Homeಅಂಕಣಗಳುನಾಗಸುಧೆ ಜಗಲಿಯಿಂದಹೊಸ ಪ್ರತಿಭೆಗಳಿಗೆ ಬೆಲ್ಲವಾದ ಬೇವಿನಗಿಡದ

ಹೊಸ ಪ್ರತಿಭೆಗಳಿಗೆ ಬೆಲ್ಲವಾದ ಬೇವಿನಗಿಡದ

ಆಕಾಶವಾಣಿಯಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಬೇವಿನಗಿಡದ ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಅವಕಾಶ ನೀಡಿ ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತ ಸತ್ಯ.

- Advertisement -
- Advertisement -

ಉಂಡದ್ದು ಉಗುಳಿದ್ದು
ತಿಂದಿದ್ದು ತೇಗಿದ್ದು
ಎಲ್ಲವನೂ ರಸ್ತೆಗಳು
ಬಾಯಿಬಿಡದೇ ನುಂಗಿಕೊಂಡಿದೆ
ಅವು ಬಾಯಿಬಿಟ್ಟಾಗ
ಇದ್ದೇ ಇದೆಯಲ್ಲ
ತೇಪೆ ಹಚ್ಚಿ ತುಪ್ಪ ಸವರುವುದು
ಹಿಡಿ ಮಣ್ಣು ಹಾಕಿ ಮುಚ್ಚುವುದು

ತಮ್ಮ ‘ಇಳೆಯ ಅರ್ಥ’ ಕವನ ಸಂಕಲನದ ‘ಹೊಲ ಮಾರಿ ಉಳಿದ ಬೇರೀಜು’ ಕವನದಲ್ಲಿ ಡಾ. ಬಸು ಬೇವಿನಗಿಡದ ಜಗದ ಭ್ರಷ್ಟಾಚಾರ ಮತ್ತು ಮಾನವೀಯ ಸಂಬಂಧದ ಪಲ್ಲಟಗಳ ಕುರಿತು ಮನಮುಟ್ಟುವಂತೆ ಹೇಳಿರುವರು. ಇವರ ಬರಹಗಳೇ ಹೀಗೆ ; ಮೇಲ್ನೋಟಕ್ಕೆ ಸೀದಾ ಸಾದಾ ಕಂಡರೂ ಒಳಗೊಳಗೇ ಬಿಸಿಲಿನ ಕುದಿತದ ಛಾಯೆ ಇದೆ ; ಬರಹಗಳಂತೆ ಇವರೂ ಸಹ.

ಸವದತ್ತಿ ತಾಲೂಕಿನ ಮುನವಳ್ಳಿಯ ಡಾ. ಬೇವಿನಗಿಡದ ಬಡತನದ ಬೇಗೆಯಲೇ ಬೆಳೆದವರು. ಪುಟ್ಟದೊಂದು ಕೃಷಿ ಕುಟುಂಬಕ್ಕೆ ಏಳು ಜನ ಒಡಹುಟ್ಟಿದವರು. ನೀರೇ ಇಲ್ಲದ ನಾಲ್ಕು ಎಕರೆ ಒಣ ಭೂಮಿ. ಅಣ್ಣ ಕೂಲಿ ನಾಲಿ ಮಾಡಿದ ; ಸೋದರಮಾವ ಕೈ ಹಿಡಿದು ದಡ ಸೇರಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಬೇಂದ್ರೆ ಕಾವ್ಯದಲ್ಲಿ ನಿಸರ್ಗ’ದಲ್ಲಿ ಪಿಎಚ್‌ಡಿ ಪದವಿ ಪಡೆದರು. ಅವರಿಗೆ ಕನ್ನಡ ಮತ್ತು ಅಕ್ಷರ ಪ್ರೀತಿ ಹಾಗೂ ಬರಹ ಉಸಿರಿನಷ್ಟೇ ಸಲೀಸಾಗಿದೆ. ವಿಶಾಲವಾದ ಅನುಭವವನ್ನು ಕಂಡುಂಡದ್ದರಿಂದ ಇವರ ಬರಹದಲ್ಲಿ ಪ್ರೀತಿ, ಮಮತೆ, ಮಾನವೀಯತೆ ಮತ್ತು ಗ್ರಾಮೀಣ ಬದುಕಿನ ಒಳನೋಟಗಳು ಪುಟಿದೇಳುತ್ತದೆ. ಯಾರಿಗೂ ನೋವಾಗದ ಹಾಗೆ ಎಲ್ಲರೊಂದಿಗೂ ಬೆರೆತು ಅಕ್ಷರ ಲೋಕದ ಬೆಳಕಿನಲ್ಲಿ ನಡೆವ ಇವರಿಗೆ ಸಾಮಾನ್ಯ ಜನರ ಎಲ್ಲವನ್ನೂ ಹೇಳುವ-ಕೇಳುವ ಚಾಕಚಕ್ಯತೆ ಇದೆ. ಭಾಷೆಯ ಹಿಡಿತ, ಸೊಗಡು, ಅಧ್ಯಯನದಿಂದ ಇವರ ಬರಹಗಳು ಗಟ್ಟಿತನದಿಂದ ಕೂಡಿವೆ.

