Homeಕರ್ನಾಟಕನಟ ಚೇತನ್‌‌ ಎತ್ತಿರುವ ಮೌಲಿಕ ಪ್ರಶ್ನೆಗಳು ಮತ್ತು ಕನ್ನಡ ಚಿತ್ರರಂಗದ ಮೌನ

ನಟ ಚೇತನ್‌‌ ಎತ್ತಿರುವ ಮೌಲಿಕ ಪ್ರಶ್ನೆಗಳು ಮತ್ತು ಕನ್ನಡ ಚಿತ್ರರಂಗದ ಮೌನ

- Advertisement -
- Advertisement -

“ಚಿತ್ರರಂಗಕ್ಕೇಕೆ ರಾಜಕಾರಣ?” ಎಂಬ ಪ್ರಶ್ನೆ ಕೆಲವು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕೇಳಿ ಬರತ್ತಾದರೂ ಇಂದು ಯಾವ ಕ್ಷೇತ್ರವೂ ರಾಜಕಾರಣದಿಂದ ಮುಕ್ತವಾಗಿಲ್ಲ ಎನ್ನುವುದು ದಿಟ. ರಾಜಕಾರಣವೆಂಬುದು ಕೇವಲ ಮತರಾಜಕಾರಣವಲ್ಲ. ಅದು ಸಾಮಾಜಿಕ, ಸಾಂಸ್ಕೃತಿಕ, ಸಮುದಾಯಗಳ ತಿಳಿವಿನ ಪ್ರಶ್ನೆಯೂ ಹೌದು. ಸಾಂಸ್ಕೃತಿಕ ರಾಜಕಾರಣವನ್ನು ಒಳಗೊಳ್ಳದೆ, ಸಂವಾದಕ್ಕೆ ತೆರೆದುಕೊಳ್ಳದ ಕ್ಷೇತ್ರದಿಂದ ಬರುವ ಕೊಡುಗೆಗೆ ಯಥಾಸ್ಥಿತಿಯನ್ನು ಮುಂದುವರಿಸುವ ಇರಾದೆ ಇರುತ್ತದೆ. ಇದು ಸಂವಿಧಾನದ ಆಶಯಗಳನ್ನು ಈಡೇರಿಸದಿರುವ ಅಪಾಯಕ್ಕೆ ಎಡೆಮಾಡಿಕೊಡುತ್ತದೆ.

ಕನ್ನಡ ನಾಡು, ನುಡಿ ಎಂದು ಉದ್ದುದ್ದನೆಯ ಸಂಭಾಷಣೆಗಳು ಕನ್ನಡ ಸಿನಿಮಾಗಳಲ್ಲಿ ಹೇರಳವಾಗಿ ಸಿಗುತ್ತವೆ. ಸಾಮುದಾಯಿಕ ಭಾವುಕತೆಯನ್ನು ಚಿತ್ರರಂಗ ಬಳಸಿಕೊಳ್ಳುವುದು ತಪ್ಪೇನಲ್ಲ. ಆದರೆ ಇದೇ ಚಿತ್ರರಂಗದಲ್ಲಿ ದೀರ್ಘ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರು ಸಾಮಾಜಿಕ ಕಳಕಳಿಯಿಂದ ಹೇಳಿಯೊಂದನ್ನು ನೀಡಿ, ಟ್ರೋಲ್‌ ಪಡೆಗೆ ಆಹಾರವಾದಾಗ, ಚಿತ್ರರಂಗದ ಇತರರು ನಿರ್ಭಾವುಕವಾಗಿ ನಿಲ್ಲುವುದು ಎಷ್ಟು ಸರಿ? ಈ ಪ್ರಶ್ನೆಯನ್ನೇ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರು ಕೇಳುತ್ತಿರುವುದು.

ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ (ಕರ್ನಾಟಕ) ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಮತ್ತು ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಚೇತನ್‌ ಅವರ ಮಾತುಗಳು ಕನ್ನಡ ಚಿತ್ರರಂಗದ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿವೆ.

