ಮಳೆಹಾನಿಗೀಡಾದ ರೈತರಿಗೆ ಕೂಡಲೆ ಪರಿಹಾರ ನೀಡಿ: ಪಂಜಾಬ್ ಸಿಎಂಗೆ ಕೇಜ್ರಿವಾಲ್ ಒತ್ತಾಯ

ಅಕಾಲಿಕ ಮಳೆಯಿಂದ ಹಾನಿಗೀಡಾದ ಗಡಿ ರಾಜ್ಯ ಪಂಜಾಬ್‌ನ ರೈತರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಒತ್ತಾಯಿಸಿದ್ದಾರೆ.

ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಅನುಭವಿಸಿದ ರಾಷ್ಟ್ರ ರಾಜಧಾನಿಯ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಕಳೆದ ವಾರ ಘೋಷಿಸಿತ್ತು.

“ಅಕಾಲಿಕ ಮಳೆಯಿಂದಾಗಿ ಪಂಜಾಬ್‌ನ ಹಲವು ಪ್ರದೇಶಗಳಲ್ಲಿ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ದೆಹಲಿಯಲ್ಲಿ ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ನಾವು ಪ್ರತಿ ಹೆಕ್ಟೇರ್‌ಗೆ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದೇವೆ. ಹೀಗಾಗಿ ಅವರ ರಾಜ್ಯದಲ್ಲಿ ರೈತರಿಗೆ ಸೂಕ್ತ ಮತ್ತು ತಕ್ಷಣದ ಪರಿಹಾರವನ್ನು ನೀಡುವಂತೆ ನಾನು ಪಂಜಾಬ್ ಸಿಎಂ ಚನ್ನಿ ಅವರಿಗೆ ಮನವಿ ಮಾಡುತ್ತೇನೆ” ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಯುಪಿ ವಿಧಾನಸಭಾ ಚುನಾವಣೆ-2022: ‘ಪೂರ್ವಾಂಚಲ’ ಕಡೆಗೆ ಗಮನ ಹರಿಸಿದ BJP!

ದೆಹಲಿಯ ಎಲ್ಲಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳು ಮತ್ತು ವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳು ಬೆಳೆ ನಾಶವಾಗಿರುವ ಸ್ಥಳಗಳ ಸಮೀಕ್ಷೆ ನಡೆಸುತ್ತಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ. ಮುಂದಿನ ಒಂದೂವರೆ ತಿಂಗಳೊಳಗೆ ರೈತರಿಗೆ ಪರಿಹಾರವನ್ನು ವಿತರಿಸಬಹುದು” ಎಂದು ಅರವಿಂದ್ ಕೇಜ್ರಿವಾಲ್ ಕಳೆದ ವಾರ ಹೇಳಿದ್ದರು.

ಕಳೆದ ವಾರ ಸುರಿದ ಅಕಾಲಿಕ ಭಾರಿ ಮಳೆ, ಜೊತೆಗೆ ಆಲಿಕಲ್ಲು ಮಳೆಯು ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಪ್ರಮುಖ ಬೆಳೆಗಳಾದ ಭತ್ತ, ಕಬ್ಬು, ಆಲೂಗಡ್ಡೆ ಮತ್ತು ಬಟಾಣಿಯನ್ನು ನಾಶಗೊಳಿಸಿದೆ.

ಪಂಜಾಬ್‌ನಲ್ಲಿ ಮಂಡಿಗಳಲ್ಲಿ ಮಾರಾಟಕ್ಕೆ ತಂದಿದ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದು, ರಸ್ತೆ ಬದಿಗಳಲ್ಲಿ ನೀರಿನಲ್ಲಿ ಬೆಳೆ ಹರಿಯುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು. ಆಲಿಕಲ್ಲು ಮಳೆಯಿಂದ ಬೆಳೆ ನೆಲಕ್ಕೆ ಒರಗಿ ಹಾಳಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು.


ಇದನ್ನೂ ಓದಿ: ಇರುವ ಮನೆಗಳ ಒಡೆದು, ಲೇಔಟ್ ಮಾಡಿ ಇನ್ನೊಬ್ಬರಿಗೆ ಸೈಟ್‌ ಹಂಚುವುದು ಯಾವ ನ್ಯಾಯ?: ಬಿಡಿಎ ವಿರುದ್ಧ ಆಕ್ರೋಶ

LEAVE A REPLY

Please enter your comment!
Please enter your name here