ಪ್ರಸ್ತುತ ಕನ್ನಡದ ಬಹುಮುಖ ಪ್ರತಿಭೆಯ ಪ್ರಮುಖ ಬರಹಗಾರರಾದ ಇವರು ತಮ್ಮ ಕಥೆ, ಕವನ, ವಿಮರ್ಶೆ, ಅನುವಾದ ಮತ್ತು ಮಕ್ಕಳ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮುಡಿಸಿರುವರು. ಯಾವ ಇಸಂಗೂ ಒಳಗಾಗದೇ ವಯಸ್ಸಿಗೂ ಮೀರಿದ ಗೆಳೆತನ ಇವರದು. ವೃತ್ತಿ-ಪ್ರವೃತ್ತಿ, ಬದುಕು-ಬರಹದಲ್ಲಿ ಸಾಧನೆಯ ಸಿದ್ದಿ ಇವರದಾಗಿದೆ. ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಆಕಾಶವಾಣಿಯಲ್ಲಿ ದುಡಿಯುತ್ತಿದ್ದ ಬಸು, ಪದೋನ್ನತಿ ಹೊಂದುತ್ತಾ ಈಗ ಆಕಾಶವಾಣಿ ಧಾರವಾಡಕ್ಕೇ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿರುತ್ತದೆ. ಆಕಾಶವಾಣಿಯಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಬೇವಿನಗಿಡದ ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಆಕಾಶವಾಣಿಯಲ್ಲಿ ಅವಕಾಶ ನೀಡಿ ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತ ಸತ್ಯ. ಅದಕ್ಕೇ ಸದಾ ನಗು ಮೊಗದ ಈ ಭಾವ ಜೀವಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ವಿಶ್ವಾಸ.