ಚೇತನ್‌ ಅವರು ಹೇಳಿದಿಷ್ಟು:

“ನಮ್ಮ ಸಮಾಜದಲ್ಲಿ ಯಾರೂ ಕೂಡ ಪ್ರಶ್ನಾತೀತರಲ್ಲ. ಅದು ಸ್ವಾಮೀಜಿಯಾಗಿರಬಹುದು, ರಾಜಕಾರಣಿಯಾಗಿರಬಹುದು, ಸಿನಿಮಾ ಸ್ಟಾರ್‌ ಆಗಿರಬಹುದು. ಎಲ್ಲ ಸಂಗತಿಗಳನ್ನು ಪ್ರಶ್ನೆ ಮಾಡುವ ಹಕ್ಕಿದೆ. ನಾವು ಹೋರಾಟ ಮಾಡುತ್ತಿರುವುದು ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ ನಡುವೆ ಘರ್ಷಣೆ ತರಲು ಅಲ್ಲ. ನಮ್ಮನ್ನು ಜೈಲಿಗೆ ಹಾಕಲು ಯತ್ನಿಸುತ್ತಿರುವ ಬ್ರಾಹ್ಮಣ್ಯದ ವಿರುದ್ಧ ನಡೆಯುತ್ತಿರುವ ಹೋರಾಟ.”

“ಬ್ರಾಹ್ಮಣ್ಯ ಎಂದರೆ ಏನು? ಹುಟ್ಟಿದ ತಕ್ಷಣ ಕೆಲವರನ್ನು ಶ್ರೇಷ್ಠರು, ಕೆಲವರನ್ನು ಕನಿಷ್ಠರು ಎಂದು ಹೇಳುತ್ತದೆ. ಇದನ್ನು ನಾವು ಯಾವುದೇ ರೀತಿಯಲ್ಲೂ ಒಪ್ಪಲು ಆಗುವುದಿಲ್ಲ. ಜಾತಿ, ಧರ್ಮ, ಲಿಂಗ, ವರ್ಗ ಎಲ್ಲವನ್ನೂ ಮೀರಿ ನಾವೆಲ್ಲರೂ ಸರಿ ಸಮಾನರು. ವಿಚಾರದ ಶಕ್ತಿ ನಮ್ಮಲ್ಲಿ ಇರಬೇಕು. ಹಂಸಲೇಖ ಅವರು ಮೈಸೂರಿನಲ್ಲಿ ಕೆಲವು ಮಾತುಗಳನ್ನು ಆಡಿದರು. ಕೆಲವು ಪ್ರಶ್ನೆಗಳನ್ನು ಕೇಳಿದರು. ಅವರಿಗೆ ಮಾತನಾಡಲು ಹಕ್ಕಿದೆ. ಮಾತನಾಡಿದ್ದಾರೆ. ಅದರ ಪರ, ವಿರೋಧದ ಚರ್ಚೆಗಳು ಆಗಲಿ. ನಮ್ಮ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ, ದೇಶಕ್ಕೆ ಚರ್ಚೆ ಒಳ್ಳೆಯದು.”


ಇದನ್ನೂ ಓದಿರಿ: ಇದು ಆಹಾರದ ಪ್ರಶ್ನೆಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ: ಹಂಸಲೇಖರ ಪರ ನಿಂತ ನಟ ಚೇತನ್‌


