Homeಮುಖಪುಟಶ್ರದ್ಧಾಂಜಲಿ; ಮಾನವತಾವಾದಿ ವೈಚಾರಿಕ ಜಿ ಕೆ ಗೋವಿಂದರಾವ್

ಶ್ರದ್ಧಾಂಜಲಿ; ಮಾನವತಾವಾದಿ ವೈಚಾರಿಕ ಜಿ ಕೆ ಗೋವಿಂದರಾವ್

- Advertisement -
- Advertisement -

ಹಿಂದೊಮ್ಮೆ ಮೈಸೂರಿನ ‘ರಂಗಾಯಣ’ದಲ್ಲಿ ನಾಟಕೋತ್ಸವವಿತ್ತು. ಅದರ ಅಂಗವಾಗಿ ಸೂಫಿ ಪರಂಪರೆ ಕುರಿತ ವಿಚಾರಸಂಕಿರಣ ಏರ್ಪಾಟಾಗಿತ್ತು. ಪಂಡಿತ್ ರಾಜೀವ ತಾರಾನಾಥರು ಉದ್ಘಾಟಿಸುವುದು, ನಾನು ಆಶಯ ಭಾಷಣ. ಜಿ.ಕೆ. ಗೋವಿಂದರಾಯರದು ಅಧ್ಯಕ್ಷತೆ. ಆದರೆ ಜ್ವರಪೀಡಿತರಾದ ರಾಜೀವ್ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ನಾನು ಕಲಿತದ್ದನ್ನೆಲ್ಲ ಸೇರಿಸಿ ಸೂಫಿಸಂ ಕುರಿತು ಪಾಂಡಿತ್ಯದ ಭಾಷಣ ಮಾಡಿದೆ. ಬಳಿಕ ಮಾತಾಡಿದ ಜಿಕೆಜಿ ಒಂದು ಪುಟ್ಟಕತೆಯನ್ನು ಹೇಳಿ ಅದರೊಳಗಿನ ಅರ್ಥವನ್ನು ಬಿಡಿಸುತ್ತಾ ಹೋದರು. ಸಮುದಾಯಗಳಲ್ಲಿರುವ ವಿವೇಕ ಮತ್ತು ಅಧ್ಯಾತ್ಮವನ್ನು ವಿವರಿಸುವ ಕತೆಯದು. ಪಾಂಡಿತ್ಯದ ಭಾರವಿಲ್ಲದೆ, ಮೊಗ್ಗು ಮುಂಜಾನೆಯ ತಂಪುಹವೆಗೆ ಅರಳಿ ದಳಗಳನ್ನು ಅರಳಿಸುವಂತೆ ಮಾತಾಡಿದರು. ನನ್ನ ಭಾಷಣ ಕೇಳುಗರ ಬುದ್ಧಿಗೆ ಹೋಗಿದ್ದರೆ, ಜಿಕೆಜಿಯವರದು ಹೃದಯಕ್ಕೆ ತಟ್ಟಿತು. ಜಿಕೆಜಿ ಅವರ ಮಾತುಗಾರಿಕೆಯನ್ನು ನಾನು ಕೇಳಿದ್ದು ಆಗಲೇ. ಅದರ ಮೇಲಿಂದ ಅವರೊಬ್ಬ ಶ್ರೇಷ್ಠ ಅಧ್ಯಾಪಕರಾಗಿದ್ದರು ಎಂದೂ ಊಹಿಸಿದೆ. ಅವರ ಒಬ್ಬ ಶಿಷ್ಯ, ಟಾಗೂರರ ‘ವೇರ್ ದಿ ಮೈಂಡ್ ಈಸ್ ವಿತೌಟ್ ಫಿಯರ್’ ಕವನದಲ್ಲಿರುವ ‘ಹೆಡ್ ಈಸ್ ಹೆಲ್ಡ್ ಹೈ’ ಎಂಬ ಪದಪುಂಜವನ್ನು ಜಿಕೆಜಿ ಎರಡು ತಾಸು ವಿವರಿಸಿದ್ದರು ಎಂದು ನೆನೆದಿದ್ದಾರೆ. ಆಶ್ಚರ್ಯವಲ್ಲ. ನಮ್ಮಲ್ಲಿ ತನ್ಮಯಗೊಳಿಸುವಂತೆ ಮಾತಾಡುವ ಪ್ರವಚನಕಾರರಿಗೆ ಬರವಿಲ್ಲ. ಆದರೆ ಅವರು ವರ್ತಮಾನದ ಕೇಡುಗಳಿಗೆ ಕಣ್ಮುಚ್ಚುವುದರಿಂದ, ಅಥವಾ ಅವಕ್ಕೆ ಪ್ರತಿರೋಧಿಸುವ ಬೆನ್ನೆಲುಬು ಇಲ್ಲದಿರುವುದರಿಂದ, ಅವರ ವಿಶ್ಲೇಷಣ ಪ್ರತಿಭೆ, ನಮ್ಮ ಪ್ರಜ್ಞೆಯನ್ನು ಕಟ್ಟುವುದಕ್ಕೆ ನೆರವಾಗುತ್ತಿಲ್ಲ.

