ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಒಕ್ಕೂಟ ಸರ್ಕಾರ ಕ್ರಮಕೈಗೊಳ್ಳಲಿದೆ. ರೈತ ಹೋರಾಟಗಾರರು ಮನೆಗೆ ವಾಪಸ್ ತೆರಳಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಘೋಷಿಸಿದ್ದಾರೆ.
“ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕಾನೂನನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ” ಎಂದಿದ್ದಾರೆ.
ನವೆಂಬರ್ 29 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಧಿವೇಶ ನಡೆಯುವ ಎಲ್ಲಾ ದಿನಗಳಲ್ಲೂ ರೈತರು ಕೂಡ ಕಿಸಾನ್ ಸಂಸತ್ ನಡೆಸಲು ನಿರ್ಧರಿಸಿದ್ದರು.
ನಾನುಗೌರಿ.ಕಂ ಜೊತೆಗೆ ಮಾತನಾಡಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸದಸ್ಯ ಕವಿತಾ ಕುರಗಂಟಿ ಈ ಬಗ್ಗೆ ಮಾಹಿತಿ ನೀಡಿದ್ದರು. “ನವೆಂಬರ್ 29ಕ್ಕೆ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, 500 ಮಂದಿಯ ರೈತರ ತಂಡಗಳು ತಮ್ಮ ಟ್ಯ್ರಾಕ್ಟರ್ ಟ್ಯ್ರಾಲಿಗಳ ಜೊತೆಗೆ ಪಾರ್ಲಿಮೆಂಟ್ ಬಳಿ ಶಾಂತಿಯುವಾಗಿ ಪ್ರತಿಭಟನೆ ನಡೆಸಲಿವೆ” ಎಂದಿದ್ದರು.
Dr Darshan Pal speaking on the victory of farmers.#KisanMajdoorEktaZindabaad #Farmlawsrepealed #FarmLaws #FarmersProtest pic.twitter.com/nfXQDf21cs
— Kisan Ekta Morcha (@Kisanektamorcha) November 19, 2021
ಆದರೆ, ಈಗ ಕೃಷಿ ಕಾನೂನುಗಳನ್ನು ರದ್ದು ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ರೈತರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ರೈತ ನಾಯಕ, ಸಂಯುಕ್ತ ಕಿಸಾನ್ ಮೋರ್ಚಾ ಸದಸ್ಯ ಡಾ.ದರ್ಶನ್ ಪಾಲ್, ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಿದ್ದು, ರೈತರ ಮುಂದಿನ ನಿರ್ಧಾರದ ಬಗ್ಗೆ ಆದಷ್ಟು ಬೇಗ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು. ಬಳಿಕ ಎಲ್ಲರಿಗೂ ತಿಳಿಸಲಾಗುತ್ತದೆ ಎಂದು ತಮ್ಮ ಲೈವ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿವಾದಿತ ಕೃಷಿ ಕಾಯ್ದೆಗಳು ರದ್ದು: ಕ್ಷಮೆಯಾಚಿಸಿದ ಮೋದಿ, ರೈತರ ಹೋರಾಟಕ್ಕೆ ಗೆಲುವು