“ಹಂಸಲೇಖ ಅವರು ಕ್ಷಮೆ ಕೇಳಿದರು. ಅವರ ಮಾತಿಗೂ ಬೆಲೆ ಕೊಡೋಣ. ಕ್ಷಮೆ ಕೇಳುವ ಅವಶ್ಯಕತೆ ಇಲ್ಲವಾದರೂ ಕೇಳಿದ್ದಾರೆ, ಅದು ಅವರಿಷ್ಟ. ಆದರೆ ಕ್ಷಮೆ ಕೇಳಿದ ಬಳಿಕವೂ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದವರು ಬಂದು, ಆರು ತಿಂಗಳ ಹಿಂದೆ ನನ್ನನ್ನು ಜೈಲಿಗೆ ಹಾಕಲು ಹೇಗೆ ಯತ್ನಿಸಿದರೋ ಹಾಗೆಯೇ ಅದೇ ಬಸವನಗುಡಿ ಪೊಲೀಸ್ ಠಾಣೆಯಲ್ಲೇ, ಅದೇ ಸೆಕ್ಷನ್‌‌ 295 ಅಡಿಯಲ್ಲಿ, ಅದೇ ಸಂಘಟನೆ ದೂರು ನೀಡಿತು. ಹಂಸಲೇಖ ಅವರ ಅಭಿಪ್ರಾಯ ಹೇಳಲು ಬಿಡದೆ, ಧಮ್ಕಿ ಹಾಕಿದರು. ನೀವು ಬೃಂದಾವನಕ್ಕೆ ಬಂದು ಬಹಿರಂಗವಾಗಿ ಕ್ಷಮೆ ಕೇಳಿ, ಅಂಗಲಾಚಿ ಎಂದು ಒತ್ತಾಯಿಸಿದರು. ಹಂಸಲೇಖರು ಕ್ಷಮೆ ಕೇಳುವ ಅಗತ್ಯವಿಲ್ಲ. ನೀವು ಸಾವಿರಾರು ವರ್ಷಗಳಿಂದ ದಬ್ಬಾಳಿಕೆ ಮಾಡಿರುವವರು, ಫಲಾನುಭವಿಗಳು, ಬಹುಜನರ ಮೇಲೆ ದಬ್ಬಾಳಿಕೆ ಮಾಡಿದ್ದಕ್ಕೆ ಯಾವ ಕ್ಷಮೆ ಕೇಳುತ್ತೀರಿ?”

“ಬ್ರಾಹ್ಮಣ್ಯದ ವ್ಯವಸ್ಥೆ ಹೋರಾಟದಿಂದ ಗೆದ್ದಿಲ್ಲ. ಅವರು ಕುತಂತ್ರದಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಬಂದಿದ್ದಾರೆ. ಇವತ್ತು ಅದೇ ರೀತಿ ಮಾಡಿದ್ದಾರೆ. ಆಧುನಿಕ ಇತಿಹಾಸದಲ್ಲಿ ಮೇಲ್ವರ್ಗದ ಗಂಡಸರು ರಸ್ತೆಗೆ ಬಂದು ಹೋರಾಡಿದ್ದು ಮಂಡಲ್‌ ಕಮಿಷನ್‌ ಬಂದಾಗ ಮಾತ್ರ. ಮಂಡಲ್‌ ಕಮಿಷನ್‌ ಓಬಿಸಿಗಳಿಗೆ ಮೀಸಲಾತಿ ನೀಡಬೇಕು ಎಂದಿತ್ತು. ಆಗ ಬೀದಿಗೆ ಬಂದರು. ಈ ಬ್ರಾಹ್ಮಣ್ಯದ ವ್ಯವಸ್ಥೆ ಸಾಮಾಜಿಕ ನ್ಯಾಯಕ್ಕಾಗಿ ಏನೇ ಮಾಡಿದರೂ ವಿರೋಧಿಸುತ್ತದೆ. ಹಂಸಲೇಖ ಅವರಂಥವರು ಮಾತನಾಡುವುದನ್ನು ಕಸಿದುಕೊಳ್ಳಲು ನೋಡುತ್ತದೆ. ‌ಅವರು ಕುತಂತ್ರ ಮಾಡುತ್ತಾರೆ. ನಾವು ಎಚ್ಚರಿಕೆ ವಹಿಸಬೇಕು.”

“ನನಗೆ ಬಹಳ ಬೇಜಾರಾದ ಸಂಗತಿ ಏನೆಂದರೆ, ಹದಿನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೀನಿ. ಚಿತ್ರರಂಗದಲ್ಲಿ ಬದುಕಿರುವ ಹೀರೊ, ಡೈರೆಕ್ಷರ್‌ ಯಾರನ್ನೇ ಪರಿಗಣಿಸಿದರೂ ಎಲ್ಲರಿಗಿಂತ ಹೆಚ್ಚು ಸಾಧನೆ ಮಾಡಿದವರು ಹಂಸಲೇಖರೆಂದರೆ ಸುಳ್ಳಾಗುವುದಿಲ್ಲ. ಆದರೆ ಹಂಸಲೇಖ ಅವರಿಗೆ ಈ ರೀತಿ ಆದಾಗ ಎಲ್ಲಿದ್ದಾರೆ ಇವರು?”

