ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ನಾಳೆ ಬೆಳಗಾವಿಯಲ್ಲಿ ರೈತ ಅಧಿವೇಶನ ನಡೆಯಲಿದೆ.
ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಡಿಸೆಂಬರ್ 12ರಂದು ಬೆಳಿಗ್ಗೆ 11ಕ್ಕೆ ಬೆಳಗಾವಿಯ ಸಂಕಲ್ಪ ಗಾರ್ಡನ್‌ನಲ್ಲಿ ನಡೆಯಲಿರುವ ಈ ರೈತಾಧಿವೇಶನದಲ್ಲಿ ರಾಜ್ಯದ ವಿವಿಧ ಸಂಘಟನೆಗಳ 800ಕ್ಕೂ ಹೆಚ್ಚು ಮುಖಂಡರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು, “ಐತಿಹಾಸಿಕ ರೈತ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಈ ಹಿಂದೆ ಜಾರಿಗೊಳಿಸಿದ್ದ ಭೂ ಸುಧಾರಣಾ, ಎಂಪಿಎಂಸಿ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಿಲ್ಲ. ಈ ಹಿನ್ನೆಲೆ ರೈತ ಹಾಗೂ ಜನಪರ ಸಂಘಟನೆಗಳು ಒಟ್ಟುಗೂಡಿ ರೈತ ಅಧಿವೇಶನ ನಡೆಸುತ್ತಿದ್ದೇವೆ. ರೈತರ ಪರ್ಯಾಯ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

“ಈ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಜನವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಕೈ ಬಿಡುವುದಿಲ್ಲ. ನಿರಂತರ ಮಳೆಯಿಂದ ರಾಜ್ಯದಲ್ಲಿ ಬೆಳೆ ಹಾನಿ ಸಂಭವಿಸಿದೆ. ರೈತರಿಗೆ ₹ 2,500 ಕೋಟಿ ನಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವುದು ₹182 ಕೋಟಿ ಮಾತ್ರ. ಸಮೀಕ್ಷೆಯನ್ನೂ ವೈಜ್ಞಾನಿಕವಾಗಿ ನಡೆಸಿಲ್ಲ. ಸರ್ಕಾರ ನಿಗದಿ ಮಾಡಿರುವ ಪರಿಹಾರ ರೈತರಿಗೆ ಯಾವ ರೀತಿಯಲ್ಲೂ ನೆರವಾಗುವುದಿಲ್ಲ. ಹೀಗಾಗಿ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.
ರೈತರ ಅಧಿವೇಶನವನ್ನು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರು ಮತ್ತು ಎಂಎಸ್‌ಪಿ ಸಮಿತಿ ಪ್ರತಿನಿಧಿಸುವ ಡಾ.ಅಶೋಕ ಧವಳೆ ಉದ್ಘಾಟಿಸಲಿದ್ದಾರೆ. ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ರೈತ ಸಂಘ, ಜನಾಂದೋಲನಗಳ ಮಹಾ ಮೈತ್ರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ.
ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಡಿಸೆಂಬರ್ 13 ರಂದು ಆರಂಭವಾಗಲಿದೆ. ಹಿಂದಿನ ದಿನ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರೈತ ಹೋರಾಟ ಬಿರುಸು ಪಡೆದುಕೊಳ್ಳುತ್ತಿದೆ. ಕರ್ನಾಟಕ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದಲ್ಲಿ ಡಿಸೆಂಬರ್ 13 ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರೈತರ ವಿಜಯೀ ಮೆರವಣಿಗೆ ಆರಂಭ: ವಿಡಿಯೋ – ಚಿತ್ರಗಳಲ್ಲಿ ನೋಡಿ


