26ನೇ ನವೆಂಬರ್ 2021ರಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲುಎಚ್‌ಒ)ಕೊರೊನಾದ ಒಂದು ಹೊಸ ರೂಪಾಂತರಿಯೊಂದನ್ನು ಗುರುತಿಸಿರುವುದಾಗಿ ಘೋಷಿಸಿತು, ಬಿ.1.1.529 ಸಂಖ್ಯೆಯ ಆ ರೂಪಾಂತರಿ ವಿಶ್ವಾದ್ಯಂತ ಗಂಭೀರವಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಯಿತು. ಈ ರೂಪಾಂತರಿಯು ನವೆಂಬರ್ ತಿಂಗಳ 9ನೇ ತಾರೀಖಿನಂದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಅದೇ ತಿಂಗಳ 24ರಂದು ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಲಾಯಿತು. ಡಬ್ಲುಎಚ್‌ಒದ ಘೋಷಣೆಯ ನಂತರ ಹಲವು ತಾಂತ್ರಿಕ ಅಪ್‌ಡೇಟ್‌ಗಳು ಬಂದವು. ಈ ರೂಪಾಂತರಿಯನ್ನು ಒಂದು ಗ್ರೀಕ್ ಅಕ್ಷರದ ಮೇಲೆ ಒಮೈಕ್ರಾನ್ ಎಂದು ಹೆಸರಿಸಲಾಯಿತು. ಈ ರೂಪಾಂತರಿ ಪತ್ತೆಯಾದ ನಂತರ ವಿಶ್ವಾದ್ಯಂತ ಹಲವಾರು ದೇಶಗಳು ಎಚ್ಚೆತ್ತುಗೊಂಡು, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಹೇರಲು ಶುರು ಮಾಡಿವೆ. ಯೂರೋಪ್, ಅಮೆರಿಕ ಹಾಗೂ ದಕ್ಷಿಣ ಏಷಿಯಾದಲ್ಲಿ ಸಾಮಾಜಿಕ ನಿರ್ಬಂಧನೆಗಳು, ದೊಡ್ಡ ಮಟ್ಟದ ಲಾಕ್‌ಡೌನ್‌ಗಳ ಹಾಗೂ ಗಡಿಗಳನ್ನು ಮುಚ್ಚುವ ಮಾತುಗಳು ಶುರುವಾಗಿವೆ. ಭಾರತದಲ್ಲಿಯೂ ಕೊವಿಡ್-19ರ ಸುತ್ತ ಸಾರ್ವಜನಿಕ ಚರ್ಚೆಯು ಮತ್ತೆ ಪ್ರಾರಂಭವಾಗಿ, ಅದು ಲಾಕ್‌ಡೌನ್‌ಗಳ ಸುತ್ತ, ಲಸಿಕೆಯ ಬೂಸ್ಟರ್ ಡೋಸ್‌ಗಳ ಸುತ್ತ ಸಾಗಿದೆ. ಅತಿರಂಜಕ ಊಹಾಪೋಹಗಳು, ವದಂತಿಗಳು, ಸೆನ್ಸೇಷನಲ್ ವರದಿಗಳು ಹಾಗೂ ಭಯಭೀತಗೊಳಿಸುವ ಮಾತುಗಳು ಎಂದಿನಂತೆ ಶುರುವಾಗಿವೆ. ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಒಳಗೊಂಡ ಎಲ್ಲ ಮಾಧ್ಯಮಗಳಲ್ಲಿಯೂ ನಿರ್ದಿಷ್ಟ ಮಾಹಿತಿಯು ಬದಲಿಗೆ ಊಹಾತ್ಮಕ ಅಭಿಪ್ರಾಯಗಳೇ ತುಂಬಿಹೋಗಿವೆ. ಈ ಲೇಖನವು ವಾಸ್ತವಗಳನ್ನು ಸರಳ ಪದಗಳಲ್ಲಿ ಇಡಲು ಹಾಗೂ ನಮ್ಮ ಸದ್ಯದ ಭವಿಷ್ಯದಲ್ಲಿ ಏನಾಗಬಹುದು ಎಂಬುದನ್ನು ಹೇಳಲು ಪ್ರಯತ್ನಿಸುತ್ತದೆ. (ಡಿಸೆಂಬರ್ 2ರಂದು ಬೆಂಗಳೂರಿನ ಇಬ್ಬರು ವ್ಯಕ್ತಿಗಳಿಗೆ ಒಮೈಕ್ರಾನ್ ಸೋಂಕು ತಗಲಿರುವುದರ ಬಗ್ಗೆ ಕೂಡ ಈಗ ವರದಿ ಆಗಿದೆ).
