Homeಮುಖಪುಟಕೃತಕ ಬುದ್ಧಿಮತ್ತೆ (AI) ಎತ್ತ ಸಾಗುತ್ತಿದೆ?

ಕೃತಕ ಬುದ್ಧಿಮತ್ತೆ (AI) ಎತ್ತ ಸಾಗುತ್ತಿದೆ?

- Advertisement -
- Advertisement -

ಜನಪ್ರಿಯ ಸೈ-ಫೈ ಕಾದಂಬರಿಕಾರ ಆರ್ಥರ್ ಸಿ ಕ್ಲಾರ್ಕ್ ಪ್ರಕಾರ ಅತ್ಯಂತ ಮುಂದುವರಿದ ತಂತ್ರಜ್ಞಾನಕ್ಕೂ ಜಾದೂವಿಗೂ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಅವನೇ ಹೇಳಿದ ಪ್ರಕಾರ ನಮ್ಮ ಈಗಿನ ಪೀಳಿಗೆ ಹೊಸ ಆಧುನಿಕ ನಾಗರಿಕತೆಗೆ ಕೇವಲ ಸೇತುವೆಯಷ್ಟೇ. ಇಂದು ಕೃತಕ ಬುದ್ಧಿಮತ್ತೆ (AI – Artificial Intelligence) ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವುದನ್ನು ಗಮನಿಸಿದರೆ ಇದಾಗಲೇ ವಾಸ್ತವಕ್ಕೆ ಇಳಿದಿರುವ ವಿಷಯವೆಂದು ತಿಳಿದುಬರುತ್ತದೆ. ಸಿಯಾಟೆಲ್ ನಗರದಲ್ಲಿ ಇರುವ ಡೆಲ್ಫಿ ಕಂಪ್ಯೂಟರ್ ಜೊತೆ ಸಂವಾದ ಮಾಡಿದಾಗ ಸಾಮಾನ್ಯ ಮನಸ್ಸಿಗೆ ಹೊಳೆಯದೇ ಇರುವ ಭೂತ-ಭವಿಷ್ಯಗಳನ್ನು ಅದು ಉದ್ಘರಿಸುತ್ತದೆ. ಹಿಂದೆ ಗ್ರೀಕ್ ದೇಶದ ದೇವಾಲಯ ಡೆಲ್ಫಿಗೆ ಹೋಗಿ ಮುಂದೇನಾಗಬಹುದೆಂಬ ದೇವವಾಣಿಯನ್ನು ಆಲಿಸುವ ಸಂಪ್ರದಾಯವಿತ್ತು ಎನ್ನುತ್ತಾರೆ. ಅಂದು ಜಗತ್ತಿನಲ್ಲಿ ಅತ್ಯಂತ ಬುದ್ಧಿವಂತ, ಪ್ರಜ್ಞಾವಂತ ಯಾರೆಂದು ಕೇಳಿದಾಗ ಅದೇ ಡೆಲ್ಫಿಯ ದೇವವಾಣಿ ಸಾಕ್ರೆಟಿಸ್‌ನ ಹೆಸರನ್ನು ಹೇಳಿತ್ತು ಎನ್ನುವ ಕತೆಯುಂಟು. ಹಾಗೆಯೇ “ಸಾಕ್ರೆಟಿಸ್ ಬುದ್ಧಿವಂತನೇಕೆಂದರೆ ಅವನೊಬ್ಬನಿಗೆ ತನಗೇನು ಗೊತ್ತಿಲ್ಲವೆಂಬುದು ಗೊತ್ತು, ಆ
ಕಾರಣಕ್ಕಾಗಿ” ಎಂದು ವಿವರಿಸಿತ್ತಂತೆ.

