ಗಿಡ-ಮರಗಳನ್ನು ತನ್ನ ಮಕ್ಕಳಂತೆ ಸಾಕಿ-ಸಲುಹಿದ ಅಂಕೋಲೆಯ ಹಾಲಕ್ಕಿ ಒಕ್ಕಲು ಬುಡಕಟ್ಟಿನ ತುಳಸಿ ಗೌಡರಿಗೆ ಪದ್ಮಶ್ರೀ ಪ್ರದಾನ ಮಾಡಲಾಗಿದೆ. ಇದರಿಂದ ಪ್ರಶಸ್ತಿಯ ತೂಕ ಹೆಚ್ಚಾಗಿದೆ. ಈ ವ್ಯವಸ್ಥೆಯಲ್ಲಿ ಅಪರೂಪಕ್ಕೊಮ್ಮೆ ಇಂತಹ ಪವಾಡವಾಗುತ್ತದೆ.. ನಿಜವಾದ ಅರ್ಹರಿಗೆ, ಪ್ರಾಮಾಣಿಕರಿಗೆ ಪ್ರಶಸ್ತಿ ಸಂದಿದಾಗ ಆ ಪುರಸ್ಕಾರಗಳಿಗೆ ಗೌರವ ಬರುತ್ತದೆ.
ಆರೇಳು ದಶಕದಿಂದ ಸುಮಾರು 30 ಸಾವಿರ ಸಸಿಗಳನ್ನು ನೆಟ್ಟು ಕಾಳಜಿಯಿಂದ ನೀರೆರೆಯುತ್ತ ನೂರಾರು ಗಿಡ-ಮರಗಳ ಹೆಸರು, ಪರಿಚಯ ಪಕ್ಕಾ ಮಾಡಿಕೊಂಡಿರುವ ತುಳಸಜ್ಜಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗ ‘ಇದೊಂದು ಯೋಗ್ಯ ಆಯ್ಕೆ’ ಎಂಬ ಉದ್ಗಾರ ಎಲ್ಲೆಡೆ ಹೊರಹೊಮ್ಮಿತ್ತು!
ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಬಂಧಿತರಾಗಿದ್ದ 83 ಮಂದಿಗೆ ತಲಾ 2 ಲಕ್ಷ ರೂ. ಪರಿಹಾರ: ಪಂಜಾಬ್ ಸರ್ಕಾರ
ತುಳಸಜ್ಜಿ ಹೊಟ್ಟೆ ಪಾಡಿಗಾಗಿ ಅಂಕೋಲಾದ ಮಾಸ್ತಿಕಟ್ಟೆ ಅರಣ್ಯ ವಿಭಾಗದ ನರ್ಸರಿ (ಸಸ್ಯ ಪಾಲನಾ ಕೇಂದ್ರ)ಯಲ್ಲಿ ಚಾಕರಿ ಮಾಡಿಕೊಂಡಿದ್ದರು. ನಿಷ್ಟೆ, ಕಾಳಜಿ ಮತ್ತು ಪರಿಸರ ಪ್ರೀತಿಯಿಂದ ಕೆಲಸ ಮಾಡುತ್ತಿದ್ದ ತುಳಸಜ್ಜಿಯನ್ನು ಮೊದಲು ಗುರುತಿಸಿದ್ದು ಹಿರಿಯ ಅರಣ್ಯಾಧಿಕಾರಿಯಾಗಿದ್ದ ಯಲ್ಲಪ್ಪ ರೆಡ್ಡಿಯವರು. ಹಾಗಾಗಿ ತುಳಸಜ್ಜಿಗೆ ಒಕ್ಕೂಟ ಸರ್ಕಾರದ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ ಬಂತು.
ತುಳಸಜ್ಜಿಯ ಮೂಲಕ ಉತ್ತರ ಕನ್ನಡಕ್ಕೆ ಮೂರನೆ ಪದ್ಮಶ್ರೀ ಪ್ರಶಸ್ತಿ ಬಂದಂತಾಗಿದೆ. 2017 ರಲ್ಲಿ ಜಾನಪದ ಕೋಗಿಲೆ ಖ್ಯಾತಿಯ ಸುಕ್ರಿ ಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿತ್ತು. 5000 ಹಾಡುಗಳು ನಾಲಿಗೆ ತುದಿಯಲ್ಲೆ ಇರುವ ಸುಕ್ರಜ್ಜಿ ಸಹ ವಿಶಿಷ್ಟ ಸಂಸ್ಕೃತಿ ಸೊಗಡಿನ ಹಾಲಕ್ಕಿ ಒಕ್ಕಲು ಬುಡಕಟ್ಟಿಗೆ ಸೇರಿದವರು. ಸಾರಾಯಿ ವಿರೋಧಿ ಆಂದೋಲನ ಮುಂತಾದ ಸಾಮಾಜಿಕ ಹೋರಾಟದಲ್ಲಿ ಸಕ್ರೀಯರಾಗಿದ್ದ ಸುಕ್ರಜ್ಜಿ ಈಗ ವಯೋಸಹಜ ನಿಶಕ್ತಿಯಿಂದ ಆಸ್ಪತ್ರೆೆ-ಮನೆಯೆಂದು ಓಡಾಡುವಂತಾಗಿದೆ.
ನವೆಂಬರ್ 8 ರಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ದಿಲ್ಲಿಗೆ ಹೋಗಬೇಕಿದ್ದ ತುಳಸಜ್ಜಿಗೆ ದಾರಿ ಖರ್ಚಿಗೆಂದು ಅಂಕೋಲೆಯ ಮಂದಿ 1 ಲಕ್ಷ 16 ಸಾವಿರ ರೂ. ಒಟ್ಟುಗೂಡಿಸಿ ಕೊಟ್ಟಿದ್ದರು. ತುಳಸಜ್ಜಿ ಇದರಲ್ಲಿ ಒಂದಷ್ಟು ಹಣವನ್ನು ಸುಕ್ರಜ್ಜಿ ಔಷದೋಪಚಾರಕ್ಕೆಂದು ಅವರ ಮನೆಗೆ ಹೋಗಿ ಕೊಟ್ಟು ಬಂದಿದ್ದು ಎಲ್ಲರ ಹೃದಯ ಆರ್ದ್ರವಾಗಿಸಿತ್ತು!. ಪದ್ಮಶ್ರೀ ಪ್ರಶಸ್ತಿ ಪಡೆಯುವ ಮೊದಲೇ ಮಾನವೀಯ ಬದ್ದತೆಯಿಂದ ಗಮನ ಸೆಳೆದಿದ್ದ ತುಳಸಜ್ಜಿ ಪ್ರಶಸ್ತಿ ಪಡೆದು ಬರುವಾಗ ತನ್ನ ಸಾಮಾಜಿಕ ಬದ್ದತೆಯ ಸ್ವಭಾವದಿಂದ ಮೂಕ ವಿಸ್ಮಿತರನ್ನಾಗಿಸಿದ್ದಾರೆ.
ಇದನ್ನೂ ಓದಿ: ’ನಿಮ್ಮ ಸಭ್ಯತೆ, ನನ್ನ ಘನತೆ’: ನ.20ಕ್ಕೆ ಗೃಹ ಕಾರ್ಮಿಕರಿಂದ ಮಹಿಳಾ ಚಲೋ
ಪದ್ಮಶ್ರೀ ಪುರಸ್ಕೃತರಾಗಿ ದಿಲ್ಲಿಯಿಂದ ಬೆಂಗಳೂರಿಗೆ ಬಂದಿದ್ದ ತುಳಸಜ್ಜಿ ನೇರ ಊರಿಗೆ [ಅಂಕೋಲ] ಬರಲಿಲ್ಲ. ಬದಲಿಗೆ ಮಂಗಳೂರಿಗೆ ತೆರಳಿ ಕಿತ್ತಳೆ ಹಣ್ಣು ಮಾರಿ ಶಾಲೆಗಳನ್ನು ತೆರೆದ ಹರೇಕಳ ಹಾಜಬ್ಬರ ಮನೆಗೆ ಹೋದರು. ಹರೇಕಳ ಹಾಜಬ್ಬ ದಿಲ್ಲಿಯಲ್ಲಿ ತುಳಸಜ್ಜಿ ಜತೆಯೆ ಪದ್ಮಶ್ರೀ ಪಡೆದಿದ್ದರು. ಅಲ್ಲಿ ಈ ಅಕ್ಷರ ಸಂತ ಮತ್ತು ವೃಕ್ಷ ದೇವತೆ ಪರಿಚಿತರಾಗಿದ್ದರು. ಹಾಜಬ್ಬರ ಶಾಲೆಗಳನ್ನೆಲ್ಲ ಕಣ್ತುಂಬಿಕೊಂಡ ತುಳಸಜ್ಜಿ ಧನ್ಯತಾಭಾವದಲ್ಲಿ ಹಾಜಬ್ಬರ ಶಾಲಾ ಅಭಿಯಾನಕ್ಕೆ ತನ್ನ ಕೈಲಾದ ದೇಣಿಗೆ ಕೊಟ್ಟಿದ್ದಾರೆ. ನನ್ನಿಂದಾದಷ್ಟು ಕೊಟ್ಟಿದ್ದೇನೆ; ಇನ್ನು ದಾನಿಗಳು ಮನಸ್ಸು ಮಾಡಬೇಕು ಎಂದಿದ್ದಾರೆ. ಇದೊಂದು ಅನಕರಣೀಯ ಆದರ್ಶವೆಂಬ ಮೆಚ್ಚುಗೆ ಮಾತು ಕರಾವಳಿಯಲ್ಲಿ ಕೇಳಿಬರುತ್ತಿದೆ.
