1) ಕಾರ್ಮಿಕರಿಗೆ ಕನಿಷ್ಟ ವೇತನ ಕೊಟ್ಟರೆ ಉದ್ಯೋಗಾವಕಾಶವೇ ಕಡಿಮೆಯಾಗಿಬಿಡುತ್ತದೆ.
2) ನಮ್ಮ ನಗರಗಳಿಗೆ ಬೇರೆ ಊರುಗಳಿಂದ ಅಥವಾ ಬೇರೆ ದೇಶಗಳಿಂದ ಕಾರ್ಮಿಕರು ವಲಸೆ ಬಂದರೆ ಸ್ಥಳೀಯರಿಗೆ ಕೆಲಸ ಸಿಗುವುದು ಕಷ್ಟ ಆಗುವುದಲ್ಲದೆ ಸ್ಥಳೀಯರ ಸಂಪಾದನೆಗೂ ಏಟು ಬೀಳುತ್ತದೆ.
3) ಖಾಸಗಿ ಶಾಲೆ ಅಥವಾ ಖಾಸಗಿ ಕಾಲೇಜುಗಳಲ್ಲಿ ಓದಿದವರಿಗೆ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಓದಿದವರಿಗಿಂತ ಹೆಚ್ಚು ಸಂಬಳ ತರುವ ಕೆಲಸ ಸಿಗುತ್ತದೆ.
ಇವೆಲ್ಲ ಜನಸಾಮಾನ್ಯರು, ಕೈಗಾರಿಕೋದ್ಯಮಿಗಳು ಸೇರಿದಂತೆ ಇಡೀ ಸಮಾಜ ನೂರಾರು ವರ್ಷಗಳಿಂದ ನಂಬಿಕೊಂಡು ಬಂದ ಸಾಂಪ್ರದಾಯಿಕ ನಂಬಿಕೆಗಳಾಗಿದ್ದವು (Coventional Wisdom). ಕಡೆಯ ಮೂವತ್ತು ವರ್ಷಗಳ ತಮ್ಮ ಸಂಶೋಧನೆಗಳಿಂದ ಈ ಸಾಂಪ್ರದಾಯಿಕ ನಂಬಿಕೆಗಳು ವಾಸ್ತವ ಅಲ್ಲ ಎಂದು ತೋರಿಸಿದ ಮೂವರು ಅರ್ಥಶಾಸ್ತ್ರಜ್ಞರಿಗೆ 2021ರ ನೊಬೆಲ್ ಪ್ರಶಸ್ತಿ ಬಂದಿದೆ.
ಬರ್ಕಲಿಯ ಕ್ಯಾಲಿಫೋರ್ನಿಯ ಯುನಿವರ್ಸಿಟಿಯ ಪ್ರೊಫೆಸರ್ ಕೆನೆಡಿಯನ್ ಸಂಜಾತ ಡೇವಿಡ್ ಕಾರ್ಡ್‌ರವರು ಈ ನೊಬೆಲ್ ಬಹುಮಾನದಲ್ಲಿ ಅರ್ಧದಷ್ಟು (50%) ಪಡೆದಿದ್ದಾರೆ. ಉಳಿದರ್ಧವನ್ನು ಎಂಐಟಿಯ ಪ್ರೊಫೆಸರ್ ಜೋಷುವ ಡಿ ಯ್ಯಾಂಗ್ರಿಸ್ಟ್ (ಇಸ್ರೇಲಿಅಮೆರಿಕನ್) ಮತ್ತು ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ಗೈಡೋ ಡಬ್ಲ್ಯು ಇಂಬೆನ್ಸ್ (ಡಚಮೆರಿಕನ್) ಸಮನಾಗಿ ಹಂಚಿಕೊಂಡಿದ್ದಾರೆ.