ವೈರಸ್ ಮತ್ತು ರೂಪಾಂತರಿಗಳು
ಮಾನವರ ವಿಕಾಸ ಆಗುವುದಕ್ಕೆ ಬಹಳ ಮುಂಚೆಯೇ ಜೀವ ಸ್ವರೂಪಗಳ ಒಳಗಿದ್ದ ಜೈವಿಕ ಅಂಶಗಳೆಂದರೆ ವೈರಾಣುಗಳು ಎನ್ನಬಹುದಾಗಿದೆ. ಈ ಜೀವಿರಾಶಿಗಳ (ಸಸ್ಯಗಳು, ಪ್ರಾಣಿಗಳು ಮತ್ತು ಮಾನವರು) ಜೆನೆಟಿಕ್ ಅಂಶಗಳಲ್ಲಿ ವೈರಾಣುಗಳು ಒಂದು ಪುಟ್ಟ ಪ್ರಮಾಣದಲ್ಲಿ ಹಸ್ತಕ್ಷೇಪ ಮಾಡಿ, ರೋಗ ಸೃಷ್ಟಿಮಾಡುತ್ತವೆ. ಇತರ ಎಲ್ಲಾ ಜೀವಿಗಳಂತೆ ವೈರಾಣುಗಳೂ ಸಮಯದೊಂದಿಗೆ ವಿಕಸನ ಹೊಂದುತ್ತ, ಹೊಸ ಸ್ವರೂಪಗಳನ್ನು ಪಡೆಯುತ್ತವೆ. ಕೊರೊನಾ ವೈರಸ್ (SARS CoV2 ಎಸ್‌ಎಆರ್‌ಎಸ್ – ಕೊವಿ2)ಗೂ ಒಂದು ವಿಕಸನ ಪ್ರಕ್ರಿಯೆಯ ಕಥೆಯಿದೆ. ತನ್ನ ಅಸ್ತಿತ್ವಕ್ಕೆ ಇತರ ಜೀವಿಗಳಿಂದ ಸವಾಲು ಎದುರಾದಾಗ, ವೈರಾಣುಗಳು ರೂಪಾಂತರಗೊಂಡು (ಮ್ಯುಟೇಷನ್) ಹೊಸ ತಳಿಗಳಾಗಿ ವಿಕಸನಗೊಳ್ಳುತ್ತವೆ. ಮ್ಯುಟೇಷನ್ ಅಥವಾ ರೂಪಾಂತರ ಎಂದರೆ ಬಾಹ್ಯ ಸವಾಲುಗಳಿಂದ ಪ್ರಾರಂಭವಾಗಿ, ಆ ವೈರಾಣುಗಳ ಮೂಲ ಜೆನೆಟಿಕ್ ಸಂರಚನೆಯಲ್ಲಿ ಆಗುವ ಸಣ್ಣ ಬದಲಾವಣೆಗಳು. ಒಂದು ಮೂಲ ವೈರಾಣುವು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೂಪಾಂತರಗೊಂಡಾಗ ವೈರಸ್‌ನ ಹೊಸ ತಳಿ/ರೂಪಾಂತರಿ ರೂಪತಳೆಯುತ್ತದೆ. ಆ ಮೂಲ ತಳಿಗೆ ಎದುರಾದ ಅಸ್ತಿತ್ವದ ಸವಾಲುಗಳನ್ನು ಎದುರಿಸಬೇಕಾಗುವುದರುಂದ ಈ ಹೊಸ ವೈರಾಣುವು ಮೂಲ ವೈರಾಣುವಿಗಿಂತ ಸಾಮಾನ್ಯವಾಗಿ ಭಿನ್ನವಾಗಿ ವರ್ತಿಸುತ್ತವೆ.

