“ನನ್ನ ಮಗಳು ಸುರಗಿಗಾಗಿ ಕನ್ನಡದಲ್ಲಿ ಚಿತ್ರಪುಸ್ತಕಗಳನ್ನು ಹುಡುಕಲಾರಂಭಿಸಿದೆ. ಇಂಗ್ಲಿಷ್‌ನಲ್ಲಿ ಮಕ್ಕಳಿಗಾಗಿ ಚಿತ್ರ ಪುಸ್ತಕಗಳು ಸಿಗುತ್ತಿದ್ದವು. ಆದರೆ ಕನ್ನಡದಲ್ಲಿ ಇಲ್ಲದಿರುವುದನ್ನು ಗಮನಿಸಿದೆ. ನನ್ನ ಮಗಳಿಗಾಗಿ ಚಿತ್ರ ಪುಸ್ತಕವನ್ನು ಬರೆದೆ. ಇದೇ ಪುಸ್ತಕವನ್ನು ನನ್ನಲ್ಲಿ ಕಲಿಯುತ್ತಿದ್ದ ಮಕ್ಕಳಿಗೂ ತೋರಿಸಿದಾಗ ಆ ಮಕ್ಕಳು ಬಹಳ ಖುಷಿಪಡುತ್ತಿದ್ದರು. ಹೀಗಾಗಿ ಇಂತಹ ಪುಸ್ತಕಗಳನ್ನು ಹೊರತರಬೇಕೆಂದು ನಿರ್ಧರಿಸಿ, ‘ಎಲ್ಲರ ಪುಸ್ತಕ’ ಎಂಬ ಪ್ರಕಾಶನ ಆರಂಭಿಸಲಾಯಿತು” ಎನ್ನುತ್ತಾರೆ ಚಿತ್ರ ಕಲಾವಿದೆ, ಶಿಕ್ಷಕಿ ವನಿತಾ ಅಣ್ಣಯ್ಯ ಯಾಜಿ.
ಮೂಲತಃ ಹೊನ್ನಾವರದವರಾದ ವನಿತಾ ಯಾಜಿಯವರು ನೀನಾಸಂ ವಿದ್ಯಾರ್ಥಿಯೂ ಹೌದು. ನೀನಾಸಂ ಮತ್ತು ಶಾಂತಿನಿಕೇತನದಲ್ಲಿ ಕಲೆ ಮತ್ತು ನಟನೆಯನ್ನು ಅಭ್ಯಾಸ ಮಾಡಿರುವ ಅವರು ತಮ್ಮ ಪತಿ ಕೈಲಾಶ್ ತಿಪಟೂರು ಅವರೊಂದಿಗೆ ಸೇರಿ ‘ಎಲ್ಲರ ಪುಸ್ತಕ’ ಎಂಬ ಪ್ರಕಾಶನವನ್ನು ಆರಂಭಿಸಿ ಮಕ್ಕಳಿಗಾಗಿ ಚಿತ್ರಪುಸ್ತಕಗಳನ್ನು ಹೊರತರುತ್ತಿದ್ದಾರೆ.
‘ಟೊಮೊಟೋ ಫಿಶ್’, ‘ಮೊದಲ ಓದು’, ‘ರುಚಿ’, ‘ನವಿಲೂರ ಸಂತೆ’, ‘ಏಕೆ ಬೇಕು ಕನ್ನಡ’, ‘ಬೀಜ’, ‘ಚಿಟ್ಟೆ’ ಎಂಬ ಚಿತ್ರಪುಸ್ತಕಗಳನ್ನು ಹೊರತರಲಾಗಿದ್ದು, ಅದರಲ್ಲಿ ‘ಚಿಟ್ಟೆ’ ಚಿತ್ರಪುಸ್ತಕವು ಮೂರನೇ ತರಗತಿಯ ಪುಟಾಣಿ ಕಾವೇರಿ ಬರೆದದ್ದಾಗಿದೆ. ಕಳೆದ ಮಾರ್ಚ್‌ನಲ್ಲಿ ಪ್ರಕಾಶನ ಆರಂಭವಾಗಿದ್ದು, ಹೊಸ ಪ್ರಯೋಗಗಳ ಮೂಲಕ ಮಕ್ಕಳ ಮನೋವಿಕಾಸಕ್ಕೆ ಪ್ರೋತ್ಸಾಹಿಸುತ್ತಿದೆ. ಡಿಜಿಟಲ್ ಕಲೆಯನ್ನು ಬಳಸದೆ ಕೈಯಲ್ಲೇ ಚಿತ್ರಗಳನ್ನು ಬರೆದು ಪ್ರಕಟಿಸುತ್ತಿರುವುದು ಮತ್ತೊಂದು ವಿಶೇಷ. ಮಕ್ಕಳಿಗೆ ಚಿತ್ರಕಲೆಯ ಮೂಲ ಪರಿಚಯವೂ ಆಗಬೇಕೆಂಬುದು ವನಿತಾ ದಂಪತಿಯ ಆಶಯ.