ಈ ಆರ್ಥಿಕ ತಜ್ಞರು ತಮ್ಮ ಸಂಶೋಧನೆಗೆ “ನೈಜ ಪ್ರಯೋಗ” (Natural Experiment) ಎಂಬ ವಿಧಾನವನ್ನು ಅನುಸರಿಸಿದ್ದಾರೆ. ಬಿಡಿ ವ್ಯಕ್ತಿಗಳನ್ನು random ಆಗಿ ಅವರ ಸುತ್ತಲಿನ ಪರಿಸರ, ಅವರು ಕೆಲಸ ಮಾಡುವ ಸಂಸ್ಥೆ ಮತ್ತು ಇತರ ಪಾಲಿಸಿಗಳಿಗೆ ಸಂಬಂಧಿಸಿದ ವಿವಿಧ ಬದಲಾವಣೆಗಳಿಗೆ ಒಡ್ಡಿ ಅದರ ಪರಿಣಾಮವನ್ನು ಅಧ್ಯಯನ ಮಾಡುವುದು ಈ ನೈಜ ಪ್ರಯೋಗದ ರೀತಿ.
ಡೇವಿಡ್ ಕಾರ್ಡ್ ಮತ್ತು ಅಲನ್ ಕ್ರೂಗರ್ (ಖ್ಯಾತ ಆರ್ಥಿಕ ತಜ್ಞ, 1960-2019) ಇಬ್ಬರೂ ಕನಿಷ್ಟ ವೇತನ ನೀತಿಯಿಂದ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುವುದು (ಅಂದರೆ ಕಾರ್ಮಿಕರಿಗೆ ಇಂತಿಷ್ಟು ಕನಿಷ್ಟ ವೇತನ ಕೊಡಲೇಬೇಕು ಎಂದಾಗ, ಸಹಜವಾಗಿ ಕಂಪನಿಗಳು ಅದರಿಂದಾಗುವ ಆರ್ಥಿಕ ಹೊರೆ ತಗ್ಗಿಸಲು ತಮ್ಮಲ್ಲಿರುವ ಉದ್ಯೋಗಗಳ ಸಂಖ್ಯೆಯನ್ನೇ ಕಡಿತಗೊಳಿಸುತ್ತವೆ ಎಂಬ ಸಾಮಾನ್ಯ ನಂಬಿಕೆ) ಎಂಬ ಹಳೆಯ ನಂಬಿಕೆಯನ್ನು ತಮ್ಮ ಪ್ರಯೋಗದ ಮೂಲಕ ಪರೀಕ್ಷೆಗೆ ಒಡ್ಡುತ್ತಾರೆ. 1990ರಲ್ಲಿ ಅಮೆರಿಕಾದ ನ್ಯೂಜೆರ್ಸಿಯ ಫಾಸ್ಟ್‌ಫುಡ್ ಸೆಕ್ಟರ್‌ನಲ್ಲಿ ಕಾರ್ಮಿಕರ ಕನಿಷ್ಟ ವೇತನವನ್ನು $4.25ರಿಂದ $5.05ಗೆ ಹೆಚ್ಚಿಸಲಾಗುತ್ತದೆ. ಅದೇ ಸಮಯದಲ್ಲಿ ಪಕ್ಕದ ಪೆನ್ಸಿಲ್ವೆನಿಯದಲ್ಲಿ (Pennsylvania) ಕನಿಷ್ಟ ವೇತನದಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ. ಈ ಇಬ್ಬರೂ ಆರ್ಥಿಕ ತಜ್ಞರು ಎರಡೂ ರಾಜ್ಯಗಳ ಆ ಸಮಯದ ಉದ್ಯೋಗಗಳ ಸಂಖ್ಯೆಯಲ್ಲಿನ ಬದಲಾವಣೆಯನ್ನು ಹೋಲಿಸಿ ನ್ಯೂಜೆರ್ಸಿಯಲ್ಲಿ ಕನಿಷ್ಟ ವೇತನವನ್ನು ಹೆಚ್ಚಿಸಿದ್ದರೂ ಉದ್ಯೋಗಗಳ ಸಂಖ್ಯೆಯಲ್ಲಿ ಕಡಿತವಾಗಿಲ್ಲದಿದ್ದನ್ನು ಗುರುತಿಸುತ್ತಾರೆ. ಈ ಮೂಲಕ ಕನಿಷ್ಟ ವೇತನ ಪದ್ಧತಿಯು ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆ ವಾಸ್ತವ ಅಲ್ಲ ಎಂದು ಸಾಧಿಸುತ್ತಾರೆ. ಇವರ ಸಂಶೋಧನೆಯ ಆಧಾರದ ಮೇಲೆ ಹಲವು ಕಡೆ ಇದೇ ಮಾದರಿಯ ಪ್ರಯೋಗಗಳು ನಡೆದು ಈ ತಜ್ಞರು ಕಂಡುಹಿಡಿದ ಸತ್ಯ ಪದೇಪದೇ ಸಾಬೀತಾಗುತ್ತದೆ.