ಹಿಂದಿನ ದಿನಗಳಲ್ಲಿ ಈ ರೇಡಿಯೋ ಸ್ಟೇಷನ್ ಎಂದರೆ ಕೆಲವರದೇ ಸೊತ್ತಿನಂತಿತ್ತು. ಸಾಮಾನ್ಯ ಜನಕ್ಕೆ ಅವಕಾಶವೇ ಇಲ್ಲದಂತಿತ್ತು. ಕಳುಹಿಸಿದ ಕವಿತೆಗಳ ಲಕೋಟೆಗಳು ಆ ಅಧಿಕಾರಶಾಹಿಗಳ ಟೇಬಲ್ಲಿನ ಡ್ರಾವರ್‌ನಲ್ಲಿಯೇ ತೆಪ್ಪಗೆ ಬಿದ್ದಿರುತಿತ್ತು. ಇವರ ಅಧಿಕಾರಾವಧಿಯಲ್ಲಿ ಇದಕ್ಕೆ ಅವಕಾಶವಿಲ್ಲದೇ ತೆಪ್ಪಗಿದ್ದ ಲಕೋಟೆಗಳೆಲ್ಲಾ ಮರು ಜೀವ ಪಡೆಯಿತು. ತಮ್ಮ ಕಛೇರಿಗೆ ಬಂದ ಹೊಸ ಹೊಸ ಪ್ರತಿಭೆಗಳನ್ನು ಕೈ ಹಿಡಿದು ಮೇಲಕ್ಕೆತ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅವರನ್ನೂ ಪರಿಚಯಿಸಿದರು. ಕೆಲವೇ ವರ್ಷಗಳ ಕಾಲ ಕಾರವಾರದ ಕಾಡೊಡಲ-ಕಡಲೊಡಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಅಲ್ಲಿಯ ಸಾಂಸ್ಕೃತಿಕ ಲೋಕದ ಜನ ಈ ಅಧಿಕಾರಿ, ಅಕ್ಷರ ಪ್ರೇಮಿ ಮತ್ತು ಮಾನವೀಯ ಮನೋಭಾವದ ಮನುಷ್ಯನನ್ನು ಎಂದಿಗೂ ಮರೆಯಲಾರರು. ಇವರು ಕಾರ್ಯ ನಿರ್ವಹಿಸಿದ ಆಕಾಶವಾಣಿ ಕೇಂದ್ರಕ್ಕೂ ಹೆಸರು ತಂದುಕೊಟ್ಟಿರುವರು. 2015, 16, 17 ಹಾಗೂ 2020 ರಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದರೆ, 2017 ಮತ್ತು 2018ರಲ್ಲಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಕೀರ್ತಿ ಪತಾಕೆಯನ್ನು ಹಾರಿಸಿರುವುದು. ಅದಕೇ ಇವರ ಇಲಾಖೆಯಲ್ಲೂ ಇವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಕನ್ನಡ ಸಾಹಿತ್ಯಕ್ಕೆ ಇವರು ಈಗಾಗಲೇ ಹಲವು ಕೊಡುಗೆಗಳನ್ನು ನೀಡಿರುವರು. ‘ಕನಸು’ ‘ಇಳೆಯ ಅರ್ಥ’ ಇವರ ಕವನ ಸಂಕಲನಗಳಾದರೆ, ‘ತಾಯವ್ವ’ ‘ಬಾಳೆಯ ಕಂಬ’ ‘ಹೊಡಿ ಚಕ್ಕಡಿ’ ‘ಉಗುಳುಬುಟ್ಟಿ’ ಮತ್ತು ‘ನೆರಳಿಲ್ಲದ ಮರ’ ಇವು ಕಥಾಸಂಕಲನಗಳು. ಮಕ್ಕಳ ಸಾಹಿತ್ಯದಲ್ಲಿಯೂ ಇವರ ಪ್ರತಿಭೆ ಎದ್ದು ಕಾಣುತ್ತದೆ. ‘ನಾಳೆಯ ಸೂರ್ಯ’ ‘ಓಡಿ ಹೋದ ಹುಡುಗ’ ‘ಬೀಳದ ಗಡಿಯಾರ’ ಇವು ಇವರ ಬಾಲ ಸಾಹಿತ್ಯದ ಕೃತಿಗಳಾಗಿವೆ. ‘ಹಕ್ಕಿ ಗಮನದ ಹಾದಿ’ ‘ಕಲ್ಲು ಸಕ್ಕರೆ’ ‘ಕಾಲದ ಕನ್ನಡಿ’ ‘ಶತಮಾನದ ಕವಿ ಬೇಂದ್ರೆ’ ‘ಬೇಂದ್ರೆ ನಿಸರ್ಗ ಕಾವ್ಯ’ ‘ಕನಕದಾಸರು ಮತ್ತು ಮಧುರ ಚೆನ್ನರು’ ‘ಸನದಿ ವ್ಯಕ್ತಿತ್ವ’ ಇವು ಬಸು ಅವರ ವಿಮರ್ಶೆಯ ಸಂಕಲನಗಳು. ಅನುವಾದ ಕ್ಷೇತ್ರಕ್ಕೂ ಇವರು ಬೆಳಕನ್ನು ಚೆಲ್ಲಿರುವರು. ‘ಅಪರಾಜಿತೆ’ ‘ದಕ್ಕಿದ ಹಾಡು’ ‘ಕಮಲಾದೇವಿ ಚಟ್ಟೋಪಾಧ್ಯಾಯ’ ‘ಹಸಿರು ಕಾಡಿನ ಗೆಳೆಯರು’ ‘ನಮ್ಮ ಮಂದಿ’ ‘ಸ್ವಾತಂತ್ರ‍್ಯ ಚಳುವಳಿ ಹಾಗೂ ಭಾರತೀಯ ಮುಸ್ಲಿಮರು’ ‘ಸಮಕಾಲೀನ ಭಾರತೀಯ ಕಥೆಗಳು’ ‘ಸಾಮರಸೆಟ್ ಮಾಮ್ ಕಥೆಗಳು’ ಇವು ಬೇವಿನಗಿಡದರ ಅನುವಾದಿತ ಕೃತಿಗಳು. ಇದಲ್ಲದೇ ಕೆಲ ಸಂಪಾದಿತ ಕ್ರತಿಗಳನ್ನೂ ಡಾ. ಬಸೂ ಬೇವಿನಗಿಡದ ಕನ್ನಡಮ್ಮನ ಮಡಿಲಿಗೆ ಅರ್ಪಿಸಿರುವರು. ತಮ್ಮ 57 ನೇ ವಯಸ್ಸಿನಲ್ಲಿಯೇ ಮೂವತ್ತಕ್ಕೂ ಮೀರಿ ಕೃತಿಗಳನ್ನು ರಚಿಸಿದ ಬೇವಿನಗಿಡದ ನಿಜಕ್ಕೂ ಅಭಿನಂದನೀಯರು.