ತಮಗೆ ಸರಿಕಾಣದ್ದನ್ನು ಖಂಡಿಸುತ್ತಿದ್ದ ಜಿಕೆಜಿಯವರದು ಅಶಾಂತ ವ್ಯಕ್ತಿತ್ವ. ಅವರು ವಾಚಕರವಾಣಿಗೂ, ರಾಜಕಾರಣಿಗಳಿಗೂ ಮಠಾಧೀಶರಿಗೂ ಲೇಖಕರಿಗೂ ಬರೆದ ಸಾರ್ವಜನಿಕ ಪತ್ರಗಳನ್ನು ಗಮನಿಸಬೇಕು. ಅಲ್ಲಿ ಸಂಬಂಧಪಟ್ಟವರ ಕೃತ್ಯ ಇಲ್ಲವೇ ಹೇಳಿಕೆ ಹೇಗೆ ತಪ್ಪೆಂದು ವಿವರಿಸುತ್ತಿದ್ದರು. ಡೆಮಾಕ್ರಸಿಯನ್ನು ಒಮ್ಮೆ ಸಂವಿಧಾನದಲ್ಲಿ ರಾಜ್ಯಪದ್ಧತಿಯಾಗಿ ಅಳವಡಿಸುವುದು ಮತ್ತು ಕಾಲಕಾಲಕ್ಕೆ ಚುನಾವಣೆ ಮಾಡುವುದು ಒಂದು ವಿಧ. ಆದರೆ ಅದನ್ನು ನಿತ್ಯ ಬದುಕಿನಲ್ಲಿ ಬದುಕುವುದು, ಅದು ಗಾಯಗೊಂಡಾಗ ತಲ್ಲಣಿಸುವುದು, ಅದರ ನೈತಿಕತೆಯನ್ನು ರಕ್ಷಿಸುವುದು ಆ ಪದ್ಧತಿಯನ್ನು ಉಳಿಸಿಕೊಳ್ಳುವ ವಿಧಾನ. ಜಿಕೆಜಿಯವರ ಪ್ರತಿರೋಧದ ಪತ್ರಗಳು ಹಾಗೂ ಧರಣಿಗಳು, ಡೆಮಾಕ್ರಸಿಯನ್ನು ಅದರ ನಿಜವಾದ ಸಾರದಲ್ಲಿ ಉಳಿಸಿಕೊಳ್ಳುವ ಕೆಲಸದ ಭಾಗವಾಗಿದ್ದವು. ಈ ಕಾರಣದಿಂದ ಜಿಕೆಜಿ ನಮ್ಮ ಧೀಮಂತ ಸಾರ್ವಜನಿಕ ಬುದ್ಧಿಜೀವಿಯಾಗಿದ್ದರು.