ಇವರ ಸಂಶೋಧನೆ ಸಾಬೀತುಪಡಿಸಿದ ವಾಸ್ತವದ ಆಧಾರದ ಮೇಲೆಯೇ ಬೈಡೆನ್ ಸರ್ಕಾರ ಅಮೆರಿಕದಲ್ಲಿ ಕನಿಷ್ಟ ವೇತನ ಹೆಚ್ಚಿಸಿ ಕಾನೂನು ಜಾರಿಗೊಳಿಸಿದ್ದು ಇಲ್ಲಿ ಪ್ರಸ್ತುತ ಎನಿಸುತ್ತದೆ. ಹಾಗೆಯೇ ಕರ್ನಾಟಕದಲ್ಲಿ 2016ರಲ್ಲಿ ಪೌರ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಗೊಳಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಯಾವುದೇ ಸರ್ಕಾರ ಖಾಸಗಿ ಕಂಪನಿಗಳು ತನ್ನ ಸಿಬ್ಬಂದಿಗಳಿಗೆ ಕನಿಷ್ಟ ವೇತನ ಕೊಡಬೇಕೆಂದು ನಿಯಮ ಮಾಡಿದಾಗ ಕೂಡ ಖಾಸಗಿ ಕಂಪನಿಗಳು ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡಿದ ಸಂದರ್ಭಗಳು ಬಹುತೇಕ ಇಲ್ಲ ಎಂಬ ಅಂಶ ಇವರ ಪ್ರಯೋಗಾತ್ಮಕ ಪರೀಕ್ಷೆಗಳಿಂದ ದೃಢಪಟ್ಟಿದೆ.
ಹಾಗೆಯೇ ವಲಸೆ ಕಾರ್ಮಿಕರ ಹೆಚ್ಚಿನ ವಲಸೆ ಸ್ಥಳೀಯರ ಉದ್ಯೋಗ ಮತ್ತು ಸಂಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಸಾರ್ವತ್ರಿಕ ನಂಬಿಕೆಯನ್ನು ಡೇವಿಡ್ ಕಾರ್ಡ್‌ರವರು ಅಮೆರಿಕದ ಮಿಯಾಮಿ ನಗರದ ವಸ್ತುಸ್ಥಿತಿಯ ಅಧ್ಯಯನ ಮಾಡಿ, ಅದು ಹುಸಿ ನಂಬಿಕೆಯೆಂದು ಸಾಬೀತುಗೊಳಿಸಿದ್ದಾರೆ. 1980ರಲ್ಲಿ ಕ್ಯೂಬಾದಿಂದ ಮಿಯಾಮಿ ನಗರಕ್ಕೆ ಹತ್ತರಹತ್ತಿರ ಒಂದೂಕಾಲು ಲಕ್ಷದಷ್ಟು ಕ್ಯೂಬನ್ನರು ವಲಸೆ ಬರುತ್ತಾರೆ. ಈ ವಲಸೆಯಿಂದ ಮಿಯಾಮಿ ನಗರದ ಕಾರ್ಮಿಕರ ಸಂಖ್ಯೆಯಲ್ಲಿ ಶೇ.7ರಷ್ಟು ಹೆಚ್ಚಳವಾಗುತ್ತದೆ. ಆದರೆ ಮಿಯಾಮಿ ಜನರ ಆತಂಕದಂತೆ ಸ್ಥಳೀಯ ನಾಗರಿಕರ ಉದ್ಯೋಗಾವಕಾಶಗಳಲ್ಲಿ ಮತ್ತು ವೇತನಗಳಲ್ಲಿ ಯಾವುದೇ ಇಳಿಮುಖವಾಗುವುದಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ ವಲಸೆಯಿಂದ ಆಯಾ ನಗರದ productive ಆದ ಜನಗಳ ಸಂಖ್ಯೆ ಹೆಚ್ಚಾಗಿ ಅದರಿಂದ ಸಹಜವಾಗಿ ಅಲ್ಲಿನ ಆರ್ಥಿಕ ಚಟುವಟಿಕೆಯೂ ಹೆಚ್ಚುತ್ತದೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಮತ್ತು ವೇತನ ಹೆಚ್ಚಳ ಎರಡೂ ಆಗುತ್ತದೆಂದು ಡೇವಿಡ್ ಕಾರ್ಡ್‌ರವರು ತಮ್ಮ ಅಧ್ಯಯನದಿಂದ ನಿಸ್ಸಂಶಯವಾಗಿ ಸಾಬೀತುಪಡಿಸಿದ್ದಾರೆ.