ತಮ್ಮ ಎಲ್ಲಾ ಬರಹಗಳೆಂದರೂ ಇವರಿಗೆ ಇಷ್ಟವೇ ; ಆದರೆ ಕಥೆಗಳೆಂದರೆ ಬಹು ಖುಷಿ. ತಮ್ಮ ‘ನೆರಳಿಲ್ಲದ ಮರ’ ಕಥಾ ಸಂಕಲನದ ತಮ್ಮ ಮಾತಿನಲ್ಲಿ ಕಥೆ ಹುಟ್ಟುವ ಪರಿಯನ್ನು ವಿವರಿಸುತ್ತಾ “ಅನೇಕ ಕೆಲಸಗಳ ಮಧ್ಯೆ ಕತೆಗಳು ನನ್ನನ್ನು ಕಾಡಿಸುವ ಹಾಗೂ ಅವು ತಮ್ಮಷ್ಟಕ್ಕೆ ತಾವು ಬೆಳೆದುಕೊಳ್ಳುವ ಪರಿ ನನ್ನಲ್ಲಿಯೂ ವಿಸ್ಮಯ ಹುಟ್ಟಿಸುವಂತಹದ್ದು. ಅವು ಹೇಳದೇ ಕೇಳದೇ ಬರುತ್ತದೆ. ತಮಗೆ ಇಷ್ಟವಾಗುವ ಹಾಗೆ ಬರೆಸಿಕೊಳ್ಳುತ್ತದೆ. ಆಮೇಲೆ ‘ನೀನ್ಯಾಕೋ, ನಿನ್ನ ಹಂಗ್ಯಾಕೋ’ ಎಂದು ಕತೆಗಾರನನ್ನು ಅತ್ತ ದೂಡಿ ತಮ್ಮೊಳಗೆ ಹುದುಗಿರುವ ಅರ್ಥ-ಆಯಾಮಗಳನ್ನು ಹೇಳಿರೆಂದು ಓದುಗರ ಮತ್ತು ವಿಮರ್ಶಕರ ಬೆನ್ನು ಹತ್ತುತ್ತವೆ. ಅವರು ಕೊಟ್ಟ ಅರ್ಥಗಳನ್ನು ನನಗೆ ತಿರುಗಿಸುತ್ತ, ಕತೆಗಾರನನ್ನು ಆಶ್ಚರ್ಯಕ್ಕೀಡು ಮಾಡುತ್ತಾ ಅವನ ಸಾರ್ಥಕತೆಯನ್ನು ಹೆಚ್ಚಿಸುತ್ತದೆ” ಎಂದಿರುವುದು.