“ಚಿಟ್ಟೆ ಪುಸ್ತಕದ ಕರ್ತೃ ಕಾವೇರಿ, ಪೂರ್ಣ ಶಾಲೆಯಲ್ಲಿ ನನ್ನ ವಿದ್ಯಾರ್ಥಿ ಆಗಿದ್ದಳು. ಪುಟ್ಟ ಮಕ್ಕಳಿಗೆ ಪೇಪರ್, ಪೇಂಟ್ ಕೊಟ್ಟು ಇಷ್ಟಪಟ್ಟದ್ದನ್ನು ಚಿತ್ರಿಸಲು ಬಿಡುತ್ತಿದ್ದೆವು. ಏಳು ವರ್ಷದ ಮಗು ಕಾವೇರಿ ಮೂವತ್ತು ನಿಮಿಷಗಳ ತರಗತಿಯಲ್ಲಿ 15ರಿಂದ 20 ಪೇಂಟಿಂಗ್ ಮಾಡಿರುತ್ತಿದ್ದಳು. ಕಾವೇರಿಗೆ 8 ವರ್ಷವಾಗುವ ಹೊತ್ತಿಗೆ ಹೆಚ್ಚು ನಿಖರವಾಗಿ ಪೇಂಟಿಂಗ್ ಮಾಡಿ, ವಸ್ತು ವಿಷಯವನ್ನು ಒಳಗೊಂಡು ಚಿತ್ರಿಸಲು ಶುರುಮಾಡಿದಳು. ಈ ಪುಸ್ತಕ ಆಕೆ ಮೂರನೇ ತರಗತಿಯಲ್ಲಿದ್ದಾಗ ಚಿತ್ರಿಸಿದ್ದು” ಎನ್ನುತ್ತಾರೆ ವನಿತಾ ಯಾಜಿ.
ಇದನ್ನೂ ಓದಿರಿ: ಲಾಠಿ ಹಿಡಿದ ಪ್ರಧಾನಿ ನೆಹರೂ ಹಿಂಸಾನಿರತ ಗುಂಪು ಚದುರಿಸಿದ್ದನ್ನು ಮರೆಯಲಾಗದು: ಅಡ್ಮಿರಲ್ ರಾಮದಾಸ್
ಆನ್‌ಲೈನ್ ಮೂಲಕ ಮಕ್ಕಳಿಗೆ ತರಗತಿಗಳನ್ನು ವನಿತಾ ನಡೆಸಿಕೊಡುತ್ತಿದ್ದಾರೆ. ಕೇರಳಾ, ದೆಹಲಿಯ ಮಕ್ಕಳೂ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರ ಚಿತ್ರಪುಸ್ತಕ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ. ಈವರೆಗೆ ನಾಲ್ಕು ಪುಸ್ತಕಗಳನ್ನು ಹೊರತಂದಿದ್ದು, ಮಕ್ಕಳ ದಿನಾಚರಣೆಯಂದು (ಭಾನುವಾರ, ನವೆಂಬರ್ 14, 2021) ಮತ್ತೆ ಮೂರು ಪುಸ್ತಕಗಳನ್ನು ಎಲ್ಲರ ಪುಸ್ತಕ ಪ್ರಕಾಶನ ಪ್ರಕಟಿಸಿದೆ.


‘ಏಕೆ ಬೇಕು ಕನ್ನಡ!?’ ಪುಸ್ತಕವು ಕನ್ನಡ ಭಾಷೆಯ ಬೆಡಗು, ಕರ್ನಾಟಕದ ವೈವಿಧ್ಯತೆಯನ್ನು ಸರಳವಾಗಿ ಮಕ್ಕಳಿಗೆ ಪರಿಚಯಿಸುವ ಪುಸ್ತಕವಾಗಿದೆ. ‘ಟೊಮಾಟೊ ಫಿಶ್’ ಪ್ರಕಾಶನದ ಮೊದಲ ಕತೆ-ಚಿತ್ರ ಪುಸ್ತಕ. ‘ಚಿಟ್ಟೆ’ ಮಕ್ಕಳಲ್ಲಿ ಕಥೆಕಟ್ಟುವ, ಚಿತ್ರ ಬರೆಯುವ ಕೌಶಲವನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಕಟವಾದ ಪುಸ್ತಕ.