ಪ್ರೊಫೆಸರ್ ಯ್ಯಾಂಗ್ರಿಸ್ಟ್ ಮತ್ತು ಪ್ರೊಫೆಸರ್ ಇಂಬೆನ್ಸ್‌ರವರು ಮುಖ್ಯವಾಗಿ ನಿತ್ಯದ ಬದುಕಿನ ಆಗುಹೋಗುಗಳು ಒಂದು ಆರ್ಥಿಕ ಸನ್ನಿವೇಶದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ನಿಖರವಾಗಿ ಅಳೆಯುವ ಎಕನಾಮಿಕ್ ಟೂಲ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಟೂಲ್‌ಗಳ ಸಹಾಯದಿಂದಲೇ ಹೆಚ್ಚು ವರ್ಷಗಳ ಕಾಲ ಶಾಲಾ ಕಾಲೇಜಿನಲ್ಲಿ ಕಲಿತವರು ಕಡಿಮೆ ವರ್ಷ ಕಲಿತವರಿಗಿಂತ ಹೆಚ್ಚು ವೇತನ ಪಡೆಯುತ್ತಾರೆ ಎಂದು ನಿರೂಪಿಸುತ್ತಾರೆ. ಇದಕ್ಕೆ ಸಂಬಂದಿಸಿದಂತೆ 1991ರಲ್ಲಿ ಇವರು ಕೈಗೊಂಡ ಒಂದು ಅಧ್ಯಯನದ ಪ್ರಕಾರ 11 ವರ್ಷ ಶಾಲಾ ಕಾಲೇಜಿನಲ್ಲಿ ಓದಿದವರಿಗಿಂತ 12 ವರ್ಷ ಓದಿದವರು 12% ಹೆಚ್ಚು ವೇತನವನ್ನೂ ಮತ್ತು 16 ವರ್ಷ ಓದಿದವರು 65% ಹೆಚ್ಚು ವೇತನವನ್ನೂ ಪಡೆಯುತ್ತಾರೆ. ಒಟ್ಟಾರೆಯಾಗಿ ಅಗತ್ಯವಿರುವ ಶಿಕ್ಷಣವನ್ನು ಅಗತ್ಯವಿರುವಷ್ಟು ಕಾಲ ಸರಿಯಾಗಿ ಕಲಿಯುವುದು ಹೆಚ್ಚಿನ ವೇತನ ಪಡೆಯಲು ಮತ್ತು ಅದರಿಂದ ಗುಣಮಟ್ಟದ ಜೀವನ ನಡೆಸಲು ಸಹಾಯ ಮಾಡುತ್ತದೆ ಎಂದು ಈ ಇಬ್ಬರೂ ತೋರಿಸಿಕೊಡುತ್ತಾರೆ.
