ಮರ್ಯಾದೆಗೇಡು ಹತ್ಯೆಯಾಗಿರುವ ರವಿ ನಿಂಬರಗಿ

ಯುವತಿಯ ಎದುರೇ ಪ್ರಿಯಕರನನ್ನು ಮಾರ್ಯದೆಗೇಡು ಹತ್ಯೆ ಮಾಡಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಲಿಂಗಾಯತ ಸಮುದಾಯದ ರವಿ ನಿಂಬರಗಿ (34) ಅವರನ್ನು ಮರ್ಯಾದೆಗೇಡು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಗ್ರಾಮದ ಹೊಲವೊಂದರ ಬಾವಿಯಲ್ಲಿ ರವಿ ನಿಂಬರಗಿ ಮೃತ ದೇಹ ಪತ್ತೆಯಾಗಿದೆ. ವಿರೋಧದ ನಡುವೆಯೂ ಯುವಕ-ಯುವತಿ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಮನೆಯವರ ವಿರೋಧವಿತ್ತು ಎಂದು ತಿಳಿದುಬಂದಿದೆ.

“ಪ್ರೀತಿಸುತ್ತಿದ್ದ ಜೋಡಿಯನ್ನು ಬೇರೆ ಮಾಡುವ ಸಂಬಂಧ ಯುವತಿ ಕಡೆಯವರು ಅ.21ರಂದು ರವಿ ನಿಂಬರಗಿಯನ್ನು ಹೊತ್ತುಕೊಂಡು ಹೋಗಿ ಹೊಡೆಯುತ್ತಿದ್ದರು. ಪ್ರಿಯಕರ ತೊಂದರೆಗೆ ಸಿಲುಕಿರುವುದಾಗಿ ಸ್ವತಃ ಯುವತಿಯೇ ಪೊಲೀಸ್‌ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಳು” ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಯುವತಿ ನೀಡಿದ ಮಾಹಿತಿ ಆಧರಿಸಿ ದೂರು ದಾಖಲಿಸಿಕೊಳ್ಳಲಾಗಿದೆ. ರವಿ ನಿಂಬರಗಿ ಹಾಗೂ ಅದೇ ಗ್ರಾಮದ ಮುಸ್ಲಿಂ ಯುವತಿ ಅಮ್ರಿನ್‌(24) ಅವರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಯುವತಿಯ ತಂದೆ, ತಾಯಿ, ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರೇಮಿಗಳಿಗೆ ಈ ಸಂಬಂಧ ಎಚ್ಚರಿಕೆಯನ್ನೂ ನೀಡಿದ್ದರು ಎಂದು ಎಸ್‌ಪಿ ಮಾಹಿತಿ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಯುವಕನ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬದವರು ನಾಪತ್ತೆಯಾಗಿದ್ದರು. ಮೂರು ತನಿಖಾ ತಂಡಗಳನ್ನು ಪೊಲೀಸರು ರಚಿಸಿದ್ದರು. “ಯುವತಿಯ ಸಹೋದರ ಹಾಗೂ ಮಾವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ” ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿರಿ: ಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು

LEAVE A REPLY

Please enter your comment!
Please enter your name here