯಿಸುತ್ತೇನೆ ಎಂದರು.

ಪ್ರತಿಭಟನೆಗೆ ಲಾರಿ ಮಾಲೀಕರು ಸಂಘ, ಮಂಡ್ಯ ಜಿಲ್ಲಾ ಒಕ್ಕಲಿಗರ ಸಂಘ, ಕನ್ನಡ ಸೇನೆ ಕರ್ನಾಟಕ, ಅಖಂಡ ಕರ್ನಾಟಕ ರೈತ ಸಂಘ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು. ರೈತ ಮುಖಂಡರಾದ ಕೆ.ಬೋರಯ್ಯ, ಸುನಂದಾ ಜಯರಾಂ, ದಲಿತ ಮುಖಂಡರಾದ ಎಂ.ಬಿ ಶ್ರೀನಿವಾಸ್, ಸಿಐಟಿಯುನ ಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಇದನ್ನೂ ಓದಿ: ಮೈಶುಗರ್ ಖಾಸಗೀಕರಣಕ್ಕೆ ಡಿ.ಕೆ.ಶಿವಕುಮಾರ್ ಆಕ್ರೋಶ: ಉಗ್ರ ಹೋರಾಟದ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....