ಎಸ್‌ಎಆರ್‌ಎಸ್-ಕೊವಿ2 ಅಥವಾ ಅಲ್ಫಾ ಗ್ರೂಪ್ ತಳಿ ಎಂದು ಕರೆಯಲಾಗುವ ಮೊದಲ ಕೊರೊನಾ ವೈರಾಣುವನ್ನು ಡಿಸೆಂಬರ್ 2019ರಲ್ಲಿ ಚೀನಾದ ವುಹಾನ್ ನಗರದಲ್ಲಿ ಪತ್ತೆಹಚ್ಚಲಾಯಿತು. ಇದೂ ಕೂಡ ಅದಕ್ಕೂ ಮುನ್ನ ಚಾಲ್ತಿಯಲ್ಲಿದ್ದ ಒಂದು ಅಪರಿಚಿತ ಪೋಷಕ ಕೊರೊನಾ ವೈರಾಣುವಿನ ಒಂದು ರೂಪಾಂತರವಾಗಿದೆ. ಆ ಪೋಷಕ ವೈರಾಣು ಯಾವುದೇ ಗುರುತಿಸಬಹುದಾದಂತಹ ರೋಗಕ್ಕೆ ಕಾರಣವಾಗಲಿಲ್ಲ ಹಾಗಾಗಿ ಅದೊಂದು ಅಪರಿಚಿತ ವೈರಾಣುವಾಗಿ ಉಳಿಯಿತು. ಈ ಪೋಷಕ ವೈರಾಣು ಕಾಲಕಳೆದಂತೆ ಹಲವಾರು ಬಾರಿ ರೂಪಾಂತರಗೊಂಡಿತು ಹಾಗೂ ಬಹಳಷ್ಟು ತಳಿಗಳು ರೂಪತಳೆದವು, ಅದರಲ್ಲಿ ಒಂದು ತಳಿಯು ಕೋವಿಡ್-19 ರೋಗಕ್ಕೆ ಕಾರಣವಾಯಿತು ಹಾಗೂ ಅದನ್ನು ಎಸ್‌ಎಆರ್‌ಎಸ್-ಕೊವಿ2 ’ಎ’ ವೈರಸ್ ತಳಿ ಎಂದು ಗುರುತಿಸಲಾಯಿತು. ಮಾನವರು ವೈರಾಣುವಿನ ಈ ವರ್ಗಕ್ಕೆ, ಇದಕ್ಕೂ ಮುನ್ನ ಸಂಪರ್ಕಕ್ಕೆ ಬಂದಿರಲಿಲ್ಲ. ಒಮ್ಮೆ ಈ ರೂಪಾಂತರಿ ವೈರಸ್ ಸಂಪರ್ಕಕ್ಕೆ ಮಾನವ ಬಂದಮೇಲೆ, ಇಡೀ ಮಾನವ ಜನಾಂಗವು ಈ ಎಸ್‌ಎಆರ್‌ಎಸ್-ಕೊವಿ2 ವೈರಾಣುವಿನ ಸೋಂಕಿಗೆ ಒಳಗಾಗುವ ಸಾಧ್ಯತೆ ಹುಟ್ಟುಹಾಕಿತು. ಮಾನವರಲ್ಲಿ ಸಹಜವಾಗಿಯೆ, ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವುದರ ಮೂಲಕ ಪ್ರತಿಕ್ರಿಯಿಸಿ, ಈ ವೈರಸ್‌ಅನ್ನು ತಟಸ್ಥಗೊಳಿಸುವ ಹಾಗೂ ಅದರಿಂದ ಈ ರೋಗವನ್ನು ಮುಂದೆ ಹರಡದೇ ಇರುವ ಪ್ರಕ್ರಿಯೆ ಶುರುವಾಯಿತು. ಆದರೆ ಮಾನವರಿಗೆ ಈ ವೈರಾಣುವನ್ನು ತಟಸ್ಥಗೊಳಿಸುವ ಮತ್ತು ಹೆಚ್ಚಿನ ಪ್ರಸಾರವನ್ನು ತಡೆಗಟ್ಟಲು ಇರುವ ಶಕ್ತಿಯಲ್ಲಿ ವ್ಯತ್ಯಾಸಗಳಿರುತ್ತವೆ. ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ಈ ಸಾಮರ್ಥ್ಯ ಇರುವುದಿಲ್ಲ. ಹಾಗಾಗಿ ಎಸ್‌ಎಆರ್‌ಎಸ್-ಕೊವಿ2 ಎ ತಳಿಗೆ ವಿಶ್ವಾದ್ಯಂತ ಬೇರೆ ಬೇರೆ ಜನರು ಬೇರೆ ಬೇರೆ ರೀತಿಯ ಸವಾಲು ಒಡ್ಡಿದರು, ಅದರಿಂದ ಆಗಿದ್ದು, ಆ ಕೊರೊನಾ ವೈರಾಣುವಿನ ಬೇರೆ ಬೇರೆ ತಳಿಗಳ ವಿಕಸನ. ವಿಶ್ವಾದ್ಯಂತ ಕೋಟಿಗಟ್ಟಲೆ ಜನರಿಗೆ ಸೋಂಕು ತಗುಲಿದ್ದರಿಂದ, ವೈರಸ್‌ನ ಹೊಸ ಹೊಸ ತಳಿಗಳು ಹೊರಹೊಮ್ಮುವ ಸಾಧ್ಯತೆ ಹೆಚ್ಚಾಯಿತು. ಇಲ್ಲಿಯವರೆಗೆ, ಮನುಷ್ಯರಲ್ಲಿ ಕೊರೊನಾ ವೈರಸ್ ಅಥವಾ ಎಸ್‌ಎಆರ್‌ಎಸ್-ಕೊವಿ2 ನ ಸುಮಾರು 1660 ತಳಿಗಳನ್ನು ಪತ್ತೆ ಹಚ್ಚಲಾಗಿದೆ.
