ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದೆ. ಚುನಾವಣೆಯ ಪ್ರಚಾರಕ್ಕಾಗಿ ಬೇರೆ ರಾಜ್ಯಗಳು ಮತ್ತು ದೇಶಗಳ ಚಿತ್ರಗಳನ್ನು ಬಳಸಿದ್ದು ಹಲವು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ರಾಜ್ಯದ ಬಿಜೆಪಿ ನಾಯಕರು ಇನ್ನೂ ಈ ಚಾಳಿಯನ್ನು ಬಿಟ್ಟಿಲ್ಲ. ಇದೀಗ ಹೊಸದಾಗಿ ಚೀನಾ ದೇಶದ ವಿಮಾನ ನಿಲ್ದಾಣದ ಚಿತ್ರವನ್ನು ಬಳಸಿ, ಅಂತಾರಾಷ್ಟ್ರೀಯವಾಗಿ ದೇಶವನ್ನು ಮುಜುಗರಕ್ಕೆ ಒಳಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 25 ರ ಗುರುವಾರ ಉತ್ತರ ಪ್ರದೇಶದ ಜೇವರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಹೊಸದಾಗಿ ನಿರ್ಮಾಣವಾಗುತ್ತಿರುವ ಈ ವಿಮಾನ ನಿಲ್ದಾಣಕ್ಕೆ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಈ ವಿಮಾನ ನಿಲ್ದಾಣವು ಪೂರ್ಣಗೊಂಡ ನಂತರ ಈ ರೀತಿ ಕಾಣಿಸುತ್ತದೆ ಎಂದು ಹೇಳಿಕೊಂಡು ವಿಮಾನ ನಿಲ್ದಾಣದ ಫೋಟೋ ಮತ್ತು ಚಿತ್ರವನ್ನು ಹಲವಾರು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪುನೀತ್‌ರವರ ‘ಬೊಂಬೆ ಹೇಳುತೈತೆ’ ಹಾಡನ್ನು ಪಾಕ್ ಅಭಿಮಾನಿ ಹಾಡಿದ್ದು 2018 ರಲ್ಲಿ!
ಆದರೆ ವಾಸ್ತವದಲ್ಲಿ ಅವರು ಹಂಚಿಕೊಂಡಿರುವ ವಿಮಾನ ನಿಲ್ದಾಣವು ಚೀನಾದ ಬೀಜಿಂಗ್ ಡಾಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದರ ವಿನ್ಯಾಸವನ್ನು ಇರಾಕಿನ ವಾಸ್ತುಶಿಲ್ಪಿ ಜಹಾ ಹದಿದ್ ವಿನ್ಯಾಸಗೊಳಿಸಿದ್ದಾರೆ. ಈ ಮೆಗಾ ಯೋಜನೆಗೆ ಚೀನಾವು 17.47 ಶತಕೋಟಿ ಡಾಲರ್ ವೆಚ್ಚ ಮಾಡಿದೆ.
ಬಿಜೆಪಿಯ ಮಾಜಿ ಸಂಸದ ಕನ್ವರ್ ಸಿಂಗ್ ತನ್ವಾರ್ ಅವರು ಫೇಸ್‌ಬುಕ್‌ನಲ್ಲಿ ಈ ಫೋಟೋವನ್ನು ಹಂಚಿಕೊಂಡು, “ಪಶ್ಚಿಮ ಉತ್ತರ ಪ್ರದೇಶವು ಇಂದು ‘ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ದ ಶಂಕುಸ್ಥಾಪನೆಯೊಂದಿಗೆ ಅಭಿವೃದ್ಧಿಯ ಹೊಸ ಮಗ್ಗುಲಿಗೆ ಹೊರಳಿದೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಜನಸಾಮಾನ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. #New_UP_Ki_Udaan” ಎಂದು ಬರೆದಿದ್ದರು.