ಇಂದು ಕೃತಕ ಬುದ್ಧಿಮತ್ತೆಯು ನಮಗೇನು ತಿಳಿದಿಲ್ಲವೆಂಬುವುದನ್ನೂ ತಿಳಿದು ನಮಗೆ ತಿಳಿಸುವಷ್ಟರ ಮಟ್ಟಿಗೆ ಬೆಳೆದುನಿಂತಿದೆ. ಇದಾಗಲೇ ಈ ತಂತ್ರಜ್ಞಾನದ ಯಂತ್ರ ಕತೆ, ಕಾದಂಬರಿ, ಕವಿತೆಗಳನ್ನು ಕೂಡಾ ಸೃಷ್ಟಿಮಾಡಿದೆ. ಅರ್ಥಹೀನ ಶಬ್ದಗಳನ್ನು (Gibberish) ಸ್ವಲ್ಪ ಅರ್ಥೈಸಲು ಕಷ್ಟವಾಗುತ್ತಿದೆಯಂತೆ ಅಷ್ಟೇ. ಛಂದಸ್ಸು, ಅಲಂಕಾರಶಾಸ್ತ್ರ, ವ್ಯಾಕರಣಶಾಸ್ತ್ರ ಎಲ್ಲವನ್ನೂ ಆಂತರ್ಯಗೊಳಿಸಿಕೊಂಡು ಶತಾವಧಾನವನ್ನೂ ಮಾಡಬಹುದೆನ್ನುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಗ್ಯಾರಿ ಕ್ಯಾಸ್ಪರೋವ್‌ನನ್ನು ಚೆಸ್ ಆಟದಲ್ಲಿ ಸೋಲಿಸಿದ ಐಬಿಎಂನ ’ಡೀಪ್ ಬ್ಲೂ’ ಚೆಸ್ ಆಟದಲ್ಲಿ ಅಚ್ಚರಿಯ ಹೆಜ್ಜೆಯನ್ನು ಇಟ್ಟಿತ್ತು. ಕ್ಯಾಸ್ಪರೋವ್ ಹೇಳುವ ಪ್ರಕಾರ ಚದುರಂಗದ ಶತಮಾನದ ಬೇರನ್ನೇ ಈ ಕೃತಕ ಬುದ್ಧಿಮತ್ತೆ ಅಲುಗಾಡಿಸಿದೆ. ಎಂಐಟಿ ವಿಶ್ವವಿದ್ಯಾಲಯದ ಯಂತ್ರವೊಂದು ಯಾವ ಆಂಟಿಬಯಾಟಿಕ್‌ಗಳಿಗೂ ಒಗ್ಗದ ಹೊಸ ಆಂಟಿಬಯಾಟಿಕ್ ಒಂದನ್ನು ತಾನೇ ಕಂಡುಹಿಡಿಯಿತು. ಸುಮಾರು ಅರವತ್ತೊಂದು ಸಾವಿರ ವಿವಿಧ ರಾಸಾಯನಿಕ ವಸ್ತುಗಳನ್ನು ಜಾಲಾಡಿ ಒಂದು ಮಾಲಿಕ್ಯೂಲ್‌ಅನ್ನು ಹೆಕ್ಕಿ ತೆಗೆದು ಸೃಷ್ಟಿಸಿದ ಹ್ಯಾಲಿಸಿನ್ ಆಂಟಿಬಯಾಟಿಕ್ ಹಲವು ಸೋಂಕುರೋಗಗಳಿಗೂ ದಿವ್ಯೌಷಧವಾಗಿತ್ತು. ಹೊಸದಾಗಿ ಆಂಟಿಬಯಾಟಿಕ್‌ಗಳ ಹುಟ್ಟೇ ಇಲ್ಲ ಎನ್ನುವ ಕಾಲದಲ್ಲಿ, ಮನುಷ್ಯನ ಕೈಯಲ್ಲಿ ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಯಂತ್ರವೊಂದು ಆಂಟಿಬಯಾಟಿಕ್ ಹುಟ್ಟುಹಾಕಿದೆ. ಕೇವಲ ನಮ್ಮ ಉಸಿರಿನಲ್ಲಿರುವ ಸುಮಾರು ಎಂಟುನೂರು ರಾಸಾಯನಿಕಗಳನ್ನು ವಿಶ್ಲೇಷಿಸಿ, ಹಿಂದೆ ಬಂದಿರುವ ಮತ್ತು ಮುಂದೆ ಬರಲಿರುವ ಕಾಯಿಲೆಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ.

