ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಭಾನುವಾರ ವರದಿಯಾಗಿದೆ. ಆದರೆ ಬಾವಿಗೆ ಹಾರಿರುವ ನಾಲ್ವರಲ್ಲಿ ಒಂದು ಮಗುವನ್ನು ರಕ್ಷಿಸಲಾಗಿದೆ.
ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು 28 ವರ್ಷದ ಲಕ್ಷ್ಮಿ ಏಳಕೆ ಎಂದು ಗುರುತಿಸಲಾಗಿದೆ. ಅವರ ಮಕ್ಕಳಾದ ಗೌರಮ್ಮ (6) ಮತ್ತು ಸಾವಿತ್ರಿ (1) ಕೂಡಾ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬಾವಿಯಲ್ಲಿ ಮುಳುಗುತ್ತಿದ್ದ ಅವರ ಮತ್ತೊಬ್ಬ ಮಗಳು ಈಶ್ವರಿ (4) ಎಂಬವರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ‘ಕರ್ನಾಟಕ ಯುವ ನೀತಿ-2021’ ರೂಪಿಕರಣ ಸಮಿತಿಯಲ್ಲಿ ‘ಚಕ್ರವರ್ತಿ ಸೂಲಿಬೆಲೆ’!
ಮೃತ ಮಹಿಳೆಯು ಮೂರು ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕಾಗಿ ಗಂಡನ ಮನೆಯವರು ಅವರಿಗೆ ಕಿರುಕುಳ ನೀಡುತ್ತಿದ್ದರು ಎಂದು ಪ್ರಜಾವಾಣಿ ಉಲ್ಲೇಖಿಸಿದೆ. ಇದರಿಂದ ಬೇಸೆತ್ತಿದ್ದ ಲಕ್ಷ್ಮಿ ಅವರು ಗ್ರಾಮದ ಹೊರ ವಲಯದ ಬಾವಿಗೆ ತನ್ನ ಮೂವರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ನಿಂಬರ್ಗಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ಇದನ್ನೂ ಓದಿ: ಕರ್ನಾಟಕ: ಒಂದುವರೆ ವರ್ಷದಲ್ಲಿ 746 ರೈತರ ಆತ್ಮಹತ್ಯೆ; ದೇಶದಲ್ಲೇ 2ನೇ ಸ್ಥಾನ