ಇವರ ಕಥೆಗಳ ಕುರಿತು ಕನ್ನಡದ ನಾಮಾಂಕಿತರು ಈ ರೀತಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾ. ರಾಜೇಂದ್ರ ಚೆನ್ನಿ : ಬಸು ಬೇವಿನಗಿಡದ ಅವರಲ್ಲಿ ನನಗೆ ಇಷ್ಟವಾದದ್ದೆಂದರೆ ಅವರು ಅನುಭವ ಲೋಕಕ್ಕೆ ತಕ್ಕುದಾದ ಭಾಷೆಯ ರೂಪಕ ಗುಣ. ಘಟನೆಗಳನ್ನು ಮೀರಿಯೂ ಬಹಳ ಕಾಲದವರೆಗೆ ನಮ್ಮನ್ನು ಆವರಿಸಿಕೊಳ್ಳುವ ಶಕ್ತಿ ಅವರ ಕತೆಗಳಿಗೆ ಇದೆ. ಅವರ ಕತೆಗಳ ಇನ್ನೊಂದು ಗುಣವೆಂದರೆ ನಿರೂಪಣೆಯ ಲವಲವಿಕೆ.

ಡಾ.ಸಿ.ಎನ್. ರಾಮಚಂದ್ರನ್ : ಮೊದಲಿನಿಂದಲೂ ಬಸು ಅವರಿಗೆ ಕಥೆಗಳನ್ನು ಆಕರ್ಷಕವಾಗಿ ಕಟ್ಟುವ ಕಲೆ ಇದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಸೊಗಡು ಜೀವಂತಿಕೆ ಇವರ ಪ್ರತಿ ಕಥೆಯಲ್ಲಿಯೂ ಕಂಡುಬರುತ್ತದೆ. ಕಾಲ ಪಲ್ಲಟವನ್ನು ಅದರೊಳಗೆ ಬರುವ ಮೌಲ್ಯ ಪಲ್ಲಟವನ್ನು ಅವರ ಕತೆಗಳು ಅದ್ಭುತವಾಗಿ ಹಿಡಿದಿಟ್ಟಿರುತ್ತದೆ.

ಟಿ.ಪಿ.ಅಶೋಕ : ಆಧುನಿಕತೆಯ ಪ್ರವೇಶದಿಂದಾಗಿ ಗ್ರಾಮೀಣ ಬದುಕು ಪಲ್ಲಟಗೊಳ್ಳುವ ಪರಿ ಮತ್ತು ಪರಿಣಾಮಗಳ ಶೋಧ ಬಸು ಬೇವಿನಗಿಡದ ಅವರ ಕಥೆಗಳ ಒಂದು ಪ್ರಧಾನ ಆಶಯ.

ಸುನಂದಾ ಕಡಮೆ : ಹದವಾದ ಭಾಷೆ, ಸಾಮಾಜಿಕತೆಗೆ ತುಡಿಯುವ ಸಂಯಮ, ಅತಿ ಸೂಕ್ಷ್ಮ ವಿವರ ಹಾಗೂ ತಿಳಿ ವಿನೋದ ಶೈಲಿಯ ಸಂದರ್ಭಗಳು ಬಸು ಬೇವಿನಗಿಡದ ಕತೆಗಳಲ್ಲಿ ಹುಬೇ ಹುಬಾಗಿ ಕಣ್ಣಿಗೆ ಕಟ್ಟುತ್ತದೆ.

ವಿವೇಕ ಶಾನಭಾಗ : ಅನುಭವವನ್ನು ಬಹು ವಿವರಗಳಲ್ಲಿ ಕಟ್ಟಿ ಕೊಡುವ ಕಲೆ ಬಸು ಅವರಲ್ಲಿರುವದರಿಂದ ಇಲ್ಲಿಯ ಕಥೆಗಳಿಗೆ ಹೆಚ್ಚಿನ ಸೌಷ್ಠವ ಒದಗಿ ಬಂದಿದೆ. ಅವು ಎಡಬಿಡದೇ ಓದಿಸಿಕೊಳ್ಳುತ್ತದೆ.

ವಿಷ್ಣು ನಾಯ್ಕ : ಕಥೆಯನ್ನು ಕವಿತೆಯಂತೆ ಬರೆಯಬಲ್ಲ ಕೌಶಲ್ಯ ಬಸು ಅವರಿಗೆ ಸಿದ್ಧಿಸಿದೆ. ಅವರು ಕತೆಗಳು ನೆಲಮುಖಿಯಾಗಿ ಚಲಿಸುತ್ತದೆ.