ಇಂದು ಮನುಷ್ಯ ಮಾಡುತ್ತಿರುವ ಶೇಕಡಾ ಅರವತ್ತರಷ್ಟು ಕೆಲಸಗಳನ್ನು ಕೃತಕ ಬುದ್ಧಿಮತ್ತೆಯುಳ್ಳ ತಂತ್ರಜ್ಞಾನದ ಸಲಕರಣಿಗಳು ಇದಾಗಲೇ ಸಂಪೂರ್ಣ ಮಾನವರಹಿತವಾಗಿ ಮಾಡಬಹುದು ಎನ್ನುತ್ತಾರೆ. ವಾಹನಗಳ ಚಾಲನೆಯಿಂದ ಹಿಡಿದು, ವಿಮಾನ ಚಾಲನೆ, ಆಸ್ಪತ್ರೆಗಳಲ್ಲಿ ಸರ್ಜರಿ, ಕಾಯಿಲೆಗಳನ್ನು ಕಂಡುಹಿಡಿಯುವುದು, ಹೊಸ ಔಷಧಿಗಳನ್ನು ಸೃಷ್ಟಿಸುವುದು, ಮನುಷ್ಯನ ಅಂಗಾಂಗಗಳನ್ನು ಪ್ರಿಂಟ್ ಮಾಡುವುದು ಹೀಗೆ ಎಲ್ಲ ಕ್ಷೇತ್ರಗಳಿಗೂ ಇದು ಲಗ್ಗೆ ಇಟ್ಟಿದೆ.

ಹಿಂದೆ ಯಂತ್ರವೆಂದರೆ ಮನುಷ್ಯ ತುಂಬಿದ ಅಥವಾ ಕಲಿಸಿಕೊಟ್ಟ ಮಾಹಿತಿಯ ಆಧಾರದ ಮೇಲೆ ಮಾತ್ರ ಕೆಲಸ ಮಾಡುವುದಾಗಿತ್ತು. ಆದರೆ ಇಂದಿನ ಎಐ ಯಂತ್ರಕ್ಕೆ ಫುಟ್ಬಾಲ್ ಆಟವನ್ನು ನೋಡಲು ಅವಕಾಶ ಕೊಟ್ಟರೆ ಅದು ಆಟವನ್ನು ಆಳವಾಗಿ ಗಮನಿಸಿ ಎಲ್ಲ ವಿಷಯಗಳನ್ನು ಆಂತರ್ಯಗೊಳಿಸಿಕೊಂಡು ತಾನೂ ಆಟಕ್ಕಿಳಿದು ಎಲ್ಲರನ್ನೂ ಸೋಲಿಸಬಲ್ಲುದು. ನಾವು ಸೌತ್ ಕೊರಿಯಾದ ಗೋ ಎಂಬ ಆಟದಲ್ಲಿ ಗೆಲುವು ಕಂಡದನ್ನು ಗಮನಿಸಿದ್ದೇವೆ. ಭಾರತೀಯ ತತ್ವಶಾಸ್ತ್ರದಲ್ಲಿ ಶ್ರವಣ ಮನನ ನಿಧಿದ್ಯಾಸನವೆಂಬ ಮೂರು ಹಂತಗಳನ್ನು ಗುರುತಿಸುತ್ತಾರೆ. ಇದು ಅದೇ ರೀತಿ ಮನುಷ್ಯನ ಇಂದ್ರಿಯಗಳಿಗೆ ಗೋಚರವಾದದ್ದನ್ನು ಗಮನಿಸಿ, ಒಂದು ಟ್ರಿಲಿಯನ್ ಪ್ಯಾರಾಮೀಟರ್ ಅಥವಾ ಆಯಾಮಗಳಿಂದ ವಸ್ತುಗಳನ್ನು ಗಮನಿಸಿ ನಮ್ಮ ದೋಷಗಳನ್ನು ಮೀರಿ ಕೆಲಸ ಮಾಡುವ ಸಾಮರ್ಥ್ಯವನ್ನು ಪಡೆದಿರುತ್ತದೆ. ಈ ರೀತಿಯ ತಂತ್ರಜ್ಞಾನದಿಂದ ತಯಾರಿಸಿರುವ ಯಂತ್ರಗಳು ಪ್ರಜ್ಞಾಪೂರ್ವಕವಾಗಿವೆಯೇ ಎಂಬ ಚರ್ಚೆಗೆ ಈ ಬೆಳವಣಿಗೆಗಳು ತೆರೆದುಕೊಳ್ಳುವಂತೆ ಮಾಡಿವೆ. ಮುಂದೆ ಅವು ತಮಗೆ ಬೇಕಾದುದನ್ನು ತಾವೇ ಆಲೋಚಿಸಿ ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತಕ್ಕೆ ಹೋಗಬಹುದು. ಅವುಗಳನ್ನು ಕಾನ್ಷಿಯಸ್ ಮಷೀನ್ ಎನ್ನಬಹುದೇ ಎನ್ನುವ ಚರ್ಚೆಗಳು ನಡೆಯುತ್ತಿವೆ. ಮನುಷ್ಯನಲ್ಲಿರುವ ಕೆಲವು ಪೂರ್ವಗ್ರಹಪೀಡಿತ ನಂಬಿಕೆಗಳು ಮತ್ತು ನಮ್ಮ ಏಕಾಗ್ರತೆಯಲ್ಲಿರುವ ಕೊರತೆಯನ್ನು ಮೀರಿ ಕೆಲಸ ಮಾಡಬಹುದಾಗಿದೆ. ಮುಂದೆ ಮನುಷ್ಯನನ್ನು ವಾಹನ ಚಾಲನೆಯಿಂದ ನಿಷಿದ್ಧಗೊಳಿಸಬಹುದು ಎನ್ನುತ್ತಾರೆ.