“ನಾವೆಲ್ಲ ಒಂದು ಕುಟುಂಬ ಎಂದು ಕನ್ನಡ ಚಿತ್ರರಂಗ ದೊಡ್ಡದಾಗಿ ಮಾತನಾಡುತ್ತೆ. ಕುಟುಂಬದ ಹಿರಿಯ ಸದಸ್ಯನ ಮೇಲೆ ದಬ್ಬಾಳಿಕೆ ಆಗುತ್ತಿರುವಾಗ, ದಾಳಿ ನಡೆಯುತ್ತಿರುವಾಗ, ಮಾನಸಿಕ ಹಿಂಸೆ, ಕಿರುಕುಳ ಆಗುತ್ತಿರುವಾಗ ಎಲ್ಲಿದೆ ನಿಮ್ಮ ಧ್ವನಿ? ನಿಮಗೆ ಕಾಳಜಿ ಇಲ್ಲವಾ? ನಿಮಗೆ ಧೈರ್ಯ ಇಲ್ಲವಾ? ಹಂಸಲೇಖರ ಬಗ್ಗೆ ನಿಮಗೆ ಗೌರವ ಇಲ್ಲವಾ? ಇಲ್ಲ ಅಂತ ನಮಗೆ ಕಾಣುತ್ತೆ.”

“ಐದಾರು ತಿಂಗಳ ಹಿಂದೆ ಕೊರೊನಾ ಎರಡನೇ ಅಲೆ ಬರುವ ಮುಂಚೆ ಸರ್ಕಾರ ಶೇ.100ರಷ್ಟು ಚಿತ್ರಮಂದಿರ ಭರ್ತಿ ಮಾಡಲು ಆಗದು, ಶೇ. 50ರಷ್ಟು ಭರ್ತಿ ಮಾತ್ರ ಸಾಧ್ಯ ಎಂದು ನಿಯಮ ಮಾಡಿತು. ಆಗ ಈ ಸೋ ಕಾಲ್ಡ್‌ ತಾರೆಗಳು ದೊಡ್ಡದಾಗಿ ಮಾತನಾಡಲು ಶುರುಮಾಡಿದರು. ಅನ್ಯಾಯ, ಅನ್ಯಾಯ ಎಂದರು. ಈ ಸಿನಿಮಾ ತಾರೆಗಳಿಗೆ ಯಾವಾಗ ಅನ್ಯಾಯವಾಗುತ್ತದೆ ಗೊತ್ತಾ? ಅವರ ಬಂಡವಾಳಕ್ಕೆ, ಬ್ಯಾಂಕ್‌ ಬ್ಯಾಲೆನ್ಸ್‌ಗೆ ತೊಂದರೆಯಾದಾಗ ಮಾತ್ರ. ಹಂಸಲೇಖರ ವಾಕ್‌ ಸ್ವಾತಂತ್ರ್ಯ ಕಿತ್ತು ಹಾಕುತ್ತಿರುವುದು ಅನ್ಯಾಯ. ಈ ಅನ್ಯಾಯದಲ್ಲಿ ನಿಮ್ಮ ಧ್ವನಿ ಎಲ್ಲಿದೆ?”

“ಯಾರು ದ್ವೇಷ ಕಾರುತ್ತಾರೋ, ಅಸಮಾನತೆ ವಿರೋಧಿಸುತ್ತಾರೋ, ಸಂವಿಧಾನ ವಿರೋಧಿಸುತ್ತಾರೋ ಅವರು ಸಂಘಟನಾತ್ಮಕವಾಗಿ ಬಲವಾಗುತ್ತಿದ್ದಾರೆ. ಸಮಾನತೆ, ಪ್ರೀತಿ, ಸೌಹಾರ್ದತೆ ಎಂದು ಹೋರಾಡುವ ನಾವು ಹೆಚ್ಚು ಸಂಘಟಿತರಾಗಬೇಕು, ಹೆಚ್ಚು ಕೆಲಸ ಮಾಡಬೇಕು..”