ಆದರೆ, ಎಲ್ಲಾ ತಳಿಗಳು ಪರಸ್ಪರ ಅತ್ಯಂತ ಭಿನ್ನವಾದ ರೋಗಗಳಿಗೆ ಕಾರಣವಾಗುವುದಿಲ್ಲ. ಈ 1660 ರಲ್ಲಿ ಕೇವಲ 5 ತಳಿಗಳನ್ನು ವಿಶ್ವಾದ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಹಾಗೂ, ಈ ಹೊಸದಾಗಿ ರೂಪಾಂತರಗೊಂಡ ವೈರಾಣುಗಳೂ ತಮ್ಮ ಅಸ್ತಿತ್ವಕ್ಕಾಗಿ ತಮ್ಮೊಳಗೆ (ಮಾನವನ ದೇಹದೊಳಗೇ) ಪೈಪೋಟಿ ನಡೆಸುತ್ತವೆ ಹಾಗೂ ಈ ಪ್ರಕ್ರಿಯೆಯಿಂದ ಹೆಚ್ಚಿನ ತಳಿಗಳು ಕಾಣೆಯಾಗುತ್ತವೆ. ಅದರಲ್ಲಿ ಪ್ರಬಲವಾಗಿದ್ದ ವೈರಾಣು ಮಾನವರಲ್ಲಿ ಸೋಂಕಿನ ಹೊಸ ಅಲೆಗೆ ಕಾರಣವಾಗುತ್ತದೆ. ಉದಾಹರಣೆಗೆ, ಈ ಐದು ರೂಪಾಂತರಿಗಳಿಗಿಂತ ಭಿನ್ನವಾದ ತಳಿಗಳು ಸ್ಥಳೀಯವಾಗಿ ಸೋಂಕಿನ ಅಲೆಗಳನ್ನು ಸೃಷ್ಟಿಸಿದರೂ, ಕೆಲವು ದೇಶಗಳಲ್ಲಿ ಅವಕ್ಕಿಂತ ಪ್ರಬಲವಾದ ತಳಿ ಇರುವ ಕಾರಣದಿಂದ ಅಲ್ಲಿ ಅವು ಉಳಿದುಕೊಳ್ಳಲಿಲ್ಲ. (ಉದಾಹರಣೆಗೆ ಲಂಬಡಾ ಮತ್ತು ಕಪ್ಪ ತಳಿಗಳಿಗಿಂತ ಭಾರತದಲ್ಲಿ ಅವಕ್ಕಿಂತ ಪ್ರಬಲವಾದ ಡೆಲ್ಟಾ ತಳಿ ಇದ್ದುದ್ದರಿಂದ ಅವುಗಳು ಸ್ಥಾಪಿಸಿಕೊಳ್ಳಲು ಸಾಧ್ಯವಾಗಲಿಲ್ಲ). ಅಲ್ಫಾ ವಂಶಾವಳಿಯ ತಳಿಗಳು ವಿಶ್ವಾದ್ಯಂತ ಕೊವಿಡ್-19ರ ಮೊದಲ ಅಲೆಗೆ ಕಾರಣವಾದವು, ಆದರೆ
ಬೇರೆ ಬೇರೆ ದೇಶಗಳಲ್ಲಿ ಹೊರಹೊಮ್ಮಿದ ಬೇರೆ ಬೇರೆ ತಳಿಗಳು ಅ ತಳಿಗಳಿಗಿಂತ ಪ್ರಬಲವಾದವು. ಭಾರತದಲ್ಲಿ ಮೊದಲು ಬೀಟಾ ತಳಿ (ಬಿ.1.351) ಹಾಗೂ ನಂತರ ಡೆಲ್ಟಾ (ಬಿ.1.617.2) ತಳಿಗಳು ಅಲ್ಫಾ ತಳಿಗಳ ಮೇಲೆ ಪ್ರಾಬಲ್ಯ ಸಾಧಿಸಿ, ಸೋಂಕಿನ ಎರಡನೆಯ ಅಲೆಗೆ ಕಾರಣವಾದವು. ದಕ್ಷಿಣ ಆಫ್ರಿಕದಲ್ಲಿ ಬೀಟಾ (ಬಿ.1.351) ಪ್ರಾರಂಭದ ತಳಿಗಳ ಮೇಲೆ ಪ್ರಾಬಲ್ಯ ಸಾಧಿಸಿ, ಎರಡನೆಯ ಅಲೆಗೆ ಕಾರಣವಾಯಿತು. ಹಾಗೂ ಹೊರಗಿನಿಂದ ಬಂದ ಡೆಲ್ಟಾ ತಳಿಯು ಮೂರನೆಯ ಅಲೆಗೆ ಕಾರಣವಾಯಿತು. ಆದರೆ, ಮೂರನೆಯ ಅಲೆಯು ಇನ್ನೊಂದು ಹೊಸ ತಳಿಯಿಂದ (ಬಿ.1.1.529) ವೇಗಗೊಂಡಿದೆ, ಒಮೈಕ್ರಾನ್ ತಳಿಯು ಡೆಲ್ಟಾ ತಳಿಯನ್ನು ಸ್ಥಳಾಂತರಿಸಿದೆ.
