ಜಿಲ್ಲಾ ನ್ಯಾಯಾಲಯದ ಕೊಠಡಿಯೊಳಗೆ ಇಬ್ಬರು ಪೊಲೀಸರು ನ್ಯಾಯಾಧೀಶರ ಮೇಲೆಯೆ ಹಲ್ಲೆ ನಡೆಸಿರುವ ಅಘಾತಕಾರಿ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದೆ. ಘಟನೆ ಹಿನ್ನಲೆಯಲ್ಲಿ ಪಾಟ್ನಾ ಹೈಕೋರ್ಟ್ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗಿತ್ತಿಕೊಂಡಿದ್ದು, ವರದಿ ಸಲ್ಲಿಸಲು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಕೇಳಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಲಯದ ಕೊಠಡಿಗೆ ನುಗ್ಗಿದ ಇಬ್ಬರು ಪೊಲೀಸರು ಝಂಜರ್‌ಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅವಿನಾಶ್ ಕುಮಾರ್ ಅವರತ್ತ ಗನ್ ತೋರಿಸಿ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗದಲ್ಲಿ ಶೇ. 50 ಮಹಿಳಾ ಮೀಸಲಾತಿಗೆ ಸಿಜೆಐ ಕರೆ
ಪ್ರಸ್ತುತ ನ್ಯಾಯಾಧೀಶರು ಸುರಕ್ಷಿತವಾಗಿದ್ದು, ಆದರೆ ಹಠಾತ್ ಬೆಳವಣಿಗೆಯಿಂದ ಅಘಾತಗೊಂಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳನ್ನು ಸ್ಟೇಷನ್ ಹೌಸ್ ಆಫೀಸರ್ ಗೋಪಾಲ್ ಕೃಷ್ಣ ಮತ್ತು ಸಬ್ ಇನ್ಸ್ ಪೆಕ್ಟರ್ ಅಭಿಮನ್ಯು ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಅವರನ್ನು ರಕ್ಷಿಸಲು ಪ್ರಯತ್ನಿಸಿದ ವಕೀಲರು ಮತ್ತು ನ್ಯಾಯಾಲಯದ ಇತರ ನೌಕರರ ಮೇಲೆ ಕೂಡಾ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ಹಿಂದೆಂದೂಕಂಡಿಲ್ಲದ ಆಘಾತಕಾರಿ ಘಟನೆ” ಎಂದು ಬಣ್ಣಿಸಿದ ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿಗಳಾದ ರಾಜನ್ ಗುಪ್ತಾ ಮತ್ತು ಮೋಹಿತ್ ಕುಮಾರ್ ಷಾ ಅವರನ್ನೊಳಗೊಂಡ ವಿಭಾಗೀಯ ಪೀಠವು ನವೆಂಬರ್ 29 ರಂದು ಪ್ರಕರಣದ ವಿಚಾರಣೆಯನ್ನು ನಡೆಸುವುದಾಗಿ ಹೇಳಿದೆ.
ಈ ಘಟನೆಯ ಸ್ಥಿತಿಗತಿ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ಸಲ್ಲಿಸುವಂತೆ ಪೀಠವೂ ಡಿಜಿಪಿಗೆ ಸೂಚಿಸಿದೆ. ಜೊತೆಗೆ ವಿಚಾರಣೆಯ ದಿನದಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಡಿಜಿಪಿಗೂ ಸೂಚಿಸಲಾಗಿದೆ.



ನ್ಯಾಯಾದೀಶರಗೇ ಈ ಗತಿಯಾದರೆ, ಇನ್ನು ಜನಸಾಮಾನ್ಯರ ಪಾಡು?
ಬಿಹಾರ ಮೊದಲೇ ಗೂಂಡಾ ರಾಜ್ಯ ಅನ್ನೋದನ್ನ ಸಾಬೀತು ಮಾಡಿದ್ದಾರೆ…