ಇದನ್ನೂ ಓದಿರಿ: ಮನುವಾದಿಗಳಿಂದ ವಿರೋಧ ಇದ್ದೇ ಇರುತ್ತದೆ: ಹಂಸಲೇಖರ ಪರ ನಿಂತ ಪ್ರಿಯಾಂಕ್‌ ಖರ್ಗೆ


“ನನ್ನ ಬಳಿ ಬಹಳ ಜನ ಬಂದು ಹೇಳುತ್ತಾರೆ. ನೀವು ನಮ್ಮವರೇ ಎಂದು. ಅವರು ಯಾವ ರೀತಿ ಹೇಳುತ್ತಾರೆಂದು ಅರ್ಥವಾಗುವುದಿಲ್ಲ. ನಮ್ಮವರೇ ಎಂದರೆ ಹುಟ್ಟಿರುವ ಜಾತಿಯಿಂದ ನಮ್ಮವರಾಗಲ್ಲ. ಒಂದೇ ಧರ್ಮದಲ್ಲಿ ಹುಟ್ಟಿದ್ದರಿಂದ ನಮ್ಮವರಾಗಲ್ಲ. ಒಂದೇ ಊರಿನಿಂದ ನಮ್ಮವರಾಗಲ್ಲ. ಜೊತೆಯಲ್ಲಿ ಹುಟ್ಟಿದ ರಕ್ತಸಂಬಂಧದಿಂದ ನಮ್ಮವರಾಗಲ್ಲ. ನಮ್ಮಂಥ ಸಮಾಜದ ಬಗ್ಗೆ ಕಾಳಜಿ ಇರುವವರು, ಸಮಾನತೆಗಾಗಿ ಹೋರಾಟ ಮಾಡುವವರು ನಮ್ಮವರಾಗುತ್ತಾರೆ. ಈ ಸಿದ್ಧಾಂತವನ್ನು ಉಳಿಸುತ್ತೇವೆ, ಅದನ್ನು ಈ ದೇಶದಲ್ಲಿ ಕಟ್ಟುತ್ತೇವೆ..”

“ನೀವು ಬೇರೆ ದೇಶದವರು ಎಂದು ನನಗೆ ಹೇಳುತ್ತಾರೆ. ನಾನು ಅಪ್ಲಿಕೇಷನ್ ಹಾಕಿಕೊಂಡು ಅಮೆರಿಕದಲ್ಲಿ ಹುಟ್ಟಲಿಲ್ಲ. ಕರ್ನಾಟಕಕ್ಕಾಗಿ ಕೆಲಸ ಮಾಡಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ನಾವು ಸುಮಾರು 75 ,000 ಸಾವಿರ ವರ್ಷಗಳ ಮೂಲ ನಿವಾಸಿ ಪರಂಪರೆಯವರಾಗಿದ್ದೇವೆ. ನಮ್ಮ ತಂದೆ-ತಾಯಿಗಳು, ನಾನು ಈ ಕರ್ನಾಟದ ಫಲಾನುಭವಿಗಳು. ಅದಕ್ಕೆ ವಾಪಸ್ ಬಂದಿದ್ದೇನೆ. ಆದರೆ ಬ್ರಾಹ್ಮಣ್ಯ ಎಂಬುದು ಈ ನೆಲದ ಸಿದ್ಧಾಂತವಲ್ಲ. ಪರದೇಶದ ಸಿದ್ಧಾಂತ. ಈ ಬ್ರಾಹ್ಮಣ್ಯವನ್ನು ಆಚೆ ಹಾಕುವವರೇ ನಿಜವಾದ ದೇಶಭಕ್ತರು. ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ, ಪೆರಿಯಾರ್‌‌, ಕುವೆಂಪು ಮಾರ್ಗದಲ್ಲಿ ನಡೆಯೋಣ. ವೈಜ್ಞಾನಿಕತೆ ಬೆಳೆಸೋಣ…”

-ಇಷ್ಟು ಚೇತನ್ ಅವರು ಆಡಿದ ಮಾತುಗಳು.

