ರಾಜಸ್ಥಾನ ಸಚಿವ ಸಂಪುಟ ಪುನಾರಚನೆ ಆಗಲಿದ್ದು, 12 ಹೊಸ ಮುಖಗಳು ಸಚಿವರಾಗಲಿದ್ದಾರೆ. ಯುವ ನಾಯಕ ಸಚಿನ್ ಪೈಲಟ್ ಬಣದ ಐವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿಗಳಾಗಿವೆ.
ರಾಜಸ್ಥಾನ ಸಂಪುಟದ ಎಲ್ಲಾ 21 ಸದಸ್ಯರು ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೂವರು ಕ್ಯಾಬಿನೆಟ್ ಮಂತ್ರಿಗಳಾದ ರಘು ಶರ್ಮಾ, ಹರೀಶ್ ಚೌಧರಿ ಮತ್ತು ಗೋವಿಂದ್ ಸಿಂಗ್ ದೋತಾಸ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಶರ್ಮಾ, ಚೌಧರಿ ಮತ್ತು ದೋತಸ್ರಾ ಅವರು ಪಕ್ಷದ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವುದರಿಂದ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. “ಒಬ್ಬ ವ್ಯಕ್ತಿ, ಒಂದು ಹುದ್ದೆ” ಸೂತ್ರವನ್ನು ರಾಜ್ಯದಲ್ಲಿ ಅನ್ವಯಿಸಲಾಗಿದೆ.
ಗುಜರಾತ್‌ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿಯಾಗಿ ಶರ್ಮಾ, ಪಂಜಾಬ್‌ನ ಎಐಸಿಸಿ ಉಸ್ತುವಾರಿಯಾಗಿ ಚೌಧರಿ ಮತ್ತು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥರಾಗಿ ದೋತಸ್ರಾ ಅವರನ್ನು ನೇಮಿಸಲಾಗಿದೆ.
ಇದನ್ನೂ ಓದಿರಿ: ಜಿಲ್ಲಾ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮೇಲೆಯೆ ಹಲ್ಲೆ ನಡೆಸಿದ ಪೊಲೀಸರು!
ಮೂವರು ಸಚಿವರು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಸಂಪುಟ ದರ್ಜೆಗೆ ಏರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೊಸ ರಾಜ್ಯ ಸಚಿವ ಸಂಪುಟವು ಮೊದಲ ಬಾರಿಗೆ ನಾಲ್ವರು ಎಸ್‌ಸಿ ಸದಸ್ಯರನ್ನು ಹೊಂದಿದ್ದು, ದಲಿತರನ್ನು ಪಂಜಾಬ್‌ನ ಮುಖ್ಯಮಂತ್ರಿಯಾಗಿ ಎತ್ತಿದ ನಂತರ ಕಾಂಗ್ರೆಸ್ ತೆಗೆದುಕೊಂಡ ಹೆಜ್ಜೆ.
ಪರಿಶಿಷ್ಟ ಪಂಗಡದ (ಎಸ್‌ಟಿ) ಸಮುದಾಯದ ಮೂವರು ಸಚಿವರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಪುಟದಲ್ಲಿ ಮೂವರು ಮಹಿಳೆಯರು ಇರಲಿದ್ದು, ಮುಸ್ಲಿಂ, ಎಸ್‌ಸಿ ಮತ್ತು ಗುಜ್ಜರ್ ಸಮುದಾಯವನ್ನು ಮಹಿಳೆಯರು ಪ್ರತಿನಿಧಿಸುತ್ತಿದ್ದಾರೆ.
ರಾಜಸ್ಥಾನ ಸಂಪುಟದಲ್ಲಿ ನೂತನ ಸಚಿವರು: ಹೇಮರಾಮ್ ಚೌಧರಿ, ಮಹೇಂದ್ರಜಿತ್ ಸಿಂಗ್ ಮಾಳವೀಯ, ರಾಮ್‌ಲಾಲ್ ಜಾಟ್, ಮಹೇಶ್ ಜೋಶಿ, ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ, ಮಮತಾ ಭೂಪೇಶ್ ಭೈರ್ವಾ, ಭಜನ್‌ಲಾಲ್ ಜಾತವ್, ಟಿಕಾರಾಂ ಜೂಲಿ, ಗೋವಿಂದ್ ರಾಮ್ ಮೇಘವಾಲ್ ಮತ್ತು ಶಕುಂತಲಾ ರಾವತ್ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜಹಿದಾ, ಬ್ರಿಜೇಂದ್ರ ಸಿಂಗ್ ಓಲಾ, ರಾಜೇಂದ್ರ ದುರ್ಹಾ ಮತ್ತು ಮುರಲೀಲಾಲ್ ಮೀನಾ ರಾಜ್ಯದ ನೂತನ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. “ಸಚಿನ್ ಪೈಲಟ್ ಬಣದಿಂದ”ನಿಂದ ಸಚಿವರಾಗಿ ಸೇರ್ಪಡೆಗೊಂಡವರಲ್ಲಿ ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ ಮತ್ತು ಹೇಮರಾಮ್ ಚೌಧರಿ ಅವರು ಕ್ಯಾಬಿನೆಟ್ ಮಂತ್ರಿಗಳಾಗಿದ್ದಾರೆ. ಜೊತೆಗೆ ಬ್ರಿಜೇಂದ್ರ ಓಲಾ ಮತ್ತು ಮುರಾರಿ ಮೀನಾ ಅವರು ರಾಜ್ಯ ಸಚಿವರಾಗಿದ್ದಾರೆ.