ಇಂಥ ಮೇರು ವ್ಯಕ್ತಿತ್ವದ ತುಳಸಜ್ಜಿಯನ್ನು ಉತ್ತರ ಕನ್ನಡ ಜಿಲ್ಲಾಡಳಿತ ಸಮರ್ಪಕವಾಗಿ ಗೌರವಿಸುತ್ತಿಲ್ಲ. ಪದ್ಮಶ್ರೀ ಪ್ರಶಸ್ತಿಯೊಂದಿಗೆ ದಿಲ್ಲಿಯಿಂದ ಮಂಗಳೂರು ಮೂಲಕ ಊರಿಗೆ ಬರುತ್ತಿದ್ದ ತುಳಸಜ್ಜಿಯನ್ನು ಉಡುಪಿ-ಉತ್ತರ ಕನ್ನಡದ ಗಡಿಯಲ್ಲಿ ಭಟ್ಕಳದ ಎಸಿ ಮತ್ತು ತಹಶೀಲ್ದಾರ್ ಕಾಟಾಚಾರಕ್ಕೆಂಬಂತೆ ಹೂ ಗುಚ್ಚ ಕೊಟ್ಟು ಸ್ವಾಗತಿಸಿದ್ದಾರೆ. ಹಾಗೆ ನೋಡಿದರೆ ಪದ್ಮ ಪುರಸ್ಕೃತರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದ ತುಳಸಜ್ಜಿಯನ್ನು ಸಡಗರದಿಂದ ಜಿಲ್ಲಾಡಳಿತ ಎದುರುಗೊಳ್ಳಬೇಕಿತ್ತು. ತುಳಸಜ್ಜಿಗೆ ಪದ್ಮಶ್ರೀ ಘೋಷಣೆಯಾದಾಗ, ಪ್ರಶಸ್ತಿ ತರಲು ದಿಲ್ಲಿಗೆ ಹೊರಡುವಾಗ ಮತ್ತು ತಿರುಗಿ ಬರುವಾಗ ಜಿಲ್ಲಾಡಳಿತ ಉದಾಸೀನದಿಂದ ಏಕೆ ಎಂಬ ಪ್ರಶ್ನೆ ಎದ್ದಿದೆ.
ಕನಿಷ್ಟ ಅಂಕೋಲೆಯಿಂದ ಅವರ ಮನೆ ತನಕವಾದರೂ ಮೂರ್ನಾಲ್ಕು ಮೈಲಿ ಮೆರವಣಿಗೆಯಲ್ಲಿ ಕರೆದೊಯ್ಯಬೇಕಿತ್ತು. ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಒಂದು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿತ್ತೆಂದು ಸಾಂಸ್ಕೃತಿಕ ಲೋಕದ ಅನುಭವಿಗಳು ಹೇಳುತ್ತಾರೆ.
ಕಾರವಾರದ ರಾಮಾ ರಾಘೋಬಾ ರಾಣೆಯವರು ಪರಮವೀರ ಚಕ್ರ ಪ್ರಶಸ್ತಿ ಪಡೆದು ಬಂದಾಗ ಕಾರವಾರದಿಂದ ಅವರ ಮನೆ ತನಕ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ದಿದ್ದನ್ನು ನೆನಪಿಸಿ ತುಳಸಜ್ಜಿಗ್ಯಾಕೆ ಕಡೆಗಣಿಸಲಾಗುತ್ತಿದೆ ಎಂದು ಕೇಳಲಾಗುತ್ತಿದೆ.
ಇಷ್ಟೆಲ್ಲಾ ಚರ್ಚೆಗಳು ನಡೆದ ನಂತರ ನವೆಂಬರ್ 15ರ ಸಂಜೆ ತುಳಸಜ್ಜಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆದಿದೆ. ಇದು ಸಮಾಧಾನ ಸಂಗತಿಯಾದರೂ ಜಿಲ್ಲಾಡಳಿತ ತನ್ನ ಜವಾಬ್ದಾರಿಯನ್ನು ಮರೆಯಬಾರದು ಎಂಬುದು ಜನರ ಅಭಿಮತ.
ಇದನ್ನೂ ಓದಿ: ವನದೇವತೆ ಹಾಲಕ್ಕಿ ಬುಡಕಟ್ಟಿನ ತುಳಸಜ್ಜಿ



Respected sir/madam please send any book or articles about single women socio economic problems in kannada version.