ಚೇತನ್‌ ಅವರು ನಟರಷ್ಟೇ ಅಲ್ಲ, ಸಾಮಾಜಿಕ ಕಾರ್ಯಕರ್ತರೂ ಹೌದು. ಹೀಗಾಗಿ ಇಷ್ಟು ನಿರ್ಭೀತವಾಗಿ ಬ್ರಾಹ್ಮಣ್ಯದ ವಿರುದ್ಧ ಮಾತನಾಡಬಲ್ಲರು. ಎಲ್ಲ ನಟರೂ ಚೇತನ್‌ ರೀತಿ ದಿಟ್ಟವಾಗಿ ಮಾತನಾಡಬೇಕು ಎಂದು ನಿರೀಕ್ಷಿಸಲಾಗದು ಎಂಬುದೂ ವಾಸ್ತವವೇ. ಆದರೆ ಅವರು ಚಿತ್ರರಂಗದ ಕುರಿತು ಎತ್ತಿರುವ ಪ್ರಶ್ನೆಗಳು ಗಮನಾರ್ಹ. ಚೇತನ್‌ ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಹಂಸಲೇಖರ ಪರ ದನಿ ಎತ್ತಿದ್ದಾರೆ. ಹಂಸಲೇಖರ ಪರ ಕೆಲವರು ಸಾರ್ವಜನಿಕವಾಗಿಯಲ್ಲದೆ, ವೈಯಕ್ತಿಕವಾಗಿ ಬೆಂಬಲಿಸಿರಬಹುದು. ಆದರೆ ಎಂದಿಗೂ ಬಹಿರಂಗವಾಗಿ ನೀಡುವ ಬೆಂಬಲಕ್ಕೆ ಹೆಚ್ಚು ಮಹತ್ವವಿರುತ್ತದೆ ಮತ್ತು ಅದಕ್ಕೆ ಟ್ರೋಲ್ ಪಡೆಗಳನ್ನು ಹಿಮ್ಮೆಟ್ಟಿಸಲು ಹೆಚ್ಚು ಶಕ್ತಿ ಇರುತ್ತದೆ.

ಹಂಸಲೇಖರ ಚಿತ್ರಸಾಹಿತ್ಯವನ್ನು ಗಂಭೀರವಾಗಿ ಗಮನಿಸಿದರೆ, ಹಂಸಲೇಖರು ಸಾಧ್ಯವಾದಲೆಲ್ಲ ಸಮ ಸಮಾಜದ ಆಶಯವನ್ನು, ಶೋಷಣೆ ವಿರುದ್ಧದ ದನಿಯನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಹಂಸಲೇಖ ಅವರು ದಶಕಗಳ ಕಾಲ ಕನ್ನಡ ಚಿತ್ರರಂಗ ಬೆಳೆಯಲು ಅಪಾರ ಕೊಡುಗೆ ನೀಡಿದವರು. ತಮ್ಮ ಸಂಗೀತ ಹಾಗೂ ಸಾಹಿತ್ಯದ ಮೂಲಕ ಕನ್ನಡಿಗರ ಮನಗೆದ್ದವರು. ಇಂಥವರು ಇತ್ತೀಚಿನ ದಿನಗಳಲ್ಲಿ ಒಂದು ಸಾಮಾಜಿಕ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಾಗದು ಎಂದರೆ ಏನರ್ಥ? ಅಸ್ಪೃಶ್ಯತೆ ನಿವಾರಣೆಗೆ ಒಂದು ಕಾರ್ಯಸೂಚಿಯನ್ನು, ಸಾಂವಿಧಾನಿಕ‌ ಆಶಯವನ್ನು ವ್ಯಕ್ತಪಡಿಸಿದ ಕೂಡಲೇ ಒತ್ತಡಗಳು, ಟ್ರೋಲ್ ಗಳು ಸೃಷ್ಟಿಯಾಗುತ್ತವೆ, ಮತ್ತೆ ಕ್ಷಮೆಯಾಚಿಸಲು ಮಾನಸಿಕ ಕಿರುಕುಳ ನೀಡಲಾಗುತ್ತದೆ ಎಂದರೂ ಕನ್ನಡ ಚಿತ್ರರಂಗ ಮೌನವಾಗಿರುವುದು ಏಕೆ? ಹಂಸಲೇಖ ಅವರಂತಹ ಹಿರಿಯ ಜೀವದ ಕಥೆಯೇ ಹೀಗಾದರೆ ಕನ್ನಡ ಚಿತ್ರರಂಗದಿಂದ ಏನೋ ಬದಲಾವಣೆಯನ್ನು ತರಲು ಹೊರಟಿರುವವರ ಭವಿಷ್ಯದ ಕಥೆ ಏನು?

