ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಸತತ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆಯು ತಮಿಳುನಾಡಿನಲ್ಲಿ ಮುಂದಿನ ಮೂರು ದಿನಗಳವರೆ (ನವೆಂಬರ್ 11) ರೆಡ್ ಅಲರ್ಟ್ ಘೋಷಿಸಿದೆ.
ಮಂಗಳವಾರ ಮಧ್ಯಾಹ್ನ ಬುಲೆಟಿನ್ ಬಿಡುಗಡೆ ಮಾಡಿರುವ ಹವಾಮಾನ ಇಲಾಖೆಯು ಅದರಲ್ಲಿ, ‘ತಮಿಳುನಾಡಿನ ಮುಂದಿನ ಮೂರು ದಿನಗಳು ಭಾರೀ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಸಾಧಾರಣ ಹಾಗೂ ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ’ ಎಂದು ತಿಳಿಸಿದೆ.
ರಾಜ್ಯಾದ್ಯಂತ ಮಳೆ ಹಾಗೂ ಮಳೆಯಿಂದ ಉಂಟಾದ ಸಮಸ್ಯೆಯಿಂದಾಗಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. 538 ಗುಡಿಸಲುಗಳು ಮತ್ತು ನಾಲ್ಕು ಮನೆಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ನವೆಂಬರ್ 11 (ಗುರುವಾರ)ದವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನವೆಂಬರ್ 11 ರ ವೇಳೆಗೆ ಈ ಈ ವಾಯುಭಾರ ಕುಸಿತವು ತೀವ್ರಗೊಳ್ಳಲಿದ್ದು, ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಇಲಾಖೆಯು ತಿಳಿಸಿದೆ.
ಮಳೆಯಿಂದಾಗಿ ರಸ್ತೆಗಳಲ್ಲಿ ಪ್ರವಾಹ ಉಂಟಾಗಿದ್ದು, ಸಂಚಾರ ವ್ಯತ್ಯಯ, ಭೂಕುಸಿತಗಳು/ಮಣ್ಣು ಕುಸಿತ ಹಾಗೂ ಬೆಳೆಗಳಿಗೆ ಹಾನಿಯಾಗಿದೆ.
ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮೀನುಗಾರರು ನವೆಂಬರ್ 11ರವರೆಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆಯು ಸೂಚನೆ ನೀಡಿದೆ.
ಚೆನ್ನೈ ಕಾರ್ಪೊರೇಷನ್ ಅನ್ನು ತರಾಟೆಗೆ ತೆಗೆದುಕೊಂಡ ಮದ್ರಾಸ್ ಹೈಕೋರ್ಟ್
ಈ ನಡುವೆ ನಗರದಲ್ಲಿ ಜಲಾವೃತ ಪರಿಸ್ಥಿತಿಯ ಬಗ್ಗೆ ಚೆನ್ನೈ ಕಾರ್ಪೊರೇಷನ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಮದ್ರಾಸ್ ಹೈಕೋರ್ಟ್, ‘ಮಳೆಗಾಲದಲ್ಲಿ ಪ್ರವಾಹವನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವಲ್ಲಿ ಕಾರ್ಪೊರೇಷನ್ ವಿಫಲವಾಗಿದೆ’ ಎಂದಿದೆ.
2015ರ ಪ್ರವಾಹದ ನಂತರ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಿಗಮವನ್ನು ಪ್ರಶ್ನಿಸಿದ ಹೈಕೋರ್ಟ್, ಪರಿಸ್ಥಿತಿಯನ್ನು ಹತೋಟಿಗೆ ತರದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಇದನ್ನು ಓದಿ: ಮಳೆಹಾನಿಗೀಡಾದ ರೈತರಿಗೆ ಕೂಡಲೆ ಪರಿಹಾರ ನೀಡಿ: ಪಂಜಾಬ್ ಸಿಎಂಗೆ ಕೇಜ್ರಿವಾಲ್ ಒತ್ತಾಯ