“ನಮ್ಮ ಮೊದಲ ಎರಡು ಪುಸ್ತಕಗಳಿಂದಲೂ ಈವರೆಗೆ ಹೊಸತನ, ಗುಣಮಟ್ಟವನ್ನು ಹೆಚ್ಚಿಸಲು ಪರಿಶ್ರಮ ಪಡುತ್ತಿದ್ದೇವೆ. ನಮ್ಮ ಪುಸ್ತಕಗಳ ಪುಟವಿನ್ಯಾಸ ಮಾಡುತ್ತಿರುವ ಮನೋಜ್ ಹಾಗೂ ಎಲ್ಲಾ ಮುದ್ರಕರ ಶ್ರಮವನ್ನು ನಾವು ಇಲ್ಲಿ ನೆನೆಯಬಯಸುತ್ತೇವೆ. ಪ್ರಕಾಶನ ಪ್ರಾರಂಭವಾದ ಮೇಲೆ ನಮ್ಮ ಕಪಾಟಿನಲ್ಲಿ ಪುಸ್ತಕಗಳು ದ್ವಿಗುಣಗೊಂಡಿವೆ. ಹಲವು ಪ್ರಕಾಶಕರ ಅದ್ಭುತ ಪುಸ್ತಕಗಳು ನಮ್ಮನ್ನು ಬೆರಗುಗೊಳಿಸಿವೆ. ಕನ್ನಡದಲ್ಲಿ ಇಂಥ ಹತ್ತಾರು ಪುಸ್ತಕಗಳನ್ನು ರೂಪಿಸಬೇಕು ಎಂಬ ಉತ್ಸಾಹಕ್ಕೆ ಸ್ಫೂರ್ತಿ ನೀಡಿವೆ. ಇದರ ಫಲವಾಗಿ ಈ ಸಲದ ನಮ್ಮ ಪುಸ್ತಕಗಳು ಸುಂದರವಾಗಿ ಮೂಡಿಬಂದಿವೆ” ಎಂಬುದು ವನಿತಾ ದಂಪತಿಯ ಸಂತೃಪ್ತಿ.

“ಭಾಷೆಗೆ ಮೊದಲು ಮನುಷ್ಯ ಸಂವಹನಕ್ಕಾಗಿ ಚಿತ್ರಗಳನ್ನು ಬಿಡಿಸುತ್ತಿದ್ದ. ಬೇಟೆಯ ಸೊಗಸನ್ನು, ರೋಚಕತೆಯನ್ನು ಅಭಿನಯಿಸಿ ತೋರಿಸುತ್ತಿದ್ದ, ಚಪ್ಪಾಳೆ ಗಿಟ್ಟಿಸುತ್ತಿದ್ದ. ಪುರಾತನ ನಾಗರಿಕತೆಗಳ ಪುರಾವೆಯಂತೆ ಭೂಮಿಯ ತುಂಬ ಹಲವು ಚಿತ್ರ, ನಕಾಶೆಗಳು ಉಳಿದು ಹೋಗಿವೆ. ಚಿತ್ರ ಬರೆಯುವುದು ಆಡುವುದಕ್ಕೆ ಮೊದಲು ಮನುಷ್ಯ ಕಂಡುಕೊಂಡ ಅಭಿವ್ಯಕ್ತಿ. ಇಂದಿಗೆ ಚಿತ್ರಕಲೆಯನ್ನು ಆಡಲಾಗದ ಭಾವಗಳ ಅಭಿವ್ಯಕ್ತಿಗೆ ಬಳಸಿ ಚಿಕಿತ್ಸೆ ನೀಡುವುದಿದೆ. ಸಂತೋಷಕ್ಕೆ, ಏಕಾಗ್ರತೆಗೆ, ಕಾಲ ಕಳೆಯಲು, ಮಕ್ಕಳ ಬೆರಳುಗಳ ಸರಾಗ ಚಲನೆಗೆ, ಏನೂ ಕಾರಣವೇ ಇಲ್ಲದೆ ಚಿತ್ರ ಬರೆಯುವುದು ಎಲ್ಲಾ ವಯಸ್ಸಿನವರಿಗೂ ಅಚ್ಚು ಮೆಚ್ಚು. ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ. ಸರಿಯಾದ ಮಾರ್ಗದರ್ಶನವಿಲ್ಲದೆ, ಮುಜುಗರಕ್ಕೆ ಒಳಗಾಗಿ, ಬರೀ ಕೌಶಲವನ್ನು ಕಲೆಯೆಂದು ತಪ್ಪು ಗ್ರಹಿಸಿ ಚಿತ್ರಿಸುವುದ ಬಿಟ್ಟಿರುವ ಬಹುತೇಕ ಮಂದಿ ತಮ್ಮಗನಿಸಿದ್ದನ್ನು, ತಮ್ಮತನವನ್ನು ಚಿತ್ರಿಸಿದರೆ ನಿರಾಳವಾಗಿ ಬಿಡುತ್ತಾರೆ” ಎಂದು ಚಿತ್ರಕಲೆಯ ಮಹತ್ವವನ್ನು ವಿವರಿಸುತ್ತಾರೆ ವನಿತಾ ಯಾಜಿ.
(‘ಎಲ್ಲರ ಪುಸ್ತಕ’ ಪ್ರಕಾಶನದ ಚಿತ್ರಪುಸ್ತಕಗಳಿಗಾಗಿ ಮೊ.ಸಂ. 9141184535, ಇಮೇಲ್- [email protected] ಸಂಪರ್ಕಿಸಬಹುದು)
ಇದನ್ನೂ ಓದಿರಿ: ಕಿತ್ತೂರು ಕರ್ನಾಟಕಕ್ಕೆ ಉತ್ತರ ಕನ್ನಡ ಸೇರ್ಪಡೆ; ಜಿಲ್ಲೆಯಲ್ಲಿ ಗೊಂದಲ