ಡಾ. ವಿನಯಾ : ಗ್ರಾಮ- ನಗರ ಎಂಬ ವರ್ಗೀಕೃತ ಜೀವನ ಇಲ್ಲವಾಗುತ್ತಿರುವ ಸಂಕೀರ್ಣ ಕಾಲದಲ್ಲಿ ವೈಭವೀಕರಿಸಲ್ಪಟ್ಟ ಗ್ರಾಮೀಣ ಪರಿಕಲ್ಪನೆಯ ಪೂರ್ವಕಲ್ಪಿತಗಳನ್ನು ನಾಜೂಕಾಗಿ ಮೀರುವುದು ಬಸು ಅವರ ಕತೆಗಳ ಮುಖ್ಯ ಕಾಳಜಿಗಳಲ್ಲೊಂದು. ಹಳ್ಳಿಯ ಬದುಕುಗಳ ಛಿದ್ರತೆಯ ಮೂಲಕವೇ ಗ್ಲೋಬಲ್ ಎಕಾನಮಿ ಉಂಟು ಮಾಡುತ್ತಿರುವ ಅವಾಂತರಗಳನ್ನು ಅವರ ಕತೆಗಳು ಕಾಣಿಸುತ್ತದೆ.

ಡಾ. ಬಸೂ ಬೇವಿನಗಿಡದರ ಈ ಎಲ್ಲಾ ಕನ್ನಡ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿದೆ. ಎರಡು ಸಲ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ, ಸಾರಂಗಿ ವೆಂಕಟರಾಮಯ್ಯ ಹಾಗೂ ನಿಡಸಾಲೆ ಪುಟ್ಟಸ್ವಾಮಯ್ಯ ದತ್ತಿ ಪ್ರಶಸ್ತಿಗಳು, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪುರಸ್ಕಾರ, ಬೆಳಗಾವಿಯ ಸಾಹಿತ್ಯ ಪ್ರತಿಷ್ಟಾನದ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಜಿ.ವಿ.ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಹರ್ಡೇಕರ್ ಮಂಜಪ್ಪ ಪ್ರಶಸ್ತಿ, ಸೇಡಂ ನ ಅಮ್ಮ ಪ್ರಶಸ್ತಿ, ತುಮಕೂರಿನ ವೀಚೀ ಸಾಹಿತ್ಯ ಪ್ರಶಸ್ತಿ, ಅಜೂರ ಪ್ರಶಸ್ತಿ, ತೇಜಸ್ವಿ ಕಟ್ಟಿಮನಿ ಕಥಾ ಪ್ರಶಸ್ತಿ, ಬೆಂಗಳೂರಿನ ಗಾಂಧೀ ಕಥಾ ಪ್ರಶಸ್ತಿ ಮತ್ತು ಅಡ್ವೈಸರ್ ಪುಸ್ತಕ ಪ್ರಶಸ್ತಿ ಹೀಗೆ ಹತ್ತು ಹಲವು. ಕೆಲ ವಿಶ್ವವಿದ್ಯಾಲಯ ಹಾಗೂ ಶಾಲಾ ವಿಭಾಗದಲ್ಲಿ ಇವರ ಅನೇಕ ಕಥೆ ಮತ್ತು ಕವಿತೆಗಳು ಪಠ್ಯವಾದುದಲ್ಲದೇ ಕೆಲ ಕಥೆ, ಕವಿತೆಗಳು ಹಿಂದಿ, ಇಂಗ್ಲಿಷ್ ಮತ್ತು ಮರಾಠಿಗೆ ಅನುವಾದಗೊಂಡಿರುವುದಕ್ಕೆ ಬಸು ಅಭಿನಂದನೀಯರು.