ಜಾಗತಿಕವಾಗಿ ಪ್ರಮುಖವಾದ ಐದು ರೂಪಾಂತರಿಗಳು, ಒಬ್ಬರಿಂದ ಒಬ್ಬರಿಗೆ ಹರಡುವಿಕೆಯ ವೇಗದಲ್ಲಿ, ರೋಗನಿರೋಧಕತೆಯನ್ನು ತಪ್ಪಿಸಿಕೊಳ್ಳುವುದರಲ್ಲಿ ಮತ್ತು ಸೋಂಕಿನ ರೋಗತೀವ್ರತೆಯಲ್ಲಿ ಬದಲಾಗುತ್ತವೆ. ಬಿ.1.351 ರೂಪಾಂತರಿ ಹೆಚ್ಚು ಹರಡುವಿಕೆಯ ಗುಣ ಹೊಂದಿತ್ತು ಮತ್ತು ಎಲ್ಲಕ್ಕೂ ಮೊದಲಿನ ಆಲ್ಫಾ ರೂಪಾಂತರಿಗಿಂತ ಹೆಚ್ಚು ತೀವ್ರವಾದ ಸೋಂಕಿಗೆ ಕಾರಣವಾಗುತ್ತಿತ್ತು. ಉಳಿದೆಲ್ಲಾ ರೂಪಾಂತರಿಗಳಿಗೆ ಹೋಲಿಸಿದರೆ ಮೊದಲು ಡೆಲ್ಟಾ ರೂಪಾಂತರಿ ಅತಿ ಹೆಚ್ಚು ಹರಡುವಿಕೆಯ ದರ ಹೊಂದಿತ್ತು ಆದರೆ ಸೋಂಕು ತೀವ್ರತೆ ಆಲ್ಫಾ ರೂಪಾಂತರಿಯಷ್ಟೇ ಇತ್ತು. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಸೋಂಕು ಸ್ಫೋಟಗೊಂಡ ಗ್ರಾಫ್ (ವೇಗ) ಪ್ರಕಾರ ಒಮೈಕ್ರಾನ್ ಡೆಲ್ಟಾ ರೂಪಾಂತರಿಗಿಂತಲೂ ಹೆಚ್ಚು ಹರಡುವಿಕೆಯ ದರ ಹೊಂದಿದೆ. ಆದರೆ ಈ ಹರಡುವಿಕೆಯ ನಿರ್ದಿಷ್ಟ ದರ (R ಫ್ಯಾಕ್ಟರ್) ಇನ್ನೂ ತಿಳಿದುಬಂದಿಲ್ಲ. ರೋಗನಿರೋಧಕತೆಯಿಂದ ತಪ್ಪಿಸಿಕೊಳ್ಳುವ ಗುಣ ಮತ್ತು ಸೋಂಕಿನ ತೀವ್ರತೆ ಇನ್ನೂ ಗೊತ್ತಾಗಬೇಕಿದೆ. ಆದರೆ ವಿಜ್ಞಾನಿಗಳು
ಊಹಿಸುತ್ತಿರುವುದೇನೆಂದರೆ ಇದು ರೋಗನಿರೋಧಕತೆಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆಯೆಂದು. (ಲಸಿಕೆಯಿಂದಾಗಲೀ ಅಥವಾ ಸ್ವಾಭಾವಿಕವಾಗಿ ಪಡೆದಿರುವ ರೋಗನಿರೋಧಕತೆ ವೈರಸ್‌ಅನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ). ಹೊಸ ರೂಪಾಂತರಿಯ ವಿನ್ಯಾಸದಿಂದ ಇದು ತಿಳಿದುಬಂದಿದೆ. ಅಂದರೆ ಲಸಿಕೆ ತೆಗೆದುಕೊಂಡಿರುವುದಾಗಲೀ ಅಥವಾ ಹಿಂದೆ ಕೋವಿಡ್-19 ಸೋಂಕಿಗೆ ಗುರಿಯಾಗಿದ್ದರೂ, ಅದು ಒಮೈಕ್ರಾನ್ ರೂಪಾಂತರಿಯಿಂದ ರಕ್ಷಣೆ ನೀಡಲಾರದು. ಮತ್ತೊಂದು ಕಡೆ ಒಮೈಕ್ರಾನ್ ರೂಪಾಂತರಿ ಉಂಟುಮಾಡಬಹುದಾದ ಸೋಂಕಿನ ತೀವ್ರತೆಯ ಬಗ್ಗೆ ಸೂಚನೆಗಳಿಲ್ಲ. ಈ ಸಾಧ್ಯತೆಗಳನ್ನು ನಿಜ ವಾತಾವರಣದಲ್ಲಿ ಇನ್ನೂ ಪತ್ತೆಹಚ್ಚಬೇಕಿದೆ. ನಗರದಲ್ಲಿ ಪೂರ್ಣಪ್ರಮಾಣದಲ್ಲಿ ಸೋಂಕು ಸ್ಫೋಟಗೊಂಡಾಗ ಮಾತ್ರವೇ, ರೋಗನಿರೋಧಕದಿಂದ ತಪ್ಪಿಸಿಕೊಳ್ಳುವ ಮತ್ತು ಸೋಂಕಿನ ತೀವ್ರತೆಯ ಬಗ್ಗೆ ಸಾಕ್ಷ್ಯಗಳು ಸಿಕ್ಕುವುದು. ರಾಷ್ಟ್ರದ, ಅಂತಾರಾಷ್ಟ್ರೀಯ ಮಟ್ಟದ ತಜ್ಞರ ಸದ್ಯದ ಅನಿಸಿಕೆಗಳು (ಒಮೈಕ್ರಾನ್ ಅನ್ನು ಮೊದಲು ಗುರುತಿಸಿದ ದಕ್ಷಿಣ ಆಫ್ರಿಕಾದ ವೈದ್ಯರನ್ನೂ ಸೇರಿಸಿದಂತೆ) ನಿರ್ಧಿಷ್ಟವಾಗಿಲ್ಲ ಮತ್ತು ನಿರ್ಣಾಯಕವಲ್ಲ.

ರೋಗನಿರೋಧಕತೆದಿಂದ ಹೇಗೆ ತಪ್ಪಿಸಿಕೊಳ್ಳುತ್ತದೆ ಮತ್ತು ರೋಗದ ತೀವ್ರತೆಯ ಬಗ್ಗೆ ಸ್ಪಷ್ಟತೆಯ ಕೊರತೆಯ ಹೊರತಾಗಿಯೂ, ಒಮೈಕ್ರಾನ್ ರೂಪಾಂತರಿಯ ಆಗಮನವು ಭಾರತಕ್ಕೆ ಗಂಭೀರ ಪ್ರಾಮುಖ್ಯತೆ ಉಳ್ಳದಾಗಿದೆ. ಗೊತ್ತಿರುವ ಸಂಗತಿಯೆಂದರೆ ಒಮೈಕ್ರಾನ್ ರೂಪಾಂತರಿ ಡೆಲ್ಟಾ ರೂಪಾಂತರಿಗಿಂತಲೂ (ಭಾರತದಲ್ಲಿ ಪ್ರಸ್ತುತ ಪ್ರಬಲವಾದ ರೂಪಾಂತರ) ವೇಗದ ಪ್ರಸರಣ ಮತ್ತು ಪ್ರಾಬಲ್ಯ ಹೊಂದಿದೆ. ಒಂದು ವಾರದಲ್ಲಿ ಡೆಲ್ಟಾ ಅಲೆಯ ಸಮಯದಲ್ಲಿ ಸೋಂಕಿಗೆ ಒಳಗಾದವರಿಗಿಂತ ಹೆಚ್ಚು ಜನರು ಅದೇ ಅವಧಿಯಲ್ಲಿ ಈ ರೂಪಾಂತರಿಯಿಂದ ಸೋಂಕಿಗೆ ಒಳಗಾಗಬಹುದು. ಒಮೈಕ್ರಾನ್ ನಿಂದ ಆಸ್ಪತ್ರೆ ಅಗತ್ಯವಿರುವ ಜನರ ಪ್ರಮಾಣವು ಡೆಲ್ಟಾದಂತೆಯೇ ಇದ್ದರೂ, ನಾವು ಇನ್ನೂ ಹೆಚ್ಚಿನ ಜನರಿಗಾಗಿ ಆಸ್ಪತ್ರೆಯ ಹಾಸಿಗೆಗಳು ಮತ್ತು ಆಮ್ಲಜನಕವನ್ನು ಸಿದ್ಧವಾಗಿಟ್ಟುಕೊಳ್ಳಬೇಕಿದೆ. ಎರಡನೇ ಅಲೆಯು ಭಯಾನಕ ಅನುಭವವನ್ನು ನೀಡಿದರೆ, ಒಮೈಕ್ರಾನ್ ಅಲೆಯ ಆರೋಗ್ಯ ವ್ಯವಸ್ಥೆಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ ಮತ್ತು ಅದರಿಂದ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಕಾರಣವಾಗಬಹುದು. ಆದರೂ, ಒಮೈಕ್ರಾನ್ ಲಸಿಕೆ ಪ್ರತಿರಕ್ಷೆಯ ಪರಿಣಾಮದಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದಾದರೆ, ಹೆಚ್ಚಿನ ಜನಸಂಖ್ಯೆಗೆ ಸಂಪೂರ್ಣ ಲಸಿಕೆ ನೀಡುವ ಮೂಲಕ ಪರಿಸ್ಥಿತಿಯನ್ನು ಭಾಗಶಃ ನಿಯಂತ್ರಿಸಬಹುದು. ಇದಲ್ಲದೆ, ಆಮ್ಲಜನಕ ಮತ್ತು ಇತರ ವೈದ್ಯಕೀಯ ಸಾಮರ್ಥ್ಯಗಳೊಂದಿಗೆ ಆರೋಗ್ಯ ವ್ಯವಸ್ಥೆಯನ್ನು ಉತ್ತಮವಾಗಿ ಯೋಜಿಸಿ ಇಟ್ಟುಕೊಂಡಿರಬೇಕು. ಮತ್ತೊಂದೆಡೆ, ಸೋಂಕಿನ ತೀವ್ರತೆಯ ಪ್ರಮಾಣವು ಅತ್ಯಲ್ಪವಾಗಿ ಉಳಿದರೆ ಒಮೈಕ್ರಾನ್ ಅಂತಹ ಅಪಾಯವಾಗದ ಸಾಧ್ಯತೆಯಿದೆ.
ಎಲ್ಲಾ ಮಾಹಿತಿಯನ್ನು ಸರಿಯಾದ ದೃಷ್ಟಿಕೋನದಲ್ಲಿ ಇರಿಸಿ ನೋಡುವುದಾದರೆ – ಲಭ್ಯವಿರುವ ಪುರಾವೆಗಳು ಒಮೈಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಹರಡುತ್ತದೆ ಮತ್ತು ಭಾರತದಲ್ಲಿ ಮತ್ತು ಪ್ರಪಂಚದ ಬಹುತೇಕ ಭಾಗಗಳಲ್ಲಿ ಸೋಂಕು ಏಕಾಏಕಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಸೂಚಿಸುತ್ತದೆ. ಆದರೂ, ಈ ಸಮಯದಲ್ಲಿ ಈ ಸ್ಫೋಟದ ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ. ಲಸಿಕೆಯಿಂದ ಮತ್ತು ಸ್ವಾಭಾವಿಕ ರೋಗನಿರೋಧಕತೆಯಿಂದ ತಪ್ಪಿಸಿಕೊಳ್ಳುವ ಒಮೈಕ್ರಾನ್‌ನ ಸಾಮರ್ಥ್ಯ ಮತ್ತು ತೀವ್ರತರವಾದ ರೋಗವನ್ನು ಉಂಟುಮಾಡುವ ಸಾಮರ್ಥ್ಯದ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ದರದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಗಮನಾರ್ಹವಾಗಿ ಸೋಂಕು ಸ್ಫೋಟಗೊಂಡ ನಂತರ ಮಾತ್ರ ಇದನ್ನು ನಿರ್ಧರಿಸಬಹುದು. ಅದೇನೇ ಇದ್ದರೂ, ಮಾನವ ಜೀವಗಳು ಅಮೂಲ್ಯವಾದ್ದರಿಂದ ನಾವು ಸೋಂಕು ಸ್ಫೋಟಗೊಳ್ಳುವವರೆಗೂ ಕಾಯುವ ಪರಿಸ್ಥಿತಿಯಲ್ಲಿಲ್ಲ. ಆದ್ದರಿಂದ, ಲಭ್ಯವಿರುವ ಪುರಾವೆಗಳೊಂದಿಗೆ ಕೆಟ್ಟ ಸನ್ನಿವೇಶದ ಸಂದರ್ಭಕ್ಕೆ ಸಿದ್ಧಗೊಳ್ಳಬೇಕಿರುವುದು ವಿವೇಕ.