ಕಾರಣ ಅವನಿಗೆ ಒಂದೇ ವಿಷಯದ ಬಗ್ಗೆ ನಿರಂತರವಾಗಿ ದೃಷ್ಟಿ ಮತ್ತು ಏಕಾಗ್ರತೆಯನ್ನು ಕಾಪಾಡಿಕೊಳ್ಳುವುದು ಕಷ್ಟ ಎನ್ನುವ ಕಾರಣದಿಂದ. ಇದಾಗಲೇ ನಮ್ಮ ಮೊಬೈಲ್ ಫೋನ್, ಕಾರ್, ಮನೆಗಳಲ್ಲಿ ಬಳಸುವ ಫ್ರಿಜ್ಡ್, ವಾಷಿಂಗ್ ಮೆಷಿನ್, ಟಿವಿಗಳಲ್ಲೂ ಸಹ ಸಾಕಷ್ಟು ಈ ಎಐ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಚೈನಾದಲ್ಲಿ ಬಟ್ಟೆ ಹೊಲಿಯುವ ಎಐ ತಂತ್ರಜ್ಞಾನಾಧಾರಿತ ದೈತ್ಯ ಮಷೀನ್‌ಗಳು ಲಕ್ಷಾಂತರ ಜನರ ಕೆಲಸವನ್ನೇ ಕಿತ್ತುಕೊಳ್ಳುತ್ತಿವೆ. ಸಾಮಾನ್ಯವಾಗಿ ಅಡುಗೆ ಕೆಲಸ ಅತ್ಯಂತ ಕ್ಲಿಷ್ಟಕರ ಎನ್ನುವುದುಂಟು. ಇಂದು ಈ ಕ್ಷೇತ್ರಕ್ಕೂ ಲಗ್ಗೆ ಇಟ್ಟು ಇಡ್ಲಿ ದೋಸೆ ಮಾಡುವಷ್ಟರ ಮಟ್ಟಿಗೆ ಈ ತಂತ್ರಜ್ಞಾನ ಬೆಳೆದು ನಿಂತಿದೆ. ಇವತ್ತು ಒಂದು ಕಾರ್ ತಯಾರಿಸಲು ಅತ್ಯಂತ ಹೆಚ್ಚು ಖರ್ಚು ಬೀಳುವುದು ಅದಕ್ಕೆ ಬಳಸುವ ಮೋಟಾರ್ ಅಥವಾ ಸ್ಟೀಲ್ ವಸ್ತುಗಳಿಗಲ್ಲ, ಬದಲಿಗೆ ಅಲ್ಲಿ ಬಳಸುವ IOT – ಇಂಟರ್ನೆಟ್ ಆಫ್ ಥಿಂಗ್ಸ್‌ಗೆ ಆಗಿರುತ್ತದೆ. ಅಮೆರಿಕದ ಜನರಲ್ ಎಲೆಕ್ಟ್ರಿಕ್ ಫ್ಯಾಕ್ಟರಿಯೊಂದರಲ್ಲಿ ಯಂತ್ರ ಮಾನವರೇ ಕೆಲಸ ಮಾಡುವುದರಿಂದ ಅಲ್ಲಿ ಬೆಳಕಿನ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಅಮೆಜಾ಼ನ್ ಅನೇಕ ಗೋದಾಮುಗಳು ಕೂಡ ಈ ತಂತ್ರಜ್ಞಾನದ ಮೂಲಕವೇ ನಿರ್ವಹಿಸುತ್ತಿರುವುದಾಗಿದೆ. ಹೀಗೆ ನಮ್ಮ ಸುತ್ತಲೂ ಈ ತಂತ್ರಜ್ಞಾನ ಇದಾಗಲೇ ಆವರಿಸಿಕೊಂಡಿದ್ದರೂ ನಾವು ಇನ್ನೂ ಅದನ್ನು ಗಮನಿಸಿಲ್ಲ ಎನ್ನುತ್ತಾನೆ ಮೋ ಗಡಾಟ್, ತನ್ನ “ಸ್ಕೇರಿ ಸ್ಮಾರ್ಟ್” ಎನ್ನುವ ಪುಸ್ತಕದಲ್ಲಿ. ಈ ನಿಟ್ಟಿನಲ್ಲಿ ಇತ್ತೀಚೆಗೆ ಎರಿಕ್ ಸ್ಮಿತ್, ತೊಭತ್ತೆಂಟು ವರ್ಷದ ಹೆನ್ರಿ ಕಿಸಿಂಜೆರ್ ಮತ್ತು ಡ್ಯಾನಿಯಲ್ ಹಟನ್ಲಾಕರ್ ಬರೆದಿರುವ “ದ ಏಜ್ ಆಫ್ ಎಐ ಅಂಡ್ ಅವರ್ ಹ್ಯೂಮನ್ ಫ್ಯೂಚರ್” ಗಮನಿಸಬಹುದಾದ ಪ್ರಮುಖ ಪುಸ್ತಕವಾಗಿದೆ.