ಇವರ ಈ ಎಲ್ಲಾ ಸಾಹಿತ್ಯ, ಬದುಕು-ಬರಹ, ವೃತ್ತಿ-ಪ್ರವೃತ್ತಿಗಳಿಗೆ ಸ್ಪೂರ್ತಿದಾಯಕರಾದ ಪತ್ನಿ ಉಮಾ, ಮಗ ರಾಕೇಶ, ಮಗಳು-ಅಳಿಯ ಚೈತ್ರಾ-ವಿನಯ್ ಇವರಿಂದ ಒಡ ಗೂಡಿದ ತುಂಬು ಸಂಸಾರಕ್ಕೆ ಶುಭ ಕೋರಿ ಅಭಿನಂದಿಸುವೆನು.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ನಾನು, ಕನ್ನಡ ಮತ್ತು ಕವಿಗೋಷ್ಠಿ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಡಾ.ಬಸು ಬೇವಿನಗಿಡದ ಸರ್ ರವರ ಸೃಜನಾತ್ಮಕ ಮನೋಭಾವ ಹಾಗೂ ಪ್ರತಿಭೆಗೆ ಗೌರವಿಸುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ಆಕಾಶವಾಣಿ ಕಾರವಾರದಲ್ಲಿ ಇದ್ದಾಗಿಂದ ಬಲ್ಲೆವು ತುಂಬಾನೆ ಖುಷಿಯಾಗುತ್ತೆ.ಸುಂದರ ಬರಹ…ಪ್ರಕಾಶ ಸರ್…

LEAVE A REPLY

Please enter your comment!
Please enter your name here

- Advertisment -

ಹಾವಿನ ವಿಷ ಪ್ರಕರಣ : ಎಲ್ವಿಶ್ ಯಾದವ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧದ ಹಾವಿನ ವಿಷ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ಮಾ.19) ರದ್ದುಗೊಳಿಸಿದೆ.  ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲು ಅಧಿಕೃತ ವ್ಯಕ್ತಿಯಿಂದ ದೂರು...

ದೆಹಲಿಯ ಉತ್ತಮ್ ನಗರದಲ್ಲಿ ಮುಸ್ಲಿಮರಿಗೆ ಬೆದರಿಕೆ; ಅಮಿತ್ ಶಾಗೆ ಪತ್ರ ಬರೆದ ವಿಪಕ್ಷ ಸಂಸದರು

ರಾಷ್ಟ್ರ ರಾಜಧಾನಿಯ ಉತ್ತಮ್ ನಗರದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದುತ್ವ ಗುಂಪುಗಳು ಮಾಡುತ್ತಿರುವ ಬೆದರಿಕೆಗಳ ಬಗ್ಗೆ ತುರ್ತು ಹಸ್ತಕ್ಷೇಪವನ್ನು ಕೋರಿ ಹಲವಾರು ವಿರೋಧ ಪಕ್ಷದ ಸದಸ್ಯರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ...

‘ಇರಾನ್ ಕತಾರ್ ಮೇಲೆ ಮತ್ತೊಮ್ಮೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಸ್ಪೋಟಿಸುತ್ತೇವೆ’; ಟ್ರಂಪ್ ಬೆದರಿಕೆ

ಇರಾನ್ ಕತಾರ್‌ನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡರೆ, ಅಮೆರಿಕ ”ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ಸ್ಫೋಟಿಸುತ್ತದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಜ್ಯಸಭೆಯಲ್ಲಿ ಎಚ್ಚರಿಸಿದ್ದಾರೆ. ಇರಾನ್‌ನ ಸೌತ್ ಪಾರ್ಸ್ ಗ್ಯಾಸ್...

ಮುಸ್ಲಿಂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡ ಓಲಾ ಚಾಲಕ; ‘ಇಸ್ಲಾಮೋಫೋಬಿಕ್’ ಕುರಿತು ಆತಂಕ ವ್ಯಕ್ತಪಡಿಸಿದ ವಕೀಲ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಓಲಾ ಕ್ಯಾಬ್ ಪ್ರಯಾಣದ ಸಂದರ್ಭದಲ್ಲಿ ಚಾಲಕನಿಂದ ನನಗೆ ಬೆದರಿಕೆ ಮತ್ತು ಇಸ್ಲಾಮೋಫೋಬಿಕ್ ಹೇಳಿಕೆಗಳು ಬಂದಿವೆ ಎಂದು ಸುಪ್ರೀಂ ಕೋರ್ಟ್ ವಕೀಲರೊಬ್ಬರು ಆರೋಪಿಸಿದ್ದಾರೆ. ಈ ಘಟನೆಯು, ಪ್ರಯಾಣಿಕರ ಸುರಕ್ಷತೆ ಮತ್ತು...