ಕನ್ನಡ ಚಿತ್ರರಂಗದಲ್ಲಿ ಕೆಲವು ಪ್ರಜ್ಞಾವಂತರಿದ್ದಾರೆ. ಅಂಥವರೆಲ್ಲ ಹಂಸಲೇಖರ ಪರ ನಿಂತು, ನೀವು ಹೇಳಿದ್ದು ಸರಿ ಇತ್ತು, ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಬಹಿರಂಗವಾಗಿ ಘೋಷಿಸುವ ಅಗತ್ಯ ಇಂದು ಹೆಚ್ಚಿದೆ. ಇನ್ನೂ ಕಾಲ ಮೀರಿಲ್ಲ. ಅಂತಹ ದಿನವನ್ನು ಶೀಘ್ರದಲ್ಲಿಯೇ ನಿರೀಕ್ಷಿಸಬಹುದೇ?


ಇದನ್ನೂ ಓದಿರಿ: ‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

8 COMMENTS

  1. ಈ ಚೇತನ್ ಒಬ್ಬ ಅಬ್ಬೇಪಾರಿ ಅಯೋಗ್ಯ, ಮುಠ್ಠಾಳ. ಇವನನ್ನು ಯಾರೂ ಇಷ್ಟ ಪಡಲ್ಲ. ತಾನೇ ದೊಡ್ಡ ವಿದ್ವಾಂಸ ಎಂದು ಭಾವಿಸಿದ್ದಾನೆ. ಬ್ರಾಹ್ಮಣ ದ್ವೇಶಿ ಈತ ಬದುಕಲು ಯೋಗ್ಯತೆ ಇಲ್ಲ

  2. ಬ್ರಾಹ್ಮಣ ್ಯ ದ ವಿರೋಧಿ,
    ಹುಟ್ಟಿನಿಂದ ಬ್ರಾಹ್ಮಣ(ಹಾರವ) ರನ್ನು ತೆಗಳಬೇಕಾಗಿಲ್ಲ.

  3. ಬೀದಿಯಲ್ಲಿ ಗಲಾಟೆ ಮಾಡಾದು ತಪ್ಪು , ಆದರೆ ಸಂವಿಧಾನಬದ್ದವಾಗಿ complaint ಕೊಡೋದು ಹೇಗೆ ತಪ್ಪು, ನಾವು ದೇವರಕೋಣೆಯಲ್ಲಿ ಪೂಜಿಸುವ ಯತಿಗಳು , ದೇವರ ಬಗೆಗೆ ಹೀಗೆ ಮಾತಾಡಬಾರದು, ಸ್ವತಃ ನೋವುಂಡಿರುವವರು ಬೇರೆಯವರ ನೋವಿನ ಬಗೆಗೂ ಸೂಕ್ಷವಾಗಬೇಕು ಅಲ್ಲವೇ ?

  4. Cinema illa baduk illa…. yaru kelsa kodthaella…. rajakiya ke… thayaeee….. rajakiya jasti bekalla vote bank ge thayaee….
    En janma evandhu…. America idha oogudhu ache hakidhare…elli bandhu… drama start madidhane

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...