What is powerful for good can be potent for evil ಎನ್ನುವುದು ಸತ್ಯದ ಮಾತೇ ಆಗಿದೆ. ಇದೇ ತಂತ್ರಜ್ಞಾನವನ್ನು ಬಳಸಿ ಚುನಾವಣೆಯನ್ನು ಹೇಗೆ ಗೆಲ್ಲಬಹುದೆಂದು ನಿಕ್ ಚೀಸ್ಮನ್ ಮತ್ತು ಬ್ರಾಯೆನ್ ಕ್ಲಾಸ್ ತಮ್ಮ “ಹೌ ಟು ರಿಗ್ ಎನ್ ಎಲೆಕ್ಷನ್” ಎಂಬ ಪುಸ್ತಕದಲ್ಲಿ ವಿವರಿಸುತ್ತಾರೆ. ಮನುಷ್ಯರನ್ನು ಫೇಸ್‌ಬುಕ್‌ನಂತ ಕಂಪನಿಗಳು ತಮಗೆ ಬೇಕಾದ ವಿಷಯಗಳಿಗೆ ವ್ಯಸನಕ್ಕೊಳಪಡಿಸಿ ಗುಲಾಮರನ್ನಾಗಿಸುವ ಸಾಧ್ಯತೆಗಳೂ ಉಂಟು. ಇಂತಹ ಪ್ರಕ್ರಿಯೆಗಳನ್ನು ಇದಾಗಲೇ ಗಮನಿಸುತ್ತಿದ್ದೇವೆ. ಈ ಯಂತ್ರಗಳಿಗೆ ನಾವೇನು ವಿಷಯಗಳನ್ನು ಮತ್ತು ವಿವರಗಳನ್ನು ಹೇಳುತ್ತೇವೆಯೋ ಅಥವಾ ತೋರಿಸುತ್ತೇವೆಯೋ ಆ ಆಧಾರದ ಮೇಲೆ ಅವು ವಿಷಯಗಳನ್ನು ಆಂತರ್ಯಗೊಳಿಸಿಕೊಂಡು ಕಾರ್ಯಕ್ಕಿಳಿಯುತ್ತವೆ. ಇಂತಹ ಸಂದರ್ಭದಲ್ಲಿ ಅನೇಕ ತಂತ್ರಜ್ಞಾನಗಳಲ್ಲಿ, ಇದಾಗಲೇ ಕಂಡುಬಂದಿರುವಂತೆ ನಮ್ಮಲ್ಲಿರುವ ವರ್ಣಭೇದ ನೀತಿ, ಜಾತೀಯತೆ ಮತ್ತು ಲಿಂಗ ತಾರತಮ್ಯ ಅವುಗಳಲ್ಲಿಯೂ ಕಂಡುಬರುವುದು ಸಹಜವಾಗಿದೆ. ಕೋವಿಡ್ ಸಂದರ್ಭದಲ್ಲಿ ಆಕ್ಸಿಮೀಟರ್‌ಗಳು ಕಪ್ಪುವರ್ಣದ ಆಫ್ರಿಕನ್ ಸಮುದಾಯಕ್ಕೆ ಸರಿಯಾಗಿ ಕೆಲಸ ಮಾಡದೆ, ಆಕಾರಣವಾಗಿ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಹಿಟ್ಲರನ ಗ್ಯಾಸ್ ಛೇಂಬರ್ ಕಂಡ ಎಐ ಯಂತ್ರವೊಂದು ಇದೊಂದು ಆಟದ ಮೈದಾನ ಎಂದಿತ್ತಂತೆ. ಪ್ರೆಡ್‌ಪೋಲ್ ಕೃತಕ ಬುದ್ಧಿಮತ್ತೆಯನ್ನು ಅಮೆರಿಕದ ಪೊಲೀಸ್ ಇಲಾಖೆ ಬಳಸುತ್ತದೆ. ದಿನವೂ ಸಾಯಂಕಾಲ ರಾತ್ರಿ ಎಲ್ಲಿ ಗಸ್ತು ತಿರುಗಬೇಕು ಎನ್ನುವುದನ್ನು ಆ ಯಂತ್ರವೇ ಹೇಳಿಕೊಡುತ್ತದೆ. ಅದರ ಪ್ರಕಾರವೇ ಇಲಾಖೆ ಕೆಲಸ ಮಾಡುತ್ತದೆ. ಆದರೆ ವಿಪರ್ಯಾಸವೇನೆಂದರೆ ಆ ಯಂತ್ರ ಎಲ್ಲಿ ಆಫ್ರಿಕಾದ ಕಪ್ಪು ವರ್ಣೀಯರು ಮತ್ತು ಹಿಸ್ಪ್ಯಾನಿಕ್‌ಗಳು ವಾಸ ಮಾಡುತ್ತಾರೋ ಅಲ್ಲಿಯೇ ಗಸ್ತು ತಿರುಗುವಂತೆ ಹೇಳಿಕೊಡುತ್ತದೆ.

