ಭೋಪಾಲ್‌ನಲ್ಲಿ ವೆಬ್ ಸರಣಿಯೊಂದರ ಚಿತ್ರೀಕರಣ ನಡೆಸುತ್ತಿದ್ದ ಚಲನಚಿತ್ರ ನಿರ್ಮಾಪಕ ಪ್ರಕಾಶ್ ಝಾ ಅವರ ಮೇಲೆ ಬಿಜೆಪಿ ಬೆಂಬಲಿತ ಗುಂಪಾದ ಬಜರಂಗ ದಳದ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆ ಭಾನುವಾರ ನಡೆದಿದೆ. ಆದರೆ ಅವರು ಇನ್ನೂ ಬಜರಂಗದಳದ ವಿರುದ್ದ ಯಾವುದೆ ದೂರು ದಾಖಲಿಸಿಲ್ಲ ಎಂದು ಎನ್‌ಡಿಟಿವಿ ವರದಿ ಹೇಳಿದೆ.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಚಿತ್ರೀಕರಣದ ಸೆಟ್‌ನಲ್ಲಿನ ಸಿಬ್ಬಂದಿಯನ್ನು ಬೆನ್ನಟ್ಟುತ್ತಿರುವುದನ್ನು ಕಾಣಬಹುದಾಗಿದೆ. ಸಿಬ್ಬಂದಿಯೊಬ್ಬರನ್ನು ಹಿಡಿದು ಅವರ ಮೇಲೆ ದುಷ್ಕರ್ಮಿಗಳು ಮೆಟಲ್ ಲೈಟ್ ಸ್ಟ್ಯಾಂಡ್‌ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದು ವಿಡಿಯೊದಲ್ಲಿ ದಾಖಲಾಗಿದೆ.
Activists of the Bajrang Dal allegedly went on the rampage during the ongoing shooting of Prakash Jha directed web series Ashram-3 in Bhopal, ransacking property, including vehicles and also assaulting crew members @ndtv @ndtvindia pic.twitter.com/VbQvGtxqOy
— Anurag Dwary (@Anurag_Dwary) October 24, 2021
ಇದನ್ನೂ ಓದಿ: ಕರಾವಳಿ: ಯುವಜನರ ಕೈಗೆ ಶಸ್ತ್ರ ನೀಡಿದ ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳ
ಬಾಬಿ ಡಿಯೋಲ್ ನಟಿಸಿದ ಪ್ರಕಾಶ್ ಝಾ ಅವರ ವೆಬ್ ಸರಣಿ ‘ಆಶ್ರಮ್’ ಹಿಂದೂ ಧರ್ಮದ ಮೇಲಿನ ಆಕ್ರಮಣವಾಗಿದ್ದು, ಶೀರ್ಷಿಕೆಯನ್ನು ಬದಲಾಯಿಸುವವರೆಗೂ ಅದರ ಚಿತ್ರೀಕರಣವನ್ನು ಮಾಡಲು ಬಿಡುವುದಿಲ್ಲ ಎಂದು ಬಜರಂಗ ದಳದ ಕಾರ್ಯಕರ್ತರು ಹೇಳಿದ್ದಾರೆ.
ಘಟನೆ ಬಗ್ಗೆ ಪ್ರಕಾಶ್ ಝಾ ಇನ್ನೂ ಯಾವುದೆ ದೂರು ದಾಖಲಿಸಿಲ್ಲ ಎಂದು ಎನ್‌ಡಿಟಿವಿ ಉಲ್ಲೇಖಿಸಿದೆ. ಜೊತೆಗೆ ಅವರು ವೆಬ್ ಸರಣಿಯ ಹೆಸರನ್ನು ಬದಲಾಯಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಬಜರಂಗದಳದ ನಾಯಕ ತಿಳಿಸಿದ್ದಾರೆ ಎಂದು ಅದು ವರದಿ ಮಾಡಿದೆ.
ಭಾನುವಾರ ಸಂಜೆ ಅರೆರಾ ಹಿಲ್ಸ್‌ನಲ್ಲಿನ ಓಲ್ಡ್ ಜೈಲ್ ಆವರಣದಲ್ಲಿರುವ ಸೆಟ್‌ನ ಮೇಲೆ ದಾಳಿ ಮಾಡಿರುವ ಬಜರಂಗ ದಳದ ಸದಸ್ಯರ “ಪ್ರಕಾಶ್ ಝಾ ಮುರ್ದಾಬಾದ್”, “ಬಾಬಿ ಡಿಯೋಲ್ ಮುರ್ದಾಬಾದ್” ಮತ್ತು “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಕೂಗಿದ್ದಾರೆ.
