ಉತ್ತರ ಪ್ರದೇಶದ ಲಖಿಂಪುರ ಖೇರಿ ರೈತರ ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಶಂಕಿತ ಡೆಂಗ್ಯೂನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಆಶಿಶ್ ಮಿಶ್ರಾ ಅವರನ್ನು ಜಿಲ್ಲಾ ಕಾರಾಗೃಹದಿಂದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರು “ಶಂಕಿತ ಡೆಂಗ್ಯೂ” ದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಅವರ ರಕ್ತದ ಮಾದರಿಯನ್ನು ತಪಾಸಣೆಗಾಗಿ ಕಳಿಸಲಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಜೈಲು ಅಧಿಕಾರಿಗಳೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹಿರಿಯ ಜೈಲು ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾರ ರಕ್ತದ ಮಾದರಿಯನ್ನು ಡೆಂಗ್ಯೂ ದೃಢೀಕರಣಕ್ಕಾಗಿ ಲಕ್ನೋದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಇನ್ನೊಬ್ಬ ಹಿರಿಯ ಜೈಲು ಅಧಿಕಾರಿ ದೃಢಪಡಿಸಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಹತ್ಯಾಕಾಂಡದ ವರದಿ ವಿಳಂಬ: ಯುಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ
“ಆಶಿಶ್ ಮಿಶ್ರಾ ಡೆಂಗಿಯಿಂದ ಬಳಲುತ್ತಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅವರ ರಕ್ತದ ಮಾದರಿಯನ್ನು ಶುಕ್ರವಾರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಚಿತ್ರಣ ಸ್ಪಷ್ಟವಾಗಲಿದೆ” ಎಂದು ಲಖಿಂಪುರ್ ಖೇರಿ ಜಿಲ್ಲಾ ಕಾರಾಗೃಹದ ಅಧೀಕ್ಷಕ ಪಿಪಿ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಲಖಿಂಪುರ್ ಖೇರಿ ಘಟನೆಯ ಪ್ರಮುಖ ಆರೋಪಿ. ಘಟನೆಗೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಸೇರಿದಂತೆ 13 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ.
ಅಕ್ಟೋಬರ್ 3ರಂದು ಲಖಿಂಪುರ್ ಖೇರಿಯಲ್ಲಿ ಮೂರು ವಾಹನಗಳು ಹರಿದು ಒಬ್ಬ ಪತ್ರಕರ್ತ ಹಾಗೂ ನಾಲ್ವರು ರೈತರು ಹತ್ಯೆಯಾಗಿದ್ದರು. ಜೊತೆಗೆ ಭುಗಿಲೆದ್ದ ಪ್ರತಿರೋಧದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರೂ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್‌ರನ್ನು ಅಕ್ಟೋಬರ್ 9ರಂದು ಬಂಧಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್ ದಾಖಲಾಗಿವೆ.
ಇದನ್ನೂ ಓದಿ: ರೈತ ಹೋರಾಟದ ನೆಲದಲ್ಲಿ ಹತ್ಯೆ: ಮೃತ ವ್ಯಕ್ತಿಯ ಗ್ರಾಮಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದ ಕೊಲೆ ಆರೋಪಿ