ಕನ್ನಡದಲ್ಲಿ ತರಗತಿಯಾಚೆಯೂ ತಮ್ಮ ವಿಚಾರದಿಂದ ಶಿಷ್ಯರನ್ನು ರೂಪಿಸುವ ಮೇಷ್ಟರ ಪರಂಪರೆಯೊಂದು ಕರ್ನಾಟಕದಲ್ಲಿದೆ. ಜಿ.ಎಸ್.ಶಿವರುದ್ರಪ್ಪ, ಲಂಕೇಶ್, ಅನಂತಮೂರ್ತಿ, ಜಿ.ಎಚ್. ನಾಯಕ, ನಾಗವಾರ, ರಾಮದಾಸ್, ಶ್ರೀಕಂಠಕೂಡಿಗೆ, ಚಂದ್ರಶೇಖರಯ್ಯ, ಬಿಳಿಮಲೆ, ಬರಗೂರು, ಕಿರಂ, ಡಿ.ಆರ್.-ಹೀಗೆ. ವಿದ್ಯಾರ್ಥಿಗಳ ಮನಸ್ಸನ್ನು ಕಟ್ಟಿದ ಮೇಷ್ಟ್ರುಗಳಲ್ಲಿ ಜಿಕೆಜಿ ಒಬ್ಬರು. ಆದರೆ ಅವರಿಗೆ ತಮ್ಮ ಉಪನ್ಯಾಸ ಅಥವಾ ಬರೆಹದ ಫಲಿತಾಂಶವನ್ನು ತಿಳಿಯುವ ಚಡಪಡಿಕೆಯಿತ್ತು. ಒಮ್ಮೆ ಒಂದು ಸಭೆಯಲ್ಲಿ ಭಾಷಣ ಮಾಡಿ, ವೇದಿಕೆಯನ್ನು ಬಿಟ್ಟು ಕೆಳಗೆ ಇಳಿದುಬಂದರು. ಕೂತಿದ್ದ ನನ್ನನ್ನು ಇಶಾರೆಯಿಂದ ಹೊರಗೆ ಕರೆದು ‘ಹೇಗಿತ್ತು ನನ್ನ ಭಾಷಣ?’ ಎಂದು ಕೇಳಿದರು. ಅವರಿಗೆ ತಮ್ಮ ಭಾಷಣ-ಬರೆಹದ ಬಗ್ಗೆ ಹೊಸ ತಲೆಮಾರಿನವರ ಪ್ರತಿಕ್ರಿಯೆ ಪಡೆದುಕೊಳ್ಳುವ ಆಸಕ್ತಿಯಿತ್ತು. ಅವರು ಕೋವಿಡ್ ದಿನಗಳಲ್ಲಿ ಗಾಂಧಿಯ ಬಗ್ಗೆ ಬರೆದ ಲೇಖನವನ್ನು ಓದಲು ಕೊಟ್ಟಿದ್ದರು. ಅದರಲ್ಲಿರುವ ಕೆಲವು ವಿಶ್ಲೇಷಣೆ ಹೇಗೆ ತಪ್ಪಾಗಬಹುದೆಂದೂ ಎಲ್ಲೆಲ್ಲಿ ಅತಿಬರವಣಿಗೆ ಆಗಿದೆಯೆಂದೂ ಪ್ರತಿಕ್ರಿಯಿಸಿದೆ. ‘ಹೌದು ಕಣ್ರಿ, ತಿದ್ದುತೀನಿ. ಥ್ಯಾಂಕ್ಸ್’ ಎಂದು ಹೇಳಿದರು.