ಹಾಗೆಯೇ ಅಮೆರಿಕದಲ್ಲಿ ಖಾಸಗಿ ಯೂನಿವರ್ಸಿಟಿಗಳಲ್ಲಿ ಕಲಿಯುವವರು ಸರ್ಕಾರಿ ಯೂನಿವರ್ಸಿಟಿಗಳಲ್ಲಿ ಕಲಿಯುವವರಿಗಿಂತ 14% ಹೆಚ್ಚು ವೇತನ ಪಡೆಯುತ್ತಾರೆ, ಆದರೆ, ಅವರು ಉತ್ತಮ ಆರ್ಥಿಕ ಹಿನ್ನೆಲೆಯ ಕುಟುಂಬದಿಂದ ಬಂದಿರುವುದು ಮುಖ್ಯ ಕಾರಣವೇ ಹೊರತು ಖಾಸಗಿ ಯೂನಿವರ್ಸಿಟಿಯಲ್ಲಿ ಓದಿದ್ದಲ್ಲ ಎಂದು ನಿರೂಪಿಸುತ್ತಾರೆ. ಇದರ ಮೂಲಕ ಸರ್ಕಾರಿ ಯೂನಿವರ್ಸಿಟಿಗಳಲ್ಲಿ ಓದುವುದು ಯಾವುದೇ ರೀತಿಯಲ್ಲಿ ವಿದ್ಯಾರ್ಥಿ/ನಿಯರ ಹಿನ್ನಡೆಗೆ ಕಾರಣವಾಗಿರುವುದಿಲ್ಲ ಎಂದು ತೋರಿಸುತ್ತಾರೆ.
ಒಟ್ಟಾರೆಯಾಗಿ ಕಾರ್ಮಿಕರಿಗೆ ಹೆಚ್ಚಿನ ವೇತನ ಕೊಡುವುದು ಮತ್ತು ಕಾರ್ಮಿಕರ ವಲಸೆ ಇವೆರಡೂ ಕೂಡ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವುದಲ್ಲದೆ ಉದ್ಯೋಗ ಸೃಷ್ಟಿಗೂ ನೆರವಾಗುತ್ತವೆ ಎಂಬ ಈ ತಜ್ಞರ ಸಂಶೋಧನೆ ವಿಶ್ವಾದ್ಯಂತ neo liberal ಸರ್ಕಾರಗಳು ಕಾರ್ಮಿಕರಿಗೆ ವಿರುದ್ಧವಾದ labour reforms ತರಲು ತವಕಿಸುತ್ತಿರುವ ಈ ಹೊತ್ತಿನಲ್ಲಿ ಬಹು ಮುಖ್ಯ ಸಂಶೋಧನೆಯಾಗಿದೆ.
ಈ ಸಂಶೋಧನೆಗಳ ಹಿನ್ನೆಲೆಯಲ್ಲಿ ಕೊರೊನಾ ಸಮಯದಲ್ಲಿ ನಮ್ಮ ದೇಶದ ಹಲವು ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ ಎಂಬ ಕಾರಣವೊಡ್ಡಿ ಜಾರಿಮಾಡಿದ ಕನಿಷ್ಟ ವೇತನದಲ್ಲಿ ಸಡಿಲಿಕೆ, ಕಾರ್ಮಿಕರ ಕೆಲಸದ ಅವಧಿಯ ಹೆಚ್ಚಳ ಇತ್ಯಾದಿ ಕ್ರಮಗಳು ಎಷ್ಟು ಅವೈಜ್ಞಾನಿಕವಾಗಿದ್ದವು ಎಂಬುದನ್ನು ಮನಗಾಣಬಹುದು.
