ಜಿಂಬಾಬ್ವೆಯಿಂದ ದೇಶಕ್ಕೆ ಹಿಂದಿರುಗಿದ ವ್ಯಕ್ತಿಯೊಬ್ಬರು ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. ಇದು ದೇಶದಲ್ಲಿ ಮೂರನೇ ಓಮೈಕ್ರಾನ್ ಪ್ರಕರಣವಾಗಿದೆ. ಜಿಂಬಾಬ್ವೆಯಿಂದ ಗುಜರಾತ್‌ನ ಜಾಮ್‌ನಗರಕ್ಕೆ ವಾಪಸ್ ಆಗಿರುವ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
72 ವರ್ಷದ ಜಾಮ್‌ನಗರ ನಿವಾಸಿ ಗುರುವಾರ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರ ಮಾದರಿಯನ್ನು ಜೀನೋಮ್ ಸೀಕ್ವೇಂನ್ಸಿಂಗ್ ಕಳುಹಿಸಲಾಗಿತ್ತು. ಬಳಿಕ ಅವರು ಓಮೈಕ್ರಾನ್ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ ಎಂದು ಗುಜರಾತ್ ಆರೋಗ್ಯ ಆಯುಕ್ತ ಜೈ ಪ್ರಕಾಶ್ ಶಿವಹರೆ ದೃಢಪಡಿಸಿದ್ದಾರೆ.
ಓಮಿಕ್ರಾನ್ ಸೋಂಕಿತ ವ್ಯಕ್ತಿ ಉಳಿದುಕೊಂಡಿರುವ ಸ್ಥಳವನ್ನು ಮೈಕ್ರೋ ಕಂಟೈನ್‌ಮೆಂಟ್ ವಲಯವನ್ನಾಗಿ ಮಾಡಲಾಗಿದೆ. ಗುಜರಾತ್ ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನು ಪತ್ತೆಹಚ್ಚಿ ಪರೀಕ್ಷಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಒಮೈಕ್ರಾನ್‌ಗೆ ಬೂಸ್ಟರ್ ಡೋಸ್ ಶಿಫಾರಸು; ಕರ್ನಾಟಕದಲ್ಲಿ ದ.ಆಫ್ರಿಕಾದ 10 ಜನರು ನಾಪತ್ತೆ
“ನಾವು ಸೋಂಕಿತರನ್ನು ಪ್ರತ್ಯೇಕಿಸಿ, ಅವರನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅವರು ವಾಸಿಸುವ ಸ್ಥಳದಲ್ಲಿ ಮೈಕ್ರೋ ಕಂಟೈನ್‌ಮೆಂಟ್ ವಲಯವನ್ನು ರಚಿಸಲಾಗಿದೆ. ಈ ಪ್ರದೇಶದಲ್ಲಿ ಸೋಂಕಿತ ಜನರ ಸಂಪರ್ಕಿತರನ್ನು ಪತ್ತೆಹಚ್ಚುತ್ತೇವೆ, ಪರೀಕ್ಷಿಸುತ್ತೇವೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್ವಾಲ್ ಹೇಳಿದ್ದಾರೆ.
ದೇಶದಲ್ಲಿ ಮೊದಲ ಎರಡು ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಬೆಂಗಳೂರಿನ 46 ವರ್ಷದ ಎರಡು ಡೋಸ್ ಲಸಿಕೆ ಪಡೆದ ವೈದ್ಯರಾಗಿದ್ದು, ಇವರಿಗೆ ಯಾವದೇ ಟ್ರಾವಲ್ ಹಿಸ್ಟರಿ ಇಲ್ಲ. ಮತ್ತೊಬ್ಬರು ವಿದೇಶಿಯಾಗಿರುವ 66 ವರ್ಷ ವಯಸ್ಸಿನ ರೋಗಿಯು ದಕ್ಷಿಣ ಆಫ್ರಿಕಾದಿಂದ ಇತ್ತೀಚೆಗೆ ಬಂದಿದ್ದರು.
“ಓಮೈಕ್ರಾನ್ ಪತ್ತೆಯಾಗಿರುವುದರಿಂದ ನಾವು ಭಯಪಡಬೇಕಾಗಿಲ್ಲ. ಆದರೆ ಅದರ ಬಗ್ಗೆ ಅರಿವು ಇರಬೇಕಾಗಿದೆ. ಕೊರೊನಾದ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಮತ್ತು ಸಭೆಗಳನ್ನು ಸೇರಬೇಡಿ” ಎಂದು ಮನೋಜ್ ಅಗರ್ವಾಲ್ ಹೇಳಿದ್ದರು.
ಓಮೈಕ್ರಾನ್ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ಬಳಿಕ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಲಾಗುತ್ತಿದ್ದು, ಸೋಂಕು ವ್ಯಾಪಿಸಿರುವ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ವಿಶೇಷ ಗಮನವಿಡಲಾಗುತ್ತಿದೆ.
—————–