ಬಿಕ್ಕಟ್ಟಿನ ಕಾಲದಲ್ಲಿ ಹುಟ್ಟುವ ಬರೆಹಕ್ಕೆ ಸಿಗುವ ಜೀವಂತಿಕೆಯು ಲೇಖಕರು ತಮ್ಮ ಕಾಲದ ಚಳವಳಿಗಳ ಜತೆ ಇರಿಸಿಕೊಂಡಿರುವ ಸಂಬಂಧದಿಂದಲೂ ಬರುತ್ತದೆ. ಜಿಕೆಜಿ ತಮ್ಮ ಕಾಲದ ಹಲವು ಬಗೆಯ ಚಳವಳಿಗಳ ಭಾಗವಾಗಿದ್ದರು. ಬಾಬಾಬುಡನಗಿರಿ ಹೋರಾಟದಲ್ಲಿ ಅವರಿದ್ದರು. ಸಾರ್ವಜನಿಕ ನೈತಿಕತೆಯನ್ನು ದೊಡ್ಡ ಮೌಲ್ಯವೆಂದು ಭಾವಿಸಿದ್ದ ಅವರು, ಅನಂತಮೂರ್ತಿ ಸರ್ಕಾರದ ಮನೆಯನ್ನು ಪಡೆದುಕೊಂಡರು ಎಂದು ಉಪವಾಸ ಕೂತಿದ್ದರು. ಕನ್ನಡ ವಿಶ್ವವಿದ್ಯಾಲಯದ 80 ಎಕರೆ ಭೂಮಿಯನ್ನು ಸರ್ಕಾರವು ಕೃಷ್ಣದೇವರಾಯ ಥೀಮ್‌ಪಾರ್ಕ್ ಮಾಡಲು ಕಿತ್ತುಕೊಂಡಾಗ, ನಮ್ಮ ಜತೆ ನಾಡಿನ ಎಲ್ಲ ಲೇಖಕರು ಚಳವಳಿಗಾರರು ಕೈಜೋಡಿಸಿದರು. ಆಗ ಜಿಕೆಜಿ ನೇತ್ವತ್ವದಲ್ಲಿ ದೊಡ್ಡ ಜಾಥಾ ಕ್ಯಾಂಪಸ್ಸಿಗೆ ಬಂದಿತು. ಜಾಥಾವನ್ನು ಒಳಗೆ ಬಿಡಲಿಲ್ಲ. ಆದರೆ ತಮ್ಮನ್ನು ಒಳಬಿಡಬೇಕೆಂದು ಹಠಮಾಡಿ ಅವರು ಬಂದರು. ಕುಲಪತಿಯವರ ಜತೆ ಮಾತಾಡಿದರು.

ಜಿಕೆಜಿಯವರ ಪ್ರತಿಭೆ ನಟನೆಯಲ್ಲಿ ಮತ್ತು ಅಧ್ಯಾಪನದಲ್ಲಿತ್ತು. ಬರೆಹದಲ್ಲಿ ಅಷ್ಟಾಗಿರಲಿಲ್ಲ. ಅವರು ಧಾರ್ಮಿಕ ವಿಭಜನೆಗಳಾಚೆ ಜನ ಬದುಕಿನಲ್ಲಿ ಕೇವಲ ಮನುಷ್ಯರಾಗಿ ಬದುಕುವ ಚಿತ್ರಗಳುಳ್ಳ ‘ಈಶ್ವರ-ಅಲ್ಲಾ’ ಕಾದಂಬರಿ ಬರೆದರು. ಈ ನುಡಿಗಟ್ಟು ಗಾಂಧಿಯವರ ಭಜನೆಯಿಂದ ಬಂದಿದ್ದು. ‘ನಡೆ-ನುಡಿ’ (1995) ಅವರ ಸಾಹಿತ್ಯ ವಿಮರ್ಶೆ ಮತ್ತು ವೈಚಾರಿಕ ಚಿಂತನೆ ಇರುವ ಸಂಕಲನ. ಅವರ ಬಹುತೇಕ ಬರೆಹಗಳಲ್ಲಿ ದೇಶದ ಜನರ ಮಾನವೀಯ ಸಂಬಂಧಗಳು ನಂಜಾಗುತ್ತಿರುವುದರ ಬಗ್ಗೆ ತಳಮಳವಿತ್ತು. ಈ ಕೃತಿಯಲ್ಲಿ ‘ಡಿಸೆಂಬರ್ ಆರರ ನಂತರ’ ಎಂಬ ವಿಷಾದಭರಿತ ಮತ್ತು ಭವಿಷ್ಯದ ಭಾರತದ ಬಗ್ಗೆ ಮುನ್ನೋಟವುಳ್ಳ ಲೇಖನವಿದೆ. ಅದರಲ್ಲಿ ಅವರು ಬರೆದಿರುವ ಮಾತುಗಳು, ಕಾಲು ಶತಮಾನದ ಬಳಿಕವೂ ಈಗ ಬರೆದಿದ್ದು ಎಂಬಂತಿವೆ:

“ನಮ್ಮ ದೇಶದ ದುರದೃಷ್ಟವೆಂದರೆ-ಪ್ರಾಯಶಃ ಎಲ್ಲ ದೇಶಗಳದ್ದೂ ಇದೇ ಸ್ಥಿತಿ ಇರಬಹುದು-ನಮ್ಮ ಸುತ್ತಲೂ ಗುಪ್ತವಾಗಿ ಬೆಳೆಯುತ್ತಿರುವ, ಕೆಲವೊಮ್ಮೆ ಪ್ರಕಟವಾಗಿಯೇ ತಮ್ಮ ಚಟುವಟಿಕೆಗಳಲ್ಲಿ ತೊಡಗಿರುವ ಸಮಾಜಘಾತುಕ ಶಕ್ತಿಗಳ ಬಗ್ಗೆ ನಾವು ಕಣ್ಣು ತೆರೆಯುವುದೇ ಇಲ್ಲ. ಜರ್ಮನಿಯ 30ನೇ ದಶಕದ ಇತಿಹಾಸ ನಮ್ಮ ಕಣ್ಣು ಚುಚ್ಚುವ ಹಾಗೆ ನಮ್ಮ ಎದುರಿಗಿದ್ದರೂ, ನಾವು ಕ್ರಿಯಾಶೀಲರಾಗುವುದಿಲ್ಲ. ನಮ್ಮ ಚಿಂತನೆಯ ಕ್ರಮವನ್ನು ಬದಲಿಸುವುದಿಲ್ಲ. ನಮ್ಮ ಶಿಕ್ಷಣ ಪದ್ಧತಿಯ ಮರುಪರಿಶೀಲನೆ ಮಾಡುವುದಿಲ್ಲ. ನಮ್ಮ ಮಕ್ಕಳನ್ನು ಬೆಳೆಸುವ ರೀತಿಗಳನ್ನು ವಿಮರ್ಶಿಸಿಕೊಳ್ಳುವುದಿಲ್ಲ. ಕ್ರಿಯಾಶೀಲತೆಯೆಲ್ಲ ನಮ್ಮ ಸುತ್ತಲ ಕಳ್ಳರದು, ವಿಧ್ವಂಸಕರದು, ಸಮಾಜಘಾತುಕರದು. ಅವರದು ಕ್ರಿಯೆ; ನಮ್ಮದು ಸಜ್ಜನರೂ ನಾಗರಿಕರು ಹಾಗೂ ಶಾಂತಿಪ್ರಿಯರೂ ಆದ ನಮ್ಮದು- ಪ್ರತಿಕ್ರಿಯೆ. ರೋಗವನ್ನು ತಡೆಯುವುದಲ್ಲ ನಮ್ಮ ಇಚ್ಛೆ. ರೋಗ ಉಲ್ಬಣಿಸಿದ ಮೇಲೆ ಚಿಕಿತ್ಸೆಗೆ ಪರದಾಡುವುದು”.

ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ರೂಢಿಸುವುದು ಅಧ್ಯಾಪಕ ಭಾಷಣಕಾರ ಮತ್ತು ಲೇಖಕನಾಗಿ ತಮ್ಮ ಹೊಣೆ ಎಂದು ಜಿಕೆಜಿ ಭಾವಿಸಿದ್ದರು. ತಮ್ಮ ಸಮುದಾಯದ ಸಂಪ್ರದಾಯಸ್ಥರ ವಿರುದ್ಧ ಬಂಡೇಳುತ್ತಿದ್ದ ಅವರೊಬ್ಬ ಕ್ರಿಟಿಕಲ್ ಇನಸೈಡರ್. ಸಾಹಿತ್ಯದ ಅಧ್ಯಾಪಕರಾಗಿದ್ದ ಅವರ ಚಿಂತನೆಯಲ್ಲಿ ಆಡೆನ್ ವರ್ಡ್ಸ್‌ವರ್ತ್ ಶೇಕ್ಸ್‌ಪಿಯರ್ ಬಸವಣ್ಣ ಕಬೀರ ಗಾಂಧಿ ಒಟ್ಟಿಗೆ ಕಾಣಿಸುತ್ತಾರೆ. ಪ್ರೀತಿ ಸಹಿಷ್ಠುತೆ ಪ್ರತಿಪಾದಿಸುವ ಸಂತರ ಬಗ್ಗೆ ಅವರಿಗೆ ಸೆಳೆತವಿತ್ತು. ಗಾಂಧಿಯನ್ನೂ ಅವರು ಸಂತನೆಂದೇ ಭಾವಿಸಿದ್ದರು. ಅವರು ಸಾರ್ವಜನಿಕ ಬದುಕಿನಲ್ಲಿ ನೈತಿಕತೆ ಕಳೆದುಹೋಗುವ ಬಗ್ಗೆ ಸದಾ ಚಿಂತನೆ ಮಾಡುತ್ತಿದ್ದ ದಾರ್ಶನಿಕರೂ ಆಗಿದ್ದರು. “ಪ್ರಜಾಪ್ರಭುತ್ವ ನಮ್ಮ ಯುಗದ ಹೊಸ ಧರ್ಮವಾಗಬೇಕು. ಪ್ರವಾದಿಗಳಿಲ್ಲದ, ಏಕಮೇವ ಧರ್ಮಗ್ರಂಥಗಳಿಲ್ಲದ, ಅಳಿಸಲಾಗದ ತತ್ವ ಎಂಬ ಮಾತೇ ಇಲ್ಲದ ನಿರಂತರ ಹರಿಯುವ, ನಿರಂತರ ಜೀವಂತವಾಗಿರುವ ಪ್ರತಿ ಜೀವಿಯಲ್ಲಿಯೂ ಪ್ರಕೃತಿಯ ಅನಂತಶಕ್ತಿಯನ್ನು ಕಂಡುಕೊಳ್ಳುವ ಸಾಧ್ಯತೆ ಬೆಳೆಸುವ ಈ ಧರ್ಮವೊಂದೇ ಬಹುಶಃ ಮನುಷ್ಯಧರ್ಮ” ಎಂದು ಅವರು ಪ್ರತಿಪಾದಿಸುತ್ತಿದ್ದರು.

ಬರೆಹಗಾರ ನಟ ಚಳವಳಿಗಾರ ಸಾರ್ವಜನಿಕ ಬುದ್ಧಿಜೀವಿಯಾಗಿದ್ದ ಜಿಕೆಜಿ, ಆರೋಗ್ಯಕರ ಸಮಾಜವೊಂದು ನೆಲೆಗೊಳ್ಳಬೇಕು ಎಂದು ಕೊನೆಯತನಕ ಮಾತಾಡಿದರು ಬರೆದರು ಮತ್ತು ಚಳವಳಿ ಮಾಡಿದರು. ಸದಾ ಜನರೊಡನೆ ಇರಬಯಸುತ್ತಿದ್ದ ಜಿಕೆಜಿಯವರು ಕೋವಿಡ್ ದಿನಗಳಲ್ಲಿ ಏಕಾಂಗಿಯಾದರು. ಒಂಟಿತನ ಅವರ ಚೈತನ್ಯ ಕುಗ್ಗಿಸಿರಬಹುದು. ಯಾವ ಜೀವನ ಮೌಲ್ಯಗಳಿಗೆ ಬದುಕಿನುದ್ದಕ್ಕೂ ಹೋರಾಡಿದರೋ ಅವು ಸೋಲುತ್ತಿವೆ ಅನಿಸಿದಾಗ, ತಮ್ಮ ಕನಸಿನ ಸಮಾಜ ಸಾಕಾರಗೊಳ್ಳುವುದಿಲ್ಲ ಅನಿಸಿದಾದ ಕೂಡ ಚೈತನ್ಯ ಕುಗ್ಗುತ್ತದೆ. ಅವರು ಹೊಸಪೇಟೆಗೆ ಬಂದಾಗಲೆಲ್ಲ ರಾತ್ರಿ ಊಟಕ್ಕೆ ನಾವು ಗೆಳೆಯರು ಸೇರುತ್ತಿದ್ದೆವು. ಸಂತೋಷದಿಂದ ಊಟ ಮಾಡುತ್ತಿದ್ದರು. ನಡುವೆ ಮುಖವನ್ನು ವಕ್ರವಾಗಿಸಿ, ಗಂಟೆಬಾರಿಸಿದಂತಹ ದನಿಯನ್ನು ವ್ಯಂಗ್ಯದ ಛಾಯೆಯಲ್ಲಿ ಏರಿಳಿತಗೊಳಿಸುತ್ತ, ಟೊಮೊಟೊ ಹಣ್ಣಿನಂತಹ ಕೆಮ್ಮುಖದಲ್ಲಿರುವ ಕಣ್ಣುಗಳನ್ನು ಅತ್ತಿತ್ತ ಹೊರಳಿಸುತ್ತ ಹಸ್ತವನ್ನು ತಿರುವುತ್ತ ಎದುರಾಳಿಗಳನ್ನು ಭಂಗಿಸುತ್ತಿದ್ದರು. ಹೋಟೆಲಿನ ಮಾಣಿಗಳು ದೂರದಿಂದಲೇ ನಮ್ಮ ಟೇಬಲ್ ಕಡೆ ಕಣ್ಣಿಟ್ಟು ನಾಟಕವನ್ನು ಮೆಚ್ಚುಗೆಯಿಂದ ನೋಡುತ್ತಿದ್ದರು. ಜಿಕೆಜಿ ಮೀನನ್ನು ಇಷ್ಟಪಟ್ಟು ತಿನ್ನುತ್ತಿದ್ದರು. “ನೀವು ವೈಷ್ಣವರು. ಮತ್ಸ್ಯಾವತಾರಿ ದೇವರನ್ನು ನಂಬುವವರು. ಹೀಗೆ ತಿಂದರೆ ಹೇಗೆ? ಡ್ಯಾಮಿನಲ್ಲಿ ಮೀನಸಂತತಿ ಉಳಿಯಬೇಕೊ ಬೇಡವೊ?” ಎನ್ನುತ್ತಿದ್ದೆ. “ಹೋಹೋಹೋ. ನೀವು ಶತಮಾನಗಳಿಂದ ದಿನಾ ತಿಂತಾ ಬಂದಿದ್ದೀರಿ. ಅಪರೂಪಕ್ಕೆ ಈ ಬ್ರಾಹ್ಮಣ ಎರಡು ಪೀಸ್ ತಿಂದರೆ, ಮತ್ಸ್ಯಸಂತತಿ ನಾಶವಾಗಿಬಿಡುತ್ತೊ?” ಎಂದು ಮರುಪ್ರಶ್ನೆ ಹಾಕುತ್ತಿದ್ದರು. ಅವರೊಬ್ಬ ಜೀವನಪ್ರೀತಿಯುಳ್ಳ ವರ್ಣರಂಜಿತ ವ್ಯಕ್ತಿಯಾಗಿದ್ದರು. ಶುಷ್ಕ ತಾರ್ಕಿಕರಾಗಿರಲಿಲ್ಲ. ಹೃದಯವಂತ ವಿಚಾರವಾದಿಯಾಗಿದ್ದರು. ಮಾನವತಾವಾದಿಯಾಗಿದ್ದರು. ನಮ್ಮ ಕಾಲದ ಕೇಡುಗಳಿಗೆ ನಾವು ಹೇಗೆ ದನಿಯೆತ್ತಬೇಕು ಎಂದು ತೋರಿಸಿ, ತುಂಬುಬಾಳನ್ನು ಮುಗಿಸಿ ನಿರ್ಗಮಿಸಿರುವ ಅವರಿಗೆ, ನಮ್ಮ ಔಪಚಾರಿಕವಾದ ಶ್ರದ್ಧಾಂಜಲಿಯ ಜರೂರತ್ತಿಲ್ಲ. ಬದಲಿಗೆ ಅವರ ಬರೆಹಗಳನ್ನು ಓದಿ ಮನನ ಮಾಡಬೇಕಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಆರ್‌‌ಎಸ್‌‌ಎಸ್‌ನ ಅನೇಕ ವಿಚಾರಗಳು ಎಡಪಂಥೀಯದಂತಿವೆ: ದತ್ತಾತ್ರೇಯ ಹೊಸಬಾಳೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...