ಬೆಳ್ತಂಗಡಿ | ಮುಸ್ಲಿಂ ಬಾಲಕನ ಮೇಲೆ ಗುಂಪು ಹಲ್ಲೆ ಆರೋಪ; ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಮುಸ್ಲಿಂ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ...

ಉಮರ್ ಖಾಲಿದ್ ಬಂಧನ ನಿರಂಕುಶ; ಕಾನೂನು ಆಧಾರವಿಲ್ಲ: ವಿಶ್ವಸಂಸ್ಥೆ ಕಾರ್ಯಪಡೆ

"ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಕಾರ್ಯಕರ್ತ ಮತ್ತು ಸಂಶೊಧನಾ ವಿದ್ಯಾರ್ಥಿ ಉಮರ್ ಖಾಲಿದ್ ಅವರ ಬಂಧನವು ನಿರಂಕುಶವಾಗಿದೆ, ಅದಕ್ಕೆ ಯಾವುದೇ ಕಾನೂನು ಆಧಾರವಿಲ್ಲ" ಎಂದು ವಿಶ್ವಸಂಸ್ಥೆಯ ಸಮಿತಿ ಹೇಳಿದೆ. ಸಾಮಾಜಿಕ ಕಾರ್ಯಕರ್ತರ...

ಮಹಾರಾಷ್ಟ್ರ | ಲೈಂಗಿಕ ದೌರ್ಜನ್ಯ ಆರೋಪ : ಸ್ವಯಂ ಘೋಷಿತ ದೇವಮಾನವನ ಬಂಧನ

ಮಹಿಳೆಯರನ್ನು ಅಸಭ್ಯವಾಗಿ ಚಿತ್ರೀಕರಿಸಿ, ಆ ವಿಡಿಯೋಗಳನ್ನು ಇಟ್ಟುಕೊಂಡು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ ಮತ್ತು ಜ್ಯೋತಿಷಿ ಕ್ಯಾಪ್ಟನ್ ಅಶೋಕ್ ಖಾರಟ್‌ನನ್ನು ಮಹಾರಾಷ್ಟ್ರದ ನಾಸಿಕ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ....

‘ಕಾಂಗ್ರೆಸ್ ಜೊತೆ ಬಲವಂತದ ಮದುವೆ ಆಗಿತ್ತು’: ಖರ್ಗೆ ಅವರ ‘ಮೋದಿ ಜೊತೆ ಮದುವೆ’ ಟೀಕೆಗೆ ದೇವೇಗೌಡ ತಿರುಗೇಟು

ಸಂಸತ್ತಿನಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ 'ಮದುವೆ' ಮತ್ತು 'ಪ್ರೀತಿ' ಹೇಳಿಕೆಗೆ ಮಾಜಿ ಪ್ರಧಾನಿ ಮತ್ತು ರಾಜ್ಯಸಭಾ ಸಂಸದ ಎಚ್‌ಡಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ. ದೇವೇಗೌಡರು ಕಾಂಗ್ರೆಸ್ ಅನ್ನು "ಪ್ರೀತಿಸಿದರು" ಆದರೆ ಮೋದಿ (ಬಿಜೆಪಿ)...

ರಾಹುಲ್ ಗಾಂಧಿಯನ್ನು ‘ಟಪೋರಿ’ ಎಂದು ಕರೆದ ಬಿಜೆಪಿ ಸಂಸದೆ ಕಂಗನಾ ರಣಾವತ್

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದೆ - ನಟಿ ಕಂಗನಾ ರನೌತ್, ಅವರನ್ನು ಟಪೋರಿ ಎಂದು ಕರೆದಿದ್ದಾರೆ. ಅವರ ನಡವಳಿಕೆಯು ಮಹಿಳೆಯರಿಗೆ ಅನಾನುಕೂಲವನ್ನುಂಟು ಮಾಡುತ್ತದೆ ಎಂದು...

ಎಸ್‌ಬಿಐಗೆ ವಂಚನೆ ಪ್ರಕರಣ : ಅನಿಲ್ ಅಂಬಾನಿ ವಿಚಾರಣೆ ನಡೆಸಿದ ಸಿಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಮೇರೆಗೆ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ವಿರುದ್ಧ ದಾಖಲಾಗಿರುವ 2,929 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಮಾ.19) ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರನ್ನು ಕೇಂದ್ರ...