ವಿಮಾನ ನಿಲ್ದಾಣದ ಇದೇ ಫೋಟೋವನ್ನು ಹೊಂದಿರುವ 1:58 ನಿಮಿಷಗಳ ವೀಡಿಯೊವನ್ನು ಒಕ್ಕೂಟ ಸರ್ಕಾರದ ಸಚಿವ ಅನುರಾಗ್ ಠಾಕೂರ್ (ಆರ್ಕೈವ್), ಶಿಕ್ಷಣ ರಾಜ್ಯ ಸಚಿವೆ ಅನ್ನಪೂರ್ಣ ದೇವಿ (ಆರ್ಕೈವ್) ಸೇರಿದಂತೆ ಹಲವು ಬಿಜೆಪಿ ನಾಯಕರು ಹಂಚಿಕೊಳ್ಳುತ್ತಿದ್ದಾರೆ. ಒಕ್ಕೂಟ ಸರ್ಕಾದ ಸಚಿವ ಅರ್ಜುನ್ ರಾಮ್ ಮೇಘವಾಲ್ (ಆರ್ಕೈವ್) ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ (ಆರ್ಕೈವ್) ಕೂಡಾ ಇದನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಹಲವು ಬಳಕೆದಾರರು ಒಂದೇ ರೀತಿಯ ಪ್ರತಿಪಾದನೆಯೊಂದಿಗೆ ಅದೇ ಫೋಟೋವನ್ನು ಹಂಚಿಕೊಂಡಿದ್ದಾರೆ. ಆರ್ಕೈವ್ ಮಾಡಿದ ಲಿಂಕ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್ ರಾಜ್‌ಕುಮಾರ್’ ಅವರದಲ್ಲ
ಫ್ಯಾಕ್ಟ್‌ಚೆಕ್
ವಾಸ್ತವದಲ್ಲಿ ಈ ಚಿತ್ರವು 2015 ರಲ್ಲಿ ಲಂಡನ್ ಮೂಲದ ಆರ್ಕಿಟೆಕ್ಚರ್ ಮ್ಯಾಗಜೀನ್ ‘ಡಿ ಜೀನ್’ನಲ್ಲಿ ಪ್ರಕಟವಾಗಿತ್ತು. “ಜಹಾ ಹದಿದ್ ಬೀಜಿಂಗ್‌ನಲ್ಲಿ ‘ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್’ ಗಾಗಿ ವಿನ್ಯಾಸಗಳನ್ನು ಅನಾವರಣಗೊಳಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಬೀಜಿಂಗ್ ನ್ಯೂ ಏರ್‌ಪೋರ್ಟ್ ಎಂದೂ ಕರೆಯಲ್ಪಡುವ ಬೀಜಿಂಗ್ ಡ್ಯಾಕ್ಸಿಂಗ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ (PKX), ಮೇಲ್ಮೈ ವಿಸ್ತೀರ್ಣದಿಂದ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ ಎಂದು ಹೇಳಲಾಗುತ್ತದೆ. ನಿರ್ಮಾಣವು 2015 ರಲ್ಲಿ ಪ್ರಾರಂಭವಾಯಿತು ಮತ್ತು ಅದರ ಕಾರ್ಯಾಚರಣೆಗಳು ಸೆಪ್ಟೆಂಬರ್ 2019 ರಲ್ಲಿ ಪ್ರಾರಂಭವಾಯಿತು. ಈ ವಿಮಾನ ನಿಲ್ದಾಣದ ಚಿತ್ರವನ್ನು ಗೆಟ್ಟಿ ಕೂಡಾ ಕ್ಲಿಕ್ ಮಾಡಿದೆ.

ಇಷ್ಟೇ ಅಲ್ಲದೆ ಗೂಗಲ್ ಅರ್ಥ್ ಕೂಡಾ ಬೀಜಿಂಗ್ ಡಾಕ್ಸಿಂಗ್ ವಿಮಾನ ನಿಲ್ದಾಣದ ಚಿತ್ರಗಳನ್ನು ತೆಗೆದಿದೆ.

ನವೆಂಬರ್ 24 ರಂದು ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಹ್ಯಾಂಡಲ್ ವಿಮಾನ ನಿಲ್ದಾಣದ ಚಿತ್ರಾತ್ಮಕ ವಿನ್ಯಾಸವನ್ನು ಹಂಚಿಕೊಂಡಿದೆ. ಆದರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರು ಹಂಚಿಕೊಂಡ ಚಿತ್ರವನ್ನು ಹೋಲುತ್ತಿಲ್ಲ.
ಚೀನಾ ದೇಶದ ವಿಮಾನ ನಿಲ್ದಾಣವನ್ನು ಉತ್ತರ ಪ್ರದೇಶದ ವಿಮಾನ ನಿಲ್ದಾಣ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿರುವುದ ಬಗ್ಗೆ ಚೀನಾದ ಸಾಗರೋತ್ತರ ವಿಶ್ಲೇಷಕ ಶೇನ್ ಶಿವೈ ಟ್ವಿಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರು, “ಭಾರತ ಸರ್ಕಾರದ ಸುಳ್ಳು ಸುದ್ದಿಯ ಪ್ರೊಪಗಾಂಡವನ್ನು ಬಹಿರಂಗಪಡಿಸಲಾಗಿದೆ. ಯಪ್ಪೋ….ಭಾರತದ ಸರ್ಕಾರದ ಅಧೀಕೃತರು ಚೀನಾ ಬೀಜಿಂಗ್ ಡಾಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಛಾಯಾಚಿತ್ರಗಳನ್ನು ತಮ್ಮ ‘ಮೂಲಸೌಕರ್ಯಗಳ ಸಾಧನೆಗಳ’ ಪುರಾವೆಯಾಗಿ ಬಳಸಬೇಕಾಗಿದೆ ಎಂದು ತಿಳಿದು ಆಘಾತವಾಯಿತು. ಚೀನಾದ ಬೀಜಿಂಗ್ ಡಾಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಸ್ವಾಗತ, 17.47 ಶತಕೋಟಿ ಡಾಲರ್ ವೆಚ್ಚದ ಮೆಗಾ ಯೋಜನೆ” ಎಂದು ವಿಮಾನ ನಿಲ್ದಾಣದ ಚಿತ್ರವನ್ನು ಮತ್ತು ಬಿಜೆಪಿಯ ನಾಯಕರ ಟ್ವೀಟ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ನೋಯ್ಡಾ ವಿಮಾನ ನಿಲ್ದಾಣದ ಬಗ್ಗೆ ಈ ಹಿಂದೆ ಕೂಡಾ ಸುಳ್ಳು ಸುದ್ದಿ ಹರಡಲಾಗಿತ್ತು. ಆ ಸಮಯದಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಫೋಟೋವನ್ನು ಜೆವಾರ್‌ನಲ್ಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ತಪ್ಪಾಗಿ ಹಂಚಿಕೊಳ್ಳಗಿತ್ತು.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಇಟಲಿಯಲ್ಲಿ ವಿಶ್ವನಾಯಕರನ್ನು ಭೇಟಿ ಮಾಡಲು ಮೋದಿ ಟ್ಯಾಕ್ಸಿಯಲ್ಲಿ ತೆರಳಿದ್ದರೆ?