ಹೀಗೆಯೇ ಡಾ.ಬಿ.ಆರ್. ಅಂಬೇಡ್ಕರ್‌ರವರು ಬ್ರಿಟಿಷ್ ಸರ್ಕಾರದಲ್ಲಿ ಕಾರ್ಮಿಕ ಮಂತ್ರಿಯಾಗಿದ್ದಾಗ ಜಾರಿಗೆ ತಂದ ಕಾರ್ಮಿಕರಿಗೆ ಕನಿಷ್ಠ ವೇತನ, ರಜೆ ಸೌಲಭ್ಯ, ಎಂಟು ಗಂಟೆ ಮಾತ್ರ ದುಡಿಮೆಯಂತಹ ಕ್ರಮಗಳು ಅವರಿಗಿದ್ದ ಆಳವಾದ ಜ್ಞಾನ ಮತ್ತು ದೂರದೃಷ್ಟಿಯನ್ನು ತೋರಿಸುತ್ತವೆ ಎಂಬುದನ್ನೂ ಈ ಸಂಶೋಧನೆಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬಹುದು.
ಕಡೆಯದಾಗಿ ಕಾರ್ಮಿಕರ ಅಂದರೆ ಬಹುತೇಕ ಒಟ್ಟು ಜನಸಮುದಾಯದ ಅಭಿವೃದ್ಧಿಗೇ ಮಾರಕವಾದಂತಿದ್ದ ಜಡ್ಡುಗಟ್ಟಿದ ನಂಬಿಕೆಗಳನ್ನು ಒಡೆದುಹಾಕಿದ ಈ ಸಂಶೋಧನೆಗಳ ಕಾರಣಕ್ಕೆ ಈ ಮೂರೂ ಆರ್ಥಿಕ ತಜ್ಞರಿಗೆ ಧನ್ಯವಾದಗಳನ್ನು ಹೇಳೋಣ. ಹಾಗೂ ಈ ಸಂಶೋಧನೆಗಳು ಸರ್ಕಾರಗಳ ಕಣ್ಣು ತೆರೆಸಿ ಕಾರ್ಮಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಲಿ ಎಂದು ಆಶಿಸೋಣ.

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ
ಇದನ್ನೂ ಓದಿ: 2021 ರಾಸಾಯನಶಾಸ್ತ್ರ ನೊಬೆಲ್; ಪರಿಸರ ಸ್ನೇಹಿ ರಾಸಾಯನಿಕ ವೇಗವರ್ಧಕಗಳ ಸಂಶೋಧನೆಗೆ ಸಂದ ಗೌರವ



ಈ ವಿಷಯದಲ್ಲಿ ನಾವು 1993 ನೇ ಇಸ್ಕಿಯಲ್ಲಿ 1309 ಸೂಚ್ಯಂಕಕ್ಕೆ ರೂಪಾಯಿ 1800 ಸಾಮನ್ಯ ಕನಿಷ್ಟ ವೇತನ ಸಿಗಬೇಕು ಎಂದು ಕೇಳಿ ಕರ್ನಾಟಕದಲ್ಲಿ ಹೋರಾಟ ಸುರು ಮಾಡಿದವು. 2009 ರಲ್ಲಿದೆ 10000 ರೂಪಾಯಿಗೆ ಹೋರಾಡಿದ ವು. ಈಗಲೂ ಕನಿಷ್ಟ ವೇತನ 21000 ರೂಪಾಯಿಗೆ ಏರಿಸಲು ಸರ್ಕಾರ ಕ್ರಮ ವಹಿಸ ಬೇಕು ಎಂದು ಒತ್ತಾಯಿಸುವ ಮೂಲಕ ನಮ್ಮ ಭೇದಕ್ಕೆ ಪ್ರಚಲಿತದಲ್ಲಿ ಇಟ್ಟು ಕೊಂಡು ಇದ್ದೇವೆ. ಕರ್ನಾಟಕದಲ್ಲಿ ಕನಿಷ್ಟ ಕೂಲಿ ಎಂಬ ನನ್ನ ಪುಸ್ತಕ ಹಗೂ ನನ್ನ Notes on Minimum Wages (Vjknair.academia.edu) ಇವುಗಳು ಓದಬಹುದಾದ ಲೇಖನಗಳು.
Excellent Information Sir, ಕನ್ನಡದಲ್ಲಿ ಇಷ್ಟು ಸರಳವಾಗಿ ಮಾಹಿತಿ ನೀಡುವ ಏಕೈಕ ನ್ಯೂಸ್ ಬ್ಲಾಗ್!!!