ದೃಷ್ಟಿಯಂತೆ ಸೃಷ್ಟಿ ಎನ್ನುವುದು ಪ್ರಚಲಿತ ಮಾತು. ಆದರೆ ಇಂದು ಸೃಷ್ಟಿಯಿದ್ದಂತೆ ದೃಷ್ಟಿಯೂ ಆಗಬಹುದು. ಇತ್ತೀಚೆಗೆ ಈ ತಂತ್ರಜ್ಞಾನವನ್ನು ಹೇಗೆ ಮನುಷ್ಯ ಬಳಸಿಕೊಳ್ಳಬೇಕು? ಇದರಲ್ಲಿರುವ ಸಾಧಕಬಾಧಕಗಳೇನು ಎನ್ನುವುದನ್ನು ಇಡೀ ಪ್ರಜ್ಞಾವಂತ ಸಮುದಾಯ ಚರ್ಚೆ ಮಾಡುತ್ತಿದೆ. ’ಎಥಿಕ್ಸ್ ಆಫ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ಎನ್ನುವ ಹತ್ತಾರು ಪುಸ್ತಕಗಳು ಇದಾಗಲೇ ಬಂದಿವೆ.

ಇನ್ನೊಂದೆಡೆ ಮನುಕುಲದ ಒಂದು ದೊಡ್ಡ ಭಾಗ, ಎಲ್ಲಾ ಜ್ಞಾನ-ತಂತ್ರಜ್ಞಾನದ ವಿರುದ್ಧವೂ ಸೆಟೆದು ನಿಂತು ಲಸಿಕೆ ಹಾಕಿಸಿಕೊಳ್ಳುವುದಿಲ್ಲವೆಂದು, ಭೂಮಿ ಚಪ್ಪಟೆಯಾಗಿದೆಯೆಂದು, ಕುದುರೆ ಗಾಡಿಗಳನ್ನೇ ಬಳಸುತ್ತೇವೆಂದು, ಬೇಯಿಸದ ಹಸಿ ಆಹಾರವನ್ನೇ ಬಳಸುತ್ತೇವೆಂದು, ಯಾವ ಬದಲಾವಣೆಗೂ ತೆರೆದುಕೊಳ್ಳದೆ ಹಿನ್ನೋಟವೇ ಮುನ್ನೋಟ ಎಂದು ನಿಂತ ನೀರಾಗಿದೆ. ದೆಹಲಿಯಲ್ಲಿ ಸುಮಾರು ನೂರು ವರ್ಷಗಳ ಹಿಂದೆ ಮೊಟ್ಟಮೊದಲು ರಸ್ತೆಗೆ ಡಾಂಬರು ಹಾಕಿದಾಗ ಕುದುರೆಗಾಡಿಯವರು ಪ್ರತಿಭಟನೆ ಮಾಡಿದ್ದರು. ನಮ್ಮ ಕುದುರೆಯ ಲಾಳ ಡಾಂಬರಿನಲ್ಲಿ ಹೂತು ಓಡಲು ಸಾಧ್ಯವಾಗುವುದಿಲ್ಲ, ನಮಗೆ ಮಣ್ಣಿನ ರಸ್ತೆಗಳೆ ಬೇಕು ಎನ್ನುವುದು ಅವರ ಬೇಡಿಕೆಯಾಗಿತ್ತು. ಇದೇ ರೀತಿ ಹಿಂದೆ ಹೊಲಿಗೆ ಯಂತ್ರಗಳು ಬಂದಾಗ ಅವುಗಳನ್ನು ಕುಟ್ಟಿ ಪುಡಿಮಾಡುತ್ತಿದ್ದರು. ಅವರುಗಳನ್ನು ಲುಡೈಟ್ ಎಂದು ಕರೆಯಲಾಗುತ್ತಿತ್ತು. ಇಂದಿಗೂ ಸಹ ತಂತ್ರಜ್ಞಾನ ವಿರೋಧಿಗಳನ್ನು ಲುಡೈಟ್‌ಗಳು ಎಂದೇ ಪರಿಗಣಿಸಲಾಗುತ್ತದೆ. ಮನುಷ್ಯ ಯಂತ್ರಗಳಿಗೆ ಕಲಿಸಿ, ಯಂತ್ರಗಳಿಂದ ಮನುಷ್ಯ ಕಲಿತು, ಮಾನವ ಮತ್ತು ಯಂತ್ರಗಳು ಸಹಭಾಗಿತ್ವದಲ್ಲಿ ಮುನ್ನಡೆಯಬೇಕೇ? ಮನುಷ್ಯನಲ್ಲಿರುವ ದೋಷಗಳನ್ನು ಯಂತ್ರಗಳಿಂದ ನೀಗಿಸಿಕೊಂಡು ಯಂತ್ರಗಳಲ್ಲಿರುವ ದೋಷವನ್ನು ಮನುಷ್ಯ ನೀಗಿಸಿ ಪರಸ್ಪರ ಪೂರಕವಾಗಿ ನವನಾಗರಿಕತೆಯನ್ನು ಸೃಷ್ಟಿಮಾಡಬಹುದೇ? ಇಂತಹ ಪ್ರಶ್ನೆಗಳು ಇಂದು ಮನುಕುಲವನ್ನು ಬಾಧಿಸುತ್ತಿರುವುದಂತೂ ನಿಜ.

ಕೊನೆಗೊಂದು ನೀಲ್ಸ್ ಬೋರ್‌ನ ಮಾತು `Prediction is very difficult, especially if it is about the future’.


ಇದನ್ನೂ ಓದಿ: ಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

ಇದನ್ನೂ ಓದಿ: ದಿಢೀರ್‌ ಪಠ್ಯ ಬದಲಾವಣೆ ಸುತ್ತೋಲೆ: ಎನ್‌ಇಪಿಯಿಂದ ವಿದ್ಯಾರ್ಥಿಗಳು ಹೈರಾಣು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...