ಒಮೈಕ್ರಾನ್ ಉಲ್ಬಣಕ್ಕೆ ವಲಯವಾರು ರೀತಿಯಲ್ಲಿ ಸಿದ್ಧಗೊಳ್ಳಬೇಕಿದೆ. ಸರ್ಕಾರವು ಕೂಡಲೇ ಏರ್‌ಪೋರ್ಟ್‌ಗಳಲ್ಲಿ, ಬಂದರುಗಳಲ್ಲಿ ದೇಶದ ಗಡಿಗಳಲ್ಲಿ ಕಟ್ಟೆಚ್ಚರಿಕೆ ಮತ್ತು ಕಣ್ಗಾವಲು ವಹಿಸಬೇಕಿದೆ. (ಪರೀಕ್ಷೆ, ಕ್ವಾರಂಟೈನ್, ಪ್ರತ್ಯೇಕತೆ). ಅಲ್ಲಿ ಸಾಮುದಾಯಿಕ ಕೋವಿಡ್ ಪರೀಕ್ಷೆಯನ್ನು ತೀವ್ರಗೊಳಿಸಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವುದು, ಜನರ ಸಂಚಾರವನ್ನು ಕಡಿಮೆ ಮಾಡುವುದು ಮತ್ತು ಮೈಕ್ರೋ ನಿಯಂತ್ರಣವನ್ನು ಅಳವಡಿಸುವುದನ್ನು ಸರ್ಕಾರಗಳು ತುರ್ತಾಗಿ ಮಾಡಬೇಕಿದೆ. ಸಮಾನಾಂತರವಾಗಿ, ಸರ್ಕಾರವು ರೋಗಿಗಳನ್ನು ಗುರುತಿಸಲು, ದಾಖಲಿಸಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕಿದೆ. ವಯಸ್ಸಾದ ಮತ್ತು ದುರ್ಬಲ ಜನರನ್ನು ರಕ್ಷಿಸಲು, ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಪತ್ತೆಹಚ್ಚಲು, ಪ್ರತ್ಯೇಕಿಸಲು ಮತ್ತು ಆಸ್ಪತ್ರೆಗೆ ದಾಖಲಿಸಲು ಸಮುದಾಯಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಸಾಧಿಸುವ ಸಮುದಾಯ ಮಾದರಿಗಳನ್ನು ಅನ್ವೇಷಿಸಲು ಇದು ಯೋಗ್ಯ ಸಮಯವಾಗಿದೆ. ಈ ಎಲ್ಲಾ ತಯಾರಿ ಮತ್ತು ನಿಯಂತ್ರಣ ಕ್ರಮಗಳು ಗಮನಾರ್ಹವಾದ ಸಾಮಾಜಿಕ-ಆರ್ಥಿಕ ವೆಚ್ಚಗಳಾಗಿವೆ. ಆದ್ದರಿಂದ ಸರ್ಕಾರಗಳು ಜನರ ಜೀವನೋಪಾಯ ರಕ್ಷಣಾ ಕ್ರಮಗಳನ್ನು ಪರಿಗಣಿಸಬೇಕು. ಸಂಭಾವ್ಯ ಮಾನವೀಯ ದುರಂತವನ್ನು ತಪ್ಪಿಸಲು, ಹೆಚ್ಚಿನ ಸ್ಪಷ್ಟತೆ ಬರುವವರೆಗೆ ಕನಿಷ್ಠ ಈ ಸಮಸ್ಯೆಗಳ ಅಪಾಯವನ್ನು ಎದುರಿಸುವುದು ಮುಖ್ಯವಾದೀತು.

ಡಾ. ಹಿಮಾಂಶು
ಆರೋಗ್ಯ ಯೋಜನೆಗಳನ್ನು ರೂಪಿಸುವ ಅನುಭವವಿರುವ ಹಿಮಾಂಶು ಅವರು ಜಾಗತಿಕ ಆರೋಗ್ಯ ವಿಷಯದಲ್ಲಿ ಸಂಶೋಧಕರು ಮತ್ತು ವೈದ್ಯರು. ನವದೆಹಲಿಯ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಜೊತೆಗೆ ಅವರು ಪ್ರಸಕ್ತ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ವಿಶ್ವದೆಲ್ಲೆಡೆ ಕೊರೊನಾ ಹೊಸ ರೂಪಾಂತರ ‘ಓಮಿಕ್ರಾನ್’ ಆತಂಕ: ತಜ್ಞರು ಹೇಳುವುದೇನು?


