ಪೊಲೀಸ್ ಕಚೇರಿಗಳ ಆವರಣದಲ್ಲಿ ಯಾವುದೇ ಧರ್ಮದ ಪೂಜಾ ಸ್ಥಳಗಳನ್ನೂ ನಿರ್ಮಾಣ ಮಾಡಬಾರದು ಎಂಬ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜಸ್ಥಾನ ಪೊಲೀಸರಿಗೆ ಸೂಚಿಸಲಾಗಿದೆ. ರಾಜಸ್ಥಾನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಪೊಲೀಸ್ ವಸತಿ) ಎ ಪೊನ್ನುಚಾಮಿ ಅವರು ಸೋಮವಾರ ಈ ಆದೇಶ ಹೊರಡಿಸಿದ್ದಾರೆ.
ರಾಜಸ್ಥಾನ ಧಾರ್ಮಿಕ ಕಟ್ಟಡಗಳು ಮತ್ತು ಸ್ಥಳಗಳ ಕಾಯ್ದೆ 1954 ರ ಅಡಿಯಲ್ಲಿ ಸಾರ್ವಜನಿಕ ಕಟ್ಟಡದಲ್ಲಿ ಯಾವುದೇ ಧಾರ್ಮಿಕ ಸ್ಥಳ ಇರುವಂತಿಲ್ಲ ಎಂದು ಅವರು ಹೇಳಿದ್ದಾರೆ. ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ರಾಜ್ಯದ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ
ಪೊನ್ನುಚಾಮಿ ಅವರು ಆದೇಶದಲ್ಲಿ, ಕಳೆದ ವರ್ಷಗಳಲ್ಲಿ, ನಂಬಿಕೆಯ ಹೆಸರಿನಲ್ಲಿ ಪೊಲೀಸ್ ಇಲಾಖೆಯ ವಿವಿಧ ರೀತಿಯ ಕಚೇರಿ, ಸಂಕೀರ್ಣಗಳು/ಪೊಲೀಸ್ ಠಾಣೆಗಳಲ್ಲಿ ಪೂಜಾ ಸ್ಥಳಗಳನ್ನು ನಿರ್ಮಿಸುವ ಪ್ರವೃತ್ತಿ ‘ಹೆಚ್ಚಾಗಿರುವುದು’ ಕಂಡುಬಂದಿದ್ದು, ಇದು ಕಾನೂನಿಗೆ ವಿರುದ್ದವಾಗಿದೆ. ಅಲ್ಲದೆ, ಪೊಲೀಸ್ ಠಾಣೆಗಳ ಆಡಳಿತ ಕಟ್ಟಡಗಳ ನಿರ್ಮಾಣಕ್ಕೆ ಸಿದ್ಧಪಡಿಸಿ ಅನುಮೋದನೆ ನೀಡಿರುವ ನಕ್ಷೆಯಲ್ಲಿ ಪೂಜಾಸ್ಥಳ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದರೆ ಪೊಲೀಸ್ ಮಹಾನಿರ್ದೇಶಕರ ಈ ಆದೇಶವನ್ನು ಖಂಡಿಸಿರುವ ಬಿಜೆಪಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂದು ಹೇಳಿದೆ. ಜೊತೆಗೆ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.
ಪೊಲೀಸರು ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವ ಬದಲು ಇಂತಹ ತರ್ಕಬದ್ಧವಲ್ಲದ ಆದೇಶ ಹೊರಡಿಸುವಲ್ಲಿ ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.
ಇದನ್ನೂ ಓದಿ: ಅಧಿಕ ಶೈಕ್ಷಣಿಕ ಅರ್ಹತೆಯಿದ್ದರೂ ಪೊಲೀಸ್ ಪೇದೆಗಳಾಗಿರುವ ರಾಜ್ಯದ ಯುವತಿಯರು