“ಅವರು ಆಶ್ರಮ 1, ಆಶ್ರಮ 2 ಅನ್ನು ಮಾಡಿದ್ದಾರೆ. ಇಲ್ಲಿ ಆಶ್ರಮ 3 ರ ಚಿತ್ರೀಕರಣ ಮಾಡುತ್ತಿದ್ದರು. ಗುರುಗಳು ಮಹಿಳೆಯರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಪ್ರಕಾಶ್ ಜಾ ಅದರಲ್ಲಿ ತೋರಿಸಿದ್ದಾರೆ. ಚರ್ಚ್ ಅಥವಾ ಮದ್ರಸದ ಬಗ್ಗೆ ಅಂತಹ ಚಲನಚಿತ್ರವನ್ನು ಮಾಡಲು ಅವರಿಗೆ ಧೈರ್ಯವಿದೆಯೇ?” ಎಂದು ಭಜರಂಗದಳದ ನಾಯಕ ಸುಶೀಲ್ ಸುರ್ಹೆಲೆ ಹೇಳಿದ್ದಾರೆ.
ಇದನ್ನೂ ಓದಿ: ಬಜರಂಗದಳ ಟಾರ್ಗೆಟ್ ಮಾಡಿದ್ದ ನಾಲ್ವರು ಮುಸ್ಲಿಂ ಯುವಕರ ಬಂಧನ
“ಈ ಚಿತ್ರವನ್ನು ಮಾಡಲು ಬಿಡುವುದಿಲ್ಲ ಎಂದು ಭಜರಂಗದಳದ ಮೂಲಕ ಅವರಿಗೆ ಸವಾಲು ಹಾಕುತ್ತಿದ್ದೇವೆ. ಈಗ ಪ್ರಕಾಶ್ ಝಾ ಅವರ ಮುಖಕ್ಕೆ ಮಾತ್ರ ಮಸಿ ಬಳಿದಿದ್ದೇವೆ. ನಾವು ಬಾಬಿ ಡಿಯೋಲ್ ಅವರನ್ನು ಕೂಡಾ ಹುಡುಕುತ್ತಿದ್ದೇವೆ. ಅವರು ತನ್ನ ಸಹೋದರ ಸನ್ನಿ ಡಿಯೋಲ್ ಮೂಲಕ ಆದರೂ ಕಲಿಯಬೇಕು. ಅವರು ಎಂತಹ ದೇಶಭಕ್ತಿಯ ಚಲನಚಿತ್ರಗಳನ್ನು ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಪ್ರಕಾಶ್ ಝಾ ತಂಡದಿಂದ ಯಾರೊಬ್ಬರೂ ಆರೋಪಗಳನ್ನು ಮಾಡದಿದ್ದರೂ, ಸಂಬಂಧಪಟ್ಟವರನ್ನು ಗುರುತಿಸಿ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
“ಚಿತ್ರೀಕರಣದ ಸೆಟ್ ಮೇಲೆ ದಾಳಿ ಅಲ್ಲಿನ ಆಸ್ತಿಗಳನ್ನು ಧ್ವಂಸ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರನ್ನು ಬಂಧಿಸಲಾಗುವುದು. ಸಮಾಜಿಕ ವಿರೋಧಿಗಳು ವಾಹನಗಳನ್ನು ದೋಚಿ ತೊಂದರೆ ಮಾಡಿದ್ದಾರೆ. ಚಿತ್ರ ನಿರ್ಮಾಣಕ್ಕೆ ಭದ್ರತೆ ನೀಡಲಾಗುವುದು ಮತ್ತು ಈ ರೀತಿಯ ಘಟನೆ ಮತ್ತೆ ಸಂಭವಿಸದಂತೆ ನೋಡಿಕೊಳ್ಳಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿ ಇರ್ಷಾದ್ ವಾಲಿ ಹೇಳಿದ್ದಾರೆ.
2017 ರಲ್ಲಿ, ಮತ್ತೊಂದು ಬಲಪಂಥೀಯ ಗುಂಪಾದ ಕರ್ಣಿ ಸೇನೆಯು ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತ್’ ಚಿತ್ರದ ಸೆಟ್‌ಗಳ ಮೇಲೆ ದಾಳಿ ಮಾಡಿ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಇತರ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿತ್ತು. ಜೊತೆಗೆ ಚಿತ್ರದ ದೃಶ್ಯಗಳನ್ನು ಮಾರ್ಪಡಿಸಲು ಮತ್ತು ಅದರ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು.
ಇದನ್ನೂ ಓದಿ: ಬಜರಂಗದಳದ ‘ಮೋರಲ್ ಪೊಲೀಸಿಂಗ್’ ಅನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕಿಗೆ ಬಹಿರಂಗ ಬೆದರಿಕೆ


